ಬದುಕಿನ ಉದ್ದೇಶ

7

ಬದುಕಿನ ಉದ್ದೇಶ

ಗುರುರಾಜ ಕರಜಗಿ
Published:
Updated:

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು |

ಚಂಡ ಚತುರೋಪಾಯದಿಂದಲೇನಹುದು ?||
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು |
ಅಂಡಲೆತವಿದಕೇನೊ? – ಮಂಕುತಿಮ್ಮ ||20||

ಮುಗಿದೇನಹುದು = ಮುಗಿದು + ಏನು + ಅಹುದು, ಚಂಡಚತುರೋಪಾಯದಿಂದಲೇನಹುದು = ಚಂಡ (ಉಗ್ರವಾದ) + ಚತುರೋಪಾಯದಿಂದ (ಬುದ್ಧಿವಂತಿಕೆಯ ಉಪಾಯಗಳಿಂದ) + ಏನಹುದು (ಏನಾಗುತ್ತದೆ) ತಂಡುಲ = ಅಕ್ಕಿ, ಅಂಡಲೆತ = ವ್ಯರ್ಥ ಸುತ್ತಾಟ.

ವಾಚ್ಯಾರ್ಥ: ಕಂಡಕಂಡ ದೇವರುಗಳಿಗೆ ಕೈ ಮುಗಿದರೆ ಏನಾಗುತ್ತದೆ? ಉಗ್ರವಾದ ಮತ್ತು ಬುದ್ಧಿವಂತಿಕೆಯ ಉಪಾಯಗಳಿಂದ ಏನಾಗುತ್ತದೆ? ಒಂದು ಹಿಡಿ ಅಕ್ಕಿ, ಒಂದು ತುಂಡು ಬಟ್ಟೆ, ಇಷ್ಟಕ್ಕಾಗಿ ಈ ವ್ಯರ್ಥ ಸುತ್ತಾಟವೇಕೆ?

ವಿವರಣೆ: ಕನಕದಾಸರು ಹಾಡಿದರು, ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಹಾಗಾದರೆ ನಮ್ಮ ಬದುಕಿನ ಉದ್ದೇಶ ಇಷ್ಟೇನೇ? ಒಂದು ಮುಷ್ಟಿ ಅಕ್ಕಿ ಹಾಗೂ ತುಂಡು ಬಟ್ಟೆ? ನಮ್ಮ ಸುತ್ತಮುತ್ತಲಿನ ಪ್ರಾಣಿ ಪಕ್ಷಿಗಳಿಗೂ ಇದೇ ಪಾಡು ಅಲ್ಲವೇ? ಅವುಗಳಿಗೆ ತುಂಡುಬಟ್ಟೆಯ ಚಿಂತೆಯೂ ಇಲ್ಲ. ಮನುಷ್ಯರ ಪಾಡೂ ಪ್ರಾಣಿಗಳಂತೆಯೇ ಆದರೆ ಮನುಷ್ಯನದೇನು ವಿಶೇಷ? ಅವನು ಯಾವ ವಿಷಯದಲ್ಲಾದರೂ ಪ್ರಾಣಿಗಳಿಗಿಂತ ಮೇಲ್ಪಟ್ಟವನಾಗಿದ್ದಾನೆಯೇ? ಅನ್ನ ಬಟ್ಟೆಗಳಿಗಿಂತ ಉನ್ನತವಾದ ಗುರಿ ಏನಾದರೂ ಇದೆಯೇ?
ನಮ್ಮ ಸುತ್ತಮುತ್ತಲಿನ ಜನರನ್ನು ಕಂಡರೆ ಬಹಳಷ್ಟು ಮಂದಿಗೆ ಉನ್ನತದ ಗುರಿ ಇದ್ದಂತೆ ಕಾಣುವುದಿಲ್ಲ. ಹೇಗೋ ಬದುಕಿ, ಎಲ್ಲಿಯೋ ಹಗಲು-ರಾತ್ರಿ ದುಡಿದು ಊಟವನ್ನು ಗಳಿಸಿ, ಹಾಗೆಯೇ ಬದುಕು ಸಾಗಿಸಿ ಒಂದು ದಿನ ಸದ್ದಿಲ್ಲದೆ ಮಣ್ಣು ಸೇರಿಬಿಡುತ್ತಾರೆ. ಕೆಲವರ್ಷಗಳಲ್ಲಿ ಅವರು ಬದುಕಿದ್ದರು ಎಂಬ ಚಿಹ್ನೆಯೂ ಉಳಿದಿರುವುದಿಲ್ಲ.

ಕಂಡ ಕಂಡ ದೇವರಿಗೆಲ್ಲ ಕೈಮುಗಿಯುತ್ತ, ಏನಾದರೂ ಉಪಾಯಗಳನ್ನು ಮಾಡುತ್ತ ಅಂದಿನ ಊಟ, ಅಂದಿನ ಚಾಕರಿ, ಅದೇ ಒದ್ದಾಟ, ಹೋರಾಟಗಳಲ್ಲಿ ಮುಳುಗೆದ್ದು ವ್ಯರ್ಥ ಅಲೆದಾಟದಲ್ಲೇ ಬದುಕು ಮುಗಿದು ಹೋಗುತ್ತದೆ.
ಈ ಕಗ್ಗ ನಮ್ಮನ್ನು ವಿಚಾರಕ್ಕೆ ಹಚ್ಚುತ್ತದೆ. ನಮ್ಮ ಮಾನವ ಜನ್ಮದ ಗುರಿ ಹೊಟ್ಟೆಪಾಡಿಗಿಂತ ಮೇಲಿನದು ಇರಲು ಸಾಧ್ಯವೇ? ಅನ್ನದ, ಬಟ್ಟೆಯ ಅಂಡಲೆತವನ್ನು ಮೀರಿ ನಿಲ್ಲುವ ಗುರಿ ಯಾವುದು? ಕನಕದಾಸರೇ ಇದಕ್ಕೆ ಅದೇ ಪದ್ಯದಲ್ಲಿ ಉತ್ತರವನ್ನು ನೀಡುತ್ತಾರೆ.

ಉನ್ನತದ ನೆಲೆಮಾದಿ ಕೇಶವನ ಧ್ಯಾನವನ್ನು |
ಮನಮುಟ್ಟಿ ಮಾಡುವುದು – ಮುಕ್ತಿಗಾಗಿ ||
ಭಕ್ತಿಗಾಗಿ – ಜೀವತೃಪ್ತಿಗಾಗಿ
ಆತ್ಮಶಕ್ತಿಗಾಗಿ – ಆನಂದಕ್ಕಾಗಿ

ಜೀವತೃಪ್ತಿ, ಭಕ್ತಿ, ಆತ್ಮಶಕ್ತಿ, ಆನಂದ, ಮುಕ್ತಿ ಈ ಉದ್ದೇಶಗಳು ಅನ್ನ ಬಟ್ಟೆಗಳ ಗುರಿಯನ್ನು ಮೀರಿದವುಗಳು. ಒಂದು ಗುರಿ ತಲುಪಿದಾಗ ಮತ್ತೊಂದು ಎತ್ತರದ ಗುರಿ ಕಾಣುತ್ತದೆ, ಅದನ್ನೇರಿದಾಗ ಅದಕ್ಕಿಂತ ಮೇಲಿನದು ಕೈಬೀಸಿ ಕರೆಯುತ್ತದೆ. ಅದೇ ಮಾನವ ಜೀವನದ ಪ್ರಗತಿ

ಅನ್ನ, ಬಟ್ಟೆಗಾಗಿ ಅಂಡಲೆಯುವುದೇ ಬದುಕಿನ ಉದ್ದೇಶವೇ ಎಂದು ಕಗ್ಗ ಕೇಳುವ ರೀತಿ ಸಾಮಾನ್ಯ ಅಪೇಕ್ಷೆಗಳನ್ನು ಹೊಂದಿ, ಅವುಗಳನ್ನು ಮೀರಿ, ಯಾವ ತಿಳುವಳಿಕೆ, ಯಾವ ನಡತೆ ನಮ್ಮನ್ನು ‘ಸತ್’ ಕಡೆಗೆ, ಸದ್ ವಸ್ತುವಿನ ಕಡೆಗೆ ಕರೆದುಕೊಂಡು ಹೋಗಬಲ್ಲದೋ, ಅದನ್ನು ಪಡೆಯುವುದೇ ಬದುಕಿನ ಆದರ್ಶ ಎಂದು ಪ್ರೇರೇಪಿಸುತ್ತದೆ.

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !