ಶನಿವಾರ, ಆಗಸ್ಟ್ 13, 2022
26 °C

ಬೆರಗಿನ ಬೆಳಕು: ದೈವಕೃಪೆಯಾದ ಬಾಂಧವ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬಂಧನವದೇನಲ್ಲ ಜೀವಜೀವಪ್ರೇಮ |
ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ||
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ |
ಬಾಂಧವ್ಯ ದೈವಕೃಪೆ – ಮಂಕುತಿಮ್ಮ || 429 ||

ಪದ-ಅರ್ಥ: ಬಂಧನವದೇನಲ್ಲ= ಬಂಧನವು+ ಅದೇನಲ್ಲ, ಜೀವವರೆ= ಜೀವ+ ಅರೆ (ಅರ್ಧ), ಬೆರೆತರಳೆ= ಬೆರೆತಾಗ, ದಂದುಗ= ಕಷ್ಟ, ಕೋಟಲೆ, ಅರೆಗೆಯ್ದು= ಅರ್ಧಮಾಡಿ, ಸಂತಸವನಿಮ್ಮಡಿಪ= ಸಂತಸವನು+ ಇಮ್ಮಡಿಪ (ಎರಡು ಪಟ್ಟಾಗಿಸುವ).

ವಾಚ್ಯಾರ್ಥ: ಜೀವ-ಜೀವಗಳ ಪ್ರೇಮ ಬಂಧನವಲ್ಲ. ಜೀವ ಒಂದೇ ಇದ್ದರೆ ಅದು ಕೇವಲ ಅರ್ಧಮಾತ್ರ. ಮತ್ತೊಂದರೊಡನೆ ಬೆರೆತಾಗ ಅದಕ್ಕೆ ಪೂರ್ಣತ್ವ. ನಮ್ಮ ಆತಂಕಗಳನ್ನು ಕಡಿಮೆಮಾಡಿ, ಸಂತೋಷವನ್ನು ಇಮ್ಮಡಿಗೊಳಿಸುವ ಬಾಂಧವ್ಯ ನಿಜವಾಗಿಯೂ ದೈವಕೃಪೆ.

ವಿವರಣೆ: ಜೀವಜೀವಗಳ ನಡುವಿನ ಬಾಂಧವ್ಯ ಬಂಧನವಲ್ಲ, ಅದೊಂದು ಸೇತುವೆ. ಒಂದು ಹೃದಯವನ್ನು ಮತ್ತೊಂದಕ್ಕೆ ಬೆಸೆಯುವ ಸಂಪರ್ಕಸೇತು. ಎಲ್ಲಿಯ ಕಿಷ್ಕಿಂಧೆಯ ಆಂಜನೇಯ ಎಲ್ಲಿಯ ಅಯೋಧ್ಯೆಯ ರಾಮ! ಅವರಿಬ್ಬರ ಬಾಂಧವ್ಯ ಲೋಕಕ್ಕೆ ಮಾದರಿಯಾಯಿತು, ರಾಮಾಯಣ ಸುಂದರವಾಯಿತು. ರಾಮ ಆಂಜನೇಯರ ಸಂಬಂಧ, ಬಂಧನವಾಗಲಿಲ್ಲ, ಅನೇಕರನ್ನು ಬಂಧಮುಕ್ತರನ್ನಾಗಿಸಿತು. ಎಲ್ಲಿ ಒಲವಿದೆಯೋ ಅಲ್ಲಿ ಬಾಂಧವ್ಯ ಸುಂದರ, ಸರಸ. ಅದಕ್ಕೆ ಕಾಲ, ದಿಕ್ಕು, ಅಂತಸ್ತುಗಳ ಪರಿವೆಯಿಲ್ಲ. ಬಡತನ ಜೀವಜೀವಗಳ ಬಾಂಧವ್ಯಕ್ಕೆ ಅಡ್ಡಿ ಬರಲಾರದು. ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು’ ದ.ರಾ.ಬೇಂದ್ರೆಯವರ ಕವನದ ಈ ನಾಲ್ಕು ಸಾಲುಗಳು ಎರಡು ಜೀವಗಳು ಒಲವಿನಿಂದ ಸೇರಿದಾಗ ಆಗುವ ಸಾರ್ಥಕತೆಯನ್ನು, ಧನ್ಯತೆಯನ್ನು ತೋರುತ್ತವೆ. ಅವರ ಬಳಿ ಹಣವಿಲ್ಲ, ಆದರೆ ಒಲವಿದೆ. ಅದೇ ಬದುಕಾಗಿದೆ. ಎಲ್ಲದಕ್ಕೂ ಅವರು ಬಳಸಿಕೊಂಡಿದ್ದು ಆ ಒಲವನ್ನೇ. ಆದ್ದರಿಂದ ಒಲವಿನ ಬಂಧ, ಬಂಧನವಾಗದೆ ಮುಕ್ತಿಯಾಯಿತು.

ನಿರ್ಗುಣ, ನಿರಾಕಾರ, ಅನಂತವಾದ ಭಗವಂತ ಒಬ್ಬನೇ ಇದ್ದನಂತೆ. ಆನಂತರ ಒಬ್ಬನೇ ಇದ್ದರೆ ಏನು ಸೊಗಸು ಎಂದುಕೊಂಡು ಇಬ್ಬರಾದ. ಪ್ರಕೃತಿ-ಪುರುಷರ ಮೂಲಕ ಇಡೀ ಪ್ರಪಂಚದ ಜಾಲವನ್ನು ಹೆಣೆದ. ಅದಕ್ಕೆ ಕಗ್ಗ ಹೇಳುತ್ತದೆ, ಒಬ್ಬರೇ ಇದ್ದರೆ ಅದು ಅರೆಬಾಳು. ಅದೊಂದು ದೂರದ ಮಾನವ ಸಂಪರ್ಕವಿರದ ದ್ವೀಪವಿದ್ದಂತೆ. ಅಲ್ಲಿಯ ಭೋಗ, ಭಾಗ್ಯ, ಸೌಂದರ್ಯಗಳು ಬೇರೆಯವರಿಗೆ ಹಂಚದೆ ಉಳಿಯುತ್ತವೆ. ಮತ್ತೊಂದು ತೀರದಿಂದ ಅದಕ್ಕೊಂದು ಸೇತುವೆ ಕಟ್ಟಿದರೆ ಅಲ್ಲಿಯ ಸೌಂದರ್ಯ ಇಮ್ಮಡಿಯಾಗುತ್ತದೆ. ಅಂತೆಯೇ ಒಂದು ಜೀವಕ್ಕೆ ಸಾಂತ್ವನ, ಸಹಕಾರ ದೊರಕುವುದು ಮತ್ತೊಂದು ಜೀವದೊಂದಿಗೆ ಬೆರೆತಾಗಲೇ. ಹೀಗೆ ನಮ್ಮ ಆತಂಕ, ಸಂಕಟಗಳನ್ನು ಕಡಿಮೆ ಮಾಡುವ, ಸಂತೋಷವನ್ನು ಅನೇಕ ಮಡಿ ಹೆಚ್ಚಿಸುವ ಈ ಜೀವ ಜೀವಗಳ ಬಾಂಧವ್ಯ ಒಂದು ದೈವಕೃಪೆಯೇ ಸರಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.