ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬ್ರಹ್ಮಪುರಿಯ ತಿರುಕ

Last Updated 31 ಮೇ 2022, 19:31 IST
ಅಕ್ಷರ ಗಾತ್ರ

ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು |
ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ||
ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು |
ಪರದೇಶಿವೊಲು ಬಾಳು – ಮಂಕುತಿಮ್ಮ ||640||

ಪದ-ಅರ್ಥ: ನೀನೀ= ನೀನು+ ಈ, ಬ್ರಹ್ಮಪುರಿಯೊಳದ=ಬ್ರಹ್ಮಪುರಿಯೊಳು (ಬ್ರಹ್ಮನ ನಗರದಲ್ಲಿ)+ ಅದ, ಸಿರಿಯಿರ್ದೊಡೇನು= ಸಿರಿ+ ಇರ್ದೊಡೇನು (ಇದ್ದರೇನು), ಪರಿಜನವಿರ್ದೊಡೇನು= ಪರಿಜನ (ಬಂಧು ಬಳಗ)+ ಇರ್ದೊಡೇನು, ತೊರೆದೆಲ್ಲ= ತೊರೆದು+ ಎಲ್ಲ, ಡಂಭಗಳ= ಬೂಟಾಟಿಕೆಗಳ, ನಿನ್ನಾಳಾಗು= ನಿನ್ನ+ ಆಳು+ ಆಗು, ಪರದೇಶಿವೊಲು= ಪರದೇಶಿಯ ಹಾಗೆ.

ವಾಚ್ಯಾರ್ಥ: ನೀನು ಈ ಬ್ರಹ್ಮನ ನಗರದಲ್ಲಿ ಒಬ್ಬ ತಿರುಕ ಎಂಬುದನ್ನು ಮರೆಯದಿರು. ಎಷ್ಟು ಸಂಪತ್ತಿದ್ದರೇನು? ಅನೇಕ ಬಂಧು-ಬಳಗದವರಿದ್ದರೇನು? ಎಲ್ಲ ಬೂಟಾಟಿಕೆಗಳನ್ನು ಬಿಟ್ಟು ನೀನೇ ನಿನ್ನ ಆಳಾಗಿ ಬದುಕು. ಪರದೇಶಿಯ ಹಾಗೆ ಬಾಳು.

ವಿವರಣೆ: ವೇದಾಂತದ ಸಾರವನ್ನು ಶ್ವೇತಾಶ್ಪತರ ಉಪನಿಷತ್ತು ಸಂಗ್ರಹರೂಪದಲ್ಲಿ ಒಂದು ಮಂತ್ರವಾಗಿ ಹೇಳುತ್ತದೆ.

ಏಕೋ ದೇವ: ಸರ್ವಭೂತೇಷು ಗೂಢ:
ಸರ್ವವ್ಯಾಪೀ ಸರ್ವಭೂತಾನ್ತರಾತ್ಮಾ|
ಕರ್ಮಾಧ್ಯಕ್ಷ: ಸರ್ವಭೂತಾಧಿವಾಸ:
ಸಾಕ್ಷಿ ಚೇತಾ ಕೇವಲೋ ನಿರ್ಗುಣಶ್ಚ||

ದೇವರೊಬ್ಬನೆ. ಅವನು ಎಲ್ಲ ವಸ್ತುಗಳಲ್ಲಿಯೂ ಗೂಢವಾಗಿದ್ದಾನೆ, ಎಲ್ಲೆಡೆಯೂ ಹರಡಿದ್ದಾನೆ, ಎಲ್ಲ ಪ್ರಾಣಿಗಳಲ್ಲಿ ಆತ್ಮರೂಪವಾಗಿದ್ದಾನೆ, ಎಲ್ಲ ಪ್ರಾಣಿಗಳ ಒಳಗೆ ಅಧಿಕಾರಿಯಾಗಿದ್ದಾನೆ. ಆತ ನಿರ್ಗುಣನಾಗಿದ್ದುಕೊಂಡು, ಸಾಕ್ಷಿಯಂತೆ ಇದ್ದು, ಎಲ್ಲರನ್ನು
ಚೈತನ್ಯಪೂರ್ಣರನ್ನಾಗಿ ಮಾಡುತ್ತಾನೆ. ಅನಂತವೆನಿಸುವ ಈ ಮಹಾ ವ್ಯಾಕೃತ ವಿಶ್ವಕ್ಕೆ, ಅದರ ಹಿಂದೆ ಅವ್ಯಾಕೃತವಾದ ಮಹಾಕಾರಣ ತತ್ವವಿದೆ. ಅದರ ಪರಮಾಶ್ರಯದಲ್ಲಿ ವಿಶ್ವ ಬಾಳುತ್ತದೆ. ಅದೇ ದೇವ ಸತ್ವ. ಇಲ್ಲಿ ನಮ್ಮದೇ ಎನ್ನುವಂಥದ್ದು ಯಾವುದೂ ಇಲ್ಲ. ದೇಹ,
ಗುಣ, ಪ್ರಕೃತಿ, ಭಾವನೆಗಳು ಇವೆಲ್ಲ ಮೂಲತತ್ವದಿಂದಲೇ ಸೃಷ್ಟಿಯಾದವುಗಳು. ನಮ್ಮದೇನೂ ಇಲ್ಲ, ಇದ್ದದ್ದೆಲ್ಲ ಭಗವಂತ ಕೊಟ್ಟಿದ್ದು ಎನ್ನುವುದಾದರೆ ನಾವೂ ಭಿಕ್ಷುಕರೇ ಅಲ್ಲವೆ? ಅದಕ್ಕೇ ಕಗ್ಗ ಮನುಷ್ಯರನ್ನು ಬ್ರಹ್ಮಪುರಿಯ ಭಿಕ್ಷುಕ ಎಂದು ಕರೆಯುತ್ತಾರೆ.

ನಮ್ಮ ಹತ್ತಿರ ಬಹಳಷ್ಟು ಹಣವಿರಬಹುದು ಆದರೆ ಅದು ನನ್ನದಲ್ಲ. ಬ್ಯಾಂಕಿನಲ್ಲಿ ಕ್ಯಾಷಿಯರ್ ಲಕ್ಷ, ಲಕ್ಷ ರೂಪಾಯಿಗಳನ್ನು ಎಣಿಸಿ, ಜತನದಿಂದ ಲಾಕರ್‍ದಲ್ಲಿ ಇಟ್ಟು ರಕ್ಷಿಸುತ್ತಾನೆ. ಅವನು ಹಣದ ಮಧ್ಯೆಯೇ ಇದ್ದರೂ ಹಣ ಅವನದಲ್ಲ. ಅದರಂತೆಯೇ ಬಂಧು ಬಳಗದವರು. ಇಲ್ಲಿ ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಇದನ್ನು ತಿಳಿದರೂ ಮನುಷ್ಯರು ಬದುಕುವ ರೀತಿಯನ್ನು ಕಂಡು, ಚೆನ್ನಬಸವಣ್ಣ ಅದನ್ನು ಗುಬ್ಬಿಯ ಸ್ವಭಾವಕ್ಕೆ ಹೋಲಿಸುತ್ತಾನೆ.

ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ
ಧರೆ, ಧನ, ವನಿತೆಯರು ಎನ್ನುವರು ತನ್ನವರೆಂದು
ಹೋರಿ ಹೋರಿ ಸಾಯುತ್ತದೆ ಜೀವ.

ಹಾಗಾದರೆ, ಹೇಗೆ ಬದುಕಬೇಕು? ಮನಸಿನ ಕಪಟ, ಬೂಟಾಟಿಕೆಗಳನ್ನು ತೆಗೆದೊಗೆದು ನಾನೇ ಆಳಿನಂತೆ, ಪರದೇಶಿಯಂತೆ ಬಾಳಬೇಕು. ನಾನು ಮತ್ತೊಂದು ದೇಶದಲ್ಲಿ ಪರದೇಶಿ. ಆ ದೇಶದ ಅವರು ಹೇಳಿದಂತೆ, ಅವರ ನಿಯಮಗಳಂತೆ ಬಾಳಬೇಕು. ಡಿ.ವಿ.ಜಿ ತಮ್ಮನ್ನು ಕೂಡ ಭಿಕ್ಷುಕ ಎಂದೇ ಕರೆದುಕೊಂಡರು. ‘ಡೀವೀಜೀ ಸಂಜ್ಞಿತ: ಕೋಪಿ ಬ್ರಹ್ಮಪತ್ತಾನ ಭಿಕ್ಷುಕ:” “ಡಿ.ವಿ.ಜಿ ಹೆಸರಿನಿಂದ ಕರೆಯಲ್ಪಡುವ ಭಿಕ್ಷುಕ’.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT