ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುವಿನ ಗೂಡಿನಲ್ಲಿ ಅಮೃತ

Last Updated 27 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಅಮೃತಕಣವಂ ಮತ್ರ್ಯಮೃದ್ಘಟದಿ ಬಯ್ತಿರಿಸಿ |
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ||
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು |
ಕಮ್ರತೆಯೊ ನಮ್ರತೆಯೊ? – ಮಂಕುತಿಮ್ಮ || 190 ||

ಪದ-ಅರ್ಥ: ಅಮೃತಕಣವಂ=ಅಮೃತ+ಕಣವಂ(ಕಣವನ್ನು), ಮತ್ರ್ಯಮೃದ್ಘಟ = ಮತ್ರ್ಯ (ಮನುಷ್ಯ) + ಮೃದ್ಘಟದಿ = ಮೃತ್ (ಮಣ್ಣಿನ) + ಘಟ (ಮಡಕೆ) ಬಯ್ತಿರಿಸಿ = ಮುಚ್ಚಿಟ್ಟು, ವಿಮೃಶ=ವಿಮರ್ಶೆ, ಮೋಹದುಪನೇತ್ರವಿಡಿಸಿ = ಮೋಹದ + ಉಪನೇತ್ರ (ಕನ್ನಡಕ )+ ಇಡಿಸಿ, ದುರ್ಭಿಕ್ಷವಾಗಿಪುದು = ದರಿದ್ರವಾಗಿರುವುದು, ಕಮ್ರತೆ = ಆಸೆ ಹುಟ್ಟಿಸುವಿಕೆ, ನಮ್ರತೆ = ವಿಧೇಯತೆ

ವಾಚ್ಯಾರ್ಥ: ಅಮೃತಕಣವನ್ನು ಮಾನವನೆಂಬ ಮಣ್ಣಿನ ಮಡಕೆಯಲ್ಲಿ ಅಡಗಿಸಿಟ್ಟು, ವಿಮರ್ಶೆಯ ಬುದ್ಧಿಗೆ ಮೋಹದ ಕನ್ನಡಕವನ್ನು ತೊಡಿಸಿ, ಅತ್ಯಂತ ಸಂಭ್ರಮದ ಸಾಮ್ರಾಜ್ಯ ಮಧ್ಯದಲ್ಲಿ ಬರಗಾಲದಂತಿರುವುದು ಆಸೆ ಹುಟ್ಟಿಸುವ ಚಿಂತನೆಯೋ, ವಿಧೇಯತೆಯೋ?

ವಿವರಣೆ: ಅವನೊಬ್ಬ ನವಾಬ. ಅವನ ಬಳಿ ಕೋಟಿ, ಕೋಟಿ ಹಣವಿದೆ, ಎಣಿಸಲಾಗದಷ್ಟು ವಜ್ರ, ವೈಢೂರ್ಯಗಳಿವೆ. ಅವನಿಗಿರುವ ಜಮೀನುಗಳ ವ್ಯಾಪ್ತಿ ಅವನಿಗೂ ಸರಿಯಾಗಿ ತಿಳಿದಿಲ್ಲ. ಅಷ್ಟೊಂದು ಶ್ರೀಮಂತ. ಆದರೆ ಅವನ ಬದುಕನ್ನು ಗಮನಿಸಿದರೆ ಅವನಿಗಿಂತ ಭಿಕ್ಷುಕರೇ ಎಷ್ಟೋ ವಾಸಿ. ಹರಕು ಬಟ್ಟೆ ಹಾಕಿಕೊಳ್ಳುತ್ತಾನೆ. ಖರ್ಚಾಗುತ್ತದೆಂದು ಮನೆಯಲ್ಲಿ ದೀಪವನ್ನು ಉರಿಸುವುದಿಲ್ಲ. ಒಮ್ಮೆ ಅಡುಗೆ ಮಾಡಿದರೆ ಮೂರು ದಿನ ಅದನ್ನೇ ತಿನ್ನುತ್ತಾನೆ. ಆದರೆ ದಿನವೂ ತನ್ನ ತಿಜೋರಿಯಲ್ಲಿದ್ದ ಹಣವನ್ನು ಎಣಿಸಿ, ಎಣಿಸಿ ಸಂತೋಷಪಡುತ್ತಾನೆ. ಇದೇನು ಕರ್ಮ ಎನ್ನಿಸುವುದಿಲ್ಲವೇ?

ನಮಗೆ ಮಾಸ್ತಿಯವರು ಹೇಳುತ್ತಿದ್ದರು, ‘ಒಬ್ಬ ಮನುಷ್ಯ ಇದ್ದಾನೆ, ಅವನ ಮನೆಯಲ್ಲಿ ಒಂದು ತಿಜೋರಿ. ಅದರಲ್ಲಿ ನೂರು ಕೋಟಿ ಹಣವಿದೆ. ಆದರೆ ಆತ ಮನೆಮನೆಗೆ ಹೋಗಿ, ಹತ್ತು ರೂಪಾಯಿ ಕೊಡಿ ಎಂದು ಭಿಕ್ಷೆ ಬೇಡುತ್ತಾನೆ. ಯಾಕಯ್ಯಾ, ನಿನ್ನ ಬಳಿ ಅಷ್ಟು ಹಣ ಇದೆಯಲ್ಲ, ಯಾಕೆ ಭಿಕ್ಷೆ ಬೇಡುತ್ತೀಯಾ ಎಂದು ಕೇಳಿದರೆ, ಸ್ವಾಮಿ ನನಗೆ ತಿಜೋರಿಯ ಕೀಲಿಕೈ ಸಿಗುತ್ತಿಲ್ಲ ಎನ್ನುತ್ತಾನೆ. ಆದರೆ ಆ ಕೀಲಿಕೈ ಅವನ ಜೇಬಿನಲ್ಲೇ ಇದೆ. ಇದು ವಿಪರ್ಯಾಸ’.

ಇದನ್ನೇ ಕಗ್ಗ ಹೇಳುತ್ತದೆ. ಅಮೃತವೆಂದರೆ ಎಂದಿಗೂ ಸಾವಿಲ್ಲದ ಅಂದರೆ ಶಾಶ್ವತತೆಯನ್ನು ಮನುಷ್ಯನೆಂಬ ಮೃತ್-ಘಟ-ಎಂದರೆ ಒಡೆದು ಹೋಗುವ ಅಶಾಶ್ವತವಾದ ಮಣ್ಣಿನ ಮಡಕೆಯಲ್ಲಿ ಮುಚ್ಚಿಡಲಾಗಿದೆ. ವಿಮರ್ಶೆ ಮಾಡುವ ಹರಿತವಾದ ಬುದ್ಧಿಗೆ ಮೋಹದ ಕನ್ನಡಕ! ಈ ಮೋಹ ಎಂದೆಂದಿಗೂ ವಿಮರ್ಶೆ ಮಾಡಗೊಡುವುದಿಲ್ಲ.

ಅತ್ಯಂತ ಶ್ರೀಮಂತಿಕೆಯ ಸಾಮ್ರಾಜ್ಯದಲ್ಲಿ ದುರ್ಭಿಕ್ಷ! ಈ ಕಗ್ಗ ಎಂತೆಂತಹ ವಿರೋಧಾಭಾಸಗಳನ್ನು ಕಣ್ಣ ಮುಂದಿಡುತ್ತದೆ. ಅಮೃತವನ್ನು, ಮೃತ್ಯುವನ್ನು ಕಟ್ಟಿಕೊಂಡ ಮನುಷ್ಯ ಶರೀರದಲ್ಲಿ; ವಿಮರ್ಶೆಯ ಬುದ್ಧಿಗೆ ಅದನ್ನು ಮಬ್ಬುಗೊಳಿಸುವ ಮೋಹದ ಕನ್ನಡಕ! ಕನ್ನಡಕವನ್ನು ಸಾಮಾನ್ಯವಾಗಿ ಬಳಸುವುದು ದೃಷ್ಟಿಯನ್ನು ಹರಿತಗೊಳಿಸುವುದಕ್ಕೆ. ಆದರೆ ಇಲ್ಲಿ ಅದು ವಿಮರ್ಶೆಯನ್ನು ಮುಸುಕುಗೊಳಿಸುತ್ತದೆ. ಶ್ರೀಮಂತ ಸಾಮ್ರಾಜ್ಯದಲ್ಲಿ ದುರ್ಭಿಕ್ಷಕ್ಕೆ ಎಲ್ಲಿಯ ಸ್ಥಾನ? ಆದರೆ ಹೀಗಿರುವುದು ಸತ್ಯ. ಹೀಗೆ ಇರುವುದಕ್ಕೆ ಕಾರಣವೇನು? ಇದು ಪ್ರಕೃತಿಯ ತಂತ್ರವೋ? ನಮ್ಮಲ್ಲಿ ಹೊಸ ಹೊಸ ಆಸೆಗಳನ್ನು ಹುಟ್ಟು ಹಾಕುವ ಯೋಜನೆಯೋ? ಅಥವಾ ಪ್ರಕೃತಿ ನಮಗೆ ವಿನಯದಿಂದ ತೋರಿಸಿಕೊಡುವ ಎಚ್ಚರಿಕೆಯೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT