ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರ್ಶನಿಕತೆ

Last Updated 22 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಸ್ಮಶಾನದಲ್ಲಿ ಒಂದು ಬೇವಿನಮರದ ವೃಕ್ಷದೇವತೆಯಾಗಿದ್ದ. ಒಂದು ದಿನ ಕಳ್ಳನೊಬ್ಬ ಹಳ್ಳಿಯಲ್ಲಿ ಕಳ್ಳತನ ಮಾಡಿಕೊಂಡು ರಾತ್ರಿ ಮಾಲಿನ ಸಮೇತ ಬಂದು ಈ ಮರದ ಕೆಳಗೆ ಮಲಗಿದ್ದ. ಸ್ಮಶಾನದಲ್ಲಿ ಈ ಬೇವಿನಮರವಲ್ಲದೆ ಬೇರೆ ಅರಳಿಮರಗಳು, ಬೇವಿನ ಮರಗಳು ಇದ್ದವು.

ಆ ಕಾಲದಲ್ಲಿ ಒಂದು ವಿಚಿತ್ರವಾದ ಪದ್ಧತಿ ಇತ್ತು. ಯಾವುದೇ ಕಳ್ಳ ಸಿಕ್ಕಿಹಾಕಿಕೊಂಡರೆ ರಾಜನ ಸೈನಿಕರು ಅವನನ್ನು ಹಿಡಿದು ಕಟ್ಟಿ ಹಾಕಿ ಬೇವಿನಮರದ ಗೂಟದಿಂದ ಹೊಡೆಯುತ್ತಿದ್ದರು. ಅದಕ್ಕಾಗಿ ಒಂದು ಬೇವಿನ ಮರದ ಚೆನ್ನಾಗಿ ಬಲಿತ ಕೊಂಬೆಯನ್ನು ಕತ್ತರಿಸುತ್ತಿದ್ದರು. ಈ ಪದ್ಧತಿಯನ್ನು ಅರಿತಿದ್ದ ವೃಕ್ಷದೇವತೆ, ಇವನೇನಾದರೂ ಬೆಳಿಗ್ಗೆ ಸೈನಿಕರ ಕೈಯಲ್ಲಿ ಸಿಕ್ಕಿಬಿದ್ದರೆ ಅವರು ಈತನನ್ನು ಇದೇ ಮರಕ್ಕೆ ಕಟ್ಟಿಹಾಕಿ, ಇದೇ ಮರದ ದೊಡ್ಡ ಕೊಂಬೆಯೊಂದನ್ನು ಕತ್ತರಿಸುತ್ತಾರೆ. ಇದರಿಂದ ತನ್ನನ್ನು ನಂಬಿದ ಮರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಅವನನ್ನು ಇಲ್ಲಿಂದ ಓಡಿಸಬೇಕು ಎಂದು ತೀರ್ಮಾನಿಸಿತು. ಅದಕ್ಕೆ ಕಳ್ಳನಿಗೆ ಜೋರಾಗಿ ಕೂಗಿ ಹೇಳಿತು, ‘ಹೇ ಕಳ್ಳಾ, ತಕ್ಷಣವೇ ಮೇಲಕ್ಕೆ ಏಳು. ಯಾವಾಗ ರಾಜದೂತರು ಇಲ್ಲಿಗೆ ಬಂದಾರೆಂಬುದನ್ನು ಹೇಳುವುದು ಕಷ್ಟ. ಕಳ್ಳತನ ಮಾಡಿದವರು ಯಾರಾದರೂ ಹೀಗೆ ಆರಾಮವಾಗಿ ಮಲಗುತ್ತಾರೆಯೇ? ಎದ್ದು ಇಲ್ಲಿಂದ ಓಡಿ ಹೋಗಿ ಅಡಗಿಕೋ’.

ಕಳ್ಳ ಗಾಬರಿಯಾಗಿ ಎದ್ದು ನಿಂತ. ರಾಜದೂತರು ಬರುವುದರಲ್ಲಿಯೇ ತಾನು ಪಾರಾಗಿಹೋಗಬೇಕೆಂದು ಅಲ್ಲಿಂದ ಓಡಿದ. ಇದನ್ನು ಗಮನಿಸಿದ, ಮುಂದೆಯೇ ಇದ್ದ ಅರಳಿಮರ, ಬೇವಿನಮರದ ವೃಕ್ಷದೇವತೆಯನ್ನು ಕೇಳಿತು, ‘ಎಲ್ಲಿಯವನೋ ಕಳ್ಳ, ಎಲ್ಲೋ ಹಳ್ಳಿಯಲ್ಲಿ ಕಳ್ಳತನಮಾಡಿದರೆ, ಅವನನ್ನು ರಾಜದೂತರು ಹಿಡಿದರೆ ಸ್ಮಶಾನದಲ್ಲಿರುವ ಬೇವಿನಮರವಾದ ನಿನಗೆ ಏನು ತೊಂದರೆ? ಅವನನ್ನು ಏಕೆ ಅಲ್ಲಿಂದ ಓಡಿಸಿದೆ?’

ಬೇವಿನಮರದ ವೃಕ್ಷದೇವತೆ ಹೇಳಿತು, ‘ನೀನು ಹೇಳುವುದು ಸರಿ. ಆದರೆ ರಾಜದೂತರು ಅವನನ್ನು ಹಿಡಿದರೆ ಅವನಿಗೆ ಶಿಕ್ಷೆ ಕೊಡುತ್ತಾರೆ. ಅವನು ಮಾಡಿದ ತಪ್ಪಿಗೆ ಆತ ಶಿಕ್ಷೆಯನ್ನು ಅನುಭವಿಸುವುದು ಸರಿ. ನಿನಗೆ ಇನ್ನೊಂದು ವಿಷಯ ತಿಳಿದಿಲ್ಲ. ಶಿಕ್ಷೆ ಕಳ್ಳನಿಗೆ ಎಂದು ತೀರ್ಮಾನವಾದರೂ ನಿಜವಾದ ಶಿಕ್ಷೆಯಾಗುವುದು ಬೇವಿನ ಮರಕ್ಕೆ. ಅವನನ್ನು ಹೊಡೆಯುವುದಕ್ಕೆ ಬೇವಿನಮರದ ಕೊಂಬೆಯನ್ನು ಕತ್ತರಿಸುತ್ತಾರೆ, ಅದರ ಎಲೆಗಳನ್ನೆಲ್ಲ ತರಿದುಹಾಕುತ್ತಾರೆ. ನನ್ನ ಗಿಡಕ್ಕೆ ತೊಂದರೆಯಾಗದಿರಲಿ ಎಂದು ಅವನನ್ನು ಇಲ್ಲಿಂದ ಓಡಿಸಿದೆ’. ಈಗ ವೃಕ್ಷಗಳು ಮಾತನಾಡುತ್ತಿರುವಾಗ ರಾಜದೂತರು ಕಳ್ಳನನ್ನು ಹುಡುಕಿಕೊಂಡು ಬಂದರು. ಬೇವಿನಮರದ ಕೆಳಗೆ ಕಳ್ಳ ಮರೆತುಹೋದ ಅವನ ರುಮಾಲನ್ನು ಕಂಡು, ‘ಓಹೋ, ಈಗ ತಾನೇ ಕಳ್ಳ ಇಲ್ಲಿಂದ ಓಡಿಹೋಗಿದ್ದಾನೆ. ಅವನನ್ನು ಹಿಡಿಯಬೇಕು’ ಎಂದು ಓಡಿದರು. ಆಗ ಅರಳಿಮರ, ಬೇವಿನಮರದ ವೃಕ್ಷದೇವತೆಯ ದೂರದೃಷ್ಟಿಯನ್ನು ಮೆಚ್ಚಿಕೊಂಡಿತು.

ಸಮಸ್ಯೆ ಎದುರಾದಾಗ ಅದನ್ನು ಧೈರ್ಯದಿಂದ, ಶಕ್ತಿಯಿಂದ ಎದುರಿಸುವುದು ನಾಯಕನ ಲಕ್ಷಣ. ಆದರೆ ಸಮಸ್ಯೆ ಬರುವುದಕ್ಕಿಂತ ಮೊದಲೇ, ಅದು ಬಂದೀತು ಎಂದು ಯೋಚಿಸಿ, ಅದನ್ನು ಸರಿಯಾಗಿ ಗ್ರಹಿಸಿ, ಅದಕ್ಕೆ ಪರಿಹಾರೋಪಾಯವನ್ನು ಚಿಂತಿಸಿ ಸಿದ್ಧನಾಗುವ ವ್ಯಕ್ತಿಯನ್ನು ದಾರ್ಶನಿಕನೆನ್ನುತ್ತಾರೆ. ಸಾರ್ಥಕ ಜೀವನ ನಡೆಸುವವರು ನಾಯಕತ್ವದಿಂದ ದಾರ್ಶನಿಕತೆಯ ಕಡೆಗೆ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT