ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಿತದ ಸೂತ್ರಗಳು

Published 14 ಮೇ 2023, 18:41 IST
Last Updated 14 ಮೇ 2023, 18:41 IST
ಅಕ್ಷರ ಗಾತ್ರ


ಕಾಯಕಿಂತಾತ್ಮ ಪಿರಿದೆಂದು ಜನವರಿತಂದು |
ಸ್ಪೀಯೇಚ್ಛೆಯಿಂ ಸಮಾಧಾನ ಕೆಡದಂದು ||
ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |
ಶ್ರೇಯ ನೆರೆವುದು ಜಗಕೆ – ಮಂಕುತಿಮ್ಮ | 883 ||


ಪದ-ಅರ್ಥ: ಕಾಯಕಿಂತಾತ್ಮ=ಕಾಯಕಿಂತ(ದೇಹಕಿಂತ)+ಆತ್ಮ, ಪಿರಿದೆಂದು+ಹಿರಿದೆಂದು, ಜನವರಿತಂದು=ಜನವು+ಅರಿತAದು,
ಸ್ಪೀಯೇಚ್ಛೆ=ಸ್ವಂತದ ಇಚ್ಛೆ,
ದಾಯಸಮಸಂಸೃಷ್ಟಿ=ಆದದ್ದರಲ್ಲಿ ಸಮಪಾಲು, ಭೂಭಾಗ್ಯವಾದಂದು=ಭೂಮಿಗೆ ಭಾಗ್ಯವಾದಾಗ, ಶ್ರೇಯ=ಶಾಶ್ವತವಾದ ಫಲ, ನೆರೆವುದು=ದೊರೆಯುವುದು.
ವಾಚ್ಯಾರ್ಥ: ದೇಹಕ್ಕಿಂತ ಆತ್ಮ ದೊಡ್ಡದು ಎಂಬುದನ್ನು ಜನರು ತಿಳಿದಾಗ, ಸ್ವಂತದ ಇಚ್ಛೆ ಪ್ರಪಂಚದ ಸಮಧಾನವನ್ನು ಕೆಡಿಸದಿರುವಾಗ, ದೊರೆತ ಎಲ್ಲವನ್ನು ಎಲ್ಲರೊಡನೆ ಸಮನಾಗಿ ಹಂಚಿಕೊಳ್ಳುವುದು ಈ ಭೂಮಿಯ ಭಾಗ್ಯವಾದಾಗ, ಜಗತ್ತಿಗೆ ಶಾಶ್ವತವಾದ ಸುಖ ದೊರೆತೀತು.
ವಿವರಣೆ: ಎಲ್ಲರಿಗೂ ಸುಖ ಬೇಕು. ಅದನ್ನು ಹೇಗಾದರೂ ಪಡೆಯಬೇಕೆಂದಾಗ ಆತಂಕ ನಿರ್ಮಾಣವಾಗುತ್ತದೆ. ಅದರ ಪರಿಹಾರಕ್ಕೆ ಮತ್ತೆ ಪ್ರಯತ್ನ. ಹೀಗೆ ಪ್ರಪಂಚದ ಎಲ್ಲರೂ
ಸುಖಕ್ಕಾಗಿ ಒದ್ದಾಡುತ್ತಾರೆ. ಈ ಕಗ್ಗ ವೈಯಕ್ತಿಕ ಸುಖದ ಬಗ್ಗೆ ಮಾತನಾಡುವುದಿಲ್ಲ. ಇಡೀ ಪ್ರಪಂಚದ ಸುಖದ ಬಗ್ಗೆ ಚಿಂತಿಸುತ್ತದೆ. ಕಗ್ಗ ಪ್ರಪಂಚದ ಸುಖ, ಸಂತೋಷಕ್ಕೆ
ಮೂರು ಪ್ರಮುಖ ಸೂತ್ರಗಳನ್ನು ನೀಡುತ್ತದೆ. ಮೊದಲನೆಯದು, ಜನರು ತಮ್ಮ ದೇಹಕ್ಕಿಂತ ಆತ್ಮ ದೊಡ್ಡದೆಂಬುದನ್ನು ತಿಳಿಯಬೇಕು. ನಮ್ಮ ಬಹಳಷ್ಟು ಸಮಸ್ಯೆಗಳು ದೇಹಮೂಲವಾದವುಗಳು. ಅದನ್ನು ಆಳುವ ಆತ್ಮವೊಂದಿದೆ ಎನ್ನುವುದು ಕಲ್ಪನೆಗೇ ಬರುವುದಿಲ್ಲ. ಒಬ್ಬ ಶ್ರೀಮಂತ ಝೆನ್ ಗುರುವಿನ ಬಳಿಗೆ ಬಂದ. ಗುರುಗಳು

 
ಖ್ಯಾತ ಚಿತ್ರ ಕಲಾವಿದರು. ಶಿಷ್ಯ ಕೇಳಿದ, “ಗುರುಗಳೇ, ನನಗೊಂದು ಚಿತ್ರ ಬರೆದು ಕೊಡಿ. ಅದನ್ನು ನೋಡಿದ ಕೂಡಲೆ ನನಗೆ ನಿರ್ವಾಣದ ಅಪೇಕ್ಷೆಯಾಗಬೇಕು”. ಗುರುಗಳು ನಾಲ್ಕು ಚಿತ್ರಗಳನ್ನು ಬರೆದು ತಂದರು. ಒಂದರಲ್ಲಿ ದೇಹದ ಅಂಗಾಂಗಗಳನ್ನು ಬೇರೆ ಬೇರೆಯಾಗಿ ಬರೆದಿತ್ತು. ಎರಡನೆಯದರಲ್ಲಿ, ದೇಹದ ಆಂತರಿಕ ಅವಯವಗಳು, ರಕ್ತ, ಮಾಂಸ, ಎಲುಬು, ಮಲ, ಮೂತ್ರಗಳ ಚಿತ್ರಣ, ಮೂರನೆಯದರಲ್ಲಿ ಮಣ್ಣು, ನೀರು, ಗಾಳಿ, ಆಕಾಶ ಮತ್ತು ಬೆಂಕಿಯ ಚಿತ್ರಣ. ನಾಲ್ಕನೆಯದು ಖಾಲಿಯಾಗಿತ್ತು. ಆದರೆ ಮಧ್ಯದಲ್ಲಿ ಕಣ್ಣು ಕೋರೈಸುವ ಬೆಳಕಿತ್ತು. ಗುರುಗಳು ಹೇಳಿದರು, “ಒಂದು, ಎರಡನೆ ಚಿತ್ರಗಳು ದೇಹದ ಒಳ- ಹೊರಗುಗಳು, ಮೂರನೆಯದು ಅವುಗಳನ್ನು ಮಾಡಿದ ಅಂಶಗಳು. ನಾಲ್ಕನೆಯದು ಮಾತ್ರ ಉಳಿಯುವುದು. ದೇಹನಾಶವಾದರೂ ಉಳಿಯುವುದು ಆತ್ಮ ಮಾತ್ರ”. ಶಿಷ್ಯ ನಿರ್ವಾಣವನ್ನು ಪಡೆದ. ಕಗ್ಗ ಹೇಳುತ್ತದೆ, ಎಂದು ಜನ ದೇಹಕ್ಕಿಂತ ಆತ್ಮ
ದೊಡ್ಡದೆಂದು ಭಾವಿಸುತ್ತಾರೋ, ಎಂದು ತನ್ನ ಸ್ವಂತದ ಇಚ್ಛೆ ಪರರ ಸಮಾಧಾನವನ್ನು ಕೆಡಿಸದಂತೆ ನಡೆಯುತ್ತಾರೋ, ಎಂದು ದೊರೆತದ್ದನ್ನೆಲ್ಲ ಸಮನಾಗಿ ಹಂಚಿಕೊAಡು
ಸಂತೋಷದಿಂದ ಬದುಕುತ್ತಾರೋ, ಅಂದೇ ಈ ಪ್ರಪಂಚಕ್ಕೆ ಶಾಶ್ವತವಾದ ಸುಖ ದೊರಕುತ್ತದೆ. ಈ ಮೂರು ಸೂತ್ರಗಳು ಪ್ರಪಂಚಕ್ಕೆ ಹಿತ ನೀಡುವಂಥವುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT