ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪಾಶ ಕತ್ತರಿಸಿದ ಕ್ಷಣ

Last Updated 24 ಜುಲೈ 2022, 19:30 IST
ಅಕ್ಷರ ಗಾತ್ರ

ಧನ್ಯತಮವಾ ಘಳಿಗೆ, ಪುಣ್ಯತಮ ವಾ ಘಳಿಗೆ |
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ||
ಉನ್ನತಿಯನಾತ್ಮವನು ತಡೆದಿಡುವ ಪಾಶಗಳು | ಛಿನ್ನವಾದಂದೆ ಸೊಗ – ಮಂಕುತಿಮ್ಮ || 678 ||

ಪದ-ಅರ್ಥ: ಧನ್ಯತಮವಾಘಳಿಗೆ= ಧನ್ಯತಮ+ಆ+ಘಳಿಗೆ, ಪರಿದಂದು=ಹರಿದಂದು, ಉನ್ನತಿಯಿನಾತ್ಮವನು=ಉನ್ನತಿಯಿಂ (ಉನ್ನತಿಯಿದ)+ಆತ್ಮವನು, ತಡೆದಿಡುವ=ತಡೆದು+ಇಡುವ, ಛಿನ್ನವಾದಂತೆ=ಛಿನ್ನವಾದ(ಕತ್ತರಿಸಿದ)+ಅಂದೆ
ವಾಚ್ಯಾರ್ಥ: ನಿನ್ನ ಮಮತೆಯ ನೂಲನ್ನು ವಿಧಿ ಹರಿದ ಕ್ಷಣವೆ ಧನ್ಯತಮ ಮತ್ತು ಪುಣ್ಯತಮ. ಆ ನೂಲು ನಿನ್ನ ಆತ್ಮವನ್ನು ಉನ್ನತಿಗೆ ಹೋಗದಂತೆ ತಡೆದಿಡುವ ಪಾಶ. ಅದು ಕತ್ತರಿಸಿದ ಕ್ಷಣವೆ ಸೊಗಸು.

ವಿವರಣೆ: ಈಗಿನ ಹಾವೇರಿ ಜಿಲ್ಲೆಗೆ ಸೇರಿದ ಗ್ರಾಮ ಕರ್ಜಗಿ. ವರದಾನದಿಯ ತೀರದಲ್ಲಿರುವ ಈ ಗ್ರಾಮದಲ್ಲಿ ಪ್ರತಿಮನೆಯಲ್ಲಿ ವೇದಾಂತಿಗಳು, ಪಂಡಿತರು, ಪ್ರವಚನಾಚಾರ್ಯರಿದ್ದರು. ಕರ್ಜಗಿಯ ಕರಣಿಕರ ಮನೆಯಲ್ಲಿ ಹುಟ್ಟಿದವರು ದಾಸಪ್ಪ. ವಂಶೀಕವಾಗಿ ಬಂದ ಕರಣಿಕ ವೃತ್ತಿ, ಬೇಕಾದಷ್ಟು ಹೊಲಮನೆಗಳಿಂದಾಗಿ ದಾಸಪ್ಪನಿಗೆ ಯಾವ ಕೊರತೆಯೂ ಇರಲಿಲ್ಲ. ಅವನಿಗೆ ಯಥೋಚಿತವಾದ ವಿದ್ಯಾಭ್ಯಾಸವಾಯಿತು. ಅದು ಯಾವ ಪ್ರಾರಬ್ಧವೋ ದಾಸಪ್ಪ ಯೌವನಾವಸ್ಥೆಗೆ ಬರುವುದರಲ್ಲಿ ಸ್ವೇಚ್ಛಾಚಾರಿಯಾದ, ವಿಲಾಸಿಯಾದ. ತಂದೆ ತಾಯಿಯರು ತೀರಿದ ಮೇಲಂತೂ ಅವನನ್ನು ಹಿಡಿಯುವವರು ಯಾರೂ ಇರಲಿಲ್ಲ. ದಾಸಪ್ಪ ವೇಶ್ಯಾಲೋಲುಪನಾದ. ಅವನ ಮದುವೆಯಾದರೂ ವ್ಯವಹಾರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.ಒಂದು ಬಾರಿ
ಜಗನ್ನಾಥದಾಸರು, ತಮ್ಮ ಶಿಷ್ಯರಾದ ಪ್ರಾಣೇಶ
ದಾಸರನ್ನು ಕರೆದುಕೊಂಡು ಕರ್ಜಗಿಗೆ ಬಂದರು. ನೇರವಾಗಿ ದಾಸಪ್ಪನ ಮನೆಗೆ ಹೋದರು. ದಾಸಪ್ಪನಿಗೆ ಅವರ ಪೂಜೆ, ಪುನಸ್ಕಾರಗಳಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಆದರೂ ಹೆಂಡತಿಯ ಒತ್ತಾಯಕ್ಕೆ ಮಣಿದು ಸಂಜೆಯ ಪೂಜೆ ನಡೆಯುವಾಗ ಮುಂದೆ ಕುಳಿತ.

ಜಗನ್ನಾಥದಾಸರು ತಮ್ಮ ಪ್ರವಚನದ ಪ್ರಾರಂಭಕ್ಕೆ ಮೊದಲು ಪ್ರಾಣೇಶ ದಾಸರಿಗೆ ಒಂದು ಕೀರ್ತನೆಯನ್ನು ಹಾಡಲು ಹೇಳಿದರು. ಗುರುಗಳಿಗೆ ನಮಿಸಿ ತಮ್ಮದೇ ಕೀರ್ತನೆಯನ್ನು ತಮ್ಮ ಅದ್ಭುತ ಕಂಠದಲ್ಲಿ ಹಾಡಿದರು. ಆ ಹಾಡು ಹೀಗಿತ್ತು.

ಆದದ್ದಾಯಿತು ಇನ್ನಾದರೂ ಒಳ್ಳೇ
ಹಾದಿ ಹಿಡಿಯೋ ಪ್ರಾಣಿ

ಈ ದುರ್ನಡತೆ ಹಿಂದ್ಹೋದರೆ ಇಹಪರದಿ
ಮೋದವೆಂದಿಗೂ ಕಾಣೆ ಪ್ರಾಣಿ || ಪ ||

ಈ ಹಾಡು ಕೇಳಿದಾಕ್ಷಣ ದಾಸಪ್ಪನಿಗೆ ಏನೋ ತಳಮಳವಾದಂತಾಯಿತು. ಮರುಕ್ಷಣವೇ ಎಲ್ಲ ತಳಮಳ ಕರಗಿ ನಿರಾಳವಾದಂತಾಯಿತು. ಎದ್ದು ಹೋಗಿ ದಾಸರ ಪಾದಗಳಿಗೆರಗಿ ದಾಸತ್ವ ಕೊಡುವಂತೆ ಬೇಡಿದ. ಅಂದಿನಿಂದ ಕರ್ಜಗಿ ದಾಸಪ್ಪ ಶ್ರೀದವಿಠಲ ಎಂಬ ದಾಸರಾಗಿ ಬದಲಾಗಿ ಹೋದರು.
ಕಗ್ಗದ ಧ್ವನಿ ಇದೇ. ಯಾವ ಕ್ಷಣದಲ್ಲಿ ಮಮತೆಯ, ಮೋಹದ ಹಗ್ಗಗಳು ಹರಿದು ಹೋಗುತ್ತವೆಯೋ, ಅದೇ ಅಮೃತ ಕ್ಷಣ, ಧನ್ಯತೆಯ ಕ್ಷಣ, ಪುಣ್ಯದ ಕ್ಷಣ. ಒಂದು ಸಲ ಮಮತೆಯ ನೂಲು ಕಡಿಯಿತೋ, ಬದುಕು ಉನ್ನತಿಯತ್ತ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT