ಬೆರಗಿನ ಬೆಳಕು: ಮನವೆಂಬ ಕುದುರೆ

ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ |
ಹಾರಾಟವದರದಾ ವೇಧೆಗಳ ನಡುವೆ ||
ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ |
ಸಾರುವುದು ನೈಜದಿಂ – ಮಂಕುತಿಮ್ಮ || 815 ||
ಪದ-ಅರ್ಥ: ಪೌರುಷಾಶ್ವಕ್ಕಾಶೆ=ಪೌರುಷ+ಅಶ್ವಕ್ಕೆ+ಆಶೆ(ಆಸೆ), ಛಾಟಿ=ಚಾವಟಿ, ಹಾರಾಟವದರದಾ=ಹಾರಾಟ+ಅದರದು+ಆ, ವೇಧೆಗಳ=ನೋವುಗಳ, ಧೀರನೇರಿರೆ=ಧೀರನು+ಏರಿರೆ, ಸಾರುವುದು=ನಡೆಯುವುದು, ನೈಜದಿಂ=ಸಹಜವಾಗಿ
ವಾಚ್ಯಾರ್ಥ: ಪೌರುಷವೆಂಬ ಕುದುರೆಗೆ ಆಸೆಯೇ ಚಾವಟಿ ಮತ್ತು ಭಯವೇ ಕಡಿವಾಣ. ನೋವು, ಕಷ್ಟಗಳ ನಡುವೆಯೇ ಅದರ ಹಾರಾಟ. ಧೀರನಾದವನು ಆ ಕುದುರೆಯನ್ನೇರಿದರೆ ಚಾವಟಿಯ ಹೊಡೆತ, ಕಡಿವಾಣದ ಬಿಗಿ ಇಲ್ಲದೆಯೇ ಅದು ಸಹಜವಾಗಿ ಸಾಗುತ್ತದೆ
ವಿವರಣೆ: ಈ ಕಗ್ಗದಲ್ಲಿ ಮತ್ತೊಂದು ಸುಂದರವಾದ ಆದರೆ ಮಾರ್ಮಿಕವಾದ ಚಿತ್ರಣವಿದೆ. ಅಲ್ಲೊಂದು ಶಕ್ತಿಶಾಲಿಯಾದ ಕುದುರೆ ಇದೆ. ಅದು ಬಿಟ್ಟರೆ ಹಾರಿ ಹಾರಿ ಹೋಗುತ್ತದೆ. ಅದನ್ನು ಚಾಟಿಯಿಂದ ಹೊಡೆದರೆ ಮತ್ತಷ್ಟು ವೇಗವಾಗಿ, ಚಿಮ್ಮಿ ಓಡುತ್ತದೆ.
ಓಡಲು ಚಾವಟಿ ಪ್ರೇರಣೆ. ಹೆಚ್ಚು ವೇಗವಾಗಿ ಓಡಿದರೆ ಸವಾರ ಕಡಿವಾಣವನ್ನು ಹಾಕುತ್ತಾನೆ. ಆಗ ಬಾಯಿಗೆ ಹಾಕಿದ ಲೋಹದ ಪಟ್ಟಿ ಹಿಂದೆ ಎಳೆಯುತ್ತದೆ. ಬಾಯಿಗೆ ವಿಪರೀತ ನೋವಾಗಿ, ಕುದುರೆ ವೇಗವನ್ನು ಕಡಿಮೆಮಾಡುತ್ತದೆ. ಓಡಲು ಚಾಟಿ ಏಟು, ವೇಗ ಕಡಿಮೆ ಮಾಡಲು ಕಡಿವಾಣ. ಇವೆರಡೂ ನೋವನ್ನೇ ಕೊಡುವಂಥವುಗಳು. ಒಂದು ಬೆನ್ನಿಗೆ ಮತ್ತೊಂದು ಬಾಯಿಗೆ.
ಈ ಕುದುರೆಯ ಸ್ಥಿತಿ ಮನುಷ್ಯರಿಗೆ ಸರಿಯಾಗಿ ಹೊಂದುತ್ತದೆ. ಮನುಷ್ಯ ಬದುಕಿರುವುದು ಈ ಮೆರಗಿನ ಜಗತ್ತಿನಲ್ಲಿ. ಇಲ್ಲಿ ಏನೇನೋ ಆಕರ್ಷಣೆಗಳು. ಅವು ಸಂಬಂಧಗಳಾಗಿರಬಹುದು, ಹಣ, ಅಧಿಕಾರ, ಜನಮನ್ನಣೆ ಅಥವಾ ವಸ್ತುಗಳಾಗಿರಬಹುದು. ಪ್ರತಿಯೊಂದೂ ಮನಸ್ಸನ್ನು ಸೆಳೆದು, ಅತ್ತ ಕಡೆಗೇ ಹೋಗುವಂತೆ ಪ್ರೇರೇಪಿಸುತ್ತವೆ. ಈ ಆಸೆಗಳೇ ಚಾವಟಿಯ ಏಟುಗಳು. ಒಂದಾದ ನಂತರ ಒಂದರಂತೆ ಬೀಳುತ್ತಲೇ ಇರುತ್ತವೆ. ದೊರಕದೆ ಹೋದಾಗನೋವನ್ನುಂಟು ಮಾಡುತ್ತವೆ. ಹೀಗೆ ಆಸೆಗಳ ಕಡೆಗೆ ಮುನ್ನುಗ್ಗುವಾಗ ಅಡೆತಡೆಗಳು ಬರುತ್ತವೆ. ಅವು ಹಣಕಾಸಿನ ಕೊರತೆ, ಜೊತೆಗಾರರ ಅಸಹಕಾರ, ಸ್ವಸಾಮರ್ಥ್ಯದಲ್ಲಿ ಅಪನಂಬಿಕೆ,
ಬದಲಾದ ರಾಜಕೀಯ ವ್ಯವಸ್ಥೆ ಯಾವುದಾದರೂ ಆಗಬಹುದು. ಈ ಅಡೆತಡೆಗಳು ಕಡಿವಾಣಗಳಿದ್ದಂತೆ. ಮುನ್ನುಗ್ಗುವಾಗ ಹಿಡಿದಳೆದು ನಿಲ್ಲಿಸುತ್ತವೆ. ಆಗ ಮನಸ್ಸಿಗೆ ತುಂಬ ನೋವಾಗುತ್ತದೆ. ಹೀಗೆ ಮನಸ್ಸೆಂಬ ಕುದುರೆಯ ಹಾರಾಟವೆಲ್ಲ ಈ ನೋವುಗಳ ನಡುವೆಯೇ. ಆದರೆ ಸಮರ್ಥನಾದ, ಧೀರನಾದ ಸವಾರ ಕುದುರೆಯನ್ನೇರಿದರೆ ಅವನು ಅದನ್ನು ತನ್ನ ಹಿಡಿತಕ್ಕೆ ತಂದುಕೊಂಡು, ಅತಿಯಾಗಿ ಓಡದೆ, ತುಂಬ ನಿಧಾನವಾಗಿ ಸಾಗದೆ, ಸರಿಯಾಗಿ ಗುರಿಯೆಡೆಗೆ ನಡೆಯುವಂತೆ ನೋಡುತ್ತಾನೆ.
ಅಂತೆಯೇ ಬುದ್ಧಿವಂತನಾದ ಮನುಷ್ಯ ಮನಸ್ಸನ್ನು ಅತಿಯಾಸೆಗೆ ಹೋಗದಂತೆ ನಿಗ್ರಹಿಸಿ, ಕಾರ್ಯದಲ್ಲಿ ನಿರಾಸೆಯಿಂದ ವಿಮುಖನಾಗದಂತೆ ಪ್ರಚೋದಿಸಿ, ಬದುಕನ್ನು ಸರಾಗವಾಗಿ ನಡೆಸಿ ಬದುಕಿನ ಸಂತೋಷವನ್ನು ಆನಂದಿಸುತ್ತಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.