ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಕಾರಣ

Last Updated 28 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬಹುಕಾಲದ ಹಿಂದೆ ಕಳಿಂಗ ರಾಜ್ಯವನ್ನು ಕಾಳಿಂಗರಾಜ ಆಳುತ್ತಿದ್ದ. ಪಕ್ಕದ ರಾಜ್ಯ ಪೋತಲಿಪುರವನ್ನು ಅಸ್ಸಕನೆಂಬ ರಾಜ ಆಳುತ್ತಿದ್ದ. ಕಾಳಿಂಗರಾಜ ಬಹಳ ಬಲಿಷ್ಠ. ಅವನ ಬಳಿ ದೊಡ್ಡ ಸೈನ್ಯ ಇದ್ದುದಲ್ಲದೆ ಅವನೇ ಸ್ವತ: ಆನೆಯಷ್ಟು ಬಲಶಾಲಿಯಾಗಿದ್ದ. ಅವನಿಗೆ ತನ್ನ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಮತ್ತು ಸದಾ ತನ್ನ ಶಕ್ತಿಪ್ರದರ್ಶನ ಮಾಡುವ ಅಭಿಲಾಷೆ.

ಒಂದು ಬಾರಿ ಆತ ತನ್ನ ಮಂತ್ರಿಗಳಿಗೆ ಕೇಳಿದ, “ನನ್ನೊಡನೆ ಯುದ್ಧ ಮಾಡುವ ಧೈರ್ಯ, ಶಕ್ತಿ ಯಾರಿಗಿದೆ? ನಾನು ಅವರೊಂದಿಗೆ ಯುದ್ಧಮಾಡಿ ಗೆಲ್ಲಬೇಕು”. ಆಗ ಅವರೊಂದು ಉಪಾಯ ಸೂಚಿಸಿದರು. “ರಾಜಾ, ನಿನ್ನ ನಾಲ್ಕು ಜನ ಸುಂದರ ಪುತ್ರಿಯರನ್ನು ರಥದಲ್ಲಿ ಕೂಡ್ರಿಸಿ ಸುತ್ತಮುತ್ತಲಿನ ನಗರ, ರಾಜ್ಯಗಳಿಗೆ ಕರೆದುಕೊಂಡು ಹೋಗೋಣ. ಯಾವನಾದರೂ ಅವರನ್ನು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುವ ಧೈರ್ಯ ಮಾಡಿದರೆ ಅವನ ಮೇಲೆ ದಾಳಿ ಹೋಗಿ ಸೋಲಿಸೋಣ” ಎಂದರು ಮಂತ್ರಿಗಳು. ರಾಜನಿಗೆ ಅದು ಸರಿ ಎನ್ನಿಸಿತು.

ಭದ್ರತೆಯಲ್ಲಿ ಕಾಳಿಂಗರಾಜನ ಪುತ್ರಿಯರು ಪ್ರವಾಸ ಹೊರಟರು. ರಾಜನ ಬಲದ ಪರಿಚಯವಿದ್ದ ಎಲ್ಲ ರಾಜರು ಇವರ ರಥವನ್ನು ನಗರದೊಳಗೆ ಬರಲುಬಿಡದೆ ಅಲ್ಲಿಯೇ ನಗರ ದ್ವಾರದ ಬಳಿಯೇ ಕಾಣಿಕೆ ಕೊಟ್ಟು ಕಳುಹಿಸಿಬಿಟ್ಟರು. ಕೊನೆಗೆ ರಥ ಅಸ್ಸಕ ರಾಜ್ಯದ ದ್ವಾರದ ಬಳಿ ಬಂದಿತು. ಅಸ್ಸಕ ರಾಜನಿಗೂ ಕಾಳಿಂಗರಾಜನನ್ನು ಎದುರಿಸುವುದು ಹೆದರಿಕೆಯೇ. ಅಸ್ಸಕ ರಾಜನ ಮಂತ್ರಿ ನಂದಿಸೇನ ಬಹಳ ಬುದ್ಧಿವಂತ, ದೂರದೃಷ್ಟಿಯನ್ನು ಹೊಂದಿದವನು. ಅವನು ರಾಜನನ್ನು ಒಪ್ಪಿಸಿ, ರಾಜಕುಮಾರಿಯನ್ನು ಒಳಗೆ ಕರೆತಂದು ಮದುವೆಯನ್ನು ಮಾಡಿಸಿಯೇ ಬಿಟ್ಟ. ರಾಜಕುಮಾರಿಯೊಂದಿಗೆ ಬಂದಿದ್ದ ಸೈನಿಕರು ವಿಷಯವನ್ನು ಮರಳಿಹೋಗಿ ಕಾಳಿಂಗರಾಜನಿಗೆ ತಿಳಿಸಿದರು. ಅವನು ಬಹುದೊಡ್ಡ ಸೈನ್ಯದೊಂದಿಗೆ ಅಸ್ಸಕ ರಾಜನ ರಾಜಧಾನಿಯ ಮೇಲೆ ದಾಳಿ ಮಾಡಲು ಹೊರಟ. ಕೋಟೆಯಿಂದ ದೂರದಲ್ಲಿ ಸೈನ್ಯ ನಿಲ್ಲಿಸಿದ. ಅಸ್ಸಕ ರಾಜನ ಸೈನ್ಯಕೂಡ ಕೋಟೆಯ ಹೊರಗೆ ಬಂದು ನಿಂತಿತು.

ಆಗ ಬೋಧಿಸತ್ವ ತಪಸ್ವಿಯಾಗಿ ಕಾಡಿನಲ್ಲಿದ್ದ. ಅವನ ಎರಡೂ ಬದಿಗೆ ಸೈನ್ಯಗಳು. ಕಾಳಿಂಗರಾಜ ಬೋಧಿಸತ್ವನ ಬಳಿಗೆ ಬಂದ. ಈ ತಪಸ್ವಿಗಳಿಗೆ ಮುಂದಾಗುವುದು ತಿಳಿದಿರುತ್ತದೆ ಎಂದುಕೊಂಡು, “ಸ್ವಾಮಿ, ನಾಳೆ ಯುದ್ಧದಲ್ಲಿ ಯಾರಿಗೆ ಜಯವಾಗಬಹುದು?” ಎಂದು ಕೇಳಿದ. ಒಂದು ಕ್ಷಣ ಧ್ಯಾನ ಮಾಡಿ ಬೋಧಿಸತ್ವ “ಇಂದಿನ ಪರಿಸ್ಥಿತಿಯಲ್ಲಿ ಕಾಳಿಂಗ ರಾಜ ಯುದ್ಧ ಗೆಲ್ಲುತ್ತಾನೆ” ಎಂದ. ಸಂಭ್ರಮದಿಂದ ಕಾಳಿಂಗರಾಜ ತನ್ನ ಸೈನ್ಯಕ್ಕೆಲ್ಲ ವಿಷಯ ತಿಳಿಸಿದ. ಎಲ್ಲರೂ ಸಂತೋಷದಿಂದ ನಿರಾಳರಾದರು, ವಿಜಯೋತ್ಸವ ಆಚರಿಸಲು ಪ್ರಾರಂಭಿಸಿದರು.

ಈ ವಿಷಯ ಅಸ್ಸಕರಾಜನಿಗೂ ತಿಳಿದು ತುಂಬ ದಿಗಿಲಾಯಿತು. ಆಗ ನಂದಿಸೇನ ಸಾವಿರ ಜನ ಸೈನಿಕರನ್ನು ಕೋಟೆಯ ಮೇಲೆ ಕರೆದು, “ನೀವು ರಾಜನಿಗಾಗಿ ಕೋಟೆಯ ಮೇಲಿಂದ ಹಾರಲು ಸಿದ್ಧರಿದ್ದೀರಾ?” ಎಂದು ಕೇಳಿದ. ಅವರೆಲ್ಲ ಒಕ್ಕೊರಲಿನಿಂದ “ಹೌದು, ಹೌದು, ಹಾರಿಯೇ ತೀರುತ್ತೇವೆ” ಎಂದರು. ಆಗ ನಂದಿಸೇನ, “ಇದೇ ಉತ್ಸಾಹ, ಉಗ್ರತೆಯೊಂದಿಗೆ ನಾಳೆ ಕಾಳಿಂಗ ರಾಜನ ಮೇಲೆ ನುಗ್ಗೋಣ, ಯಶಸ್ಸು ನಮ್ಮದೇ” ಎಂದು ಹುರಿದುಂಬಿಸಿದ. ಇಡೀ ಸೈನ್ಯ ಉತ್ಸಾಹಿತವಾಯಿತು. ಮರುದಿನ ಯುದ್ಧದಲ್ಲಿ ನಿರಾಳವಾಗಿ ಬಂದ ಕಾಳಿಂಗರಾಜನ ಮೇಲೆ ಅಸ್ಸಕನ ರಣೋತ್ಸಾಹದ ದಂಡು ಹಾರಿಬಿದ್ದು ಸೋಲಿಸಿಬಿಟ್ಟಿತು.

ಯುದ್ದ ಗೆದ್ದ ಅಸ್ಸಕ ಬೋಧಿಸತ್ವನನ್ನು ಕೇಳಿದ, “ಮಹಾತ್ಮರೆ ತಮ್ಮ ಭವಿಷ್ಯ ಹೇಗೆ ಸುಳ್ಳಾಯಿತು?” ಬೋಧಿಸತ್ವ ಹೇಳಿದ, “ನಾನು ಹೇಳಿದ್ದು ಇಂದಿನ ಪರಿಸ್ಥಿತಿಯಲ್ಲಿ ಎಂದು. ಯುದ್ಧದ ಹಿಂದಿನ ದಿನ ರಾಜನಿಗೆ, ಸೈನ್ಯಕ್ಕೆ ಭಾರೀ ಉತ್ಸಾಹವಿತ್ತು, ಆದರೆ ಮರುದಿನ ನಿರಾಳವಾಗಿ, ಉತ್ಸಾಹವನ್ನು ಕಳೆದುಕೊಂಡರು. ನಿನ್ನ ಸೈನಿಕರು ಉತ್ಸಾಹವನ್ನು ಹೆಚ್ಚಿಸಿಕೊಂಡರು. ಗೆಲ್ಲುವುದು, ಸೋಲುವುದು ಭವಿಷ್ಯದಿಂದಲ್ಲ, ನಮ್ಮ ಉತ್ಸಾಹದಿಂದ, ಗುರಿ ತಲುಪುವೆಡೆಯಲ್ಲಿರುವ ಏಕಾಗ್ರತೆಯಿಂದ”.

ಜ್ಯೋತಿಷಿಗಳು ಹೇಳುವ ಭವಿಷ್ಯಕ್ಕಿಂತ ಮನುಷ್ಯ ಪ್ರಯತ್ನ, ಜೀವನೋತ್ಸಾಹ ಯಶಸ್ಸಿಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT