ಭಾನುವಾರ, ಏಪ್ರಿಲ್ 2, 2023
33 °C

ಬೆರಗಿನ ಬೆಳಕು | ಕಾಲದ ನಿಯಮ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ |
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ ||
ತಿಳಿವುವೊಳ್ತನಮುಂ ವಿರಕ್ತಿಯುಂ ಮುಕ್ತಿಯುಂ |
ಗಳಿಗೆ ಸರಿಸೇರ್ದಂದು – ಮಂಕುತಿಮ್ಮ || 780 ||

ಪದ-ಅರ್ಥ: ಕಾಲನಿಯತಿ=ನಿಯತವಾದ ಕಾಲ, ತಿಳಿವುಮೊಳ್ತನಮುಂ=ತಿಳಿವು(ತಿಳುವಳಿಕೆ)+ ಒಳ್ತನಮುಂ(ಒಳ್ಳೆಯತನ),
ಸರಿದೇರ್ದಂದು=ಸರಿ+ಸೇರಿದ+ಅಂದು.

ವಾಚ್ಯಾರ್ಥ: ಮಳೆಗೆ, ಬೆಳೆಗೆ, ಫಲಕೆ ಒಂದೊಂದು ಕಾಲವಿರುವಂತೆ, ಜೀವವೃಕ್ಷವನ್ನು ಬೆಳೆಯಿಸುವುದು ಕಾಲದ ನಿಯಮ. ತಿಳಿವು, ಒಳ್ಳೆಯತನ, ವಿರಕ್ತಿ, ಮುಕ್ತಿಗಳು ಕೂಡ ಕಾಲಕ್ಕನುಗುಣವಾಗಿಯೇ ಬರುವಂಥವುಗಳು.

ವಿವರಣೆ: ಪ್ರಕೃತಿಯಲ್ಲಿ ಪ್ರತಿಯೊಂದು ಕಾರ್ಯಕ್ಕೂ ಒಂದುನಿಗದಿಯಾದ ಸಮಯ ಬೇಕಾಗುತ್ತದೆ. ಮಳೆ ಸರಿಯಾದಕಾಲದಲ್ಲಿ ಸುರಿದರೆ ಸುಭಿಕ್ಷ, ಕಾಲತಪ್ಪಿ ಬಂದರೆ ಅಕಾಲದ ಅನಾಹುತ.ಬೀಜ ಹಾಕಿದ ಮರುದಿನವೇ ಬೆಳೆಯ ರಾಶಿ ಮಾಡಲಾಗುವುದಿಲ್ಲ.ಅದರಲ್ಲೂ ಪ್ರತಿಯೊಂದು ಬೆಳೆಗೂ ಅದರದೇ ಆದಬೆಳವಣಿಗೆಯ ಕಾಲವಿದೆ. ಅವರೆಕಾಳೇನೋ ಒಂದು ತಿಂಗಳಲ್ಲಿ ಕೈಗೆ ಬಂದುಬಿಡಬಹುದು. ಆದರೆ ತೆಂಗಿನ ಬೀಜ ಫಲಕೊಡಲು ಕನಿಷ್ಠ ಆರು, ಏಳು ವರ್ಷಗಳು ಬೇಕು. ಹೀಗೆ ಮಳೆಗೆ, ಬೆಳೆಗೆ, ಫಲಕ್ಕೆ ಒಂದೊAದು ಕಾಲವಿದೆ. ಆ ಕಾಲದ ನಿಯತಿಯಂತೆಯೇ ನಡೆಯುವುದು. ಅದನ್ನು ಅವಸರಿಸಲಾಗದು. ಆದರೆ ನಮ್ಮ ಇಂದಿನ ಪ್ರಪಂಚ ತುಂಬ ಆತುರದ್ದು. ಅದನ್ನು ಫಾಸ್ಟ್ಫುಡ್ ಕಾಲ ಎನ್ನುತ್ತೇವೆ. ಎಲ್ಲವೂ ಮನೆನೆದ ಕೂಡಲೇ ಆಗಿಬಿಡಬೇಕು. ಎಲ್ಲವನ್ನು ಸರಿಯಾಗಿ ವಿಚಾರಿಸಿಕೊಂಡು ಹೋಗಲು ತಾಳ್ಮೆ ಇಲ್ಲ. ಬದಲಾವಣೆ ನಮ್ಮ ಉದ್ದೇಶವಾದರೂ ಅದನ್ನು ಕೇವಲ ಆತುರದಿಂದ ಸಾಧಿಸತಕ್ಕದ್ದಲ್ಲ. ನಮ್ಮ ಬದುಕು ಎಂಬ ವೃಕ್ಷ ಕೂಡ ಅದಕ್ಕೆ ನಿಯಮವಾದ ವೇಗದಲ್ಲೇ ಬೆಳೆಯತಕ್ಕದ್ದು. ಯಾರನ್ನೂ ಬೇಗನೆ
ಮುದುಕರನ್ನಾಗಿ ಮಾಡುವುದು ಅಸಾಧ್ಯ. ಬಾಲ್ಯ, ಯೌವನ, ವೃದ್ಧಾಪ್ಯಗಳೆಲ್ಲ ತಮತಮಗೆ ಗೊತ್ತಾದ ಕಾಲದಲ್ಲೇ ಬಂದು ಹೋಗುವವು. ಅವುಗಳನ್ನು ತಡೆಯುವುದಾಗಲೀ, ಅವಸರಿಸುವುದಾಗಲೀ ನಿಸರ್ಗಕ್ಕೆ ವಿರೋಧವಾದದ್ದು. ಇದೇ ರೀತಿ ಮನುಷ್ಯನಿಗೆ ತಿಳುವಳಿಕೆ ಬರಲು ಕೂಡ ಸರಿಯಾದ ಕಾಲ ಬೇಕು. ಬದುಕಿನಲ್ಲಿ ಅನುಭವಗಳು ಬಂದು, ತಲೆಗೆ ಒಂದೆರಡು ಬಾರಿ ಪೆಟ್ಟು ಬಿದ್ದಾಗ ಯಾವುದು ಸರಿ, ಯಾವುದು ತಪ್ಪು ಎಂಬುದರ ತಿಳುವಳಿಕೆ ಬರುತ್ತದೆ.

ಹಾಗೆಯೇ ಒಳ್ಳೆಯತನ ಬರುವುದಕ್ಕೂ ಸಮಯ ಬೇಕು. ವಿರಕ್ತಿಯಂತೂ ಸುಲಭವೇ? ಅಕ್ಕಮಹಾದೇವಿ ಹೇಳುತ್ತಾಳೆ, ಅಯ್ಯಾ, ವಿರಕ್ತ ವಿರಕ್ತರೆಂದೇನೋ ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೋ ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು ಅದು ಪಕ್ವವಾಗುವುದಕ್ಕೆ ಹದವಾದ ಮನಸ್ಸು ಬೇಕು. ಇನ್ನು ಮುಕ್ತಿಯಂತೂ ಪರಮಪಕ್ವತೆಯ ಲಕ್ಷಣ. ಹೀಗೆ ಪ್ರತಿಯೊಂದಕ್ಕೂ ನಿಯತವಾದ ಕಾಲವಿದೆ. ಅದನ್ನು ಅವಸರಿಸುವುದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು