ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕ್ಕೆ ಒಂದು ಕನ್ನಡಿ

Last Updated 13 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ಮನುಜ ಲೋಕವಿಕಾರಗಳನು ನೀನಳಿಸುವೊಡೆ |
ಮನಕೊಂದು ದರ್ಪಣವ ನಿರವಿಸೆಂತಾನುಂ ||
ಅನುಭವಿಪರವರಂದು ತಮ್ಮಂತರಂಗಗಳ |
ಅನುಪಮಾಸಹ್ಯಗಳ – ಮಂಕುತಿಮ್ಮ || 196 ||

ಪದ-ಅರ್ಥ: ಮನುಜಲೋಕವಿಕಾರಗಳನು=ಮನುಷ್ಯಲೋಕದ ವಿಕಾರಗಳನ್ನು, ನಿರವಿಸು=ನಿರ್ಮಿಸು, ಅನುಭವಿಪರವರಂದು=ಅನುಭವಿಪರು+ಅವರು+ಅಂದು, ಅನುಪಮಾಸಹ್ಯಗಳ=ಅನುಪಮ+ಅಸಹ್ಯಗಳ
ವಾಚ್ಯಾರ್ಥ: ಮನುಷ್ಯ ಲೋಕದಲ್ಲಿ ತುಂಬಿರುವ ವಿಕಾರಗಳನ್ನು ನೀನು ಅಳಿಸಬೇಕು ಎಂದಿದ್ದರೆ ಮೊದಲು ಮನಸ್ಸಿಗೊಂದು ಕನ್ನಡಿಯನ್ನು ನಿರ್ಮಿಸು. ಆಗ ಅವರು ತಮ್ಮ ಅಂತರಂಗಗಳಲ್ಲಿ ತುಂಬಿದ್ದ ಕಲ್ಪನಾತೀತವಾದ ಅಸಹ್ಯ
ಗಳನ್ನು ಕಂಡು ಅನುಭವಿಸುತ್ತಾರೆ.

ವಿವರಣೆ: ಅವನೊಬ್ಬ ಮನುಷ್ಯ. ಶ್ರೀಮಂತನಾಗಲು ಬಯಸಿದ. ಅವನ ಅಪೇಕ್ಷೆ, ಪ್ರಪಂಚದ ಅತ್ಯಂತ ಶ್ರೀಮಂತನಾಗುವುದು. ಹಣಗಳಿಸುವ ವಿಧಾನ ಅವನಿಗೆ ಮುಖ್ಯವಾಗಿರಲಿಲ್ಲ. ನ್ಯಾಯವೋ ಅನ್ಯಾಯವೋ ಹೇಗಾದರೂ ಹೆಚ್ಚು ಹಣ ಮಾಡಬೇಕು. ಮೋಸ ಮಾಡಿದ, ಅನ್ಯಾಯಮಾಡಿದ, ಅವಶ್ಯಕತೆ ಬಂದಾಗ ಕೆಲವೊಂದು ಜನರನ್ನು ಕೊಲ್ಲಿಸಿಯೂ ಬಿಟ್ಟ. ಅವರೆಲ್ಲರ ಸಮಾಧಿಗಳ ಮೇಲೆ ತನ್ನ ಅರಮನೆ ಕಟ್ಟಿದ. ಇನ್ನು ಗಳಿಸಿದ ಹಣವನ್ನು ಅನುಭವಿಸಬೇಕೆಂದುಕೊಂಡಾಗ ಸಾವು ಮುಂದೆ ನಿಂತಿತ್ತು. ಸಾವಿನ ಕನ್ನಡಿಯಲ್ಲಿ ತನ್ನ ಮುಖವನ್ನು ಕಂಡಾಗ ಗಾಬರಿಯಾಗಿತ್ತು. ಗಳಿಸಿದ ಹಣ ಯಾರಿಗೆ? ಇದಕ್ಕಾಗಿ ನಾನಿಷ್ಟು ಅನ್ಯಾಯಗಳನ್ನು ಮಾಡಿದೆನೆ? ಕಣ್ಣೀರು ಕೆನ್ನೆಗಿಳಿದಿತ್ತು, ಪಶ್ಚಾತ್ತಾಪ ಮೂಡಿತ್ತು. ಆದರೆ ಆಯುಷ್ಯ ಮುಗಿದಿತ್ತು.

ಅವನು ಯಯಾತಿ. ಭೋಗದಲ್ಲಿ ತೃಪ್ತಿಯೇ ಇಲ್ಲ. ಹಗಲು ರಾತ್ರಿ ಭೋಗದ ಯೋಚನೆಯೇ. ವಯಸ್ಸಾದರೂ ಕಾಮದ ಬಯಕೆ ತಗ್ಗಲಿಲ್ಲ. ತನ್ನ ಸ್ವಂತ ಮಗನಿಗೆ ತನ್ನ ವೃದ್ಧಾಪ್ಯವನ್ನು ಕೊಟ್ಟು ಅವನ ಯೌವನವನ್ನು ಪಡೆದು ಸುಖಿಸಿದರೂ ಕಾಮತೃಷೆ ಇಂಗಲಿಲ್ಲ. ಕೊನೆಗೊಮ್ಮೆ ಅಂತ:ಕರಣ ಕಲಕಿದಾಗ ಅದರ ಕನ್ನಡಿಯಲ್ಲಿ ತನ್ನ ವ್ಯರ್ಥಪ್ರಯತ್ನದ ಅರಿವಾಯಿತು. ಕಾಮದಿಂದ ಕಾಮವನ್ನು ಗೆಲ್ಲುವುದು ಅಸಾಧ್ಯ. ದೇಶ ತೊರೆದು ಸನ್ಯಾಸದೆಡೆಗೆ ಮುಖ ಮಾಡಿದ.

ಅವನು ನೆಪೋಲಿಯನ್. ಜಗತ್ತನ್ನೇ ಶಕ್ತಿಯಿಂದ ಗೆದ್ದು ಆಳಬೇಕೆಂದು ಹೊರಟವನು. ಸೈನ್ಯವನ್ನು ಒಗ್ಗೂಡಿಸಿದ. ಕ್ರೌರ್ಯವನ್ನು ಮೆರೆದ. ಕರುಣೆ ಇಲ್ಲದೆ ದಾಳಿ ಮಾಡಿ ಹಿಂಸೆಯನ್ನು ನೀಡಿದ. ಕೊನೆಗೆ ಯುದ್ಧದಲ್ಲಿ ಸೆರೆಯಾಗಿ ಸೆಂಟ ಹೆಲೆನಾ ದ್ವೀಪದಲ್ಲಿ ಒಬ್ಬನೇ ಕುಳಿತಾಗ ತಿಳಿಯಾದ ಮನದ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಂಡು ಹೇಳಿದ, ‘ನಾನು ಜಗತ್ತನ್ನು ಬಲದಿಂದ ಗೆಲ್ಲಲು ಹೊರಟೆ, ಆದರೆ ಸೋತೆ. ಜಗತ್ತನ್ನು ಗೆಲ್ಲುವುದು ಪ್ರೇಮದಿಂದ ಮಾತ್ರ ಸಾಧ್ಯ’. ತನ್ನ ಮೂವತ್ತಾರನೆಯ ವಯಸ್ಸಿಗೇ ಪ್ರಪಂಚದ ಅರ್ಧವನ್ನು ಗೆದ್ದ ಅಲೆಕ್ಸಾಂಡರ್‌ನಕಥೆಯೂ ಬೇರೆಯಲ್ಲ. ನಾಲ್ಕು ಲಕ್ಷ ಜನ ಸೈನಿಕರನ್ನು ಹೊಂದಿ ಹಿಂಸೆಯ ತಾಂಡವವಾಡುತ್ತ ಅಧಿಕಾರ ಲಾಲಸೆಯಲ್ಲಿ ಬಂದವನಿಗೆ ಸಾವಿನಂಚಿನಲ್ಲಿ ನಿಂತಾಗ ತನ್ನ ಹಿಂಸೆಯ ವ್ಯರ್ಥತೆಯ ಅರಿವಾಗಿತ್ತು.

ಅದನ್ನೇ ಈ ಕಗ್ಗ ಹೇಳುತ್ತದೆ. ಜಗತ್ತಿನಲ್ಲಿ ಮನುಷ್ಯನ ಅಂತರಂಗದಲ್ಲಿ ತರತರಹದ ವಿಕಾರಗಳು ತುಂಬಿವೆ. ಅವುಗಳನ್ನೆಲ್ಲ ನೀನು ತೆಗೆದುಹಾಕಬೇಕು ಎಂದುಕೊಂಡಿದ್ದರೆ ಮನುಷ್ಯನ ಮನಸ್ಸನ್ನು ಪ್ರತಿಬಿಂಬಿಸುವ ಕನ್ನಡಿಯನ್ನು ಸಿದ್ಧಮಾಡು. ನಮಗಿರುವ ಕನ್ನಡಿಯಲ್ಲಿ ಮುಖ ಮಾತ್ರ ಕಾಣುತ್ತದೆ. ಭಾವನೆಗಳು, ಮನದ ಗೂಢ ಚಿಂತನೆಗಳು ಕಾಣುವುದಿಲ್ಲ. ಮನಸ್ಸನ್ನು ತೆರೆದು ತೋರುವ ಕನ್ನಡಿಯಲ್ಲಿ ತಮ್ಮ ಕೆಟ್ಟ ವಿಚಾರಗಳನ್ನು, ವಿಕಾರಗಳನ್ನು ಕಂಡಾಗಲಾದರೂ ಜನರು ಅಂತರಂಗದಲ್ಲಿ ತುಂಬಿದ್ದ ಆ ಕೆಟ್ಟ, ಹೋಲಿಸಲು ಅಸಾಧ್ಯವಾದ ಅಸಹ್ಯಗಳನ್ನು ಅನುಭವಿಸಿಯಾರು, ಅವುಗಳನ್ನು ಕಳೆದುಕೊಂಡಾರು ಎಂದು ಹಾರೈಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT