ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸದಾಕಾಲದ ಸಿದ್ಧತೆ

Last Updated 21 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬುದ್ಧಿಮಾತಿದು ನಿನಗೆ: ಸಿದ್ಧನಿರು ಸಕಲಕ್ಕಮ್ |

ಎದ್ದುಕುಣಿಯಲಿ ಕರ್ಮ, ದೈವ ನಿದ್ರಿಸಲಿ ||
ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ |
ಸಿದ್ಧನಾಗೆಲ್ಲಕಂ – ಮಂಕುತಿಮ್ಮ || 783 ||

ಪದ-ಅರ್ಥ: ಸಕಲಕ್ಕಮ್=ಎಲ್ಲದಕ್ಕೂ, ಅದ್ಭುತಗಳರಿದಲ್ಲ=ಅದ್ಭುತಗಳು+ಅರಿದು+ಅಲ್ಲ(ಅಸಾಧ್ಯವಲ್ಲ), ಭವ್ಯಕ್ಕೆ=ಶುಭಕ್ಕೆ, ಮಂಗಳಕ್ಕೆ, ಹದ್ದಿಲ್ಲ=ಮಿತಿಯಿಲ್ಲ, ಸಿದ್ಧನಾಗೆಲ್ಲಕಂ=ಸಿದ್ಧನಾಗು+ಎಲ್ಲಕ್ಕೂ(ಎಲ್ಲದಕ್ಕೂ)

ವಾಚ್ಯಾರ್ಥ: ಇದೊಂದು ಬುದ್ಧಿಮಾತು ನಿನಗೆ. ಎಲ್ಲದಕ್ಕೂ ಸಿದ್ಧನಿರು. ಕರ್ಮ ಎದ್ದು ಕುಣಿಯಲಿ, ದೈವ ನಿದ್ರಿಸಲಿ. ಯಾವ ಅದ್ಭುತವೂ ಅಸಾಧ್ಯವಾದದ್ದಲ್ಲ ಮತ್ತು ಶುಭವಾಗುವುದಕ್ಕೆ ಮಿತಿ ಇಲ್ಲ. ಎಲ್ಲದಕ್ಕೂ ಸಿದ್ಧನಾಗು.

ವಿವರಣೆ: ಸೈನ್ಯದಲ್ಲಿ ಒಂದು ಮಾತಿದೆ Preparedness.. ಹಾಗೆಂದರೆ ಸದಾಕಾಲದಲ್ಲಿ ಸನ್ನದ್ಧರಾಗಿರುವುದು. ಯುದ್ಧ ನಾಳೆಯೇ ನಡೆದರೆ ಕೂಡ ನಾವು ಸಂಪೂರ್ಣ ತಯಾರಾಗಿರಬೇಕು. ಒಬ್ಬ ಸೈನಿಕನ ಇಡೀ ಸೇವೆಯಲ್ಲಿ ಒಂದೂ ಯುದ್ಧ ನಡೆಯದೇ ಹೋಗಬಹುದು. ಆದರೆ ಪ್ರತಿಕ್ಷಣ ಯುದ್ಧ ಸನ್ನದ್ಧತೆ ಇದ್ದರೆ ಮಾತ್ರ ದೇಶ ಸುರಕ್ಷಿತ. ಈ ಮಾತು ಮನುಷ್ಯನ ಜೀವನಕ್ಕೂ ಅನ್ವಯ. ಅವನ ಇಡೀ ಜೀವನ ಸುಸೂತ್ರವಾಗಿಯೇ ಕಳೆದು ಹೋಗಬಹುದು. ಆದರೆ ಬದುಕಿನ ಯಾವ ತಿರುವಿನಲ್ಲಿ ಆಪತ್ತು ಬಂದೀತೋ ಎಂಬುದನ್ನು ಹೇಳುವುದು ಕಷ್ಟ. ಬದುಕೂ ಒಂದು ಯುದ್ಧವೇ. ಒಮ್ಮೆ ಹಿಂದೊಮ್ಮೆ ಎಂದೋ ಮಾಡಿದ ತಪ್ಪಿಗೋ, ಅಥವಾ ಮತ್ತೊಬ್ಬರ ತಪ್ಪಿಗೋ ವಿಧಿ ನಮ್ಮನ್ನು ಎತ್ತಿ ನೆಲಕ್ಕೆ ಕೆಡವಿ ಅಪ್ಪಳಿಸುತ್ತದೆ.

ಆಗ ದಿಕ್ಕು ತೋರದಂತಾಗುತ್ತದೆ. ಮನಸ್ಸನ್ನು ಮೊದಲೇ ಸಿದ್ಧಮಾಡಿಕೊಂಡಿದ್ದರೆ ಆಘಾತ ಪ್ರಮಾಣ ಕಡಿಮೆಯಾಗುತ್ತದೆ. ರಾಷ್ಟ್ರೀಯ ತಂಡದಲ್ಲಿ ವಾಲಿಬಾಲ್ ಆಡಬೇಕೆಂದಿದ್ದ ಅರುಣಿಮಾ ಸಿನ್ಹಾಳ ಕಾಲು ತುಂಡರಿಸಿದಾಗ ಬದುಕು ಕುಸಿದು ಬಿದ್ದಿತ್ತು. ಆರು ವರ್ಷದ ವಿಲ್ಮಾ ರುಡಾಲ್ಪ್ಳಿಗೆ ಎರಡೂ ಕಾಲು ಪೋಲಿಯೋ ರೋಗಕ್ಕೆ ತುತ್ತಾದಾಗ ಜೀವನ ಶೂನ್ಯವೆನಿಸಿತ್ತು. ಆದರೆ ಅವರಿಬ್ಬರೂ ಮನಸ್ಸನ್ನು ಹುರಿಮಾಡಿಕೊಂಡರು. ಮಲಗಿದ್ದ ದೈವವನ್ನು ಎಬ್ಬಿಸಿದರು.

ತಮ್ಮ ಕರ್ಮಫಲವನ್ನು ಹಳಿಯುತ್ತ, ಕೊರಗುತ್ತ ಕೂಡ್ರದೆ, ಭವಿಷ್ಯವನ್ನು ಕಣ್ಣಲ್ಲಿ ತುಂಬಿಕೊಂಡು ಮುಂದೆ ನುಗ್ಗಿದರು. ಅರುಣಿಮಾ ಕೃತ್ರಿಮ ಕಾಲಿನೊಂದಿಗೆ ಪ್ರಪಂಚದ ಅತ್ಯಂತ ಎತ್ತರದ ಶಿಖರ, ಮೌಂಟ್ ಎವರೆಸ್ಟ್ನ್ನು ಏರಿದ ಪ್ರಥಮ ಮಹಿಳೆಯಾದಳು. ವಿಲ್ಮಾ ರುಡಾಲ್ಫ್ ಪೋಲಿಯೋ ರೋಗವನ್ನು ಗೆಲ್ಲುವುದು ಮಾತ್ರವಲ್ಲ, ಓಲಿಂಪಿಕ್ಸ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಪ್ರಪಂಚದ ಅತ್ಯಂತ ವೇಗದ ಓಟಗಾರ್ತಿಯಾದಳು. ಕಗ್ಗ ನಮಗೆ ಎಚ್ಚರಿಕೆಯನ್ನು ಕೊಡುತ್ತದೆ. ನಿನ್ನ ಕರ್ಮ ಬೇಕಾದರೆ ಎದ್ದು ಕುಣಿಯಲಿ, ದೈವ ಕಂಡೂ ಕಾಣದಂತೆ ಸುಮ್ಮನಿರಲಿ. ಸಾಧನೆಗೆ ಮಿತಿಗಳಿಲ್ಲ. ಮಂಗಳವಾದದ್ದನ್ನು ಸಾಧಿಸಲು ಯಾವ ಬಂಧನವೂ ಇಲ್ಲ. ಆದರೆ ನಾವು ಎಲ್ಲದಕ್ಕೂ ಸಿದ್ಧನಾದಾಗ ಮಾತ್ರ ಸಾಧನೆಯ ಮೆಟ್ಟಿಲುಗಳು ಕಂಡಾವು. ಇಲ್ಲದಿದ್ದರೆ ಕಾಲುಗಳು ಕುಸಿದು ಅಸಹಾಯತೆಯ ಪ್ರಪಾತಕ್ಕೆ
ಬೀಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT