ಗುರುವಾರ , ಆಗಸ್ಟ್ 22, 2019
27 °C

ಕಪ್ಪಾಗದ ವಜ್ರ

ಗುರುರಾಜ ಕರಜಗಿ
Published:
Updated:
Prajavani

ಬುದ್ಧನ ಕಾಲದಲ್ಲಿ ಆತನಿಗೆ ಜನಮನ್ನಣೆ ಎಷ್ಟಾಗಿತ್ತೆಂದರೆ, ಉಳಿದ ಮತ ಪ್ರಚಾರಕರಿದ್ದರಲ್ಲ, ಅವರ ಬಳಿ ಯಾರೂ ಹೋಗುತ್ತಿರಲಿಲ್ಲ. ಆ ಪ್ರಚಾರಕರನ್ನು ತೈರ್ಥಿಕರು ಎಂದು ಕರೆಯುತ್ತಿದ್ದರು. ಆ ತೈರ್ಥಿಕರಿಗೆ ತುಂಬ ಹೊಟ್ಟೆಕಿಚ್ಚಾಯಿತು. ಹೇಗಾದರೂ ಮಾಡಿ ಬುದ್ಧನ ಪ್ರಭಾವವನ್ನು ಕಡಿಮೆ ಮಾಡಬೇಕು ಎಂದು ಚಿಂತಿಸಿದರು. ಆಗ ಅವರಿಗೊಂದು ಕೆಟ್ಟ ಆಲೋಚನೆ ಹೊಳೆಯಿತು.

ನಗರದಲ್ಲಿ ಒಬ್ಬ ಸುಂದರಿ ಇದ್ದಳು. ತೈರ್ಥಿಕರು ಆಕೆಯನ್ನು ಕರೆಸಿ, “ತಂಗಿ, ಈ ಗೌತಮ ನಗರಕ್ಕೆ ಬಂದಾಗಿನಿಂದ ನಮಗೆ ಬಹಳ ತೊಂದರೆಯಾಗಿದೆ. ಯಾರೂ ನಮಗೆ ಸತ್ಕಾರ ಮಾಡುತ್ತಿಲ್ಲ. ಅವನ ಪ್ರಭಾವವನ್ನು ಹೇಗಾದರೂ ಕಡಿಮೆ ಮಾಡಬೇಕು. ಅದಕ್ಕೆ ನಮಗೆ ನಿನ್ನ ಸಹಾಯ ಬೇಕು” ಎಂದರು. ಆಕೆ, “ನಾನೇನು ಮಾಡಬಹುದೋ ಹೇಳಿ, ಮಾಡುತ್ತೇನೆ” ಎಂದಳು. ತೈರ್ಥಿಕರು, “ನೀನು ಅಪರೂಪದ ಸುಂದರಿ. ನಿನ್ನ ಬುದ್ಧಿ, ರೂಪಗಳನ್ನು ಬಳಸಿಕೊಂಡು ಶ್ರಮಣ ಗೌತಮನಿಗೆ ಕೆಟ್ಟ ಹೆಸರು ಬರುವಂತೆ ಮಾಡು. ಆಗ ಅವನ ಸತ್ಕಾರ ಕಡಿಮೆಯಾಗಿ ಜನ ನಮ್ಮೆಡೆಗೆ ಬರತೊಡಗುತ್ತಾರೆ. ನಿನ್ನ ಪ್ರಯತ್ನಕ್ಕೆ ಫಲವಾಗಿ ನಿನಗೆ ಸಾಕಷ್ಟು ಹಣವನ್ನು ಕೊಡುತ್ತೇವೆ” ಎಂದು ಆಕೆಯನ್ನು ಒಪ್ಪಿಸಿದರು.

ಆಕೆ ಮರುದಿನ ಹೂವು, ಗಂಧ, ಕರ್ಪೂರಗಳನ್ನು ತಟ್ಟೆಯಲ್ಲಿಟ್ಟುಕೊಂಡು ವೈಯಾರದಿಂದ ಚೇತವನಕ್ಕೆ ನಡೆದಳು. ದಾರಿಯಲ್ಲಿ ಜನ ಆಕೆಯನ್ನು ಹೋಗುತ್ತಿರುವುದು ಎಲ್ಲಿಗೆ ಎಂದು ಕೇಳಿದರೆ ಆಕೆ, “ನಾನು ಶ್ರಮಣ ಗೌತಮನ ಕಡೆಗೆ ಹೋಗುತ್ತಿದ್ದೇನೆ. ಈ ರಾತ್ರಿ ಅವನೊಂದಿಗೆ ಕಳೆಯಬೇಕೆಂಬುದು ಅವನ ಅಪೇಕ್ಷೆಯಾಗಿದೆ” ಎನ್ನುತ್ತಿದ್ದಳು. ಮರುದಿನ ಬೆಳಿಗ್ಗೆ ಹಣೆಯ ಮೇಲಿನ ಕುಂಕುಮವನ್ನು ಅಡ್ಡಡ್ಡಲಾಗಿ ಉಜ್ಜಿಕೊಂಡು, ತಲೆಗೂದಲನ್ನು ಹರಡಿಕೊಂಡು ರಸ್ತೆಯಲ್ಲಿ ಬರುವಾಗ ಜನ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದಾಗ, “ನಾನು ರಾತ್ರಿಯೆಲ್ಲ ಶ್ರಮಣ ಗೌತಮನೊಂದಿಗಿದ್ದು ರತಿಕ್ರೀಡೆಯಾಡಿಕೊಂಡು ಬರುತ್ತಿದ್ದೇನೆ” ಎಂದು ಉತ್ತರಕೊಡುತ್ತಿದ್ದಳು. ಜನರು ಅದನ್ನು ನಂಬಿ ಬುದ್ಧನನ್ನು ಕಡೆಗಣ್ಣಿನಿಂದ ನೋಡತೊಡಗಿದರು. ಆಗ ತೈರ್ಥಿಕರು ಇಬ್ಬರು ಧೂರ್ತ ಸೇವಕರನ್ನು ಕರೆದು ಆ ತರುಣಿಯನ್ನು ಚೇತವನಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಕೊಂದು ಗೌತಮನ ವಾಸಸ್ಥಳದ ಪಕ್ಕದಲ್ಲೇ ಕಸದಲ್ಲಿ ಮುಚ್ಚಿಬರುವಂತೆ ಹೇಳಿ ಸಾಕಷ್ಟು ಹಣ ಕೊಟ್ಟರು. ಅದರಂತೆಯೇ ಅವರು ಮಾಡಿ ಬಂದರು. ಮರುದಿನ ತರುಣಿ ಕಾಣೆಯಾದ ಸುದ್ದಿ ನಗರದಲ್ಲೆಲ್ಲ ಹಬ್ಬಿತು. ತೈರ್ಥಿಕರು ರಾಜನ ಬಳಿಗೆ ಹೋಗಿ, “ಪ್ರತಿದಿನ ರಾತ್ರಿ ಆ ತರುಣಿ ಚೇತವನಕ್ಕೆ ಬುದ್ಧನ ಹತ್ತಿರ ಹೋಗುತ್ತಿದ್ದಳು. ಆಕೆ ಅಲ್ಲಿ ಎಲ್ಲಿಯೋ ಕಾಣೆಯಾಗಿರಬಹುದು” ಎಂದು ಸಂಶಯದ ಬೀಜವನ್ನು ಬಿತ್ತಿದರು. ರಾಜ ಸೈನಿಕರನ್ನು ಕಳುಹಿಸಿ ಹುಡುಕಿಸಿದಾಗ ತರುಣಿಯ ಶವ ಕಸದ ಗುಡ್ಡೆಯಲ್ಲಿ ದೊರಕಿತು. ಗೌತಮ ತನ್ನ ಪಾಪಕರ್ಮವನ್ನು ಮುಚ್ಚಿಡುವುದಕ್ಕೆ ಇಂಥ ಹೀನಕಾರ್ಯವನ್ನು ಮಾಡಿದ್ದಾನೆಂದು ತೈರ್ಥಿಕರು ಸುದ್ದಿಯನ್ನು ನಗರದಲ್ಲಿ ಹರಿಬಿಟ್ಟರು. ಊರ ಜನರೆಲ್ಲ ಬುದ್ಧನ ಬಗ್ಗೆ ದುರಭಿಪ್ರಾಯ ಹೊಂದತೊಡಗಿದರು. ಬುದ್ಧ ಶಾಂತವಾಗಿಯೇ ಇದ್ದ.

ಒಂದು ರಾತ್ರಿ ಇಬ್ಬರು ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಳ್ಳುತ್ತಿದ್ದರು. ಒಬ್ಬ ಹೇಳಿದ, “ನೀನೇ ತಾನೆ ಮೊದಲನೆ ಹೊಡೆತ ಹಾಕಿ ಆ ತರುಣಿಯನ್ನು ಕೊಂದದ್ದು?” ಇನ್ನೊಬ್ಬ ಹೇಳಿದ, “ನೀನೇನು ಕಮ್ಮಿ? ನೀನೇ ತಾನೆ ಆಕೆಯ ದೇಹವನ್ನು ಕಸದ ಗುಂಡಿಯಲ್ಲಿ ಮುಚ್ಚಿದ್ದು?” ಇದನ್ನು ಕೇಳಿಸಿಕೊಂಡ ಸೈನಿಕರು ಇವರನ್ನು ಎಳೆದುಕೊಂಡು ರಾಜನ ಬಳಿಗೆ ಹೋದರು. ಅಲ್ಲಿ ಧೂರ್ತರು ತಾವೇ ಕೊಲೆ ಮಾಡಿದ್ದನ್ನು ಒಪ್ಪಿಕೊಂಡು, ಇದಕ್ಕೆ ಪ್ರಚೋದನೆ ನೀಡಿದವರು ತೈರ್ಥಿಕರು ಎಂದು ಬಾಯಿಬಿಟ್ಟರು. ಎಲ್ಲರಿಗೂ ಶಿಕ್ಷೆಯಾಯಿತು.

ಬುದ್ಧ ಹೇಳಿದ, “ಮಾನಸಿಕ ಶುದ್ಧತೆ, ನೈತಿಕ ಬದುಕು ವಜ್ರವಿದ್ದಂತೆ. ಕಷ್ಟಗಳು, ಆಪಾದನೆಗಳು ಅದನ್ನು ಉಜ್ಜಿ ಮತ್ತೂ ಹೊಳಪಾಗಿಸುತ್ತವೆ” ಈ ಮಾತು ಇಂದಿಗೂ ಸತ್ಯವೇ.

Post Comments (+)