ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಕ್ಷಣ ಮಿಶ್ರಣ ಈ ಮಾಯೆ

Last Updated 8 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ಜ್ಲೇಯದ ದ್ವೀಪಕಜ್ಞೇಯಾಬ್ಧಿಯಾವರಣ |
ಕಾಯಕದ ಗಿರಿಗೆ ಮಾನಸದಭ್ರಪಟಲ ||
ಮೇಯವನು ಬಗೆದೇನಮೇಯ ಸುತ್ತಲುಮಿರಲು? |
ಮಾಯೆಯೀ ಮಿಶ್ರಣವೊ – ಮಂಕುತಿಮ್ಮ || 103 ||

ಪದ-ಅರ್ಥ: ಜ್ಞೇಯ (ತಿಳಿದದ್ದು), ಅಜ್ಞೇಯ (ತಿಳಿಯಲಾರದ್ದು), ಅಬ್ಧಿ=ಸಮುದ್ರ, ಆವರಣ(ಹೊದ್ದಿಕೆ), ಮಾನಸದಭ್ರಪಟಲ=ಮಾನಸದ(ಮನಸ್ಸಿನ)+ಅಭ್ರಪಟಲ(ಮುಸುಕುವಿಕೆ)

ವಾಚ್ಯಾರ್ಥ: ನಮಗೆ ತಿಳಿದಿದೆ ಎನ್ನುವ ಪುಟ್ಟ ದ್ವೀಪಕ್ಕೆ ತಿಳಿಯಲಾರದ ಸಮುದ್ರದ ಹೊದಿಕೆ ಇದೆ. ಕರ್ತವ್ಯದ ಶಿಖರಕ್ಕೆ ಮನಸ್ಸಿನ ಮೋಡ ಕವಿದಿದೆ. ಅಷ್ಟೊಂದು ಅಳೆಯಲಾರದ್ದು ಸುತ್ತಲೂ ತುಂಬಿರುವಾಗ ತಿಳಿದಿರುವುದರಿಂದ ಏನು ಪ್ರಯೋಜನ? ಈ ಮಿಶ್ರಣವೇ ಮಾಯೆ.

ವಿವರಣೆ: ಯಾವುದು ಜ್ಞಾನದ ವಿಷಯವಾಗಿದೆಯೋ ಅದನ್ನು ಜ್ಞೇಯ ಎನ್ನುತ್ತಾರೆ. ಯಾವುದೇ ವಸ್ತುವಿನ ಬಗ್ಗೆ ಜ್ಞಾನವಾದರೆ ಅದು ಸ್ಥೂಲವಾದದ್ದು, ಸಾಕಾರವಾದದ್ದು ಮತ್ತು ಸಗುಣವಾದದ್ದು. ನಮ್ಮ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ನಮಗೆ ಜ್ಞಾನವಾಗುತ್ತದೆ. ಗಡಿಯಾರ ಎಂದೊಡನೆ ಕಣ್ಣ ಮುಂದೆ ಗಡಿಯಾರದ ಚಿತ್ರ ಬರುತ್ತದೆ. ಯಾಕೆಂದರೆ ಅದನ್ನು ನಾವು ಕಂಡಿದ್ದು ಮತ್ತು ನಮ್ಮ ಅನುಭವಕ್ಕೆ ಬಂದದ್ದು. ಅದಕ್ಕೊಂದು ನಿರ್ದಿಷ್ಟ ಆಕಾರವಿದೆ ಆದ್ದರಿಂದ ಅದು ಸ್ಥೂಲವಾದದ್ದು. ಆದರೆ ಯಾರಾದರೂ ಸಮಯ ಅಥವಾ ಕಾಲ ಎಂದರೆ ಯಾವ ಚಿತ್ರ ಬಂದೀತು? ಅದನ್ನು ಕಲ್ಪಿಸುವುದೇ ಅಸಾಧ್ಯ.ಎಂದೆಂದಿಗೂ ಇರುವ ಕಾಲವನ್ನು ಕಲ್ಪಿಸುವುದು ಹೇಗೆ? ಅದಕ್ಕೊಂದು ಆಕಾರವಿಲ್ಲ. ಆದ್ದರಿಂದ ಅದು ಸೂಕ್ಷ್ಮ ಹಾಗೂ ಅಜ್ಞೇಯ. ಅಂದರೆ ಅದು ನಮ್ಮ ಜ್ಞಾನದ ಪರಿಧಿಯನ್ನು ಮೀರಿದ್ದು. ಭೂಮಿ ಎಂದೊಡನೆ ಗೋಲಾಕಾರದ ಪೃಥ್ವಿ ಕಣ್ಣಮುಂದೆ ಬರುತ್ತದೆ. ಇದು ನಮ್ಮ ಸೂರ್ಯಮಂಡಲದ ಒಂದು ಪುಟ್ಟ ಗ್ರಹ ಎಂದಾಗ ಸೂರ್ಯಮಂಡಲದ ಚಿತ್ರವೂ ಬಂದೀತು. ನಮ್ಮ ಸೂರ್ಯ ಆಕಾಶಗಂಗೆಯ ತುದಿಯಲ್ಲಿರುವ ಒಂದು ಪುಟ್ಟ ನಕ್ಷತ್ರ ಎಂದಾಗ ಆಕಾಶಗಂಗೆಯ ದೃಶ್ಯವೂ ಹೊಳೆದೀತು. ಆದರೆ ಈ ಆಕಾಶಗಂಗೆಯಂತಹ ಸಹಸ್ರಾರು ಕೋಟಿ ನಕ್ಷತ್ರಜಾಲಗಳು ಈ ವಿಶ್ವದಲ್ಲಿವೆ ಎಂದಾಗ ಜ್ಞಾನ ಸೋತು ಹೋಗುತ್ತದೆ, ಕಲ್ಪನೆಯನ್ನು ಮೀರುತ್ತದೆ. ಇದನ್ನೇ ಕಗ್ಗ ಸುಂದರವಾಗಿ ಹೇಳುತ್ತದೆ. ನಮಗೆ ತಿಳಿದಿದೆ ಎನ್ನುವುದು ಪುಟ್ಟ ದ್ವೀಪವಿದ್ದಂತೆ. ತಿಳಿಯಲಾಗದ್ದು, ತಿಳಿದಿದ್ದನ್ನು ಸುತ್ತುವರೆದ ಅಪಾರ ಸಮುದ್ರವಿದ್ದ ಹಾಗೆ.

ಹಾಗೆಯೇ ನಮ್ಮ ಕಾಯಕದ ಗಿರಿಗೆ ಎಂದರೆ ದೇಹಕ್ಕೆ ಮನಸ್ಸು ಎನ್ನುವ ದೊಡ್ಡ ಮೋಡಗಳ ಸಮೂಹ ಸುತ್ತುವರಿದಿದೆ. ಜ್ಞಾನಕ್ಕೆ ಅಜ್ಞಾನದ ಬೃಹತ್ ಪೊರೆ ಕವಿದಿದೆ. ಆದ್ದರಿಂದ ಅಷ್ಟೊಂದು ಅಜ್ಞಾನದ, ಅಳೆಯಲಾರದ್ದರ ಮಂಜು ಸುತ್ತ ಕವಿದಿದ್ದಾಗ ನನಗೆ ತಿಳಿದಿದೆ ಎಂಬ ಅತ್ಯಂತ ಚಿಕ್ಕ ವಿಷಯದಿಂದ ಆಗವುದೇನು? ಹಾಗಾದರೆ ಅಳೆಯಲಾರದ್ದರ ತಿಳಿವಳಿಕೆಯನ್ನು ಪಡೆಯಲು ಪ್ರಯತ್ನಿಸಬೇಕು. ಆ ಮಹಾನ್ ಸತ್ವ ದರ್ಶನ ಸಾಧ್ಯವಾಗುವುದು ದೂರದ ಗ್ರಹಿಕೆಯಿಂದಲ್ಲ, ಆಂತರ್ಯದ ಶೋಧನೆಯಿಂದ. ಅದು ಸಾಧ್ಯವಾದರೆ ಯಥಾರ್ಥದ ತಿಳುವಳಿಕೆ ಬರುತ್ತದೆ.

ಹೀಗೆ ಜ್ಞಾನ ಮತ್ತು ಅಜ್ಞಾನಗಳ, ತಿಳಿದಿದ್ದರ ಮತ್ತು ತಿಳಿಯಲಾರದರ, ಅಳೆಯಬಹುದಾದ ಮತ್ತು ಅಳೆಯಲಾಗದ ವಸ್ತುಗಳ, ಚಿಂತನೆಗಳ ಮಿಶ್ರಣವೇ ಬ್ರಹ್ಮಸತ್ವದ ಮಾಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT