ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಂಸಾರಿಯಾದ ಬ್ರಹ್ಮ

Last Updated 7 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ |
ಆಯಸಂಗೊಳುತ ಸಂಸಾರಿಯಾಗಿರುವಾ ||
ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ |
ಹೇಯವದರೊಳಗೇನೊ – ಮಂಕುತಿಮ್ಮ || 602 ||

ಪದ-ಅರ್ಥ: ಮಾಯೆಯೆಂಬಳ=ಮಾಯೆ ಎಂಬುವಳನ್ನು, ಸೃಜಿಸಿ=ಸೃಷ್ಟಿಸಿ, ತಾಯನಾಗಿಸಿ=ತಾಯನು+ಆಗಿಸಿ, ಆಯಸಂಗೊಳುತ=ಆಯಾಸಪಡುತ್ತ ಅನುಯಾಯಿಗಳು=ಹಿಂಬಾಲಕರು, ಹೇಯವದರೊಳಗೇನೊ=ಹೇಯವು (ಕನಿಷ್ಯಾ, ಅಸಹ್ಯ)+ಅದರೊಳಗೆ+ಏನೊ,

ವಾಚ್ಯಾರ್ಥ: ಮಾಯೆ ಎನ್ನುವವಳನ್ನು ಸೃಷ್ಟಿ ಮಾಡಿ ಬ್ರಹ್ಮ, ಆಕೆಯನ್ನು ಜಗತ್ತಿಗೆ ತಾಯಿಯನ್ನಾಗಿಸಿದ್ದಾನೆ. ತಾನೇ ಆಯಾಸಪಡುತ್ತ ಸಂಸಾರಿಯಾಗಿದ್ದಾನೆ. ಅವನ ಹಿಂಬಾಲಕರು ನಾವು. ಇದು ನಾಯಕನ ಕೆಲಸವೇ ಆದ ಮೇಲೆ ಅಸಹ್ಯಪಟ್ಟುಕೊಳ್ಳುವುದು ಏನಿದೆ?

ವಿವರಣೆ: ನಮ್ಮ ಸುತ್ತಲೂ ಅಪಾರವಾದ ವಿಶ್ವ ಹರಡಿಕೊಂಡಿದೆ. ಅದೇನು ಪ್ರಾಣಿಪ್ರಪಂಚ! ಸಸ್ಯಪ್ರಪಂಚ! ವಸ್ತುಪ್ರಪಂಚ! ಪ್ರತಿಯೊಂದೂ ಬೆರಗು ಹುಟ್ಟಿಸುವಂಥವುಗಳು. ಆ ಸಾಗರಗಳು, ಆಕಾಶದೆತ್ತರಕ್ಕೆ ನೆಗೆದು ನಿಂತಿರುವ ಪರ್ವತಗಳು, ತಲೆಎತ್ತಿ ನೋಡಿದರೆ ಅನಂತ ಆಕಾಶ. ಆ ಆಕಾಶದಲ್ಲಿ ಆಕಾಶಕಾಯಗಳು, ಪ್ರಕಾಶಕಾಯಗಳು. ಏನು ಅದ್ಭುತ ಈ ಜಗತ್ತು? ಇದು ಹೇಗಾಯಿತು? ಯಾರು ಸೃಷ್ಟಿ ಮಾಡಿದರು? ಈ ಎಲ್ಲ ಪ್ರಶ್ನೆಗಳು ಮನುಷ್ಯ ಎಂಬ ಜೀವ ಈ ಜಗತ್ತಿನಲ್ಲಿ ಹುಟ್ಟಿ ಬಂದಾಗಿನಿಂದ ಕಾಡಿವೆ. ಅದು ಸಾಲದೆಂಬಂತೆ ಈ ಪ್ರಪಂಚ ಕ್ಷಣಕ್ಷಣಕ್ಕೆ ಬದಲಾಗುವ ಮಾಯಾ ವಿಶ್ವ. ಮನುಷ್ಯ ಬುದ್ಧಿಯಿಂದ ಪ್ರಪಂಚದ ರಹಸ್ಯವನ್ನು ಅರಿಯಲು ಪ್ರಯತ್ನ ಮಾಡಿ ಸೋತ. ನಮ್ಮ ಋಷಿಗಳು, ದೃಷ್ಟಾರರು ಸತ್ಯವನ್ನು ಹುಡುಕುವ ಬದಲು ಸತ್ಯದ ಅವತರಣಕ್ಕೆ ಮನ ಮಾಡಿದರು. ಇಂದ್ರಿಯಗಳ ಮೂಲಕ ಅದನ್ನು ತಿಳಿಯಲು ಅಸಾಧ್ಯವೆಂದು ಮನಗಂಡು ಬುದ್ಧಿಯನ್ನು ವಿಶ್ರಾಂತಿಯಲ್ಲಿಟ್ಟು, ಮೌನದ ಚಿಂತನೆಯಲ್ಲಿ ತೊಡಗಿದ.

ಆಗ ಅವನಿಗೆ ಅರ್ಥವಾದದ್ದು ಈ ಪ್ರಪಂಚ ನಾವು ತಿಳಿದಂತೆ ಇಲ್ಲ. ಇದು ಒಂದು ರೀತಿಯ ಮಾಯೆಯಲ್ಲಿದೆ. ಮಾಯೆ ಎನ್ನುವುದು ಭ್ರಮೆಯಲ್ಲ. ಅದಕ್ಕೆ ವಿಶಿಷ್ಟವಾದ ಆದರೆ ತಾತ್ಕಾಲಿವಾದ ವಾಸ್ತವಿಕತೆ ಇದೆ. ಎಲ್ಲಿಯವರೆಗೆ ಅದು ನಮಗೆ ಸತ್ಯವಾಗಿ ತೋರುತ್ತದೆಯೋ ಅಲ್ಲಿಯವರೆಗೆ ಅದನ್ನು ಸತ್ಯವೆಂದೇ ಭಾವಿಸಬೇಕು. ಕನಸು ಸತ್ಯವೇ ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತರವೇನು? ಕನಸಿನ ಅನುಭವವಾದದ್ದು ಸತ್ಯ. ಆದರೆ ಅದರಲ್ಲಿಯ ವಸ್ತುಗಳು ನಿಜಪ್ರಪಂಚದಲ್ಲಿ ಇರಬೇಕಾಗಿಲ್ಲ. ಕನಸು ಎನ್ನುವುದು ಮನಸ್ಸಿನ ನಿರ್ಮಾಣ. ಇದನ್ನೇ ಮಾಯೆ ಎನ್ನುವುದು ಸಹಜಸ್ಥಿತಿಯಲ್ಲಿರುವ ಮನಸ್ಸು ಗ್ರಹಿಸಿದ ಹಾಗೆಯೇ ಪ್ರಪಂಚ ಇರಬೇಕಾದದ್ದಲ್ಲ. ಅದು ಪರಮಸತ್ಯವೂ ಅಲ್ಲ. ನಿಜಕ್ಕೂ ಇರುವುದು ಬ್ರಹ್ಮವೆಂಬ ಅವಿಭಾಜ್ಯ ಸತ್ಯ ಒಂದು ಮಾತ್ರವೇ. ಮಾಯೆಯು ಪ್ರಪಂಚವನ್ನು ಅತ್ಯಂತ ಆಕರ್ಷಕವಾಗಿ ಪ್ರದರ್ಶಿಸುವ ಮೂಲಕ ನಮ್ಮ ಮೇಲೆ ಮೋಡಿ ಹಾಕುತ್ತದೆ, ನಾವು ಅದರಲ್ಲಿ ಬಂದಿಯಾಗಿ ಉಳಿಯುವಂತೆ ಮಾಡುತ್ತದೆ.

ಕಗ್ಗ ಅದನ್ನು ಒಂದು ಪ್ರತಿಮೆಯನ್ನಾಗಿ ನೀಡುತ್ತದೆ. ಬ್ರಹ್ಮ ತಾನೊಬ್ಬನೆ ಇರದೆ ಮಾಯೆಯನ್ನು ಸೃಷ್ಟಿ ಮಾಡಿದ. ಆಕೆಯಿಂದ ಈ ಪ್ರಪಂಚವನ್ನು ಹುಟ್ಟಿಸಿದ. ಅದನ್ನು ನಿಭಾಯಿಸಲು ತಾನೇ ಸಂಸಾರಿಯಂತೆ ಒದ್ದಾಡಿದ. ಆ ಬ್ರಹ್ಮನೇ ನಮಗೆ ನಾಯಕ. ನಮ್ಮ ನಾಯಕನೇ ಹೀಗೆ ಸಂಸಾರಿಯಂತೆ ಜಗತ್ತಿನಲ್ಲಿ ಆಯಾಸಪಡುತ್ತಿದ್ದರೆ, ಅವನ ಹಿಂಬಾಲಕರೇ ಆದ ನಾವೇಕೆ ವ್ಯಥೆ ಪಡಬೇಕು? ನಾವು ಮಾಡುವ ಕೆಲಸ ಅರ್ಥಹೀನವಾದದ್ದು, ವ್ಯರ್ಥವಾದದ್ದು ಎಂದು ಬೇಸರಪಡಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT