ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಿ ಪರೀಕ್ಷೆಗಳ ಉದ್ದೇಶ

Last Updated 11 ಜುಲೈ 2019, 20:00 IST
ಅಕ್ಷರ ಗಾತ್ರ

ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ|
ನರಜಾತಿ ಸಾನುಭೂತಿಯಕಲಿಯಲೆಂದು||
ಪರರೆಂಬರಿಲ್ಲಆತ್ಮಾಂಶರೆಲ್ಲರೆಮತ್ತೆ|
ಬೆರೆ ನೀನು ವಿಶ್ವದಲಿ - ಮಂಕುತಿಮ್ಮ|| 157 ||

ಪದ-ಅರ್ಥ: ಸಾನುಭೂತಿ -ಸಹಾನುಭೂತಿ

ವಾಚ್ಯಾರ್ಥ: ಭಗವಂತ ಈ ವಿಧಿಯನ್ನು ನೇಮಿಸಿದ್ದು ಮನುಷ್ಯರು ಸಹಾನುಭೂತಿಯನ್ನು ಕಲಿಯಲೆಂದು. ನಾವು ಬೇರೆ ಬೇರೆಯಲ್ಲ, ಎಲ್ಲರೂ ಆತ್ಮಾಂಶರೇ ಎಂದು ವಿಶ್ವದಲ್ಲಿ ಬೆರೆಯಬೇಕೆಂಬುದು ಅವನ ಅಪೇಕ್ಷೆ.

ವಿವರಣೆ: ಹಿಂದಿನ ಕಗ್ಗದಲ್ಲಿ ನೋಡಿದಂತೆ ವಿಧಿಯ ಕಾರ್ಯ ಕೇವಲ ನಮ್ಮನ್ನು ತೋಯಿಸಿ, ಬೇಯಿಸಿ, ಹೆಚ್ಚಿ, ಕೊಚ್ಚಿ, ಕಾಯಿಸಿ, ಸುಟ್ಟು ಪರೀಕ್ಷೆ ಮಾಡುವುದೇ? ನಮಗೆ ಈ ತೊಂದರೆಗಳನ್ನು ಕೊಡುವುದೇ ವಿಧಿಯ ಉದ್ದೇಶವೇ? ಹಾಗಾದರೆ ಈ ತೊಂದರೆಯನ್ನು ಕೊಡುವುದೇತಕ್ಕೆ? ಇಂಗ್ಲೀಷಿನಲ್ಲಿ ಒಂದು ಸುಂದರವಾದ ಮಾತಿದೆ–

God brings men into deep waters,
Not to drown them, but to clean them

ಭಗವಂತ ಮನುಷ್ಯರನ್ನು ಆಳದ ನೀರಿಗೆ ಕರೆದೊಯ್ಯುವುದು ಆತನನ್ನು ಮುಳುಗಿಸಲಲ್ಲ. ಅವನನ್ನು ಶುದ್ಧ ಮಾಡುವುದಕ್ಕೆ. ಇಂಗ್ಲೀಷಿನಲ್ಲಿ deep waters ಎಂದರೆ ಕೇವಲ ಆಳದ ನೀರಿಗೆ ಎಂದರ್ಥವಲ್ಲ. ಅದು ಕಷ್ಟಗಳಿಗೆ, ನೋವುಗಳಿಗೆ ಎಂದರ್ಥ. ಈ ಕಷ್ಟಗಳು, ನೋವುಗಳು ಮನುಷ್ಯನ ಹೃದಯದಲ್ಲಿದ್ದ ಕಸವನ್ನು, ಅನಾರೋಗ್ಯಕರವಾದ ಚಿಂತನೆಗಳನ್ನು ಕಳೆದೊಗೆದು ಪರಿಶುದ್ಧನನ್ನಾಗಿ ಮಾಡುತ್ತವೆ. ಬಂಗಾರವನ್ನು ಬೆಂಕಿಗೆ ಹಾಕಿದರೆ ಅದಕ್ಕೆ ಯಾವ ತೊಂದರೆಯೂ ಇಲ್ಲ, ಆದರೆ ಅದರಲ್ಲಿದ್ದ ಕಸರು ಸುಟ್ಟು ಹೋಗಿ ಅದು ಅಪರಂಜಿಯಾಗುತ್ತದೆ.

ಕೆರೆಯ ತಳದಲ್ಲಿದ್ದ ಮಣ್ಣನ್ನು ತಂದ ಕುಂಬಾರ ಅದನ್ನು ಒಣಗಿಸಿ, ಸೋರಿ, ನೀರಿನಲ್ಲಿ ಕಲಿಸಿ, ತುಳಿದು, ಕುಟ್ಟಿ ಹದ ಮಾಡುತ್ತಾನೆ. ಮಣ್ಣು ಹೈರಾಣಾಗುತ್ತದೆ. ನಂತರ ಅದನ್ನುತಿರುಗು ಯಂತ್ರದ ಮೇಲಿಟ್ಟು ಗರಗರನೇ ತಿರುವುತ್ತಾನೆ. ಹೊರ ತೆಗೆದು ಅದನ್ನು ಘಾಟು ವಾಸನೆಯ ರಸಾಯನದೊಳಗೆ ಅದ್ದುತ್ತಾನೆ. ಮಣ್ಣಿಗೆ ಉಸಿರುಗಟ್ಟಿ ಹೋಗುತ್ತದೆ. ಅಷ್ಟಕ್ಕೇ ಅದನ್ನು ಬಿಡುತ್ತಾನೆಯೇ? ಅದನ್ನು ಮರಳಿ ಅತಿ ಹೆಚ್ಚು ಉಷ್ಣದ ಬೆಂಕಿಯ ಕುಂಡಕ್ಕೆ ಹಾಕಿ ಕೆಂಪಾಗುವವರೆಗೂ ಸುಡುತ್ತಾನೆ. ಹೊರಗೆ ತೆಗೆದ ಮೇಲೆ ಮತ್ತಷ್ಟು ರಸಾಯನಗಳನ್ನು ಹಾಕಿ ಪರಿಷ್ಕರಿಸಿ, ಗಸಗಸನೇ ತಿಕ್ಕಿ ಹೊರಗಿಟ್ಟಾಗ ಫಳಫಳನೆ ಹೊಳೆಯುವ ಪಿಂಗಾಣಿಯಾಗಿ ನೋಡುಗರ ಮನ ಸೆಳೆಯುತ್ತದೆ. ಕೆರೆಯ ತಳದಲ್ಲಿದ್ದ ಮಣ್ಣಿಗಿಲ್ಲದ ಆಕರ್ಷಣೆ ಪಿಂಗಾಣಿಗೆ ಬಂದದ್ದು ಈ ಎಲ್ಲ ಸಂಸ್ಕಾರಗಳಿಂದ.

ಹಾಗೆಯೇ ಮನುಷ್ಯ ಜೀವ ಕೂಡ ಪರಿಷ್ಕಾರ ಹೊಂದಲಿ ಎಂಬ ಆಶಯದಿಂದ ವಿಧಿ ನಮ್ಮನ್ನು ಪರೀಕ್ಷೆಗೆ ಒಡ್ಡುತ್ತದೆ. ಪರಿಪಾಕ ಹೊಂದಿದ ಜೀವ ಸಹಾನುಭೂತಿಯನ್ನು ಪಡೆದೀತು ಎಂಬ ಆಶಯ. ವಿಧಿಯ ಪರೀಕ್ಷೆಗಳಲ್ಲಿ ಸಾಗಿ ಬಂದು ಜೀವ ನಿಧಾನವಾಗಿ ಎಲ್ಲರಿಗೂ ಆದದ್ದು ತನಗೂ ಆಯಿತು ಎಂಬುದನ್ನು ಕಂಡಾಗ ಪರರ ಬಗ್ಗೆ ಸಹಾನುಭೂತಿಯನ್ನು ಪಡೆಯುವುದರೊಂದಿಗೆ ನಾವೆಲ್ಲ ಬೇರೆ ಬೇರೆಯಲ್ಲ, ಒಂದೇ ಆತ್ಮದ ಅಂಶಗಳು ಎಂಬ ಭಾವ ಮೂಡುತ್ತದೆ. ಹೀಗಾಗಿ ಅವಿನಾಭಾವದಿಂದ ವಿಶ್ವದಲ್ಲಿ ಬೆರೆಯುತ್ತದೆ. ವಿಧಿ ಪರೀಕ್ಷೆಗಳ ಉದ್ದೇಶ ಇದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT