ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿವಳಿಕೆಯಿಂದ ಮಿತವಾದ ಮಾತು

Last Updated 8 ಡಿಸೆಂಬರ್ 2018, 5:50 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ವಂಶದಲ್ಲಿ ಹುಟ್ಟಿ, ಬೆಳೆದು ನಂತರ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳಲ್ಲಿ ಪಾರಂಗತನಾಗಿ ಮರಳಿದ. ಆಮೇಲೆ ಬದುಕಿನಲ್ಲಿ ವಿರಕ್ತಿ ಬಂದು ಕಾಮ-ಭೋಗ ಜೀವನವನ್ನು ತೊರೆದು ಗುರುಗಳನ್ನು ಆಶ್ರಯಿಸಿ ಪಬ್ಬಜಿತನಾದ. ಹಿಮಾಲಯಕ್ಕೆ ತೆರಳಿ ನೆಲೆಸಿದ. ಅವನ ಚರ್ಯೆಯನ್ನು, ಜ್ಞಾನವನ್ನು ಕಂಡ ಐದುನೂರು ಋಷಿಗಳು ಅವನನ್ನೇ ಆಚಾರ್ಯನನ್ನಾಗಿ ಮಾಡಿಕೊಂಡರು.

ಈ ಐದುನೂರು ತಪಸ್ವಿಗಳಲ್ಲಿ ಒಬ್ಬ ಪಾಂಡುರೋಗದಿಂದ ಪೀಡಿತನಾಗಿದ್ದ. ಆಶ್ರಮದಲ್ಲಿ ಅವನ ನಿತ್ಯದ ಕೆಲಸ ಸೌದೆ ಸೀಳುವುದಾಗಿತ್ತು, ಅವನು ಶಕ್ತಿಶಾಲಿ ಹಾಗೂ ಈ ಕಾರ್ಯದಲ್ಲಿ ಕುಶಲಿಯಾಗಿದ್ದ. ಅವನು ಸೌದೆ ಸೀಳುವಾಗ ಅವನ ಮುಂದೆ ಒಬ್ಬ ವಾಚಾಳಿಯಾದ ತಪಸ್ವಿ ಕುಳಿತುಕೊಂಡು, ‘ಹೀಗೆ ಹೊಡೆ, ಅಲ್ಲಿ ಹೊಡೆ, ಛೆ ಹುಚ್ಚಾ ಹಾಗೆ ಹೊಡೆಯುತ್ತಾರೇನೋ?’’ ಎಂದು ಮಾತನಾಡುತ್ತಲೇ ಇದ್ದ. ಆಗ ಸೌದೆ ಸೀಳುವ ತಪಸ್ವಿ ಕೋಪದಿಂದ ಹೇಳಿದ, ‘‘ನೀನು ಸುಮ್ಮನಿರಪ್ಪ, ನಿನಗೆ ಮರ ಕತ್ತರಿಸುವುದು ಗೊತ್ತಿಲ್ಲ, ಬರೀ ಮಾತನಾಡುತ್ತೀ’’. ಇನ್ನೊಬ್ಬ ಸುಮ್ಮನಿದ್ದಾನೆಯೇ? ಮತ್ತೆ ತನ್ನ ಉಪದೇಶ ನೀಡುವುದನ್ನು ಮುಂದುವರಿಸಿಯೇ ಬಿಟ್ಟ. ಮೊದಲೇ ಸೌದೆ ಕತ್ತರಿಸಿ ಸುಸ್ತಾಗಿದ್ದ ತಪಸ್ವಿಗೆ ಇವನ ವಟವಟ ವಿಪರೀತ ಕೋಪ ತಂದಿತು. ಅದೇ ಕೋಪದಲ್ಲಿ ಆತ ನುಗ್ಗಿ ಹೋಗಿ ಕೊಡಲಿಯಿಂದ ವಾಚಾಳಿ ತಪಸ್ವಿಯನ್ನು ಕೊಂದುಹಾಕಿಬಿಟ್ಟ. ಅವಶ್ಯಕತೆ ಇಲ್ಲದೆ ವಿಪರೀತ ಮಾತನಾಡಿದ್ದಕ್ಕೆ ಆತ ಪ್ರಾಣ ಕಳೆದುಕೊಂಡ. ಬೋಧಿಸತ್ವ ಅವನ ಅಂತ್ಯಕ್ರಿಯೆ ಮಾಡಿದ.

ಅದೇ ಹೊತ್ತಿನಲ್ಲಿ ಆಶ್ರಮದ ಹತ್ತಿರವೇ ಒಂದು ಮರದಲ್ಲಿ ತಿತ್ತಿರಿ ಪಕ್ಷಿ ವಾಸವಾಗಿತ್ತು. ಅದಕ್ಕೆ ಜೋರಾಗಿ ಹಾಡುವ ಹುಚ್ಚು. ಮರದ ಕೆಳಗಿದ್ದ ಹುತ್ತದ ಮೇಲೆ ಕುಳಿತು ಒಂದೇ ಸಮನೆ ಹಾಡುತ್ತಿತ್ತು. ಹೊತ್ತು ಗೊತ್ತಿಲ್ಲದೆ ಬೆಳಿಗ್ಗೆ, ಮಧ್ಯಾಹ್ನ ಮತ್ತೆ ಕೆಲವೊಮ್ಮೆ ರಾತ್ರಿಯೂ ಹಾಡುತ್ತಿತ್ತು. ಅದರ ಪರಿವಾರದ ಹಕ್ಕಿಗಳು ಹೇಳಿ ನೋಡಿದವು. ಹಾಡುವುದಕ್ಕೆ ಒಂದು ಸಮಯವಿರುತ್ತದೆ. ಸಮಯ ತಪ್ಪಿ ಹಾಡುವುದು ಅಪಾಯಕಾರಿ ಹಾಗೂ ಬೇರೆಯವರಿಗೆ ಉಪದ್ರವ ನೀಡುತ್ತದೆ. ಅದಲ್ಲದೇ ನಾವು ಹಾಡುವುದು ಸ್ವಸಂತೋಷಕ್ಕೆ. ಆದ್ದರಿಂದ ಅಷ್ಟು ಜೋರಾಗಿ ಹಾಡುವುದು ಬೇಡ. ಏನೆಲ್ಲ ಹೇಳಿದರೂ ಈ ತಿತ್ತಿರಿ ಪಕ್ಷಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದು ತನ್ನ ಅಭ್ಯಾಸವನ್ನು ಮುಂದುವರಿಸಿಯೇ ಬಿಟ್ಟಿತು. ಒಂದು ಬಾರಿ ಬೇಡ ಕಾಡಿಗೆ ಬಂದ. ಅವನಿಗೆ ಪಕ್ಷಿ ಹಾಡುವ ಧ್ವನಿ ಕೇಳಿಸಿತು. ಅವನಿಗೆ ಆಶ್ಚರ್ಯ! ಈ ಸಮಯದಲ್ಲಿ ಪಕ್ಷಿಗಳು ಹಾಡುವುದಿಲ್ಲ. ಅವು ಹಾಡುವುದು ತೀರಾ ಬೆಳಗಿನಲ್ಲಿ ಅಥವಾ ಸಾಯಂಕಾಲ ಗೂಡಿಗೆ ಮರಳಿದಾಗ. ಇದೇಕೆ ಹೀಗೆ ಈಗ ಹಾಡುತ್ತಿದೆ ಎಂದು ಧ್ವನಿ ಬಂದ ದಿಕ್ಕಿನಲ್ಲಿ ಸಾವಕಾಶವಾಗಿ ಬಂದು ನೋಡಿದ. ತಿತ್ತಿರಿ ಪಕ್ಷಿ ಹುತ್ತದ ಮೇಲೆ ಕುಳಿತು ಆಕಾಶದ ಕಡೆಗೆ ಮುಖಮಾಡಿ ಜೋರಾಗಿ ಹಾಡುತ್ತಲೇ ಇದೆ. ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಜ್ಞಾನವೇ ಇಲ್ಲ. ತಕ್ಷಣ ಬೇಟೆಗಾರ ಬಲೆ ಬೀಸಿ ಅದನ್ನು ಹಿಡಿದುಕೊಂಡು ಹೋಗಿ ಕೊಂದುಬಿಟ್ಟ.

ಇವೆರಡೂ ಘಟನೆಗಳನ್ನು ಸೇರಿಸಿ ಬುದ್ಧ ಹೇಳಿದ, ‘‘ಯಾವ ಕೆಲಸವನ್ನು ನೀವು ಮಾಡುವುದು ಸಾಧ್ಯವಿಲ್ಲವೋ ಅದರ ಬಗ್ಗೆ ಮತ್ತೊಬ್ಬರಿಗೆ ಉಪದೇಶ ನೀಡಬೇಡಿ. ಅನಾವಶ್ಯಕವಾಗಿ, ಅತಿಯಾಗಿ ಮಾತನಾಡಿ ಬೇರೆ ಜನರ ಗಮನವನ್ನು ನಿಮ್ಮೆಡೆಗೆ ಸೆಳೆಯಬೇಡಿ. ಹೀಗೆ ಅಕಾರಣವಾಗಿ ಸೆಳೆದ ಗಮನ ನಿಮ್ಮ ಬದುಕಿನ ಬೆಳವಣಿಗೆಗೆ ಮುಳುವಾದೀತು. ಹೆಚ್ಚಿದ ತಿಳಿವಳಿಕೆ ಮಾತನ್ನು ಕಡಿಮೆ ಮಾಡಿಸುತ್ತದೆ, ಕೃತಿಯನ್ನು ಹೆಚ್ಚಿಸುತ್ತದೆ’’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT