ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೈವದ ಗಾಣ

Last Updated 22 ನವೆಂಬರ್ 2020, 20:41 IST
ಅಕ್ಷರ ಗಾತ್ರ

ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? |
ಆತನೆಲ್ಲರನರೆವನ್, ಆರನುಂ ಬಿಡನು ||
ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ |
ಘಾತಿಸುವನೆಲ್ಲರನು – ಮಂಕುತಿಮ್ಮ || 357 ||

ಪದ-ಅರ್ಥ: ಧಾತನೆಣ್ಣೆಯಗಾಣದೆಳ್ಳುಕಾಳಲೆ=ಧಾತನ(ದೈವದ, ದೇವರ)+ಎಣ್ಣೆಯ+ಗಾಣದ+ಎಳ್ಳುಕಾಳು+ಎಲೆ, ಆತನೆಲ್ಲರನರೆವನ್=ಆತನು+ಎಲ್ಲರನು+ಅರೆವನ್(ಅರೆಯುತ್ತಾನೆ), ಆರನುಂ=ಯಾರನ್ನೂ, ಆತುರಂಗೊಳದೆ=ಆತುರಪಡದೆ, ವಿಸ್ಮೃತಿಬಡದುಪೇಕ್ಷಿಸದೆ=ವಿಸ್ಮೃತಿಬಡದೆ(ಮರೆತುಬಿಡದೆ)+ಉಪೇಕ್ಷಿಸದೆ(ಕಡೆಗಣಿಸದೆ) ಘಾತಿಸುವನೆಲ್ಲರನು=ಘಾತಿಸುವನು(ಪೆಟ್ಟು ಕೊಡುವನು)+ಎಲ್ಲರನು.

ವಾಚ್ಯಾರ್ಥ: ಮನುಷ್ಯ ದೈವದ ಎಣ್ಣೆಯ ಗಾಣಕ್ಕೆ ಆಹಾರವಾಗುವ ಎಳ್ಳುಕಾಳಿದ್ದಂತೆ. ಆತನು ಎಲ್ಲರನ್ನು ಅರೆಯುತ್ತಾನೆ, ಯಾರನ್ನೂ ಬಿಡುವುದಿಲ್ಲ. ಯಾವ ಅವಸರವೂ ಇಲ್ಲದೆ, ಮರೆಯದೆ, ಯಾರನ್ನೂ ಕಡೆಗಣಿಸದೆ ಪೆಟ್ಟುಕೊಡುತ್ತಾನೆ.

ವಿವರಣೆ: ನಾವೆಲ್ಲ ದೈವವೆಂಬ ಗಾಣಕ್ಕೆ ಸಿಕ್ಕ ಎಳ್ಳು ಕಾಳು ಇದ್ದಂತೆ. ಅದು ನಮ್ಮನ್ನು ಸದಾಕಾಲ ಅರೆಯುತ್ತಲೇ ಇರುತ್ತದೆ. ಒಂದಲ್ಲ ಒಂದು ಚಿಂತೆ, ಕೊರತೆ ಕಾಡುತ್ತಲೇ ಬರುತ್ತದೆ. ಓದುವಾಗ ಪರೀಕ್ಷೆಯ ಚಿಂತೆ, ಪರೀಕ್ಷೆಯ ನಂತರ ಫಲಿತಾಂಶದ ಚಿಂತೆ, ಫಲಿತಾಂಶದ ನಂತರ ಕೆಲಸದ ಚಿಂತೆ, ಮುಂದೆ ಮದುವೆಯ, ಮಕ್ಕಳ ಚಿಂತೆ. ನಿಧಾನಕ್ಕೆ ಸುತ್ತಮುತ್ತಲಿನ ಹಿರಿ-ಕಿರಿಯ ವ್ಯಕ್ತಿಗಳು ಕರಗಿ ಹೋಗುವ ವ್ಯಥೆ, ವಯಸ್ಸಿಗೆ ತಕ್ಕಂತೆ ಬರುವ ರೋಗಗಳ ಚಿಂತೆ. ಊಟಕ್ಕಿಂತ ಮಾತ್ರೆಗಳೇ ಹೆಚ್ಚು. ಹಣವಿಲ್ಲದಿದ್ದರೆ ಬದುಕು ಸಾಗಿಸುವ ಚಿಂತೆ, ಹಣ ಹೆಚ್ಚಾಗಿದ್ದರೆ ಅದನ್ನು ಕಾಪಾಡಿಕೊಳ್ಳುವ, ಹೊರಗೆ ಮರ್ಯಾದೆ ಕಳೆಯದಂತೆ ನೋಡಿಕೊಳ್ಳುವ ಭಯ. ಕೊನೆಗೆ ಎಲ್ಲವನ್ನೂ ತೊರೆದು ಹೋಗುವ ಸಾವಿನ ಭಯ. ಹೀಗೆ ಒಂದೇ ಸಮನೆ ದೈವದ ಗಾಣದಲ್ಲಿ ಪ್ರತಿಯೊಬ್ಬರೂ ಅರೆಯಲ್ಪಡುತ್ತಾರೆ.

ದೈವ ಯಾರನ್ನೂ ಬಿಡುವುದಿಲ್ಲ. ರಾಮನಿಗೆ ವನವಾಸ, ಪತ್ನಿ ವಿರಹವನ್ನು ನೀಡಿತು. ಕೃಷ್ಣನಿಗೆ ಅಪವಾದವನ್ನು ಕೊಟ್ಟಿತು. ಅರ್ಜುನನಂಥ ತ್ರಿಲೋಕವೀರನಿಗೆ ನಪುಂಸಕತ್ವವನ್ನು ಬಡಿಯಿತು. ದೀರ್ಘಕಾಲ ಜ್ಞಾನಸೂರ್ಯನಂತೆ ಬದುಕಿದ್ದ ಭೀಷ್ಮನಿಗೆ ಶರಶಯ್ಯೆಯನ್ನೇ ಕೊಟ್ಟಿತು. ಅದು ತ್ರಿಮೂರ್ತಿಗಳನ್ನಾದರೂ ಬಿಟ್ಟಿತೇ? ವಿಷ್ಣುವಿನ ಎದೆಗೇ ಭೃಗು ಋಷಿಯಿಂದ ಒದೆಸಿಬಿಟ್ಟಿತು, ಶಿವನ ಮೂರ್ತಿಪೂಜೆ ಇಲ್ಲದಂತೆ ಮಾಡಿತು. ಎಲ್ಲರ ಹಣೆಬರಹ ಬರೆಯುವ ಬ್ರಹ್ಮನೇ ತನ್ನದೊಂದು ತಲೆ ಕಳೆದುಕೊಳ್ಳುವಂತಾಯಿತು.

ಕಗ್ಗ ಹೇಳುತ್ತದೆ, ದೈವದೊಂದು ಗಾಣವಿದೆ. ಏನನ್ನಾದರೂ ಹಿಂಡಿ ಬಿಡುವ ಶಕ್ತಿ ಇದ್ದದ್ದು. ದೊಡ್ಡ ದೊಡ್ಡ ಪರ್ವತಗಳನ್ನೇ ಅರೆದು ಬಿಡುವಂಥ ಗಾಣದ ಬಾಯಿಗೆ ಮನುಷ್ಯ ಹೋದರೆ ಅವನ ಗತಿ ಏನಾದೀತು? ಅವನೋ ಗಾತ್ರದಲ್ಲಿ ಎಳ್ಳು ಇದ್ದಂತೆ. ಎಳ್ಳು ಅತ್ಯಂತ ಸಣ್ಣ ಹಾಗೂ ಮೆದುವಾದ ಕಾಳು. ಅದು ಉಳಿದೀತೇ? ಈ ದೈವ ತನ್ನ ಗಾಣದಲ್ಲಿ ಎಲ್ಲರನ್ನೂ ಹಾಕಿ ಅರೆಯುತ್ತದೆ, ಯಾರನ್ನೂ ಬಿಡುವುದಿಲ್ಲ. ಅದಕ್ಕೆ ಯಾವ ಅವಸರವೂ ಇಲ್ಲ. ತಾಳ್ಮೆಯಿಂದ ಕಾಯ್ದು, ಸಮಯ ಬಂದಾಗ ಸರಿಯಾಗಿ ಅರೆಯುತ್ತದೆ. ಅದಕ್ಕೆ ಯಾವ ಮೋಹವೂ ಇಲ್ಲ ಮತ್ತು ಯಾವುದನ್ನೂ ಮರೆಯುವುದಿಲ್ಲ. ಅವರವರ ಕರ್ಮಫಲಕ್ಕೆ ಸರಿಯಾಗಿ ಪೆಟ್ಟುಕೊಡುತ್ತದೆ. ಕರ್ಮ ಚೆನ್ನಾಗಿದ್ದರೆ ಅವನನ್ನು ಅರೆದು ಒಂದು ಶ್ರೇಷ್ಠ ವಸ್ತುವನ್ನಾಗಿಯೂ ಮಾಡುತ್ತದೆ. ಅರೆಸಿಕೊಂಡು ನಾಶವಾಗಬೇಕೋ ಅಥವಾ ಅರೆಸಿಕೊಂಡು ಹದವಾಗಬೇಕೋ ಎಂಬುದು ನಾವು ಮಾಡುವ ಕರ್ಮವನ್ನವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT