ಭೂಮಿಯ ಪರಿಶುದ್ಧತೆ

ಮಂಗಳವಾರ, ಮಾರ್ಚ್ 26, 2019
27 °C

ಭೂಮಿಯ ಪರಿಶುದ್ಧತೆ

ಗುರುರಾಜ ಕರಜಗಿ
Published:
Updated:

ಹಿಂದೆ ಮಗಧ ದೇಶದಲ್ಲಿ ಬೋಧಿಸತ್ವ ಬ್ರಾಹ್ಮಣನ ಮಗನಾಗಿ ಹುಟ್ಟಿ, ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ಪಬ್ಬಜಿತನಾಗಿ, ತಪಸ್ಸು ಮಾಡುತ್ತ ಗೃಧ್ರಕೂಟದಲ್ಲಿ ನೆಲೆಯಾಗಿದ್ದ.

ಆಗ ರಾಜಗಹದಲ್ಲಿ ಒಬ್ಬ ಶ್ರೀಮಂತ ಬ್ರಾಹ್ಮಣನಿದ್ದ. ಅವನಿಗೊಬ್ಬ ವಿವೇಕಿಯಾದ ಮಗನಿದ್ದ. ತಂದೆಗೆ ತುಂಬ ವಯಸ್ಸಾಗಿ ಇನ್ನು ತಾನು ಬಹುಕಾಲ ಉಳಿಯುವದಿಲ್ಲವೆಂಬ ಭಾವನೆ ಬಂತು. ಆತ ಮಗನಿಗೆ ಹೇಳಿದ, “ಮಗು, ನನ್ನದು ಒಂದೇ ಆಸೆ. ನಾನು ಸತ್ತ ಮೇಲೆ ನನ್ನ ದೇಹವನ್ನು ಸ್ಮಶಾನದಲ್ಲಿ ಸುಡಬೇಡ. ಯಾವ ಸ್ಥಳದಲ್ಲಿ ಎಂದೂ ಯಾರನ್ನೂ ಸುಟ್ಟಿಲ್ಲವೋ ಅಂಥ ಸ್ಥಳದಲ್ಲಿ ನನ್ನ ಅಂತ್ಯಕ್ರಿಯೆಮಾಡು”. ಮಗ ಕೇಳಿದ, “ಅಪ್ಪಾ, ನನಗೆ ಅಂತಹ ಸ್ಥಳ ಎಲ್ಲಿದೆ ಎಂಬುದು ತಿಳಿದಿಲ್ಲ. ತಾವು ದಯವಿಟ್ಟು ತೋರಿಸಿದರೆ ತಮ್ಮ ಅಪೇಕ್ಷೆಯನ್ನು ಪೂರೈಸುತ್ತೇನೆ” ತಂದೆ ಮಗನನ್ನು ಕರೆದುಕೊಂಡು ಗೃಧ್ರಕೂಟದ ಪರ್ವತ ಶಿಖರಕ್ಕೆ ಬಂದ. ಅಲ್ಲಿ ಮೂರು ಶಿಖರಗಳ ಮಧ್ಯೆ ಇದ್ದ ಸಮತಟ್ಟಾದ ಸ್ಥಳವನ್ನು ತೋರಿಸಿ, ಇದು ಪವಿತ್ರವಾದ ಸ್ಥಳ, ಇಲ್ಲಿ ಯಾರನ್ನೂ ಸುಟ್ಟಿಲ್ಲ ಎಂದು ವಿವರಿಸಿದ. ನಂತರ ಪರ್ವತವನ್ನು ಇಳಿದು ಬರುವಾಗ ದಾರಿಯಲ್ಲಿ ಬೋಧಿಸತ್ವನನ್ನೂ ಕಂಡರು. ತಾವು ಬಂದಿದ್ದ ಕಾರಣವನ್ನು ವಿವರಿಸಿದರು. ಇವರ ಮಾತುಗಳನ್ನು ಕೇಳಿ ನಕ್ಕು ಬೋಧಿಸತ್ವ, “ದಯವಿಟ್ಟು ನನ್ನ ಜೊತೆಗ ಅದೇ ಸ್ಥಳಕ್ಕೆ ಬನ್ನಿ. ಮೊದಲು ಎಂದಾದರೂ ಅಲ್ಲಿ ಯಾರ ದೇಹವನ್ನಾದರೂ ಸುಟ್ಟಿದ್ದರೇ ಎಂಬುದನ್ನು ಪರೀಕ್ಷಿಸೋಣ” ಎಂದು ಕರೆದುಕೊಂಡು ಹೋದ. ಧ್ಯಾನದಿಂದ ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ನೋಡಿ ಹೇಳಿದ, “ಯುವಕ, ಈ ಸ್ಥಳದಲ್ಲಿ ಯಾರನ್ನೂ ಸುಟ್ಟಿಲ್ಲ ಎಂದು ನಿನ್ನ ತಂದೆ ನಂಬಿದ್ದಾರೆ. ವಿಚಿತ್ರ ಗೊತ್ತೇ? ನಿಮ್ಮ ತಂದೆಯೇ ರಾಜಗಹದಲ್ಲಿ ಉಪಸಾಳಹಕ ಎಂಬ ಹೆಸರಿನಿಂದ ಹುಟ್ಟಿ, ಬೆಳೆದು ಇದೇ ಶಿಖರಗಳ ಮಧ್ಯೆ ಹದಿನಾಲ್ಕು ಸಾವಿರ ಬಾರಿ ಸುಡಿಸಿಕೊಂಡಿದ್ದಾರೆ. ಇವರಲ್ಲದೇ ಬೇರೆ ಜನರು ಬೇರೆ ಬೇರೆ ಕಾಲದಲ್ಲಿ ಇಲ್ಲಿ ಸತ್ತು ದಹನಗೊಂಡಿದ್ದಾರೆ”. ಮುದುಕ ಬ್ರಾಹ್ಮಣ ಹಾಗೂ ಯುವಕ ಆಶ್ಚರ್ಯಚಕಿತರಾದರು.

ಹಿರಿಯ ಬ್ರಾಹ್ಮಣ ಕೇಳಿದ, “ಸ್ವಾಮಿ, ನಿಮಗೆ ಅಸಾಧ್ಯವಾದ ದೃಷ್ಟಿ ಇದೆ. ನನಗೆ ಇರುವುದು ಒಂದೇ ಆಸೆ. ಯಾರನ್ನೂ ಸುಡದ ಜಾಗೆಯಲ್ಲಿ ನನ್ನ ದೇಹದ ಅಂತ್ಯಕ್ರಿಯೆಯಾಗಬೇಕು. ಅಂಥ ಸ್ಥಳವನ್ನು ತಾವೇ ತೋರಿಸಿ”. ಬೋಧಿಸತ್ವ ಗಂಭೀರನಾಗಿ ಹೇಳಿದ, “ಸ್ವಾಮಿ, ಇಡೀ ಭೂಮಿಯೇ ಒಂದು ಸ್ಮಶಾನ. ಇಲ್ಲಿ ಯಾರನ್ನೂ ಸುಡದೇ ಇರುವ, ಸಮಾಧಿ ಮಾಡದ, ಯಾರೂ ಸಾಯದೇ ಇರುವ ಒಂದು ಪುಟ್ಟ ಸ್ಥಳವೂ ಇಲ್ಲ. ಆದರೆ ಬೇಜಾರು ಬೇಡ. ಯಾಕೆಂದರೆ ಭೂಮಿಗೆ ತನ್ನನ್ನು ತಾನೇ ಕ್ಷಣಕ್ಷಣಕ್ಕೂ ಶುದ್ಧಿ ಮಾಡಿಕೊಳ್ಳುವ ಶಕ್ತಿ ಇದೆ. ಪ್ರತಿಯೊಂದು ಸ್ಥಳವೂ ಹೇಗೆ ಸ್ಮಶಾನವೋ ಹಾಗೆಯೇ ಪ್ರತಿಯೊಂದು ಸ್ಥಳವೂ ಪವಿತ್ರವೇ”. ಇಷ್ಟು ಹೇಳಿ ತಂದೆ ಮಕ್ಕಳಿಬ್ಬರಿಗೂ ಸರಿಯಾದ ಧರ್ಮೋಪದೇಶವನ್ನು ಮಾಡಿ ಮರಳಿ ತನ್ನ ಸ್ಥಾನಕ್ಕೆ ಹೊರಟು ಹೋದ.

ಭೂಮಿಗೆ ಅಸಾಧ್ಯವಾದ ಕ್ಷಮೆ, ಮರೆವು ಇದೆ. ಆದದ್ದನ್ನು ಮರೆತು ಮತ್ತೆ ಸದಾಕಾಲ ಶುದ್ಧವಾಗಿಯೇ ಇರುತ್ತದೆ. ಅದು ಪ್ರತಿಯೊಬ್ಬ ಮನುಷ್ಯನಿಗೂ ಮಾದರಿ ಮತ್ತು ಆದರ್ಶ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !