ಸೋಮವಾರ, ನವೆಂಬರ್ 18, 2019
23 °C

ಸಾರ್ವಕಾಲಿಕ ಸತ್ಯ

Published:
Updated:

ಬಹಳ ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಬ್ಬ ಸದಾಚಾರಿ ಬ್ರಾಹ್ಮಣನ ಮಗನಾಗಿ ಹುಟ್ಟಿ, ತಕ್ಕಶಿಲೆಗೆ ಹೋಗಿ ಸರ್ವವಿದ್ಯೆಗಳನ್ನು ಪಡೆದು ಬಂದು ಐದು ನೂರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಿದ್ದ. ಆಚಾರ್ಯನ ಬಳಿ ವಿದ್ಯೆ ಕಲಿಯುತ್ತಿದ್ದ. ಆಚಾರ್ಯರಿಗೆ ಒಬ್ಬ ಮಗಳಿದ್ದಳು. ಆಕೆ ರೂಪವತಿ, ಗುಣವತಿ. ಆಕೆಗೆ ವಿವಾಹಕ್ಕೆ ಸರಿಯಾದ ವಯಸ್ಸು ಬಂದದ್ದರಿಂದ ಬೇಗನೆ ಮದುವೆ ಮಾಡುವ ಯೋಚನೆಯನ್ನು ಆಚಾರ್ಯರು ಮಾಡಿದರು. ಅವರಿಗೊಂದು ಆಸೆ. ತನ್ನಲ್ಲಿರುವ ಐದು ನೂರು ವಿದ್ಯಾರ್ಥಿಗಳಲ್ಲಿ ಅತ್ಯಂತ ಸದಾಚಾರಿಯಾದ ತರುಣನಿಗೆ ಅವಳನ್ನು ಕೊಟ್ಟು ಮದುವೆ ಮಾಡಬೇಕು. ಅತ್ಯಂತ ಗುಣವಂತನಾದ ತರುಣನನ್ನು ಹುಡುಕಲು ಒಂದು ಪರೀಕ್ಷೆಯನ್ನು ಯೋಜಿಸಿದರು.

ಎಲ್ಲ ವಿದ್ಯಾರ್ಥಿಗಳನ್ನು ಕರೆದು, ‘ಮಕ್ಕಳೇ, ನಿಮಗೆ ತಿಳಿದಂತೆ ನನ್ನ ಮಗಳು ಈಗ ವಿವಾಹಕ್ಕೆ ಸಿದ್ಧಳಾಗಿದ್ದಾಳೆ. ಆಕೆ ಸುಂದರಿ, ಗುಣವತಿ. ತಮ್ಮಲ್ಲಿ ಯಾರಿಗಾದರೂ ಅವಳನ್ನು ಮದುವೆಯಾಗುವ ಮನಸ್ಸಿದ್ದರೆ ಒಂದು ಕಾರ್ಯ ಮಾಡಬೇಕು. ಆಕೆಗೆ ವಸ್ತ್ರ, ಅಲಂಕಾರಗಳ ಆಸೆ ಇದೆ. ಆದ್ದರಿಂದ ನೀವು ಮನೆಯಲ್ಲಿ ಯಾರಿಗೂ ಕಾಣದಂತೆ, ಅವರ ಕಣ್ಣು ತಪ್ಪಿಸಿ ವಸ್ತ್ರ
ಗಳನ್ನು ಅಲಂಕಾರಗಳನ್ನು ಕದ್ದು ತರಬೇಕು. ಅಕಸ್ಮಾತ್ ನೀವು ತರುವುದನ್ನು ಯಾರಾದರೂ ಕಂಡಿದ್ದರೆ ಅಂಥ ವಸ್ತುಗಳನ್ನು ನಾನು ಸ್ವೀಕರಿಸುವುದಿಲ್ಲ. ತುಂಬ ಎಚ್ಚರದಿಂದ ಈ ಕಾರ್ಯ ಮಾಡಬೇಕು’ ಎಂದರು. ಎಲ್ಲ ತರುಣರಿಗೂ ಆಚಾರ್ಯರ ಮಗಳು ಇಷ್ಟವಾಗಿದ್ದಳು. ಆದ್ದರಿಂದ ಮರುದಿನದಿಂದಲೇ ಹುಡುಗರು ಮನೆಯವರ ಕಣ್ಣು ತಪ್ಪಿಸಿ ವಸ್ತುಗಳನ್ನು ತಂದು ತಂದು ಸಂಗ್ರಹ ಮಾಡ ತೊಡಗಿದರು. ಆಚಾರ್ಯರು ಪ್ರತಿಯೊಬ್ಬರೂ ತಂದ ವಸ್ತುಗಳನ್ನು ಬೇರೆಬೇರೆಯಾಗಿ ಇಡಿಸುತ್ತಿದ್ದರು.

ಒಂದು ತಿಂಗಳು ಕಳೆದರೂ ಈ ಆಚಾರ್ಯರ ಪ್ರಿಯಶಿಷ್ಯನಾಗಿದ್ದ ಬೋಧಿಸತ್ವ ಮಾತ್ರ ಯಾವ ವಸ್ತುನ್ನೂ ತಂದಿರಲಿಲ್ಲ. ‘ಯಾಕೆ ಮಗೂ, ನಿನಗೆ ನನ್ನ ಮಗಳನ್ನು ಮದುವೆಯಾಗುವ ಮನಸ್ಸಿಲ್ಲವೇ? ನೀನು ಯಾವ ವಸ್ತವನ್ನೂಇದುವರೆಗೆ ತಂದಿಲ್ಲವಲ್ಲ?’ ಎಂದು ಆಚಾರ್ಯರು ಕೇಳಿದರು. ಆಗ ಬೋಧಿಸತ್ವ, ‘ಹಾಗೇನೂ ಇಲ್ಲ ಗುರುಗಳೇ, ತಮ್ಮ ಮಗಳನ್ನು ಮದುವೆಯಾಗುವವ ಭಾಗ್ಯಶಾಲಿ. ಆದರೆ ಪಾಪಕರ್ಮವನ್ನು ಮಾಡುವುದಕ್ಕೆ ಯಾರೂ ಕಾಣದ ಸ್ಥಳವೇ ಇಲ್ಲ ಎನ್ನಿಸಿತು. ಯಾವ ಸ್ಥಳವೂ ಶೂನ್ಯ ಸ್ಥಳವಲ್ಲ. ಯಾರಿಗೂ ಕಾಣದ ಸ್ಥಳದಲ್ಲಿ ನಾನಂತೂ ಇದ್ದೇ ಇರುತ್ತೇನಲ್ಲ. ಆದ್ದರಿಂದ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ, ನಿಮ್ಮ ಮಗಳಿಗೆ ನಾನು ತಕ್ಕವನಲ್ಲ” ಎಂದ.
ಗುರುಗಳಿಗೆ ಅತ್ಯಂತ ಹರ್ಷವಾಯಿತು. ‘ಮಗೂ, ನನ್ನ ಮಗಳಿಗೆ ತಕ್ಕ ವರ ನೀನೇ. ನನ್ನಲ್ಲಿ ಸಾಕಷ್ಟು ಐಶ್ವರ್ಯವಿದೆ, ಆದರೆ ನಾನು ಧರ್ಮಭೀರುವಾದ ತರುಣನನ್ನು ಹುಡುಕುತ್ತಿದ್ದೆ. ಅದಕ್ಕಾಗಿ ಈ ಪರೀಕ್ಷೆಯನ್ನು ಮಾಡಿದೆ. ವಧುವನ್ನು ಪಡೆಯಲು ಉಳಿದ ತರಣರು ಧರ್ಮವನ್ನು ಬಿಟ್ಟರು. ಆದರೆ ನೀನು ಮಾತ್ರ ಧರ್ಮವನ್ನು ಬಿಡದೆ, ಪಾಪ ಕರ್ಮವನ್ನು ಮಾಡದೆ ಯೋಗ್ಯನಾದೆ’ ಎಂದು ಹೇಳಿ ಉಳಿದ ತರುಣರಿಗೆ ತಾವು ತಂದ ವಸ್ತುಗಳನ್ನು ಮರಳಿ ತೆಗೆದುಕೊಂಡು ಹೋಗುವಂತೆ ಹೇಳಿದರು. ಬೋಧಿಸತ್ವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರು.

ಶತಶತಮಾನಗಳು ಕಳೆದರೂ ಮಹಾತ್ಮರ ಚಿಂತನೆಗಳು ಹೇಗೆ ಒಂದೇ ಆಗಿರುತ್ತವೆ ಎನ್ನುವುದಕ್ಕೆ ಈ ಕಥೆ ಉದಾಹರಣೆ. ನಮ್ಮ ಕನಕದಾಸರೂ ಮಾಡಿದ್ದು ಇದೇ ಅಲ್ಲವೇ? ಗುರುಗಳಾದ ವ್ಯಾಸರಾಯರು ಯಾರೂ ಕಾಣದ ಸ್ಥಳದಲ್ಲಿ ಹೋಗಿ ಬಾಳೆಹಣ್ಣನ್ನು ತಿಂದು ಬನ್ನಿ ಎಂದಾಗ ಭಗವಂತ
ನಿಲ್ಲದ ಯಾವ ಸ್ಥಳವೂ ತನಗೆ ಕಾಣಲಿಲ್ಲವೆಂದು ಬಾಳೆಹಣ್ಣನ್ನು ಮರಳಿಸಿದ ಕನಕದಾಸರ ಕಥೆಯ ಚಿಂತನೆಯೂ ಇದೇ. ಎರಡು ಸಾವಿರದ ಆರುನೂರು ವರ್ಷಗಳ ಹಿಂದೆಯೂ ಬೋಧಿಸತ್ವನ ಧರ್ಮದ ಕಲ್ಪನೆಯೂ ಇದೇ.

ಮೌಲ್ಯಗಳು, ಧರ್ಮಪ್ರಜ್ಞೆಗಳು ಕಳೆದು ಹೋಗುವುದಿಲ್ಲ. ಆದರೆ ಅವುಗಳನ್ನು ಹಿಡಿಯುವುದರಲ್ಲಿ ನಾವು ಸೋಲುತ್ತೇವೆ.

ಪ್ರತಿಕ್ರಿಯಿಸಿ (+)