ದುರ್ಬುದ್ಧಿಯ ಫಲ

ಶುಕ್ರವಾರ, ಏಪ್ರಿಲ್ 19, 2019
22 °C

 ದುರ್ಬುದ್ಧಿಯ ಫಲ

ಗುರುರಾಜ ಕರಜಗಿ
Published:
Updated:
Prajavani

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ಅವನ ಅಮಾತ್ಯನಾಗಿದ್ದ.

ಅವನು ಒಂದು ದಿನ ಮಹಾನದಿಯಲ್ಲಿ ನಾವೆಯಲ್ಲಿ ವಿಹರಿಸುತ್ತಿದ್ದಾಗ, ದೇವತೆಗಳ ಬಳಕೆಗೆಂದು ನಿರ್ಮಿತವಾದ ಮಾವಿನಹಣ್ಣು ಗುರಿ ತಪ್ಪ್ಪಿ ಈತನ ನಾವೆಯಲ್ಲಿ ಬಿತ್ತು. ಅದು ತುಂಬಾ ದೊಡ್ಡದಿತ್ತು, ಬಂಗಾರದ ಬಣ್ಣದ್ದಾಗಿತ್ತು. ರಾಜ ಸೇವಕರಿಗೆ, “ಅದು ಯಾವ ಹಣ್ಣು?” ಎಂದು ಕೇಳಿದ. ಅವರು, “ಮಹಾರಾಜಾ, ಇದು ಮಾವಿನಹಣ್ಣು, ಇಂಥ ದೊಡ್ಡದಾದ, ಚಿನ್ನದ ಬಣ್ಣದ ಹಣ್ಣನ್ನು ನಾವೆಂದೂ ನೋಡಿಲ್ಲ” ಎಂದರು. ಅರಮನೆಗೆ ಆ ಹಣ್ಣನ್ನು ತೆಗೆದುಕೊಂಡು ಹೋಗಿ ಪರಿವಾರದವರೊಂದಿಗೆ ಅದನ್ನು ತಿಂದ. ಅದರ ರುಚಿ ಅತ್ಯದ್ಭುತವಾಗಿತ್ತು.

ರಾಜ ಈ ಹಣ್ಣಿನ ಓಟೆಯನ್ನು ರಾಜೋದ್ಯಾನದಲ್ಲಿ ಹಾಕಿಸಿದ. ಅದಕ್ಕೆ ಸರಿಯಾದ ರೀತಿಯಲ್ಲಿ ನೀರು, ಗೊಬ್ಬರಗಳನ್ನು ಕೊಟ್ಟಾಗ ಅದು ಮೊಳಕೆಯೊಡೆದು ಬೆಳೆಯಿತು. ಮಾಲಿಗಳು ಅದಕ್ಕೆ ವಿಶೇಷ ಕಾಳಜಿ ಮಾಡಿ ಹಾಲನ್ನು ಸುರಿದರು, ಸುಗಂಧ ದ್ರವ್ಯಗಳನ್ನು ಬೇರಿಗೆರೆದರು. ಮರ ದೊಡ್ಡದಾದ ಮೇಲೆ ಅತ್ಯಂತ ದೊಡ್ಡದಾದ, ಸುಗಂಧವನ್ನು ಪಸರಿಸುವ ಮಾವಿನ ಹಣ್ಣುಗಳು ಸುರಿದವು. ಅವುಗಳ ರುಚಿಯನ್ನು ಯಾವುದಕ್ಕೂ ಹೋಲಿಸುವಂತಿರಲಿಲ್ಲ.

ತನ್ನ ಹೆಮ್ಮೆಯನ್ನು ಹೇಳಿಕೊಳ್ಳಲು ರಾಜ ಕೆಲವು ಮಾವಿನಹಣ್ಣುಗಳನ್ನು ನೆರೆಹೊರೆಯ ರಾಜರಿಗೂ ಕಳುಹಿಸುತ್ತಿದ್ದ. ಅವರೂ ಆ ಬೀಜಗಳನ್ನು ನೆಟ್ಟು ಇಂಥವೇ ಹಣ್ಣುಗಳನ್ನು ಪಡೆದಾರು ಎಂಬ ಭಯದಿಂದ ಮೊಳಕೆಯೊಡೆಯುವ ಜಾಗಕ್ಕೆ ಮುಳ್ಳಿನಿಂದ ಚುಚ್ಚಿ ಕಳುಹಿಸುತ್ತಿದ್ದ. ಈ ಹಣ್ಣುಗಳನ್ನು ತಿಂದ ರಾಜರು ಓಟೆಗಳನ್ನು ಮಣ್ಣಿನಲ್ಲಿ ಹಾಕಿಸಿದಾಗ ಮೊಳಕೆಯಾಗುತ್ತಲೇ ಇರಲಿಲ್ಲ. ಒಬ್ಬ ರಾಜ ಮಾಲಿಯನ್ನು ಕರೆದು ಕೇಳಿದ, “ಯಾಕೆ ಓಟೆಯಿಂದ ಮೊಳಕೆ ಬರುತ್ತಿಲ್ಲ?”. ಆತ ಬುದ್ಧಿವಂತ ಮಾಲಿ. ಅವನು ಹೇಳಿದ, “ಸ್ವಾಮಿ ಹಣ್ಣು ಕಳಿಸಿದ ರಾಜರು ತಮಗೆ ಅಂಥ ಹಣ್ಣು ಸಿಗಬಾರದೆಂದೇ ಬೀಜಕ್ಕೆ ಮುಳ್ಳು ಚುಚ್ಚಿ ಕಳುಹಿಸಿದ್ದಾರೆ” ಎಂದ.

ರಾಜನಿಗೆ ಅಸೂಯೆಯಾಯಿತು. ತನಗಂತೂ ಒಳ್ಳೆಯ ಹಣ್ಣಿನ ಗಿಡ ದೊರಕಲಿಲ್ಲ. ಹಾಗಾದರೆ ವಾರಣಾಸಿಯ ರಾಜನ ಗಿಡವೂ ಹಾಳಾಗಲಿ ಎಂದು ದುರುದ್ದೇಶದಿಂದ ತನ್ನ ಮಾಲಿಯನ್ನು ವಾರಣಾಸಿಗೆ ಕಳುಹಿಸಿದ. ಅವನು ಬಂದು ರಾಜನನ್ನು ಕಂಡು ತನ್ನ ಪ್ರಾವೀಣ್ಯತೆಯನ್ನು ಹೇಳಿಕೊಂಡ. ರಾಜ ಅವನನ್ನು ಹಳೆಯ ಮಾಲಿಯೊಂದಿಗೆ ಸೇರಿಸಿದ. ಹೊಸ ಮಾಲಿ ಏನೇನೋ ಹೊಸ ಪ್ರಯೋಗಗಳನ್ನು ಮಾಡುತ್ತ ರಾಜನ ಮನಸ್ಸನ್ನು ಗೆದ್ದ. ಆಗ ರಾಜ ಹಳೆಯ ಮಾಲಿಯನ್ನು ಕೆಲಸದಿಂದ ತೆಗೆದುಹಾಕಿ ಹೊಸಬನನ್ನೇ ತೋಟ ನೋಡಿಕೊಳ್ಳಲು ಬಿಟ್ಟ. ಈ ಕುಬುದ್ಧಿಯ ಮಾಲಿ ಮಾವಿನ ಮರದ ಸುತ್ತ ನೆಲವನ್ನು ಅಗೆದು ಅಲ್ಲಿ ವಿಷದ ಬಳ್ಳಿಗಳನ್ನು ನೆಟ್ಟ, ಬೇವಿನ ಮರದ ಸಸಿಗಳನ್ನು ಹಾಕಿದ. ನಂತರ ನೆಲವನ್ನು ಚೆನ್ನಾಗಿ ಅಗೆದು ಮಾವಿನ ಮರದ ಬೇರುಗಳಿಗೆ ವಿಷಬಳ್ಳಿಗಳ, ಬೇವಿನಮರದ ಬೇರುಗಳನ್ನು ಕಸಿ ಮಾಡಿದ.

ಆರು ತಿಂಗಳಲ್ಲಿ ಮಾವಿನಮರದಲ್ಲೆಲ್ಲ ಕಹಿಯಾದ ವಿಷ ಪಸರಿಸಿತು. ರಾಜ ಮಾವಿನಹಣ್ಣು ವಿಷವಾದದ್ದನ್ನು ಕಂಡು ಗಾಬರಿಯಾಗಿ ಬೋಧಿಸತ್ವನನ್ನು ಕೇಳಿದ. ಆತ ಎಲ್ಲವನ್ನೂ ಪರೀಕ್ಷಿಸಿ, ಹೊಸ ಮಾಲಿಯನ್ನು ಓಡಿಸಿ ಹಳೆಯ ಮಾಲಿಯನ್ನೇ ಮತೆ ಕರೆತಂದ. ಮಾವಿನಮರದ ಸುತ್ತಲೂ ನೆಲವನ್ನು ಅಗೆಯಿಸಿ ಎಲ್ಲ ವಿಷಬಳ್ಳಿಗಳನ್ನು, ಬೇವಿನಮರಗಳನ್ನು, ಬೇರಿನ ಕಸಿಗಳನ್ನು ಕಿತ್ತು ಹಾಕಿಸಿ, ಹೊಸ ಮಣ್ಣು ಹಾಕಿ, ಗೊಬ್ಬರ ನೀರು ಕೊಟ್ಟ. ಮತ್ತೆ ರುಚಿಯಾದ ಮಾವಿನಹಣ್ಣು ದೊರೆತವು.

ಬೇರೆಯವರಿಗೆ ತನಗೆ ದೊರೆತಂಥ ಹಣ್ಣು ದೊರೆಯಬಾರದೆಂದು ರಾಜ ಮಾಡಿದ ದುರ್ಬುದ್ಧಿಯಿಂದ ಅಸೂಯೆ ಬೆಳೆಯಿತು. ಅಸೂಯೆಯಿಂದ ಮೂಲಫಲವೆ ಹಾಳಾಯಿತು. ಕೆಟ್ಟ ವಿಷಬಳ್ಳಿಗಳ ಸಂಪರ್ಕದಿಂದ ದೇವತೆಗಳು ನೀಡಿದ ಫಲವೂ ರುಚಿಗೆಟ್ಟು ನಿಂತಿತು. ಯಾವುದೇ ಋಣಾತ್ಮಕ ಕೆಲಸದಿಂದ ಎಂದಿಗೂ ಒಳ್ಳೆಯದಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !