7

ಸೂತ್ರ ಯಾರದು? ಪಾತ್ರಧಾರಿ ಯಾರು?

ಪ್ರಕಾಶ್ ರೈ
Published:
Updated:

ಅವನೊಂದು ಕೊಲೆ ಮಾಡಿದ್ದ. ತುಂಬ ದಿನ ತಲೆತಪ್ಪಿಸಿಕೊಂಡು ಓಡಾಡಿದ್ದ. ಯಾರಿಗೂ ಗೊತ್ತಾಗದ ಹಾಗೆ ಬದುಕಿದ್ದ. ಯಾವ ಸುಳಿವನ್ನೂ ಬಿಟ್ಟು ಕೊಟ್ಟಿರಲಿಲ್ಲ. ಎಲ್ಲರಂತಿದ್ದ. ಅವನು ಮಾಡಿದ ಕೊಲೆಯ ಕುರಿತು ಸಾಕಷ್ಟು ವಾಗ್ವಾದಗಳು ನಡೆದಿದ್ದವು.

ಕೊಲ್ಲುವ ಹೊತ್ತಿಗೆ ತಾನು ಮಾಡಿದ ಕೊಲೆ ಅಷ್ಟೊಂದು ಸುದ್ದಿಗೆ ಗ್ರಾಸವಾಗುತ್ತದೆ ಅನ್ನುವುದು ಅವನಿಗೂ ಗೊತ್ತಿರಲಿಲ್ಲ. ತನಗೆ ಕೊಟ್ಟಿದ್ದ 13,000 ರೂಪಾಯಿಗಳ ಋಣ ತೀರಿಸುವ ಕೆಲಸವನ್ನಷ್ಟೇ ಅವನು ಮಾಡಿದ್ದು. ಅವನು ಪಡೆದುಕೊಂಡಿದ್ದು ಆ ಜೀವದ ಬೆಲೆಯನ್ನಲ್ಲ, ತನ್ನ ಕಾಯಕದ ಕೂಲಿಯನ್ನು ಮಾತ್ರ.

ಅವನು ಪರಶುರಾಮ ವಾಗ್ಮೋರೆ. ತಾನು ಯಾರನ್ನು ಯಾಕೆ ಕೊಲ್ಲುತ್ತಿದ್ದೇನೆ ಎಂದು ಗೊತ್ತಿಲ್ಲದೇ ಕೊಲೆಗೈದ ತಾರುಣ್ಯದ ಜೀವ.

ನಾನು ಟೀವಿ ನೋಡುತ್ತಿದ್ದೆ. ಪರಶುರಾಮನ ಅಮ್ಮ ಅಪ್ಪ ಇಬ್ಬರೂ ಅಳುತ್ತಾ ನಿಂತಿದ್ದರು. ‘ನನ್ನ ಮಗನಿಗೇನೂ ಗೊತ್ತಿಲ್ಲ. ಅವನು ಅಂಥವನಲ್ಲ, ಅಂಥ ಕೆಲಸ ಅವನು ಮಾಡುವುದಕ್ಕೇ ಸಾಧ್ಯವಿಲ್ಲ. ಅವನು ಒಳ್ಳೆಯವನು...’ ಅಂತೆಲ್ಲ ಹೇಳುತ್ತಿದ್ದರು.

ಅವರ ಮಾತಲ್ಲಿ ನನಗೇನೂ ಕಪಟ ಕಾಣಿಸಲಿಲ್ಲ. ಯಾಕೆಂದರೆ ಅವರಿಗೆ ನಿಜಕ್ಕೂ ತಮ್ಮ ಮಗ ಅಂಥವನು ಎಂದು ಗೊತ್ತಿರಲಿಲ್ಲ. ಹಾಗೆ ನೋಡಿದರೆ ಸ್ವತಃ ಪರಶುರಾಮ ವಾಗ್ಮೋರೆಗೂ ತಾನು ಅಂಥವನೆಂಬ ಅರಿವಿರಲಿಲ್ಲ. ಅವನು ಒಂದು ಕೊಲೆ ಮಾಡಿದ್ದಾನೆ ಅನ್ನುವ ಕಾರಣಕ್ಕೆ ಆ ಊರಲ್ಲಿ ಅವನ ಕುಟುಂಬಕ್ಕೆ ಕಿರುಕುಳ ಶುರುವಾಗುತ್ತದೆ. ಮಾನಸಿಕವಾಗಿ ಅವರನ್ನು ಹಿಂಸೆ ಮಾಡುತ್ತಾ ಹೋಗುತ್ತಾರೆ. ಬೆರಳು ತೋರಿಸುತ್ತಾರೆ. ತಲೆಯೆತ್ತಿ ತಿರುಗಾಡದಂತೆ ಮಾಡುತ್ತಾರೆ.

ಯಾವ ತಪ್ಪಿಗೆ ಈ ಶಿಕ್ಷೆ? ಅವರು ಎಲ್ಲರಂತೆಯೇ ತಮ್ಮ ಮಗನನ್ನು ಬೆಳೆಸಿದ್ದಾರೆ. ಎಲ್ಲರೂ ಹೋಗುವ ಶಾಲೆಗೆ ಕಳುಹಿಸಿದ್ದಾರೆ. ಎಲ್ಲರೂ ಓದುವ ಪುಸ್ತಕವನ್ನೇ ತಂದುಕೊಟ್ಟು ಓದಿಸಿದ್ದಾರೆ. ಎಲ್ಲರಂತೆಯೇ ಬೆಳೆಸಿದ್ದಾರೆ. ‘ನಾವು ನಮ್ಮ ಮಗನನ್ನು ಪ್ರೀತಿಯಿಂದ ಬೆಳೆಸಿದ್ದೇವೆ’ ಅಂದುಕೊಂಡಿದ್ದಾರೆ.

ಆದರೆ ಮಗನನ್ನು ಬೆಳೆಸಿದ್ದು ಅವರಲ್ಲವೇ ಅಲ್ಲ! ಮತ್ಯಾರೋ ಅವನನ್ನು ಅವನ ಮನೆಯವರಿಗೆ ಗೊತ್ತಿಲ್ಲದ ಹಾಗೆ ಬೆಳೆಸುತ್ತಾ ಬಂದಿದ್ದಾರೆ. ಸ್ವತಃ ಅವನಿಗೂ ಗೊತ್ತಿಲ್ಲದ ಹಾಗೆ ಬೆಳೆಸಿದ್ದಾರೆ. ಕೊಲೆ ಮಾಡಿದ ನಂತರ ಅವನಿಗೆ ತನ್ನ ತಪ್ಪಿನ ಅರಿವಾಗಿದೆ. ತಾನು ಮಾಡಿದ ಕೆಲಸದ ಬಗ್ಗೆ ಅವನಿಗೆ ಪಾಪಪ್ರಜ್ಞೆ. ಇಂದಲ್ಲ ನಾಳೆ ಸಿಕ್ಕಿಬೀಳುತ್ತೇನೆ ಎಂಬ ಭಯ. ಅವನು ಒಳಗೊಳಗೇ ಕುಸಿದು ಹೋಗಿದ್ದಾನೆ.

ಅದೆಲ್ಲದರ ಮಧ್ಯೆ, ಮತ್ತೆ ಅದೇ ಪ್ರಶ್ನೆ. ಅವನನ್ನು ಬೆಳೆಸಿದವರು ಯಾರು? ಈ ಸಮಾಜವೇ? ಅದರ ಅಂತರ್ಗತ ಕ್ರೌರ್ಯವೇ? ನಮ್ಮ ಅಧಿಕಾರದ ಆಸೆಯೇ, ವೈಷಮ್ಯವೇ? ಯಾವುದು ಅವನನ್ನು ಬೆಳೆಯಿಸಿತು ಹಾಗಿದ್ದರೆ?

ಕತೆಯೊಂದು ನೆನಪಾಗುತ್ತಿದೆ. ಕನ್ನಡದ ಹಿರಿಯ ಕಾದಂಬರಿಕಾರರಾದ ಕೆ.ವಿ. ಅಯ್ಯರ್ ಅವರ ಕಾದಂಬರಿ ಅದು. ಇಂಗ್ಲಿಷ್‌ನ ಒಂದು ಪುಟ್ಟ ಪ್ರಸಂಗವನ್ನಿಟ್ಟುಕೊಂಡು ಈ ಕಾದಂಬರಿಯನ್ನು ಅಯ್ಯರ್ ಬರೆದಿದ್ದಾರೆ.

ಫ್ಲಾರೆನ್ಸಿನ ಕ್ರೈಸ್ತ ದೇವಾಲಯದಲ್ಲಿ ಏಸುಕ್ರಿಸ್ತನ ಬದುಕಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲಿಕ್ಕೆ ವಿಖ್ಯಾತ ಚಿತ್ರಕಾರ ಮೈಕಲ್ ಏಂಜಲೋಗೆ ಆಹ್ವಾನ ಹೋಗುತ್ತದೆ. ಏಸುವಿನ ಬಾಲ್ಯವನ್ನು ಚಿತ್ರಿಸಲೆಂದು ರೂಪದರ್ಶಿ ಬೇಕೆಂದು ಹುಡುಕುವ ಮೈಕಲ್ ಏಂಜಲೋಗೆ ಪೀಸಾದಲ್ಲಿ ತನ್ನ ಅಜ್ಜಿಯ ಆರೈಕೆಯಲ್ಲಿ ಬೆಳೆದ ಅನಾಥ ಹುಡುಗ ಅರ್ನೆಸ್ಟೋ ಸಿಗುತ್ತಾನೆ. ಮುಗ್ಧತೆ ಮತ್ತು ಒಳ್ಳೆಯತನ ಮೈವೆತ್ತಂತೆ ಇರುವ ಆತನನ್ನು ರೂಪದರ್ಶಿಯಾಗಿ ಇಟ್ಟುಕೊಂಡು ಮೈಕಲ್ ಏಂಜಲೋ ಕ್ರಿಸ್ತನ ಬಾಲ್ಯದ ದಿನಗಳನ್ನು ಚಿತ್ರಿಸುತ್ತಾ ಹೋಗುತ್ತಾನೆ.

ಈ ಮಧ್ಯೆ ಒಂದು ದಿನ ಮೈಕಲ್ ಏಂಜಲೋಗೆ ಫ್ರಾನ್ಸಿನಿಂದ ಪೋಪ್ ಕರೆ ಬರುತ್ತದೆ. ಅವರ ಆಜ್ಞೆಗೆ ತಲೆಬಾಗಿ, ಫ್ಲಾರೆನ್ಸಿನ ಚಿತ್ರಕಲೆಯನ್ನು ಅರ್ಧಕ್ಕೇ ಬಿಟ್ಟು ಫ್ರಾನ್ಸಿಗೆ ಹೊರಡುತ್ತಾನೆ ಮೈಕಲ್. ಎರಡು ದಶಕಗಳ ಕಾಲ ಫ್ರಾನ್ಸಿನಲ್ಲಿ ವರ್ಣಚಿತ್ರ ಮತ್ತು ಶಿಲ್ಪಕಲೆಯಲ್ಲಿ ತೊಡಗಿಕೊಳ್ಳುತ್ತಾನೆ.

ಆ ಕೆಲಸ ಮುಗಿಸುವ ಹೊತ್ತಿಗೆ ಜೀವನದಲ್ಲಿ ಹಣ್ಣಾಗಿ ಹೋದ ಮೈಕಲ್ ಮತ್ತೆ ವಾಪಸ್ಸು ಬಂದು, ಅರ್ಧಕ್ಕೇ ಬಿಟ್ಟಿರುವ ಕೆಲಸ ಮುಂದುವರಿಸಲು ನೋಡುತ್ತಾನೆ. ಈಗ ಆತನಿಗೆ ಏಸು ಕ್ರಿಸ್ತನಿಗೆ ದ್ರೋಹ ಎಸಗಿದ ಜುದಾಸ್ ಎಂಬ ವಂಚಕನ ಚಿತ್ರಕ್ಕಾಗಿ ರೂಪದರ್ಶಿಯ ಆಗತ್ಯ ಬೀಳುತ್ತದೆ. ಆತನ ಹುಡುಕಾಟಕ್ಕೆ ಬೀಳುವ ಮೈಕಲ್, ಎಂಪೋಲಿ ಎಂಬ ನಗರದಲ್ಲಿ ಗ್ಯಾರಿಬಾಲ್ಡಿ ಎಂಬ ಕುಡುಕನೂ ಕ್ರೂರಿಯೂ ಅಪರಾಧಿಯೂ ಆದ ವ್ಯಕ್ತಿಯನ್ನು ನೋಡುತ್ತಾನೆ. ಅವನ ಮುಖದಲ್ಲಿ ಜುದಾಸ್ ಪ್ರತಿರೂಪ ಕಂಡು ಅವನನ್ನು ಕರೆತಂದು ರೂಪದರ್ಶಿಯನ್ನಾಗಿಸುತ್ತಾನೆ.

ಗ್ಯಾರಿಬಾಲ್ಡಿಯನ್ನಿಟ್ಟುಕೊಂಡು ಚಿತ್ರ ಬಿಡಿಸುತ್ತಿರುವ ಹೊತ್ತಿಗೆ, ಮೈಕಲ್ ಏಂಜಲೋಗೆ ಅವನು ಬೇರೆ ಯಾರೂ ಅಲ್ಲ, ತಾನು ಏಸುಕ್ರಿಸ್ತನ ಬಾಲ್ಯದ ದಿನಗಳಿಗೆ ರೂಪದರ್ಶಿಯನ್ನಾಗಿಸಿದ ಅರ್ನೆಸ್ಟೋ ಎಂಬ ಮುಗ್ಧ ಬಾಲಕ ಅನ್ನುವುದು ಗೊತ್ತಾಗುತ್ತದೆ.

ಈಗ ಹೇಳಿ. ಅರ್ನೆಸ್ಟೋ ಎಂಬ ಮುಗ್ಧ ಬಾಲಕನನ್ನು ಗ್ಯಾರಿಬಾಲ್ಡಿ ಎಂಬ ಕ್ರೂರಿಯನ್ನಾಗಿ ರೂಪಿಸಿದವರು ಯಾರು? ಅವನ ಜೀವನವನ್ನು ರೂಪಿಸಿದ್ದು ಯಾವ ಜಗತ್ತು? ಅನಾಥನಾಗಿದ್ದ, ಬಡವನಾಗಿದ್ದ, ಅನುಕಂಪದ ಮೂರ್ತಿಯಾಗಿದ್ದ ಒಳ್ಳೆಯತನ ತುಂಬಿತುಳುಕುತ್ತಿದ್ದ ಆ ಹುಡುಗ ಕೊಲ್ಲುವ ಕ್ರೌರ್ಯವನ್ನು ಹೇಗೆ ಮೈಗೂಡಿಸಿಕೊಂಡ? ಯಾರು ಅವನ ಚಿತ್ತವನ್ನೂ ಚಿತ್ರವನ್ನೂ ಕೆತ್ತಿದವರು?

ಜೀವನದ ವಿಚಿತ್ರ ತಲ್ಲಣಗಳನ್ನು ಹೇಳುವ ಮತ್ತೊಂದು ಕತೆ ಹೇಳುತ್ತೇನೆ ಕೇಳಿ:

ಲಂಡನ್ನಿನಲ್ಲಿ ಒಬ್ಬ ಟ್ರಕ್ ಡ್ರೈವರ್. ಅವನು ದೂರದ ಊರುಗಳಿಗೆ ಟ್ರಕ್ ಓಡಿಸುತ್ತಾ ಇರುವವನು. ಒಂದೊಂದು ಪಯಣಕ್ಕೂ ಅವನಿಗೆ ಆರೇಳು ದಿನ ತಗಲುತ್ತಿದ್ದದ್ದೂ ಉಂಟು.

ಈ ಟ್ರಕ್ ಡ್ರೈವರ್ ದೂರದೂರಿಗೆ ಹೋಗಿ ಬರುತ್ತಾ, ಒಂದಷ್ಟು ಗೆಳೆಯರನ್ನು ಕಲೆ ಹಾಕಿಕೊಂಡು, ಆಗೊಮ್ಮೆ ಈಗೊಮ್ಮೆ ಬಿಯರ್ ಕುಡಿಯುತ್ತಾ ಸಂತೋಷವಾಗಿದ್ದ.

ಅವನಿಗೊಬ್ಬ ಮಗನಿದ್ದ. ಅಪ್ಪನ ಈ ವರ್ತನೆ ಆ ಮಗನಿಗೆ ಕೊಂಚವೂ ಹಿಡಿಸುತ್ತಿರಲಿಲ್ಲ. ನೀನು ಹೀಗೆಲ್ಲ ಬಿಯರ್ ಕುಡಿಯುತ್ತಾ ಇರಕೂಡದು. ದೈವಭಕ್ತನಾಗಿರಬೇಕು, ಒಳ್ಳೆಯವನಂತೆ ಇರಬೇಕು ಅಂತೆಲ್ಲ ಅಪ್ಪನಿಗೆ ಹೇಳುತ್ತಿರುತ್ತಾನೆ ಮಗ. ಅಪ್ಪನಿಗೋ, ಅದೆಲ್ಲ ಗಂಭೀರ ಸಂಗತಿಗಳೇ ಅಲ್ಲ. ‘ಮಗನೇ, ನಾನೇನೂ ಕೆಟ್ಟವನಲ್ಲ. ಇದು ಜೀವನ ಕಣಯ್ಯ. ಶ್ರಮದ ಕೆಲಸದ ಜೊತೆ ಒಂಚೂರು ಮೋಜು ಕೂಡ ಬೇಕಾಗುತ್ತದೆ, ಅರ್ಥ ಮಾಡಿಕೋ’ ಅಂತ ಮಗನಿಗೆ ಅವನು ತಿಳಿಹೇಳುತ್ತಿರುತ್ತಾನೆ. ಮಗನ ಸಿಟ್ಟು ಮಾತ್ರ ಕಡಿಮೆ ಆಗುವುದೇ ಇಲ್ಲ. ‘ನೀನೇಕೆ ಬೀದಿಬದಿಯಲ್ಲಿ ಕಂಡಕಂಡವರಿಗೆ ದೇಹ ಒಪ್ಪಿಸುವ ಹೆಣ್ಣುಗಳನ್ನು ನಿನ್ನ ಲಾರಿಯಲ್ಲಿ ಕೂರಿಸುತ್ತೀಯ? ಅವರ ಜೊತೆ ಮಾತಾಡುವುದೇ ತಪ್ಪು; ಅವರು ನಡತೆಗೆಟ್ಟವರು’ ಅಂತೆಲ್ಲ ಮಗ ರೇಗುತ್ತಿರುತ್ತಾನೆ. ‘ಅವರ ಕೆಲಸ ಅವರು ಮಾಡುತ್ತಾರೆ. ದಾರಿಯಲ್ಲಿ ಡ್ರಾಪ್ ಕೇಳುತ್ತಾರೆ. ಲಾರಿಯಲ್ಲಿ ಕೂರಿಸಿಕೊಂಡು ಬಂದು ಈ ಊರ ಬಾಗಿಲಲ್ಲಿ ಇಳಿಸುತ್ತೇನೆ. ಅದರಲ್ಲೇನು ತಪ್ಪು?’ ಅಂತ ಅಪ್ಪ ವಾದಿಸುತ್ತಾನೆ.

ಇದನ್ನೆಲ್ಲ ನೋಡಿ ನೋಡಿ ಅಪ್ಪನಿಗೆ ಮಗನ ಮೇಲೆ ಗುಮಾನಿ ಶುರುವಾಗುತ್ತದೆ. ಒಂದು ದಿನ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದಾಗ ಟ್ರಕ್ ಡ್ರೈವರ್ ಹೇಳುತ್ತಾನೆ: ‘ನನಗೆ ಯಾಕೋ ಭಯವಾಗುತ್ತಿದೆ. ನನ್ನ ಮಗ ವಿಚಿತ್ರವಾಗಿ ಆಡುತ್ತಿದ್ದಾನೆ. ನೀವೆಲ್ಲ ಆಗಾಗ ನನ್ನ ಹತ್ತಿರ ನಿಮ್ಮ ಮಕ್ಕಳ ಬಗ್ಗೆ ಹೇಳುತ್ತಿರುತ್ತೀರಿ. ನನ್ನ ಮಗ ಕದ್ದು ಬಿಯರ್ ಕುಡೀತಿದ್ದ, ನನ್ನ ಮಗ ಗುಟ್ಟಾಗಿ ಸಿಗರೇಟು ಸೇದುತ್ತಿದ್ದ, ಮೊನ್ನೆ ಸಿಕ್ಕಿಬಿದ್ದು ಚೆನ್ನಾಗಿ ಬೈಸಿಕೊಂಡ- ಎಂದೆಲ್ಲ ನಿಮ್ಮ ಮಗನ ಸಂಬಂಧದ ಬಗ್ಗೆ ಹೇಳುತ್ತೀರಿ. ಅದೆಲ್ಲ ತೀರಾ ಸಹಜವಾಗಿಯೇ ಇದೆ. ನಾವೆಲ್ಲ ಬಾಲ್ಯದಲ್ಲಿದ್ದಾಗ ಅದನ್ನೇ ಮಾಡಿದವರಲ್ಲವೇ? ಮಕ್ಕಳು ಹಾಗಿದ್ದಾಗಲೇ ನಾರ್ಮಲ್ ಆಗಿದ್ದಾರೆ ಅಂದುಕೊಳ್ಳಬಹುದು. ಆದರೆ ನನ್ನ ಮಗ ಯಾಕೋ ಹೆದರಿಕೆ ಹುಟ್ಟಿಸುತ್ತಾನೆ. ತುಂಬ ಒಳ್ಳೆಯವನಂತೆ ಕಾಣುತ್ತಾನೆ, ಕಠೋರ ಧಾರ್ಮಿಕನಂತೆ ಮಾತಾಡುತ್ತಾನೆ. ಅವನ ವರ್ತನೆ ನೋಡುತ್ತಿದ್ದರೆ ಯಾಕೋ ಆತಂಕವಾಗುತ್ತದೆ. ಅಷ್ಟೊಳ್ಳೆಯವನನ್ನು ಸಹಿಸಿಕೊಳ್ಳೋದು ಹೇಗೆ ಅಂತಲೇ ಗೊತ್ತಾಗುತ್ತಿಲ್ಲ...’ ಗೆಳೆಯರೆಲ್ಲ ನಕ್ಕು ಸುಮ್ಮನಾಗುತ್ತಾರೆ.

ಒಂದು ದಿನ ಟ್ರಕ್ ಡ್ರೈವರ್ ಮತ್ತೊಂದು ದೂರ ಪ್ರಯಾಣಕ್ಕೆ ಹೋಗುತ್ತಾನೆ. ಅಲ್ಲಿಂದ ಮರಳುವ ಹೊತ್ತಿಗೆ ಇದ್ದಕ್ಕಿದ್ದಂತೆ ಊರಲ್ಲೊಂದು ಗಲಭೆ ಶುರುವಾದದ್ದು ಗೊತ್ತಾಗುತ್ತದೆ. ಏನೆಂದು ವಿಚಾರಿಸಿದರೆ ಯಾರೋ ಇಬ್ಬರು ದುಷ್ಕರ್ಮಿಗಳು ಮಾನವ ಬಾಂಬ್ ಹಾಕಿರುವುದು ಗೊತ್ತಾಗುತ್ತದೆ. ಅದರಿಂದಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿರುವ ಮಾಹಿತಿ ಸಿಗುತ್ತದೆ. ಆ ಕಾರಣಕ್ಕೆ ಮುಖ್ಯ ರಸ್ತೆಗಳನ್ನೆಲ್ಲ ಮುಚ್ಚಲಾಗಿದೆ. ಊರಿಗೆ ಪ್ರವೇಶ ನಿಷೇಧಿಸಲಾಗಿದೆ. ಟ್ರಕ್ ಡ್ರೈವರ್ ತನಗೆ ಗೊತ್ತಿರುವ ಒಳದಾರಿಗಳಲ್ಲಿ ಪ್ರಯಾಣಿಸಿ ಮನೆಗೆ ಬರುತ್ತಾನೆ.

ಊಟ ಮಾಡುತ್ತಾ ಹೆಂಡತಿಯ ಬಳಿ ಮಗನ ಬಗ್ಗೆ ವಿಚಾರಿಸಿದರೆ, ಮಗ ಗೆಳೆಯನ ಮನೆಗೆ ಓದಲು ಹೋಗಿರುವುದು ಗೊತ್ತಾಗುತ್ತದೆ. ಊರು ಪ್ರಕ್ಷುಬ್ಧಗೊಂಡಿರುವುದರಿಂದ ಅವನು ರಾತ್ರಿ ಮನೆಗೆ ಮರಳದೇ ಇರುವುದು ಒಳ್ಳೆಯದು, ಗೆಳೆಯನ ಮನೆಯಲ್ಲೇ ಇದ್ದುಬಿಡಲಿ ಎಂದು ತೀರ್ಮಾನಿಸುತ್ತಾರೆ.

ಅದೇ ಅಪರಾತ್ರಿಯಲ್ಲಿ ಯಾರೋ ಟ್ರಕ್ ಡ್ರೈವರ್‌ನ ಮನೆಯ ಬಾಗಿಲು ಬಡಿಯುವ ಸದ್ದು. ಟ್ರಕ್ ಡ್ರೈವರ್ ಬಾಗಿಲು ತೆರೆದರೆ ಹೊರಗೆ ಪೊಲೀಸರು ನಿಂತಿದ್ದಾರೆ. ವಿಚಾರಿಸಿದಾಗ ಟ್ರಕ್ ಡ್ರೈವರ್‌ಗೆ ಗೊತ್ತಾಗುತ್ತದೆ- ಊರಲ್ಲಿ ಸ್ಫೋಟಗೊಂಡ ಎರಡು ಮಾನವ ಬಾಂಬುಗಳ ಪೈಕಿ ಒಬ್ಬ ಅವನ ಮಗನೇ!

ಆ ಟ್ರಕ್ ಡ್ರೈವರ್ ಬೆಚ್ಚಿಬೀಳುತ್ತಾನೆ. ನಾನು ನನ್ನ ಮಗನನ್ನು ಹಾಗೆ ಬೆಳಸಲೇ ಇಲ್ಲವಲ್ಲ. ಹಾಗಿದ್ದರೆ ಅವನನ್ನು ಬೆಳೆಸಿದವರು ಯಾರು? ನಾವೇನು ಪಾಠ ಹೇಳುತ್ತಿದ್ದೇನೆ. ಶಾಲೆಗಳಲ್ಲಿ ಹೇಳಿಕೊಡುವುದಕ್ಕಿಂತ ಹೆಚ್ಚಿನದನ್ನು ಸಮಾಜ ಹೇಳಿಕೊಡುತ್ತಿದೆಯಾ?
ಒಬ್ಬ ಕಸಬ್ ಮಾಡಿದ ತಪ್ಪಿಗೆ ಇಡೀ ಜನಾಂಗವನ್ನೇ ದ್ವೇಷಿಸುವುದು, ಒಬ್ಬ ಪರಶುರಾಮ್ ವಾಗ್ಮೋರೆ ಕಾರಣಕ್ಕೆ ಇಡೀ ಪಂಗಡದ ಮೇಲೆಯೇ ರೋಷ ತಾಳುವುದು ಸರಿಯೇ?

ಧರ್ಮಗಳಲ್ಲಿ ಕೆಡುಕಿಲ್ಲ. ಅವುಗಳನ್ನು ತಮಗೆ ಬೇಕಾದಂತೆ ಬಳಸುವ ತೀವ್ರವಾದಿಗಳಿಂದ ಕಸಬ್, ಪರಶುರಾಮ್ ವಾಗ್ಮೋರೆಯಂಥವರು ಹುಟ್ಟುತ್ತಾರೆ. ಕೆಲವರನ್ನು ಕೊಲ್ಲುವಂತೆ ತಲೆತಿಕ್ಕುವ ಕೆಲಸ, ಆ ಕೊಲೆಯನ್ನು ಒಪ್ಪಿಕೊಳ್ಳುವಂತೆ ಬ್ರೇನ್ ವಾಷ್ ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆಯಲ್ಲವೇ?

ಸೂತ್ರ ಯಾರದು? ಪಾತ್ರಧಾರಿಗಳು ಯಾರು? ನಾವು ಧರ್ಮಸೂತ್ರ ಅಂತ ಕರೆಯುವುದು ಇದೇ ಸೂತ್ರವನ್ನೇನಾ? ಯಾರನ್ನು ಕೇಳೋಣ ಹೇಳಿ!

ಬರಹ ಇಷ್ಟವಾಯಿತೆ?

 • 52

  Happy
 • 4

  Amused
 • 4

  Sad
 • 2

  Frustrated
 • 4

  Angry

Comments:

0 comments

Write the first review for this !