ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬೋಧಕರ ಮನಸ್ಸು

Last Updated 20 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಕುರುರಾಷ್ಟ್ರದಲ್ಲಿ ಧನಂಜಯನೆಂಬ ರಾಜ ಅಳುತ್ತಿದ್ದ. ಅವನಿಗೆ ಸುಚೀರತನೆಂಬ ಮಂತ್ರಿ ಇದ್ದ. ಒಂದು ದಿನ ರಾಜ ಮಂತ್ರಿಯನ್ನು ಕೇಳಿದ, ‘ಭಗವಂತನ ದಯೆಯಿಂದ ನನಗೆ ಈ ರಾಜ್ಯದ ಅಧಿಪತ್ಯ ದೊರೆತಿದೆ. ನಾನು ಈ ಸಮಸ್ತ ಭೂಮಂಡಲವನ್ನು ಗೆಲ್ಲಬೇಕೆಂದಿದ್ದೇನೆ. ಆದರೆ ನಾನು ಸದಾಕಾಲ ಧರ್ಮದಲ್ಲೇ ರಾಜ್ಯಭಾರ ಮಾಡಬಯಸುತ್ತೇನೆ. ರಾಜಧರ್ಮವೆಂದರೆ ಏನೆಂಬುದನ್ನು ನನಗೆ ನೀನು ತಿಳಿಸು‘. ಸುಚೀರತ ಚಿಂತಿಸಿದ. ಈ ಧರ್ಮಬೋಧೆಯನ್ನು ಕೇವಲ ಬುದ್ಧ ಮಾತ್ರ ಮಾಡಬಲ್ಲ. ಆತ ಪ್ರಾಮಾಣಿಕವಾಗಿ ಹೇಳಿದ, ‘ನಾನು ಈ ವಿಷಯದಲ್ಲಿ ಅಸಮರ್ಥ. ಆದ್ದರಿಂದ ನಾನು ವಿದುರನ ಕಡೆಗೆ ಹೋಗಿ ಕೇಳಿಕೊಂಡು ಬಂದು ತಿಳಿಸುತ್ತೇನೆ‘. ಅಲ್ಲಿಂದ ಹೊರಟು ವಿದುರನ ಕಡೆಗೆ ಬಂದ. ವಿದುರನಿಗೆ ಉಡುಗೊರೆಗಳನ್ನು ಕೊಟ್ಟು ರಾಜನ ಪ್ರಶ್ನೆಗೆ ಉತ್ತರ ಕೇಳಿದ. ವಿದುರ ಹೇಳಿದ, “ಸ್ನೇಹಿತ, ರಾಜ ಕೇಳಿದ ಪ್ರಶ್ನೆಗಳಿಗೆ ನಾನೂ ಸರಿಯಾದ ಉತ್ತರ ಕೊಡಲಾರೆ. ಯಾಕೆಂದರೆ ನಾನೀಗ ನ್ಯಾಯಾಧೀಶನಾಗಿದ್ದೇನೆ. ಯಾರು ಸರಿ, ಯಾರು ತಪ್ಪು ಎಂದು ಹುಡುಕುವುದರಲ್ಲೇ ನನ್ನ ಸಮಯ ಕಳೆದುಹೋಗುತ್ತಿದೆ. ಅದಲ್ಲದೆ ಬರೀ ತಪ್ಪುಗಳನ್ನು ಹುಡುಕುವುದರಿಂದ ನನ್ನಮನಸ್ಸುಶುದ್ಧವಾಗಿಲ್ಲ. ಆದ್ದರಿಂದ ನೀನು ನನ್ನ ಮಗ ಭದ್ರಕಾರನನ್ನು ಕೇಳು. ಆತ ನನಗಿಂತ ಬುದ್ಧಿವಂತ’.

ಸುಚೀರತ ಭದ್ರಕಾರನ ಬಳಿಗೆ ಬಂದ. ಅವನ ಬಳಿಯೂ ಅದೇ ಪ್ರಶ್ನೆಯನ್ನು ಕೇಳಿ, ಇದುವರೆಗೂ ತಾನು ಬೆಟ್ಟಿಯಾದವರ ವಿಷಯ ಹೇಳಿದ. ಭದ್ರಕಾರ ಹೇಳಿದ, ‘ನಾನೂ ಈ ಪ್ರಶ್ನೆಗೆ ಸರಿಯಾದ ಉತ್ತರಕೊಡುವುದು ಸಾಧ್ಯವಿಲ್ಲ. ನಾನು ಇತೀಚಿಗೆ ಮದುವೆಯಾದ್ದರಿಂದ ನನ್ನ ಮನಸ್ಸೆಲ್ಲ, ಕಾಮ, ಭೋಗಗಳಲ್ಲಿ ಸಿಕ್ಕಿಹಾಕಿಕೊಂಡಿದೆ. ಆದರೆ ನೀವು ನನ್ನ ತಮ್ಮ ಸಂಜಯಕುಮಾರನನ್ನು ಕಂಡು ಉತ್ತರ ಕೇಳಿ’. ಸುಚೀರತ ಸಂಜಯ ಕುಮಾರನ ಕಡೆಗೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ಉತ್ತರವನ್ನು ಬೇಡಿದ. ಸಂಜಯಕುಮಾರನೂ ಉತ್ತರಕೊಡಲು ಹಿಂಜರಿದ. ‘ನನ್ನ ಸಂಸಾರವನ್ನು ಭದ್ರಗೊಳಿಸಬೇಕಾದ್ದರಿಂದ ನಾನು ಊರೂರು ಸುತ್ತಿ ಕರ್ಮಗಳನ್ನು ಮಾಡಿಸುತ್ತ ಧನಸಂಪಾದನೆ ಮಾಡುತ್ತಿದ್ದೇನೆ. ನನ್ನ ಮನಸ್ಸೆಲ್ಲ ಹಣದಿಂದ ತುಂಬಿಕೊಂಡದ್ದರಿಂದ ನನ್ನ ಬೋಧೆ ಸರಿಯಾಗಿರದು. ಆದ್ದರಿಂದ ನೀನು ನನ್ನ ಮಗ ಸಂಭವಕುಮಾರನನ್ನು ಬೆಟ್ಟಿಯಾಗಿ ಅವನಿಂದ ಬೋಧೆಯನ್ನು ಪಡೆ. ಆತ ಪುಟ್ಟ ಮಗುವೆಂಬ ಭಾವನೆ ಬೇಡ. ಅವನು ಏಳೇ ವರ್ಷದವನಾದರೂ ನನಗಿಂತ ಸಹಸ್ರಪಾಲು ಹೆಚ್ಚು ಜ್ಞಾನಿ. ಅವನು ಮಾತ್ರ ನಿನಗೆ ಬೇಕಾದ ಬೋಧೆ ನೀಡಬಲ್ಲ’ ಎಂದ.

ಸುಚೀರತ ಸಂಭವಕುಮಾರನನ್ನು ಹುಡುಕಿಕೊಂಡು ಹೋದ. ಆ ಏಳು ವರ್ಷದ ಹುಡುಗ ಗೆಳೆಯರೊಡನೆ ಮಣ್ಣಿನಲ್ಲಿ ಆಟವಾಡುತ್ತಿದ್ದ. ಸುಚೀರತನನ್ನು ಕಂಡು ಹೆಗಲಮೇಲೆ ಉತ್ತರೀಯವನ್ನು ಹೊದೆದುಕೊಂಡು ಕೈಕಾಲು ತೊಳೆದುಕೊಂಡು ಬಂದು ಕುಳಿತ. ಗಂಭೀರವಾಗಿ ತಾವು ದೂರದಿಂದ ಬಂದಿದ್ದೀರಿ. ತಾವು ನನಗೆ ಕೇಳಬೇಕೆಂದಿದ್ದ ಪ್ರಶ್ನೆ ನನಗೆ ತಿಳಿದಿದೆ. ಅದಕ್ಕೆ ಉತ್ತರ ಹೇಳುತ್ತೇನೆ ಕೇಳಿ ಎಂದು ಧರ್ಮಬೋಧೆಯನ್ನು ನಿರರ್ಗಳವಾಗಿ ಮಾಡಿದ.

ಸುಚೀರತ ಕೇಳಿದ, ‘ಹಿಂದೆ ನಾನು ಕಂಡವರೆಲ್ಲ ತುಂಬ ಜ್ಞಾನಿಗಳಾಗಿದ್ದರೂ ಯಾರೂ ಧರ್ಮಬೋಧೆ ಮಾಡಲಿಲ್ಲ. ಯಾಕೆ?’ ಸಂಭವಕುಮಾರ ಹೇಳಿದ, ‘ಯಾರಮನಸ್ಸುಸ್ವಚ್ಛವಿಲ್ಲವೊ, ಯಾರ ಮನದಲ್ಲಿ ಕಾಮ, ಕ್ರೋಧ ಮತ್ತು ಅರ್ಥಗಳ ರಾಡಿ ತುಂಬಿದೆಯೋ ಅವರು ಬೋಧನೆಗೆ ಅನರ್ಹರಾಗುತ್ತಾರೆ.ಬೋಧಕರಮನ ಶುದ್ಧವಿರಬೇಕು’.

ಇದು ಸರ್ವಕಾಲಕ್ಕೆ ಸಲ್ಲುವ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT