ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ನಾಮರೂಪರಹಿತ ವಸ್ತು

Published 6 ಜೂನ್ 2023, 0:15 IST
Last Updated 6 ಜೂನ್ 2023, 0:15 IST
ಅಕ್ಷರ ಗಾತ್ರ

ಜಗದೀ ಜಗತ್ಪವನು, ಮಾಯಾವಿಚಿತ್ರವನು |
ಜಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||
ಮಿಗುವುದೇಂ ? ರೂಪಾಖ್ಯೆಯೊಂದುಮಿಲ್ಲದ ವಸ್ತು |
ಹೊಗಿಸಾ ಕಡೆಗೆ ಮತಿಯ – ಮಂಕುತಿಮ್ಮ || 899 ||

ಪದ-ಅರ್ಥ: ಜಗದೀ=ಜಗದ+ಈ, ಜಗತ್ಪವನು=ಜಗತ್ತಿನ ಸ್ವಭಾವವನ್ನು, ಜಗೆದಾಚೆ=ಒಗೆದು+ಆಚೆ,
ಬಿಸುಡೆಲ್ಲ=ಬಿಸುಡು+ಎಲ್ಲ, ಕರಣವೇದ್ಯ=ಇಂದ್ರಿಯಗಳಿಗೆ ಗೋಚರವಾದ, ಮಿಗುವುದೇಂ=ಉಳಿಯುವುದೇನು?
ರೂಪಾಖ್ಯೆಯೊಂದುಮಿಲ್ಲದ=ರೂಪ+ಆಖ್ಯೆ(ನಾಮ)+ಒಂದು+ಇಲ್ಲ, ಹೊಗಿಸಾ=ಹೊಗಿಸು+ಆ, ಮತಿಯ=ಬುದ್ಧಿಯನ್ನು

ವಾಚ್ಯಾರ್ಥ: ಜಗತ್ತಿನ ಸ್ವಭಾವವಾದ ವಿಚಿತ್ರ ಮಾಯೆನ್ನು ಆಚೆ ಕಡೆಗೆ ಒಗೆದು ಬಿಡು, ಇಂದ್ರಿಯಗಳಿಗೆ ಗೋಚರವಾಗುವ ಎಲ್ಲವನ್ನು ಬಿಸಾಡಿ ಬಿಡು. ಉಳಿದದ್ದು ಏನು? ಅದು ರೂಪ, ನಾಮಗಳಿಲ್ಲದ ಬ್ರಹ್ಮವಸ್ತು. ನಿನ್ನ ಬುದ್ಧಿಯನ್ನು ಆ ಕಡೆಗೆ ತಿರುಗಿಸು.

ವಿವರಣೆ: ಪ್ರತಿಯೊಬ್ಬ ವ್ಯಕ್ತಿಗೆ ಒಂದು ವ್ಯಕ್ತಿತ್ವವಿದೆ. ಯಾವ ವಿಶೇಷಗುಣದಿಂದ ಆ ವ್ಯಕ್ತಿಯನ್ನು ಗುರುತಿಸಬಹುದೋ, ಅದು ಅವನ ವ್ಯಕ್ತಿತ್ವ. ಹರಿಶ್ಚಂದ್ರ ಎಂದೊಡನೆ ಸತ್ಯ ಎಂಬ ಗುಣ ಹೊಳೆಯುತ್ತದೆ. ಹಿಟ್ಲರ್ ಎಂದಾಗ ಕ್ರೌರ್ಯ, ಬುದ್ಧ ಎಂದಾಗ ಶಾಂತಿ, ಅಹಿಂಸೆ, ಮಹಾವೀರ ಎಂದಾಗ ಅಪರಿಗ್ರಹ, ಹೀಗೆ ಒಂದು ವಿಶೇಷಗುಣದಿಂದ ವ್ಯಕ್ತಿಯನ್ನು ಗುರುತಿಸಲಾಗುತ್ತದೆ. ಅದರಂತೆಯೇ, ಈ ಜಗತ್ತಿಗೂ ಅದರದೇ ಆದ ಒಂದು ವ್ಯಕ್ತಿತ್ವವಿದೆ. ಯಾವ ಗುಣ ಜಗತ್ತನ್ನು ಜಗತ್ತಾಗಿಸಿದೆಯೋ ಅದೇ ಅದರ ಸ್ವಭಾವ. ಅದು ಅದರ ಮೆರಗು, ವೈಭವ. ಅದು ಯಾರನ್ನಾದರೂ ಮರುಳುಮಾಡುವಂಥದ್ದು. ಆದರೆ ಅದು ಒಂದು ಮಾಯೆ. ಇದ್ದಂತೆ ತೋರಿದರೂ ಶಾಶ್ವತವಾದದ್ದಲ್ಲ. ಅದೇ ಅದರ ವಿಚಿತ್ರ. ಕಗ್ಗ ಹೇಳುತ್ತದೆ, ಜಗತ್ತಿನ ವಿಶೇಷವಾದ ಮೆರುಗನ್ನು, ವೈಭವವನ್ನು ಮತ್ತು ಅದರ ಮಾಯೆಯೆಂಬ ವಿಚಿತ್ರವನ್ನು ತೆಗೆದು ಹಾಕು. ನಮಗೆ ಪ್ರಪಂಚದ ಚಮತ್ಕಾರ ತಿಳಿಯುವುದೇ ನಮ್ಮ ಇಂದ್ರಿಯಗಳಿಂದ. ಈ ಇಂದ್ರಿಯಗಳಿಂದ ದೊರಕುವ ಎಲ್ಲ ವಿಷಯಗಳನ್ನು ತೆಗೆದು ಹಾಕಿದರೆ ಏನು ಉಳಿಯುತ್ತದೆ? ಕಗ್ಗ ತಿಳಿಸುತ್ತದೆ, ಇಂದ್ರಿಯಾನುಭವಗಳಿಂದ ಹೊರಗಾದಾಗ ಉಳಿಯುವುದು ಒಂದೇ ವಸ್ತು. ಅದಕ್ಕೆ ಆಕಾರವಿಲ್ಲ, ಹೆಸರಿಲ್ಲ. ಅದು ಎಲ್ಲ ಅನುಭವಗಳಿಗೆ ಅತೀತವಾದದ್ದು. ಅದು ಬ್ರಹ್ಮವಸ್ತು, ಪರತತ್ವ. ಆ ಪರಸತ್ವದ ಕಡೆಗೆ ನಮ್ಮ ಬುದ್ಧಿ ಹೋಗಬೇಕು. ಪಾತ್ರೆಯಲ್ಲಿಯ ಹಾಲು ಬ್ರಹ್ಮವಸ್ತು, ಮೇಲಿನ ನೊರೆ ಪ್ರಪಂಚವಿದ್ದಂತೆ. ನೊರೆಗೆ ಕಾರಣ ಹಾಲು. ಅಂತೆಯೇ ಮೆರುಗಿನ ಪ್ರಪಂಚಕ್ಕೆ ಮೂಲ ನೆಲೆ ಪರಸತ್ವ. ನಮ್ಮ ಗುರಿ ಮೂಲವನ್ನು ತಲುಪುವುದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT