ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಪರಿಪೂರ್ಣ ಆನಂದ

Published 22 ಮೇ 2023, 23:53 IST
Last Updated 22 ಮೇ 2023, 23:53 IST
ಅಕ್ಷರ ಗಾತ್ರ

ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |
ಸಾಂತ, ಲೋಕದ ಸೌಖ್ಯ; ಖಂಡಖAಡವದು ||
ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸರ‍್ದೊಡೇ-
ಕಾಂತ ಪೂರ್ಣಾನಂದ – ಮಂಕುತಿಮ್ಮ || 889 ||

ಪದ-ಅರ್ಥ: ಸಾಂತ =ಕೊನೆಯುಳ್ಳದ್ದು, ಸ್ವಾಂತಕೃಷಿಯಿಂ=ಸ್ವಂತ+ಕೃಷಿಯಿಂ(ಪ್ರಯತ್ನದಿಂದ), ಬ್ರಹ್ಮವೀಕ್ಷೆ=ಬ್ರಹ್ಮದರ್ಶನ, ಲಭಿಸಿರ್ದೊಡೇಕಾAತ=ಲಭಿಸಿ+ಇರ್ದೊಡೆ+ಏಕಾಂತ.
ವಾಚ್ಯಾರ್ಥ: ಬಾಹ್ಯಪ್ರಪಂಚದಿಂದ ಸಂಪೂರ್ಣ ಸುಖವನ್ನು ಪಡೆಯುವ ಆಸೆ ಒಂದು ಭ್ರಾಂತಿ. ಯಾಕೆಂದರೆ ಈ ಲೋಕದಲ್ಲಿ ದೊರೆಯುವ ಸೌಖ್ಯಕ್ಕೆ ಕೊನೆ ಇದೆ, ಮಿತಿ ಇದೆ. ಅದು ಏಕಪ್ರಕಾರವಾದದ್ದಲ್ಲ. ಸ್ವಂತ ಪ್ರಯತ್ನದಿಂದ ಬ್ರಹ್ಮದರ್ಶನ ಲಭಿಸಿದರೆ ಅದು ಪೂರ್ಣಾನಂದವನ್ನು ನೀಡುತ್ತದೆ.


ವಿವರಣೆ: ನಮ್ಮ ಒಂದೊಂದು ಇಂದ್ರಿಯ ಒಂದೊಂದು ಬಂಧಿಸುವ ಹಗ್ಗ. ಅವು ನಮ್ಮನ್ನು ಚೆನ್ನಾಗಿ ಬಿಗಿದು ಕಟ್ಟುತ್ತವೆ. ಆದರೆ ನಮಗೆ ಆ ಬಂಧನದಲ್ಲಿಯೇ ಸುಖ ಕಾಣುವ ಪ್ರಯತ್ನ. ಸುಖ ದೊರಕುವುದಿಲ್ಲವೆಂದು ತಿಳಿದೂ ಅದನ್ನು ಪಡೆಯುವುದಕ್ಕೆ ಒದ್ದಾಡುತ್ತೇವೆ. ಶಕುಂತಲೆಯನ್ನು ಕಂಡೊಡನೆ ದುಷ್ಯಂತನನ್ನು ಮನಸ್ಸು ಅವಳೆಡೆಗೆ ಸೆಳೆದುಕೊಂಡು ಹೋಯಿತು. ಮೇನಕೆಯನ್ನು ನೋಡಿದಾಕ್ಷಣ ವಿಶ್ವಾಮಿತ್ರರ ತಪಸ್ಸು ಕರಗಿತು. ಇದೇ ರೀತಿ, ನಾಲಿಗೆ, ಕಿವಿ, ಮೂಗು, ಚರ್ಮಗಳ ಸುಖಗಳಿಗಾಗಿ ಮನುಷ್ಯ ದಿಕ್ಕು ದಿಕ್ಕು ಅಲೆಯುತ್ತಾನೆ. ಅದು ಕುದುರೆಯ ಮುಖದ ಮುಂದೆ ಕಟ್ಟಿದ ಗಜ್ಜರಿ ಎಂಬುದು ಹೊಳೆಯುವುದಿಲ್ಲ. ಪಕ್ಕದ ಮನೆಯವರೊಡನೆ ಜಗಳಾಡುವುದರಿಂದ ಹಿಡಿದು ಮಹಾಯುದ್ಧಗಳು ಸುಖವನ್ನು ಪಡೆಯುವುದಕ್ಕಾಗಿ  ನಡೆದಿವೆ. ಕುರುಕ್ಷೇತ್ರ ಯುದ್ಧ ನಡೆದದ್ದೇಕೆ? ರಾಜ್ಯ ಪಡೆದರೆ ಸುಖ ಸಿಕ್ಕೀತು ಎಂಬ ಆಸೆಯಿಂದಲ್ಲವೆ? ಶತಶತಮಾನಗಳಿಂದ ಮನುಷ್ಯ ಕಂಡಿದ್ದಾನೆ, ಬಾಹ್ಯ ಪ್ರಪಂಚದಲ್ಲಿ ಯಾವ ಪ್ರಯತ್ನವೂ ಸಂಪೂರ್ಣ ಸುಖವನ್ನು ಕೊಟ್ಟಿಲ್ಲ. ಸುಖ ಬಂದರೂ ಕ್ಷಣಕಾಲದ್ದು. ಅದರ ಹಿಂದೆಯೇ ದುಃಖದ ತೆರೆ ಅಪ್ಪಳಿಸುತ್ತದೆ. ಆದ್ದರಿಂದ ದೊರಕಿದ ಸುಖ ಏಕಪ್ರಕಾರವಾದದ್ದಲ್ಲ, ಶಾಶ್ವತವಾದದ್ದಲ್ಲ. ಹಾಗಾದರೆ ಪೂರ್ಣವಾದ ಸುಖ ದೊರಕುವುದು ಸಾಧ್ಯವೇ ಇಲ್ಲವೆ? ಇದೆ ಎನ್ನುತ್ತದೆ ಈ ಕಗ್ಗ. ಅದಕ್ಕೆ ಸ್ವಂತಕೃಷಿಯಿಂದ ಬ್ರಹ್ಮದರ್ಶನವಾಗಬೇಕು.

ಬ್ರಹ್ಮದರ್ಶನವಾಗುವುದು ಸ್ವಂತ ಪ್ರಯತ್ನದಿಂದ. ಕಗ್ಗ, ಕೃಷಿಮಾಡಬೇಕು ಎಂದು ಹೇಳುತ್ತದೆ. ಕೃಷಿ ಅವಸರದ ಕಾರ್ಯವಲ್ಲ. ಅದಕ್ಕೆ ಏಕಮನಸ್ಸಿನ ಪ್ರಯತ್ನ ಬೇಕು, ತಾಳ್ಮೆ ಬೇಕು. ಇಂದು ಬೀಜ ನೆಟ್ಟು ಮರುದಿನ ಫಸಲು ಅಪೇಕ್ಷಿಸುವುದು ಸಾಧ್ಯವಿಲ್ಲ. ಅದರಂತೆಯೇ ಬ್ರಹ್ಮದರ್ಶನಕ್ಕೂ ಮನಸ್ಸಿನ
ಕೃಷಿಯಾಗಬೇಕು. ಇಂದ್ರಿಯಗಳ ಸೆಳೆತದಿಂದ ನಿಧಾನಕ್ಕೆ ಬಿಡಿಸಿಕೊಳ್ಳಬೇಕು, ಅಹಂಕಾರದ ಭಾರವನ್ನು ಇಳಿಸಬೇಕು. ಮನಸ್ಸನ್ನು ಹೊರಜಗತ್ತಿನ ಮೆರುಗಿನಿಂದ ಎಳೆದು ಒಳಗಡೆ, ಆಂತರ್ಯಕ್ಕೆ ತಿರುಗಿಸಬೇಕು. ಹಾಗೆ ಆದಾಗ ಪರಸತ್ವದ ದರ್ಶನವಾಗುತ್ತದೆ. ಅದು ವರ್ಣನಾತೀತವಾದ ಆನಂದ. ಸಂಪೂರ್ಣವಾದ ಆನಂದ. ಬರೀ ಸಂಪೂರ್ಣಮಾತ್ರವಲ್ಲ, ಶಾಶ್ವತವಾದದ್ದೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT