ಗುರುವಾರ , ಮಾರ್ಚ್ 4, 2021
23 °C

ಬೆರಗಿನ ಬೆಳಕು: ಒಂದೇ ಬಾರಿ ಮೂರು ಪರೀಕ್ಷೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಹೋಷಧಕುಮಾರನಾದ ಬೋಧಿಸತ್ವನ ಪರೀಕ್ಷೆಯನ್ನು ಸೆನೆಕ ಮತ್ತು ಇತರ ಅಮಾತ್ಯರು ಮುಂದುವರಿಸಿಯೇ ಬಿಟ್ಟರು. ಹೇಗಾದರೂ ಮಾಡಿ ಮಹೋಷಧಕುಮಾರನನ್ನು ಸೋಲಿಸುವುದು ಅವರ ಉದ್ದೇಶ.

ಈ ಬಾರಿ ಒಂದು ಎತ್ತನ್ನು ಚೆನ್ನಾಗಿ ಮೇಯಿಸಿ, ಬಲಿಷ್ಠವನ್ನಾಗಿ ಮಾಡಿ, ಅದಕ್ಕೆ ಸಕಲ ಅಲಂಕಾರಗಳನ್ನು ಮಾಡಿದರು. ಕೊಂಬಿಗೆ ಬಣ್ಣ ಬಳಿದು. ಮೈಗೆಲ್ಲ ಅರಿಷಿಣದ ಬಣ್ಣ ಉಜ್ಜಿ, ಅದರ ಮೈಮೇಲೆ ರೇಶಿಮೆಯ ಬಟ್ಟೆಯನ್ನು ಹೊದಿಸಿ ದೂತರೊಂದಿಗೆ ಮಹೋಷಧಕುಮಾರನ ನಗರಕ್ಕೆ ಕಳುಹಿಸಿದರು. ದೂತರು ನಗರಕ್ಕೆ ಬಂದು ಸುತ್ತಾಡಿ, ನಗಾರಿ ಬಾರಿಸಿ ಘೋಷಣೆ ಮಾಡಿದರು. ‘ಮಹಾರಾಜರು ಈ ನಗರದ ಪಂಡಿತರ ಬುದ್ಧಿಮತ್ತೆಯನ್ನು ಅಳೆಯುವುದಕ್ಕೆ ಮೂರು ಪರೀಕ್ಷೆಗಳನ್ನು ಒಡ್ಡಿದ್ದಾರೆ. ಸರಿಯಾದ ಉತ್ತರ ಹೇಳಿದರೆ ಬಹುಮಾನ. ಹೇಳದಿದ್ದರೆ ಪ್ರತಿ ಪರೀಕ್ಷೆಗೆ ಸಾವಿರದ ಹಣದಂತೆ ಮೂರು ಸಾವಿರ ದಂಡ ವಿಧಿಸಲಾಗುತ್ತದೆ’. ಮೊದಲನೆಯ ಪರೀಕ್ಷೆಯೆಂದರೆ ಒಂದು ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಒಂದು ಸರ್ಪ ಮತ್ತು ಇನ್ನೊಂದರಲ್ಲಿ ಸರ್ಪಿಣಿ ಇದೆ. ಇದರಲ್ಲಿ ಸರ್ಪ ಯಾವುದು, ಸರ್ಪಿಣಿ ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಎರಡನೆಯ ಪರೀಕ್ಷೆಯೆಂದರೆ ಈ ನಗರದವರು ರಾಜರಿಗೆ ಸಂಪೂರ್ಣವಾಗಿ ಬೆಳ್ಳಗಿರುವ, ಕಾಲುಗಳಲ್ಲಿ ಕೊಂಬು ಇರುವ, ತಲೆಯ ಮೇಲೆ ಡುಬ್ಬ ಇರುವ, ನಿಯತವಾಗಿ ಕೂಗಿ ಎಚ್ಚರಿಸುವ ಒಂದು ಎತ್ತನ್ನು ಕಳುಹಿಸಬೇಕು. ಮೂರನೆಯ ಪರೀಕ್ಷೆಯೆಂದರೆ ನಮ್ಮ ಜೊತೆಗೆ ಬಂದ ಮಂಗಲ ಎತ್ತಿಗೆ ಗರ್ಭ ಕಟ್ಟಿದೆ. ಅದನ್ನು ಈಯಿಸಿ ಕರುವಿನೊಂದಿಗೆ ಕಳುಹಿಸಬೇಕು.

ನಗರದ ಪಂಡಿತರು ಪ್ರಶ್ನೆಗಳನ್ನು ತಿಳಿಯಲಾರದೆ ಗಾಬರಿಯಿಂದ ಮಹೋಷಧಕುಮಾರನ ಬಳಿಗೆ ಬಂದು ಪರಿಹಾರ ಕೇಳಿದರು. ಆತ ನಿಧಾನವಾಗಿ ಸಮಸ್ಯೆಗಳನ್ನು ಕುರಿತು ಚಿಂತಿಸಿ ಒಂದೊಂದಾಗಿ ಪರಿಹಾರಗಳನ್ನು ಹೇಳಿದ. ಸರ್ಪದ ಬಾಲ ದಪ್ಪಗಿರುತ್ತದೆ, ಸರ್ಪಿಣಿಯ ಬಾಲ ತೆಳುವಾದದ್ದು. ಸರ್ಪದ ತಲೆ ದಪ್ಪ, ಸರ್ಪಿಣಿಯದು ಉದ್ದ. ಸರ್ಪದ ಕಣ್ಣುಗಳು ಸರ್ಪಿಣಿಯ ಕಣ್ಣುಗಳಿಗಿಂತ ದಪ್ಪಗಿರುತ್ತದೆ. ಸರ್ಪದ ಹೆಡೆಯ ಸ್ವಸ್ತಿಕ ಬಿಗಿಯಾಗಿದ್ದರೆ, ಸರ್ಪಿಣಿಯ ಸ್ವಸ್ತಿಕ ಹೆಡೆಯ ತುಂಬ ಹರಡಿಕೊಂಡಿರುತ್ತದೆ.

ರಾಜ ಹೇಳಿದ್ದು ಎತ್ತು ಅಲ್ಲ, ಆ ಪ್ರಾಣಿಯನ್ನು ಎತ್ತಿಕೊಂಡು ಬನ್ನಿ ಎಂದರ್ಥ. ಅದು ಸಂಪೂರ್ಣ ಬೆಳ್ಳಗಿರುವ ಹುಂಜ. ಅದರ ಕಾಲಿನಲ್ಲಿ ಉಗುರು ಇದೆ, ಅದನ್ನೇ ಕೊಂಬು ಎಂದಿದ್ದಾನೆ. ತಲೆಯ ಮೇಲಿನ ಪುಕ್ಕದ ಸ್ಥಳ ಸ್ವಲ್ಪ ಮೇಲೆದ್ದಿರುವುದರಿಂದ ಅದನ್ನು ಡುಬ್ಬ ಎನ್ನುತ್ತಾರೆ. ಈ ಹುಂಜ ಮಾತ್ರ ನಿಯತವಾಗಿ ಕೂಗಿ ಜನರನ್ನು ಎಬ್ಬಿಸುತ್ತದೆ. ಆದ್ದರಿಂದ ರಾಜನಿಗೊಂದು ಬಿಳಿ ಹುಂಜವನ್ನು ಕಳುಹಿಸಿ ಎಂದ. ಇನ್ನು ಮೂರನೆಯ ಪರೀಕ್ಷೆ, ಎತ್ತಿಗೆ ಹೆರಿಗೆ ಮಾಡಿಸುವುದು. ಮಹೋಷಧಕುಮಾರ ಒಬ್ಬ ತರುಣ ನಟನನ್ನು ತಯಾರು ಮಾಡಿದ. ಅವನಿಗೆ ‘ನೀನು ನಿನ್ನ ತಲೆಗೂದಲುಗಳನ್ನು ಹೆಗಲಮೇಲೆ ಹರಡಿಕೊಂಡು ಜೋರಾಗಿ ಅಳುತ್ತ ರಾಜನ ದರ್ಬಾರಿಗೆ ಹೋಗು. ಅಯ್ಯೋ, ನನ್ನ ತಂದೆ ಏಳು ದಿನಗಳಿಂದ ಒದ್ದಾಡುತ್ತಿದ್ದಾನೆ, ಹೆರಿಗೆಯಾಗುತ್ತಿಲ್ಲ. ದಯವಿಟ್ಟು ನಿಮ್ಮ ಅರಮನೆಯ ಸೂಲಗಿತ್ತಿಯನ್ನು ಕಳುಹಿಸಿಕೊಡಿ’ ಎಂದು ಬೇಡಿಕೋ. ಆಗ ರಾಜ ಮತ್ತು ದರ್ಬಾರಿನವರು ಹಾಸ್ಯಮಾಡಿ, ‘ಗಂಡಸು ಗರ್ಭಧರಿಸುವುದು, ಹಡೆಯುವುದು ಸಾಧ್ಯವೇ?’ ಎನ್ನುತ್ತಾರೆ. ಆಗ ನೀನು, ‘ತಾವು ಕಳುಹಿಸಿದ ಮಂಗಲ ಎತ್ತು ಗರ್ಭಧರಿಸುವುದಾದರೆ ನನ್ನ ತಂದೆಗೆ ಯಾಕೆ ಸಾಧ್ಯವಿಲ್ಲ?’ ಎಂದು ಕೇಳು ಎಂದು ಬೋಧಿಸಿದ. ಕುಮಾರನು ಹೇಳಿದಂತೆಯೇ ನಡೆದು, ಮೂರೂ ಪರೀಕ್ಷೆಗಳಲ್ಲಿ ಅವರು ಗೆದ್ದದ್ದನ್ನು ಕಂಡು ರಾಜನಿಗೆ ಬಹಳ ಸಂತೋಷವಾಯಿತು. ದರ್ಬಾರಿನ ಜನರೆಲ್ಲ ಮಹೋಷಧಕುಮಾರನ ಜ್ಞಾನವನ್ನು ಸೂಕ್ಷ್ಮಜ್ಞತೆಯನ್ನು ಕೊಂಡಾಡಿದರು. ಅಮಾತ್ಯರ ಮುಖಗಳು ಪೆಚ್ಚಾದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.