ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಮ್ಮ ಕಷ್ಟ ನಮಗೆ ಮಾತ್ರ

Last Updated 20 ಸೆಪ್ಟೆಂಬರ್ 2022, 17:08 IST
ಅಕ್ಷರ ಗಾತ್ರ

ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ |

ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ||
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ - |
ನಿಳೆಗೆ ಹರಡುವುದೇಕೋ? – ಮಂಕುತಿಮ್ಮ || 719 ||

ಪದ-ಅರ್ಥ: ತಲೆಪಾಗಿನೊಳಕೊಳಕ=ತಲೆಪಾಗಿನ (ತಲೆಯಪೇಟದ)+ಒಳ+ಕೊಳಕ (ಹೊಲಸು, ಕೊಳೆ), ಪಂಚೆ ನಿರಿಯೊಳಹರಕ=ಪಂಚೆನಿರಿಯ (ಪಂಚೆಯ ನಿರಿಗೆಯ)+ಒಳ+ಹರಕ(ಹರಿದದ್ದು), ರಜಕ=ಅಗಸ, ಲೋಗರಿಂಗೆ=ಲೋಕದ ಜನರಿಗೆ, ಬಯ್ತಿಡದೆ=ಮುಚ್ಚಿಡದೆ, ನೀನಿಳೆಗೆ=ನೀನು+ಇಳೆಗೆ.
ವಾಚ್ಯಾರ್ಥ: ನಿನ್ನ ತಲೆಯ ಮೇಲಿನ ಪೇಟದೊಳಗಿದ್ದ ಕೊಳಕು, ಸುಕ್ಕುಗಳನ್ನು, ಪಂಚೆಯ ನಿರಿಗೆಯಲ್ಲಿದ್ದ ಹರಕನ್ನು ಅಗಸನಿಗಲ್ಲದೆ ಜಗತ್ತಿಗೆಲ್ಲ ಸಾರುತ್ತೀಯಾ? ನಿನ್ನ ಕಷ್ಟ, ಸಂಕಟಗಳನ್ನು ನಿನ್ನಲ್ಲೇ ಮುಚ್ಚಿಟ್ಟುಕೊಳ್ಳದೆ ಜಗತ್ತಿಗೆ ಏಕೆ ಹರಡುತ್ತೀ?
ವಿವರಣೆ: ಡಿ.ವಿ.ಜಿ ಯವರ ಹತ್ತಿರದ ಸಂಬಂಧಿಯೊಬ್ಬರ ಮನೆಯಲ್ಲಿ ಮದುವೆ. ಆ ಸಮಯದಲ್ಲೇ ಡಿ.ವಿ.ಜಿ ಯವರಿಗೆ ಬೇರೆಲ್ಲಿಗೋ
ಪ್ರವಾಸ ನಿಶ್ಚಿತವಾಗಿತ್ತು. ತಮ್ಮ ಧರ್ಮಪತ್ನಿಗೆ ಮದುವೆಗೆ ಹೋಗಲು ತಿಳಿಸಿದ್ದರು. ಮರಳಿ ಬಂದ ಮೇಲೆ ಆಕೆ ಮದುವೆಗೆ ಹೋಗಿಲ್ಲವೆಂದು ತಿಳಿದು ಅವರು ಯಾಕೆ ಹೋಗಲಿಲ್ಲ ಎಂದು ಆಕ್ಷೇಪಿಸಿದರು. ಆಕೆ “ಹೋಗಲಿ ಬಿಡಿ, ಆಗಲಿಲ್ಲ” ಎಂದರೂ ಇವರು
ಬಿಡದೆ ಮತ್ತೆ ಮತ್ತೆ ಕಾರಣ ಕೇಳಿದರು. ಆಗ ಆ ತಾಯಿ ಹೇಳಿದರು, “ನನಗೆ ಮನೆಯಲ್ಲಿ ಉಟ್ಟುಕೊಳ್ಳುವುದಕ್ಕೆ ಒಂದೆರಡು ಸೀರೆಗಳಿವೆ. ಮದುವೆಗೆ ಹೋಗಲು ಚೆನ್ನಾದ ಸೀರೆ ನನ್ನ ಬಳಿ ಇಲ್ಲ. ಹಾಗೆ ಸಾಧಾರಣ ಸೀರೆ ಉಟ್ಟುಕೊಂಡು ಹೋದರೆ
ಚೆನ್ನಾಗಿರುತ್ತದೆಯೇ? ತಮ್ಮ ಗೌರವಕ್ಕೆ ಚ್ಯುತಿಯಾಗಬಾರದೆಂದು ಹೋಗಲಿಲ್ಲ”. ಇದು ತುಂಬ ದೊಡ್ಡ ಮಾತು, ತಿಳುವಳಿಕೆಯ ಮಾತು. ನಮ್ಮ ಮನೆಯ ತೊಂದರೆ ನಮಗಿದೆ. ಅದನ್ನು ಊರೆಲ್ಲ ಸಾರಿ ಹೇಳುವ ಅವಶ್ಯಕತೆ ಇಲ್ಲ. ಹೇಳಿದರೆ ಏನಾದೀತು? ಜಗತ್ತಿನ ಜನ ನಿಮ್ಮ ತೊಂದರೆಯನ್ನು ನಿವಾರಿಸಿಯಾರೆ? ಬದಲಾಗಿ ಅವರ ಅನುಕಂಪೆಗೆ, ಕರುಣೆಗೆ ಗುರಿಯಾಗುವುದಿಲ್ಲವೆ? ನಮ್ಮ ಮನೆ ಕಷ್ಟ ನಮಗಿರಲಿ. ಅದನ್ನು ಎತ್ತಿ ಜನರಿಗೆ ತೋರಿಸುವುದು ಸರಿಯಲ್ಲ. ಕಗ್ಗ ಅದನ್ನು ಸುಂದರವಾಗಿ ಹೇಳುತ್ತದೆ. ನಾವು ತೊಟ್ಟುಕೊಳ್ಳುವ ಪೇಟದ ಒಳಭಾಗದಲ್ಲಿ ಬೆವರಿನ ಕೊಳೆ ಇದೆ, ಸುಕ್ಕಿದೆ. ನಮ್ಮ ಪಂಚೆ ಹಳೆಯದು. ಅದನ್ನೇ ಎಚ್ಚರದಿಂದ ತೊಟ್ಟುಕೊಳ್ಳುತ್ತೇವೆ. ಕೊಂಚ ಹರಿದ ಭಾಗವನ್ನು ನಿರಿಗೆಯಲ್ಲಿ ಅವಿತಿಡುತ್ತೇವೆ. ಆದಷ್ಟು ಮಟ್ಟಿಗೆ ನಮ್ಮ ದೈನ್ಯವನ್ನು, ಬಡತನವನ್ನು ಮುಚ್ಚಿಟ್ಟುಕೊಂಡು ನಗುಮುಖ ತೋರುತ್ತೇವೆ. ಬಟ್ಟೆಯನ್ನು ಶುದ್ಧಮಾಡುವಾಗ ಕಾಣುವ ಕೊಳಕನ್ನು ಜಗತ್ತಿಗೆ ತೋರಗೊಡುವುದಿಲ್ಲ. ಹಾಗೆಯೇ ನಮ್ಮ ಜೀವನದ ಜಂಜಾಟದ ದುಃಖ, ಸಂಕಟಗಳನ್ನು ನಾವೇ ನುಂಗಿಕೊಂಡು ಅನುಭವಿಸಿ ಪರಿಹಾರಕ್ಕೆ ಶ್ರಮಿಸಬೇಕು. ಅದನ್ನು ಜಗತ್ತಿಗೆ ಹರಡಿದರೆ ಏನು ಪ್ರಯೋಜನ? ಜನರಿಗೆ ಆಡಿಕೊಂಡು ನಗುವುದಕ್ಕೆ ವಸ್ತುವಾಗುತ್ತೇವೆ. ಅವರವರಿಗೆ ಅವರವರ ಕಷ್ಟಗಳು ಇದ್ದೇ ಇರುವಾಗ, ನಿನ್ನ ಕಷ್ಟಗಳನ್ನು ಯಾರು ಕೇಳುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT