ಭಾನುವಾರ, ಅಕ್ಟೋಬರ್ 2, 2022
19 °C

ಬೆರಗಿನ ಬೆಳಕು | ಮರೆವು-ಶಿವಕೃಪೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ರವಿನಿಲದೆ ಸುತ್ತುತಿರೆ ಕೊರಗು ಕಳವಳವೇಕೊ ? |
ಸವೆಯಿಸುತಲೆಲ್ಲವನು ಕಡೆಗೊಯ್ಪನವನು ||

ಕವಳಿಸುವುದೆಲ್ಲವನು ಮರೆವು; ಬಾಳೊಳ್ ಅದೊಂದು |

ಶಿವಕೃಪೆಯ ಲಕ್ಷಣವೊ – ಮಂಕುತಿಮ್ಮ || 683 ||

ಪದ-ಅರ್ಥ: ಸವೆಯಿಸುತಲೆಲ್ಲವನು=ಸವೆಯಿಸುತಲಿ+ಎಲ್ಲವನು, ಕಡೆಗೊಯ್ಪನವನು=ಕಡೆಗೆ+ಒಯ್ಪನು(ಒಯ್ಯುತ್ತಾನೆ)+ಅವನು, ಕವಳಿಸುವುದೆಲ್ಲವನು=ಕವಳಿಸುವುದು(ನುಂಗುವುದು)+ಎಲ್ಲವನು, ಬಾಳೊಳ್=ಬಾಳಲ್ಲಿ.
ವಾಚ್ಯಾರ್ಥ: ಸೂರ್ಯ ನಿಲ್ಲದೆ ಸುತ್ತುತ್ತಿದ್ದರೆ ನಿನಗೇಕೆ ಕಳವಳ? ಅವನು ಎಲ್ಲವನ್ನು ಸವೆಯಿಸುತ್ತ ಕೊನೆಗೆ ಒಯ್ದುಬಿಡುತ್ತಾನೆ. ಮರೆವು ಎಲ್ಲವನ್ನು ನುಂಗಿಬಿಡುತ್ತದೆ. ಬಾಳಿನಲ್ಲಿ ಮರೆವು ಒಂದು ಶಿವಕೃಪೆ.

ವಿವರಣೆ: ಸೂರ್ಯ ಒಂದು ಕ್ಷಣವೂ ನಿಲ್ಲದೆ ಸುತ್ತುತ್ತಾನೆ. ಅವನಿಗೆ ಅದು ಪ್ರದಕ್ಷಿಣೆ. ಆದರೆ ಅವನು ಒಂದು ಸುತ್ತು ಮುಗಿಸಿದರೆ ನಮ್ಮ ಆಯುಷ್ಯದಲ್ಲಿ ಒಂದು ದಿನ ಕೊರೆಯಾಯಿತು. ಅದಕ್ಕಾಗಿ ಕಳವಳವೇಕೆ? ಸೂರ್ಯ ದಿನಗಳನ್ನು ಕರಗಿಸುತ್ತಾನೆ. ಇಂದಿನ ಘಟನೆಗಳು ನಾಳೆ ನೆನಪುಗಳಾಗುತ್ತವೆ. ಕೆಲದಿನಗಳ, ತಿಂಗಳುಗಳ ನಂತರ ಮರೆಯಾಗಿ ಸವೆದು ಹೋಗುತ್ತವೆ. ಒಳ್ಳೆಯ, ಕೆಟ್ಟ ಘಟನೆಗಳ ಅನೇಕ ನೆನಪುಗಳನ್ನು ಮರೆಯಿಸಿ ಕಾಲದ ತೆಕ್ಕೆಯಲ್ಲಿ ತೆಗೆದುಕೊಂಡು ಹೋಗುತ್ತಾನೆ ಸೂರ್ಯ. ಕೆಲವೊಂದು ನೆನಪುಗಳು ತುಂಬ ಸುಂದರ. ಅವುಗಳನ್ನು ನೆನೆಸಿಕೊಳ್ಳುತ್ತಲೇ ನಾಳಿನ ಕಷ್ಟಗಳ ತೆರೆಗಳನ್ನು ದಾಟಿ ಹೋಗಬಹುದು. ಆದರೆ ಕೆಲವು ನೆನಪುಗಳು ಬಲು ಕ್ರೂರ. ಅವು ಇಂದು, ನಾಳೆಗಳ ಸಂಭ್ರಮವನ್ನು ಹೊಸಕಿ ಹಾಕುತ್ತವೆ. ಕೆಟ್ಟ ಘಟನೆ ನಡೆದದ್ದು ಕೆಲವು ಕ್ಷಣಗಳಾದರೂ, ಅದರ ನೆನಪಿನ ವಾಸನೆ ಬದುಕಿನುದ್ದಕ್ಕೂ ಕಾಡುತ್ತದೆ. ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ನೆನಪಿನ ಕಾಟವನ್ನು ತುಂಬ ಚೆನ್ನಾಗಿ ಮನಮುಟ್ಟಿಸಿದ್ದಾರೆ.
“ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿಬರದಿರು ಮತ್ತೆ ಹಳೆಯ ನೆನಪೆ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೆ ?

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ.
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂತಿರುವೆ
ಬೆನ್ನಲ್ಲೆ ಇರಿಯದಿರು ಓ ಚೆಂದ ನೆನಪೇ.

ಕೆಟ್ಟ ನೆನಪುಗಳಂತೆ ಒಳ್ಳೆಯ ನೆನಪುಗಳೂ ಕಾಡುತ್ತವೆ. ನಿಸಾರ್ ಹೇಳುವಂತೆ ನೆನಪುಗಳು ಹದ್ದಿನಂತೆ ಹಳೆಯ, ಸತ್ತ ಭೂತಕಾಲದ ಘಟನೆಗಳನ್ನು, ನಮ್ಮ ಇಂದಿನ ಮನದ ಅಂಗಳಕ್ಕೆ ತಂದು ಹಾಕುತ್ತವೆ. ನೆನಪುಗಳು ಮರೆಯಾದಷ್ಟು ಬದುಕು ಹಗುರಾಗುತ್ತದೆ. ಇಲ್ಲವಾದರೆ ಅವುಗಳ ಭಾರ ಬದುಕನ್ನು ಕುಸಿಯುವಂತೆ ಮಾಡುತ್ತದೆ. ಅದಕ್ಕೇ ವಯಸ್ಸಾದಂತೆ ಮರೆವು ಅಡರುತ್ತದೆ. ಮರೆವು ಭಗವಂತನ ಕೃಪೆ. ಆ ಕೃಪೆ ಇಲ್ಲದಿದ್ದರೆ ನೆನಪುಗಳು ನಮ್ಮನ್ನು ಕುಕ್ಕಿ, ಕುಕ್ಕಿ ಜೀವನವನ್ನು ದುಸ್ಸಹಗೊಳಿಸಿಬಿಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು