ಮಿತಿಯಲ್ಲಿಯ ಬದುಕು

7

ಮಿತಿಯಲ್ಲಿಯ ಬದುಕು

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಸಿಂಹವಾಗಿ ಹುಟ್ಟಿ ಹಿಮಾಲಯದ ಗುಹೆಯಲ್ಲಿ ವಾಸವಾಗಿದ್ದ. ಒಂದು ದಿನ ಗುಹೆಯಿಂದ ಹೊರಬಂದು ಆಕಳಿಸಿ ನೋಡಿದಾಗ, ಮುಂದೆ ಒಂದು ಎಮ್ಮೆಗಳ ಹಿಂಡು ಹೊರಟಿದ್ದು ಕಂಡಿತು. ಹಿಂಡನ್ನು ಬೆಂಬತ್ತಿ, ಒಂದು ದೊಡ್ಡ ಎಮ್ಮೆಯನ್ನು ಹೊಡೆದು ಹೊಟ್ಟೆತುಂಬ ಮಾಂಸ ತಿಂದು ಕೊಳದಲ್ಲಿ ಸ್ಫಟಿಕದಂತೆ ತಿಳಿಯಾಗಿದ್ದ ನೀರನ್ನು ಕುಡಿದು ಗುಹೆಗೆ ಹೊರಟ.

ದಾರಿಯಲ್ಲಿ ಒಂದು ನರಿ ಎದುರಾಯಿತು. ಥಟ್ಟನೆ ಎದುರು ಬಂದದ್ದರಿಂದ ಪಾರಾಗುವುದು ಕಷ್ಟ ಎಂಬುದನ್ನರಿತು ಓಡಿ ಹೋಗಿ ಸಿಂಹದ ಕಾಲಮೇಲೆ ಬಿತ್ತು. ಸಿಂಹ ಹುಬ್ಬೇರಿಸಿ ಕೇಳಿತು, ‘ಯಾಕೆ ಜಂಬುಕ, ಹೀಗೆ ಓಡಿ ಬಂದು ಬಿದ್ದೆ?’

‘ಸ್ವಾಮಿ, ನನಗೆ ಮನದಲ್ಲಿ ಒಂದು ಆಸೆ ಬಂದಿದೆ. ನಾನು ನನ್ನ ಉಳಿದ ಆಯುಷ್ಯವನ್ನು ತಮ್ಮ ಪಾದಸೇವೆ ಮಾಡಿಯೇ ಕಳೆಯಬೇಕೆಂದಿದ್ದೇನೆ. ಈ ನರಿ ಜನ್ಮ ಸಾಕು. ಬದುಕಿದರೆ ರಾಜನ ಹತ್ತಿರ ಬದುಕಬೇಕು ಎಂದುಕೊಂಡಿದ್ದೇನೆ’ ಎಂದಿತು ನರಿ.

‘ಆಯ್ತು, ನನ್ನೊಡನೆ ಬಾ, ನಿನಗೆ ದಿನವೂ ಒಳ್ಳೆಯ ಮಾಂಸವನ್ನೇ ಕೊಡುತ್ತೇನೆ’ ಎಂದಿತು ಸಿಂಹ.

ಅಂದಿನಿಂದ ಪ್ರತಿದಿನ ಸಿಂಹ ಬೇಟೆ ಆಡಿ ತಿಂದು ಉಳಿದ ಮಾಂಸವನ್ನು ನರಿ ತಿಂದು ತಿಂದು ದಪ್ಪಗಾಯಿತು. ನಿತ್ಯ ಸಿಂಹ ಹೇಳುತ್ತಿತ್ತು, ‘ಜಂಬುಕ, ಹೊರಗೆ ಹೋಗಿ ಪರ್ವತದ ಶಿಖರದ ಮೇಲೆ ನಿಂತು ನೋಡು. ಕೆಳಗೆ ಓಡಾಡುತ್ತಿರುವ ಪ್ರಾಣಿಗಳನ್ನು ಗಮನಿಸು. ನಿನಗೆ ಯಾವ ಪ್ರಾಣಿಯ ಮಾಂಸ ತಿನ್ನುವ ಆಸೆಯಾಗಿದೆಯೋ ಅದನ್ನು ಹೇಳು. ನಂತರ ನನಗೆ ನಮಸ್ಕರಿಸಿ, ‘ಮಹಾರಾಜಾ, ನಿಮ್ಮ ಪರಾಕ್ರಮ ತೋರಿಸಿ’ ಎನ್ನಬೇಕು. ತಕ್ಷಣ ಹೋಗಿ ಬೇಟೆಯಾಡಿ ಆ ಪ್ರಾಣಿಯನ್ನು ಹೊಡೆದು ತರುತ್ತೇನೆ’’. ಅದರಂತೆ ನರಿ ಹೋಗಿ ತನಗೆ ಬೇಕಾದ ಪ್ರಾಣಿಯನ್ನು ಹೆಸರಿಸುತ್ತಿತ್ತು. ತಕ್ಷಣ ಸಿಂಹ ಹೋಗಿ ಅದನ್ನು ಬೇಟೆಯಾಡಿ ತರುತ್ತಿತ್ತು.

ದಿನವೂ ಇದೇ ರೀತಿ ನರಿ ಸಿಂಹವನ್ನು ಬಿನ್ನವಿಸಿಕೊಳ್ಳುವುದು, ಅದು ಹೋಗಿ ಬೇಟೆಯಾಡಿ ಬರುವುದು ನಡೆಯುತ್ತಿತ್ತು. ದಿನವೂ ಪರಿಶ್ರಮವಿಲ್ಲದೆ ಹೊಟ್ಟೆ ತುಂಬ ತಿಂದು ದಪ್ಪಗಾದ ನರಿಗೆ ಸೊಕ್ಕು ಬಂದಿತು. ನಾನೇನು ಕಡಿಮೆ? ಸಿಂಹಕ್ಕೂ ನಾಲ್ಕು ಕಾಲು, ನನಗೂ ನಾಲ್ಕು ಕಾಲು. ದಿನವೂ ಸಿಂಹ ತಿಂದದ್ದನ್ನೇ ನಾನೂ ತಿನ್ನುತ್ತೇನೆ. ಆದ್ದರಿಂದ ನಾಳೆಯಿಂದ ನಾನೇ ಬೇಟೆಗೆ ಹೋಗಿ ಪ್ರಾಣಿಗಳನ್ನು ಹೊಡೆದು ತಿನ್ನುತ್ತೇನೆ ಎಂದು ತೀರ್ಮಾನಿಸಿತು.

ಮರುದಿನ ನರಿ ಸಿಂಹಕ್ಕೆ ಹೇಳಿತು, ‘ಮಹಾರಾಜರೆ, ಇಷ್ಟು ದಿನವೂ ನೀವು ಬೇಟೆಯಾಡಿ ತಂದ ಪ್ರಾಣಿಗಳನ್ನೇ ತಿಂದು ಬದುಕಿದ್ದೇನೆ. ನನಗೂ ಒಂದು ಆಸೆ. ನಾನೂ ಒಂದು ಆನೆಯನ್ನು ಬೇಟೆಯಾಡಿ ಹೊಡೆದು ಅದರ ಮಾಂಸವನ್ನು ತಿನ್ನಬೇಕು. ಅದಕ್ಕೆ ನಾನು ನಾಳೆ ಗುಹೆಯಲ್ಲಿರುತ್ತೇನೆ. ತಾವು ಪರ್ವತದ ಕೆಳಗಿರುವ ಆನೆಗಳನ್ನು ನೋಡಿ ಬಂದು, ‘ಜಂಬುಕ, ನಿನ್ನ ಪರಾಕ್ರಮವನ್ನು ತೋರಿಸು’ ಎಂದು ಹೇಳಿ. ನಾನು ಬೇಟೆಯಾಡಿ ಬರುತ್ತೇನೆ. ಒಂದು ಬಾರಿ ನನ್ನ ಮೇಲೆ ಕೃಪೆ ಮಾಡಿ’ ಎಂದು ಬೇಡಿತು. ಸಿಂಹ, ’ಈ ಹುಚ್ಚು ಕೆಲಸ ಬೇಡ. ಇದುವರೆಗೂ ಯಾವ ನರಿಯೂ ಆನೆಯನ್ನು ಕೊಂದಿಲ್ಲ’ ಎಂದು ಹೇಳಿದರೂ ಒಂದೇ ಸಮನೆ ಅದನ್ನು ಪೀಡಿಸಿ ಕೇಳಿತು. ಆಗ ಸಿಂಹ, ‘ಹಾಗಾದರೆ ಜಂಬುಕ, ಪರ್ವತದ ಕೆಳಗಿರುವ ಆನೆಯನ್ನು ಹೊಡೆದು ಪರಾಕ್ರಮವನ್ನು ತೋರಿಸು’ ಎಂದಿತು. ನರಿ ಗುಹೆಯಿಂದ ಹೊರಬಂದು ಆಕಳಿಸಿ ಜೋರಾಗಿ ಓಡುತ್ತ ಆನೆಯ ಮೇಲೆ ಹಾರಿತು. ಆನೆ ಅದನ್ನು ಸೊಂಡಿಲಿನಿಂದ ಹಿಡಿದು ಕಾಲಲ್ಲಿ ಹಾಕಿ ತುಳಿದು ಮುದ್ದೆ ಮಾಡಿ ಅದರ ಮೇಲೆ ಲದ್ದಿ ಹಾಕಿ ಹೋಗಿಬಿಟ್ಟಿತು.

ದೊಡ್ಡವರ ಜೊತೆಗೆ ಇರುವ ಅವಕಾಶವನ್ನು ಭಗವಂತ ಕೆಲವೊಮ್ಮೆ ಕರುಣಿಸುತ್ತಾನೆ. ಹಾಗೆ ಇದ್ದಾಗ ತಾವೂ ಅವರಷ್ಟೇ ದೊಡ್ಡವರಾದೆವು ಎಂಬ ಭ್ರಮೆ ತುಂಬಾ ಅಪಾಯಕಾರಿಯಾದದ್ದು. ನಮ್ಮ ಶಕ್ತಿಯ ಮಿತಿಗಳನ್ನು ಅರಿತು ಬದುಕುವುದರಲ್ಲಿಯೇ ನಮಗೆ ಸುಖ.

Tags: 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !