ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯೇ ಕೃಷಿ

Last Updated 3 ಜೂನ್ 2019, 20:58 IST
ಅಕ್ಷರ ಗಾತ್ರ

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು |
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ||
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ |
ಸತತ ಕೃಷಿಯೋ ಪ್ರಕೃತಿ– ಮಂಕುತಿಮ್ಮ || 140 ||

ಪದ-ಅರ್ಥ: ಋತುಚಕ್ರ=ಋತುಗಳ ಚಕ್ರ, ಮೊಳೆಯುವುದು=ಚಿಗುರುವುದು, ಕ್ಷಿತಿ=ಭೂಮಿ, ಮತ್ತುದಿಸುವುದು=ಮತ್ತೆ+ಉದಿಸುವುದು.
ವಾಚ್ಯಾರ್ಥ: ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನ ಎದೆಯಲ್ಲಿ ಮರುಕ. ಸತ್ತವನ ದೇಹದ ಮಣ್ಣಿನಲ್ಲಿ ಹೊಸ ಹುಲ್ಲು ಚಿಗುರುತ್ತದೆ. ಭೂಮಿ ಗರ್ಭಧರಿಸಿದಾಗ ಮತ್ತೆ ಜೀವದ ಉದಯ. ಹೀಗೆ ಪ್ರಕೃತಿಯಲ್ಲಿ ಸತತವಾದ ಕೃಷಿ ನಡೆದೇ ಇರುತ್ತದೆ.

ವಿವರಣೆ: ಅನಾದಿಯಾದ ಈ ಪ್ರಪಂಚದಲ್ಲಿ ಅದೆಷ್ಟು ಋತುಗಳು ಬಂದು ಹೋದವೋ! ಇದನ್ನು ಆದಿಶಂಕರರು ತಮ್ಮ ಭಜಗೋವಿಂದ ಕೃತಿಯಲ್ಲಿ ಹೇಳುತ್ತಾರೆ:
“ದಿನಮಪಿ ರಜನಿ ಸಾಯಂಪ್ರಾತಃ ಶಿಶಿರ ವಸಂತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯುಃ ತದಪಿನ ಮುಚ್ಚತ್ಯಾಶಾವಾಯುಃ ||

“ದಿನ ರಾತ್ರಿಗಳು, ಸಂಜೆ, ಬೆಳಗುಗಳು, ಶಿಶಿರ, ವಸಂತ ಋತುಗಳು ಮತ್ತೆ ಮತ್ತೆ ಬರುತ್ತವೆ. ಕಾಲ ತಿರುಗುತ್ತದೆ, ಆಯುಷ್ಯ ಕಳೆದು ಹೋಗುತ್ತದೆ. ಆದರೆ ಆಶೆಯ ರೂಪದ ಪ್ರಾಣವಾಯು ಬಿಡುವುದಿಲ್ಲ”

ನಮಗೆ ಅರಿವಿಲ್ಲದಂತೆ ಕಾಲ ಸರಿದುಹೋಗುತ್ತದೆ, ಋತುಗಳು ಚಕ್ರದ ರೀತಿಯಲ್ಲಿ ಬದಲಾಗುತ್ತ ಹೋಗುತ್ತವೆ. ತನ್ನ ಪದಹತಿಗೆ, ಚಕ್ರಕ್ಕೆ ಸಿಲುಕಿದ ಪ್ರಾಣಿಗಳ ಬಗ್ಗೆ ಕಾಲನ ಹೃದಯ ಮರುಗುತ್ತದಂತೆ. ಹಾಗೆ ಮರುಗಿದಾಗ ಏನಾಗುತ್ತದೆ? ಕಗ್ಗ ಅತ್ಯಂತ ಕಾವ್ಯಾತ್ಮಕವಾಗಿ ವರ್ಣಿಸುತ್ತದೆ, ‘ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು’ ಮೃತ ವ್ಯಕ್ತಿಯನ್ನು ಮಣ್ಣಿನಲ್ಲಿ ಸಮಾಧಿ ಮಾಡಿ ಬಂದ ಕೆಲದಿನಗಳಲ್ಲಿ ಸಮಾಧಿಯ ಮಣ್ಣಿನ ಮೇಲೆ ಹುಲ್ಲು ಬೆಳೆಯುತ್ತದೆ. ಮೃತನ ಶರೀರವನ್ನೇ ಗೊಬ್ಬರವನ್ನಾಗಿ ಬಳಸಿ ಬೆಳೆದ ಹುಲ್ಲು! ಸಾವಿನ ಹೊಟ್ಟೆಯಲ್ಲಿ ಹೊಸ ಹುಟ್ಟಿನ ಚಿಗುರು! ಇದು ಭೌತಿಕವಾದದ್ದು. ಇನ್ನೊಂದೂ ಚಿಂತನೆ ಭಾರತೀಯ ಪರಂಪರೆಯಲ್ಲಿ ಗಟ್ಟಿಯಾಗಿದೆ. ನಮ್ಮಲ್ಲಿ ಯಾರಾದರೂ ತೀರಿದರೆ ಅವರು ಮತ್ತೆ ಮನೆಯಲ್ಲಿ ಹುಟ್ಟಿ ಮರಳಿ ಬರುತ್ತಾರೆ ಎಂಬ ನಂಬಿಕೆ. ಅದಕ್ಕೆ ಮನೆಯಲ್ಲಿ ಮಗು ಹುಟ್ಟಿದರೆ ಅದಕ್ಕೆ ಹಿಂದೆ ತೀರಿ ಹೋದ ಅಜ್ಜನ ಹೆಸರನ್ನೋ, ಅಜ್ಜಿಯ ಹೆಸರನ್ನೋ ಇಟ್ಟು, ನಮ್ಮನ್ನು ತೊರೆದು ಹೋದ ಜೀವ ಮತ್ತೊಂದು ರೂಪದಲ್ಲಿ ಮರಳಿ ಬಂದಿತು ಎಂದು ಭಾವಿಸುವ ಸಂತೋಷ. ಇದೇ ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವ ಪರಿ.

ಚಳಿಗಾಲ ಬಂದಾಗ ತಮ್ಮೆಲ್ಲ ಎಲೆಗಳನ್ನು ಉದುರಿಸಿಕೊಂಡು ಬೆತ್ತಲೆಯಾಗಿ ನಿಂತ ಮರಬಳ್ಳಿಗಳು, ವಸಂತಮಾಸ ಬರುತ್ತಿದ್ದಂತೆ ಮತ್ತೆ ಚಿಗುರುಗಳನ್ನು ಧರಿಸಿ ಮೈತುಂಬಿಕೊಳ್ಳುತ್ತವೆ. ಇದು ಶತಶತಮಾನಗಳಿಂದ ತಪ್ಪದೆ ನಡೆಯುವ ಕ್ರಿಯೆ. ಇದೇ ಪುನಃ ಪುನಃ ಧರೆಯ ಗರ್ಭಧಾರಣೆ ಕ್ರಮ. ಅದರಿಂದಲೇ ಜೀವೋತ್ಪತ್ತಿ.

ಆದ್ದರಿಂದಲೇ ಈ ಪ್ರಕೃತಿಯ ಕೃಷಿ ಸತತವಾಗಿ ನಡೆಯುತ್ತಲೇ ಇರುತ್ತದೆ. ಧರೆಯಲ್ಲಿ ಜೀವಿಗಳ ಚಕ್ರ ಸರಿಯಾಗಿ ನಡೆಯಬೇಕಾದರೆ ಈ ಕೃಷಿಯೇ ಮೂಲಾಧಾರ. ಒಂದು ರೀತಿಯಲ್ಲಿ ಪ್ರಕೃತಿಯೇ ಕೃಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT