ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆಸಕ್ತಿ-ವಿರಕ್ತಿ

Last Updated 7 ಡಿಸೆಂಬರ್ 2022, 19:09 IST
ಅಕ್ಷರ ಗಾತ್ರ

ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |

ಹೊರಗೆ ಕಾರ್ಯಧ್ಯಾನವೊಳಗುದಾಸೀನ ||
ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ |
ವರಯೋಗಮಾರ್ಗವಿದು – ಮಂಕುತಿಮ್ಮ || 773||

ಪದ-ಅರ್ಥ:ಲೋಕಾಸಕ್ತಿಯೊಳಗೆ=ಲೋಕಾಸಕ್ತಿ(ಲೋಕವ್ಯವಹಾರಗಳಲ್ಲಿಆಸಕ್ತಿ)+ಒಳಗೆ, ಕಾರ್ಯಧ್ಯಾನವೊಳಗುದಾಸೀನ=ಕಾರ್ಯಧ್ಯಾನ+ಒಳಗೆ+ಉದಾಸಿನ(ನಿರಾಸಕ್ತಿ), ಸಂಸೃತಿಭಾರವೊಳಗದರ=ಸಂಸ್ಕೃತಿ(ಸಂಸಾರ)+ಭಾರ+ಒಳಗೆ+ಅ ದರ.

ವಾಚ್ಯಾರ್ಥ: ಹೊರಗೆ ಲೋಕದ ವ್ಯವಹಾರದಲ್ಲಿ ಆಸಕ್ತಿ ಆದರೆ ಫಲದ ಆಸೆಯಲ್ಲಿ ವಿರಕ್ತಿ. ಹೊರಗೆ ಕಾರ್ಯದಲ್ಲಿ ದಕ್ಷ ಆದರೆ ಒಳಗೆೆ ಅದರ ಬಗ್ಗೆ ಉದಾಸೀನ. ಹೊರನೋಟಕ್ಕೆ ಸಂಸಾರದ ಭಾರವನ್ನು ಹೊತ್ತರೂ ಒಳಗೆ ಅದರ ಬಗ್ಗೆ ತಿರಸ್ಕಾರ. ಇದೆ ಶ್ರೇಷ್ಠ ಯೋಗಮಾರ್ಗ.
ವಿವರಣೆ: ಜಮುನಾಲಾಲ್ ಬಜಾಜ್ ಅನೇಕ ನಾಯಕರಲ್ಲಿ ಪ್ರಮುಖ ಹೆಸರು. ಆಗರ್ಭ ಶ್ರೀಮಂತರು. ರಾವ್‌ಬಹಾದೂರ್ ಪದವಿ ಪಡೆದಿದ್ದವರು. ಗೌರವದ ಮ್ಯಾಜಿಸ್ಟ್ರೇಟ್‌ ಕೆಲಸವೂ ದೊರೆತಿತ್ತು. ಹಾಗೆಯೇ ಮುಂದುವರೆದಿದ್ದರೆ ‘ಸರ್’ ಪದವಿ ದೊರಕುವುದು ಕಷ್ಟವಿರಲಿಲ್ಲ. ಆದರೆ ಗಾಂಧೀಜಿಯ ರಣದುಂಧುಬಿ ಅವರನ್ನು ದೇಶಸೇವೆಗೆ ಸೆಳೆಯಿತು. ಅವರನ್ನು ವಿರಕ್ತರನ್ನಾಗಿಸಿತು. ಅಪಾರ ಐಶ್ವರ್ಯ, ಹೊಲಮನೆಗಳ ವ್ಯವಹಾರ, ಹರಡಿದ್ದ ವ್ಯಾಪಾರ ಎಲ್ಲವನ್ನು ಒಂದು ವ್ಯವಸ್ಥೆಗೆ ತಂದು, ಮತ್ತೊಬ್ಬರನ್ನು ವ್ಯವಸ್ಥಾಪಕರನ್ನಾಗಿ ಮಾಡಿ, ನಿರಾಳವಾಗಿ ಹೊರಬಂದು ದೇಶಸೇವೆಗೆ ಕಂಕಣತೊಟ್ಟು ನಿಂತರು. ಮನೆತನದ ಜವಾಬ್ದಾರಿ ಕಳಚಿದರೂ ರಾಷ್ಟ್ರಸೇವೆಯ ಜವಾಬ್ದಾರಿ ಹೆಚ್ಚಾಯಿತು. ದುಡಿತವೆಲ್ಲ ದೇಶಕ್ಕೆ, ತನಗೆ ಏನೂ ಇಲ್ಲ. ಹರಿಜನಸೇವೆಗೆ, ಖಾದೀ ಕಾರ್ಯದ ಕೆಲಸಕ್ಕೆ ದಿನವೆಲ್ಲ ದುಡಿತ. ಆದರೆ ಎಲ್ಲ ರಾಷ್ಟ್ರಕ್ಕೆ ಸಮರ್ಪಿತ.
ಸತ್ಯಾಗ್ರಹದ ಮುಂಚೂಣಿಯಲ್ಲಿ ಕೆಲಸ. ಸೆರೆಮನೆಗೆ ಕಳುಹಿಸಿದರೆ ನಗುತ್ತ ಹೋದರು. ಸೆರೆಮನೆಯಲ್ಲಿ ಸುಮಾರು ಹತ್ತು ಸೇರು ದವಸವನ್ನು ಒಬ್ಬರೇ ಬೀಸಿದರು. ದುಡ್ಡು ಎಣಿಸುವ ಕೈ ಬೀಸುಕಲ್ಲನ್ನು ತಿರುಗಿಸಿತು. ಅವರು ಬೇರೆ ಬೇರೆ ವರ್ಣಗಳ ಜನರ ಸಂಬಂಧಗಳನ್ನು ಗಂಟು ಹಾಕಿ ಮದುವೆ ಮಾಡಿಸುವುದಲ್ಲಿ ಸದಾ ಮುಂದೆ. ಅದಕ್ಕೇ ಅವರಿಗೆ “ಶಾದೀಲಾಲ್’ ಎಂಬ ಅಡ್ಡ ಹೆಸರು. ಎಲ್ಲ ಸಂಭ್ರಮಗಳಲ್ಲಿ,ಸಂತೋಷದಲ್ಲಿ ಭಾಗಿಯಾದರೂ ಮನದಲ್ಲಿ ತಾನೊಬ್ಬ ಸನ್ಯಾಸಿಯೇ. ಬದುಕು ಎಷ್ಟು ಸರಳವೋ ಅಷ್ಟೇ ಕಠೋರ. ರಾಜನಾಗಿ ಬದುಕ

ಬಹುದಾಗಿದ್ದರೂ ಆರಿಸಿಕೊಂಡದ್ದು ವಿರಕ್ತ ಜೀವನ. ಈ ಕಗ್ಗ ಇಂಥವರ ಬಗ್ಗೆಯೇ ಹೇಳುತ್ತದೆ. ಹೊರಜಗತ್ತಿಗಾಗಿ ಎಲ್ಲ ಆಸಕ್ತಿ ತೋರಿದರೂ ಸ್ವಂತಕ್ಕಾಗಿ ವಿರಕ್ತಿಮಾರ್ಗವನ್ನೇ ಅಪ್ಪಿಕೊಳ್ಳುವುದು. ಜಗತ್ತಿನಲ್ಲಿ ತೆಗೆದುಕೊಂಡ ಜವಾಬ್ದಾರಿಗಳಿಗಾಗಿ ಸತತವಾದ ಕಾರ್ಯದ ಧ್ಯಾನ. ಆದರೆ ಆಂತರ್ಯದಲ್ಲಿ ಆ ಕಾರ್ಯದ ಫಲಾಫಲದ ಬಗ್ಗೆ ಉದಾಸೀನತೆ. ಹೊರಗೆ ನೋಡಿದರೆ ಸಂಸಾರಕ್ಕಾಗಿ, ಅದು ಸ್ವಂತದ್ದಾಗಬಹುದು, ಒಪ್ಪಿಕೊಂಡ ವ್ಯವಸ್ಥೆಯದಾಗಬಹುದು, ಅದರ ಭಾರವನ್ನು ಹೊರಲು ಸದಾ ಸಿದ್ಧವಾದಂತೆ ತೋರಿದರೂ ಒಳಗೆ ಅದರ ಬಗ್ಗೆ ತಾತ್ಸಾರ. ಹೀಗೆ ನಡೆಯುವುದು ಜ್ಞಾನಿಗಳಮಾರ್ಗ. ಇದೇ ಶ್ರೇಷ್ಠ ಯೋಗಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT