ಮಂಗಳವಾರ, ಫೆಬ್ರವರಿ 7, 2023
27 °C

ಬೆರಗಿನ ಬೆಳಕು: ಮುಂದೆ ಚಾಚಿದ ಮನಸ್ಸು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಲೋಚನದ ಸಂಚಾರ ಮುಖದ ಮುಂದಕಪಾರ |
ಗೋಚರಿಪುದೇನದಕೆ ತಲೆಯ ಹಿಂದಣದು? ||
ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು |
ಚಾಚು ಮುಂದಕೆ ಮನವ- ಮಂಕುತಿಮ್ಮ || 761|

ಪದ-ಅರ್ಥ: ಲೋಚನದ=ಕಣ್ಣಿನ,ಮುಂದಕಪಾರ=ಮುಂದಕೆ+ಅಪಾರ, ಗೋಚರಿಪುದೇನದಕೆ=ಗೋಚರಿಪುದು(ಕಾಣಿಸುವುದು)+ಏನಕೆ, ಪ್ರಾಚೀನ=ಹಿಂದೆ ಆಗಿ ಹೋದದ್ದು, ಸಾಂತವದು=ಕೊನೆಯಾಗುವುದು.

ವಾಚ್ಯಾರ್ಥ: ಕಣ್ಣಿನ ಸಂಚಾರ ಮುಖದ ಮುಂದೆ ವಿಶಾಲವಾಗಿದೆ. ಅದಕ್ಕೆ ತಲೆಯ ಹಿಂದಿನದು ಕಾಣುತ್ತದೆಯೆ? ಹಿಂದೆ ಆದದ್ದನ್ನು ಮರೆತಾಗ ನೀನು ಸ್ವತಂತ್ರ, ಅದಕ್ಕೊಂದು ಕೊನೆ ಇದೆ. ಮನಸ್ಸನ್ನು ಮುಂದಕ್ಕೆ ಚಾಚು.

ವಿವರಣೆ: ಕಣ್ಣಿನ ಕಾರ್ಯ ಇರುವುದು ಮುಖದ ಮುಂದಕ್ಕೆ ಮಾತ್ರ. ಅದರ ಶಕ್ತಿ ಅಪಾರವಾದದ್ದು. ಯಾವುದನ್ನೂ ಗ್ರಹಿಸಬಲ್ಲದ್ದು. ಆದರೆ ಅದಕ್ಕೊಂದು ಮಿತಿ ಇದೆ. ಮುಂದೆ ಅಷ್ಟೊಂದು ದೊಡ್ಡ ಪ್ರಪಂಚವನ್ನು ಗ್ರಹಿಸುವ ಕಣ್ಣು ತಲೆಯ ಹಿಂದಿನದು ಕಾಣಲಾರದು. ಇದೊಂದು ಸಾಂಕೇತ. ಕಗ್ಗ ಕಣ್ಣಿನ ಬಗ್ಗೆ, ಅದರ ವಿಸ್ತಾರವಾದ ಗ್ರಹಿಕೆಯ ಬಗ್ಗೆ ಮಾತನಾಡಿದರೂ ಆಂತರ್ಯದಲ್ಲಿ ಅದು ನಿನ್ನೆ, ನಾಳೆಗಳ ಬಗ್ಗೆ ಹೇಳುತ್ತಿದೆ. ನಿನ್ನೆ ಎನ್ನುವುದು ಇಂದಿನ ನೆನಪು, ನಾಳೆ ಎನ್ನುವುದು ಇಂದಿನ ಕನಸು. ಮುಖದ ಮುಂದಿರುವುದು ಭವಿಷ್ಯ. ತಲೆಯ ಹಿಂದಿರುವುದು ಭೂತ, ಕಳೆದು ಹೋದದ್ದು. ನಮಗೆ ಸಾಮಾನ್ಯವಾಗಿ ನೆನಪಿನ ಭಾರ ತುಂಬ ದೊಡ್ಡದು. ನಮ್ಮ ದೇಹದ ಪ್ರತಿಯೊಂದು ಜೀವಕಣ ಅಪಾರವಾದ ನೆನಪಿನ ಭಂಡಾರವನ್ನು ಹೊರುತ್ತದೆ. ದೇಹ ಮಾತ್ರವಲ್ಲ, ಅರಿವು ಸಹಾ ನೆನಪುಗಳ ಸಂಗ್ರಹವೇ? ‌

ಅಧ್ಯಾತ್ಮಿಕತೆ ಎಂದರೆ ನೆನಪಿನ ಹಳೆಯ ಚಕ್ರದಿಂದ ಬೇರ್ಪಟ್ಟು, ಹೊಸ ಸಾಧ್ಯತೆಯಾಗಿ ಸೃಷ್ಟಿಮಾಡಿಕೊಳ್ಳುವುದು ಮತ್ತು ಪರಿಭ್ರಮಣೆಯನ್ನು ಭೇದಿಸುವುದು. ಅದಕ್ಕೆ ಹಿಂದೆ ನೋಡುವುದು, ಅಂದರೆ ಹಿಂದೆ ಆಗಿಹೋಗಿದ್ದನ್ನು ನೆನೆಯುತ್ತ ಕೂಡ್ರುವುದು ಬೇಡ. ಅದನ್ನೇ ಕಗ್ಗ ಪ್ರಾಚೀನ ಎಂದು ಕರೆಯುತ್ತದೆ. ಪ್ರಾಚೀನವೆಂದರೆ ಹಿಂದಿನದು. ಪ್ರಾಚೀನಕರ್ಮ ನಮ್ಮ ಇಂದಿನ ಬದುಕನ್ನು ಸ್ವಲ್ಪಮಟ್ಟಿಗೆ ಪ್ರಭಾವಿಸಬಹುದು ಎಂದಿಟ್ಟುಕೊಂಡರೂ, ನಮ್ಮ ಮುಂದಿನ ಭವಿಷ್ಯದ ಭದ್ರತೆಗೆ ನಮ್ಮ ಇಂದಿನ ಕರ್ಮ ಕಾರಣವಾಗುತ್ತದೆ. ಹಿಂದಾದಕ್ಕೆಲ್ಲ ಒಂದು ಕೊನೆ ಇದೆ. ಅದು ಕೊನೆಗಾಣಿಸದೆ ನಾಳೆ ದೊರಕದು. ಅದನ್ನು ಕಗ್ಗ ಸ್ವತಂತ್ರತೆಯ ದಾರಿ ಎನ್ನುತ್ತದೆ. ಪ್ರಾಚೀನದಿಂದ ಮುಕ್ತವಾದಾಗ ನಮಗೆ ಬಿಡುಗಡೆ. ಈ ಬಿಡುಗಡೆಗೆ ಮನಸ್ಸನ್ನು ಮುಂದಕ್ಕೆ ಚಾಚಬೇಕು. ಹಿಂದಿನದನ್ನು ಕುರಿತು ಚಿಂತಿಸಿ ಗೋಳಾಡುವುದು ಸಾಕು, ಮನಸ್ಸನ್ನು ಧನಾತ್ಮಕವಾಗಿ ಬೆಳೆಸಿ ಆಶಾವಾದದಿಂದ ಮುಂದಿನ ನಡವಳಿಕೆಯನ್ನು ಸರಿಪಡಿಸಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು