ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಆಡಳಿತ

Last Updated 26 ಜೂನ್ 2019, 19:45 IST
ಅಕ್ಷರ ಗಾತ್ರ

ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು |
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ||
ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ |
ಪರಿವೆಯೇನಿಲ್ಲೆಲವೊ – ಮಂಕುತಿಮ್ಮ || 150 ||

ಪದ-ಅರ್ಥ: ಮೂವರಿರುವಲ್ಲಿ=ಮೂವರು+ಇರುವಲ್ಲಿ, ಹೆಚ್ಚಿಕೆಗಳಿರಲಚ್ಚರಿಯದೇನು=ಹೆಚ್ಚಿಕೆಗಳು+ಇರಲು+ಅಚ್ಚರಿ+ಅದೇನು.
ವಾಚ್ಯಾರ್ಥ: ಮೂರು ಜನರು ಆಳುವಾಗ ಏನಾದರೂ ಸರಿ ಇದ್ದರೆ ಅದೇ ಬೆರಗು. ಅಂತಹುದರಲ್ಲಿ ಹೆಚ್ಚು, ಕಡಿಮೆಗಳಾದರೆ ಆಶ್ಚರ್ಯವೇನಿಲ್ಲ. ಬರುವುದೆಲ್ಲ ಬರಲಿ, ಹೋಗುವುದೆಲ್ಲ ಹೋಗಲಿ. ನಿನಗೆ ಅದರ ಚಿಂತೆ ಏಕೆ?

ವಿವರಣೆ: ಒಂದು ಕಾಡು. ಅದರಲ್ಲಿ ಎಲ್ಲ ತರಹದ ಪ್ರಾಣಿಗಳು ಸಂತೋಷದಿಂದ ಬಾಳಿದ್ದವು. ಒಂದು ಬಾರಿ ಕಾಡಿನ ನಾಯಕತ್ವದ ಬಗ್ಗೆ ತಕರಾರು ಬಂತು. ಸಾಮಾನ್ಯವಾಗಿ ಸಿಂಹವೇ ರಾಜನಾಗುವ ಪರಿಪಾಠ ಇತ್ತಲ್ಲ? ಆದರೆ ಈಗಿನ ಸಿಂಹಗಳು ಅಷ್ಟು ಬಲಿಷ್ಠವಲ್ಲ ಎಂಬ ತಕರಾರು ಎದ್ದಿತು. ಆನೆಗಳು ತಮ್ಮ ನಾಯಕನೇ ರಾಜನಾಗಲಿ ಎಂದು ಅಪೇಕ್ಷಿಸಿದವು. ಇದನ್ನು ಹುಲಿಗಳು ಸುಲಭವಾಗಿ ಒಪ್ಪಿಯಾವೇ? ಅವುಗಳದ್ದು ತಕರಾರು ಎದ್ದಿತು. ಈ ನಡುವೆ ಪಕ್ಷಿಗಳೆಲ್ಲ ಸಭೆ ಸೇರಿ, ನಾವು ಅಸಂಖ್ಯವಾಗಿದ್ದೇವೆ. ಕಾಡು ಕೇವಲ ನಾಲ್ಕು ಕಾಲಿನ ಪ್ರಾಣಿಗಳದ್ದೇ? ನಮ್ಮಲ್ಲಿ ನಾಯಕನಾದ ಗರುಡ ರಾಜನಾಗಲಿ ಎಂದು ತೀರ್ಮಾನಿಸಿದವು.

ಎಲ್ಲ ಪ್ರಾಣಿ, ಪಕ್ಷಿಗಳ ಸಭೆ ಸೇರಿದಾಗ ನಾಯಕನ ಆಯ್ಕೆ ಬಹಳ ಕಷ್ಪವಾಯಿತು. ಯಾರಿಗೂ ಬಹುಮತ ದೊರಕಲಿಲ್ಲ. ಈಗೇನು ಮಾಡುವುದು? ಅರಣ್ಯವನ್ನಂತೂ ರಾಜನಿಲ್ಲದೆ ಬಿಡುವಂತಿಲ್ಲ. ಆಗ ಸರ್ಪಗಳು ಆನೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದವು. ಹೀಗಾಗಿ ಆನೆಗಳ ಮತಗಳು ಹೆಚ್ಚಾದರೂ ಅರಣ್ಯ ನಡೆಸಲು ಬೇಕಾದಷ್ಟು ಮತಗಳು ಇರಲಿಲ್ಲ. ಆಗ ನರಿ ಒಂದು ಒಪ್ಪಂದವನ್ನು ಮಾಡಿಸಿತು. ಆನೆ, ಸಿಂಹ ಮತ್ತು ಗರುಡ, ಮೂವರೂ ಅರಣ್ಯವನ್ನು ಜೊತೆಗೂಡಿ ನಡೆಸಲಿ. ಇದೊಂದು ಸಮ್ಮಿಶ್ರ ಸರಕಾರ ಎಂದು ಘೋಷಿಸಿತು. ಅರಣ್ಯದ ಆಡಳಿತ ನಡೆಯಿತು. ಆದರೆ ಒಳಗೊಳಗೇ ಆನೆಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ಆನೆಗಳಿಗೆ ಹೇಗೆ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಡಬೇಕು ಎಂದು ಯೋಜಿಸುತ್ತಿದ್ದವು. ಹಾಗೆ ಆದರೆ ಮುಂದಿನ ಬಾರಿ ನಮ್ಮ ಸಂಖ್ಯೆ ಹೆಚ್ಚಾಗಿ ಅಧಿಕಾರ ಕೇವಲ ನಮ್ಮದಾಗಿಯೇ ಉಳಿಯುತ್ತದೆ ಎಂಬುದು ಅವುಗಳ ಆಲೋಚನೆ. ಆದರೆ ಇದೇ ರೀತಿಯ ಆಲೋಚನೆ ಸಿಂಹ ಹಾಗೂ ಗರುಡಗಳದ್ದೂ ಆಗಿತ್ತು. ದಿನ ಕಳೆದಂತೆ ಸ್ವಜಾತಿಯ ಉತ್ಥಾನವೇ ಮುಖ್ಯವಾಗಿ ಅರಣ್ಯದ ಪರಿಸ್ಥಿತಿ ನಿಜವಾಗಿಯೂ ಅರಣ್ಯರೋದನವಾಯಿತು. ಮೂರು ಜನ ಆಡಳಿತ ನಡೆಸಿದರೆ ಆಗುವುದೇ ಹೀಗೆ. ಅದಕ್ಕೆ ಕಗ್ಗ ಹೇಳುತ್ತದೆ, ಮೂವರು ದೊರೆಗಳಿದ್ದಾಗ ಏನಾದರೂ ಸರಿ ಇದ್ದರೆ ಅದೇ ಆಶ್ಚರ್ಯ. ಅಂಥದ್ದರಲ್ಲಿ ಹೆಚ್ಚು, ಕಡಿಮೆ ಎನ್ನುವ ಮಾತೇ ಇಲ್ಲ. ಆದ್ದರಿಂದ ಏನು ಬರುತ್ತದೋ ಬರಲಿ, ಅದನ್ನು ಎದುರಿಸುತ್ತೇನೆ ಎಂಬ ಮನೋಭಾವವೇ ಸಾರ್ವಜನಿಕರಿಗೆ ಒಳ್ಳೆಯದು.

ಈ ಕಗ್ಗದ ಇನ್ನೊಂದು ಧ್ವನಿ ಅಧ್ಯಾತ್ಮಿಕದ್ದು. ಜೀವ, ಜಗತ್ತು, ದೈವ ಈ ಮೂವರು ಆಳುತ್ತಿರುವ ಪ್ರಪಂಚದಲ್ಲಿ ಹೀಗೇ ಆಗಲಿ ಎಂದು ನಿರೀಕ್ಷೆ ಮಾಡುವುದು ಬೇಡ. ಮೂವರೂ ಯಜಮಾನರು ಸೇರಿ ಯಾವುದು ಸರಿ ಎಂದು ತೀರ್ಮಾನ ಮಾಡುತ್ತಾರೋ ಅದೇ ನನಗೆ ಮಾರ್ಗದರ್ಶನ ಎಂದು ಮುಂದುವರೆಯುವುದನ್ನು ಬಿಟ್ಟು ಬೇರೆ ಚಿಂತೆ ಮಾಡುವುದರಲ್ಲಿ ಅರ್ಥವಿಲ್ಲ. ಅದಕ್ಕೇ ದಾಸರು ಹೇಳಿದರು, “ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯೊಂದಿರಲಿ”.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT