ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಅನಾಹುತದ ಹಿಂದೆಯೂ ಒಳ್ಳೆಯದು ಇದ್ದೇ ಇರುತ್ತೆ: ಗುರುರಾಜ ಕರಜಗಿ

ಫೇಸ್‌ಬುಕ್ ಲೈವ್
Last Updated 24 ಏಪ್ರಿಲ್ 2020, 12:15 IST
ಅಕ್ಷರ ಗಾತ್ರ

ಕೊರೊನಾ ಕಾರ್ಮೋಡ ಆವರಿಸಿರುವ ಕತ್ತಲಲ್ಲಿ ಹಾಯ್ ಎನಿಸುವ ಕಿರಣಗಳನ್ನು ಹೊತ್ತು ತರುವ ಬೆಳಕಿಂಡಿ ಇಲ್ಲಿದೆ. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಂದ ಪ್ರಜಾವಾಣಿ ಓದುಗರಿಗಾಗಿ ‘ಫೇಸ್‌ಬುಕ್‌’ ಲೈವ್ ಉಪನ್ಯಾಸ. ತಪ್ಪದೇ ವೀಕ್ಷಿಸಿ

‘ಪ್ರತಿಯೊಂದು ಅನಾಹುತದ ಹಿಂದೆಯೂ ಒಳ್ಳೆಯದು ಇದ್ದೇ ಇರುತ್ತದೆ. ನಾವು ಅದನ್ನು ಗಮನಿಸಬೇಕು’. ಇದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರ ಸ್ಪಷ್ಟ ಮಾತು.

ಕೊರೊನಾ ಕಾರ್ಮೋಡ ಆವರಿಸಿರುವ ಹೊತ್ತಿನಲ್ಲಿ ಪ್ರಜಾವಾಣಿ ಆಯೋಜಿಸಿರುವ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು ಅನೇಕ ಉದಾಹರಣೆ, ನಿದರ್ಶನ, ಕಥೆಗಳ ಮೂಲಕ, ಈ ಹೊತ್ತಿನಲ್ಲಿ ಜನ ಸಕಾರಾತ್ಮಕ ಚಿಂತನೆಯತ್ತ ಸಾಗಬೇಕಿರುವುದನ್ನು ಒತ್ತಿ ಹೇಳಿದರು.

ಗುರುರಾಜ ಕರಜಗಿ ಅವರ ಮಾತಿನ ಸಾರ ಇಲ್ಲಿದೆ:

‘ಈ ಕೊರೊನಾ ಅನಾಹುತದ ಹಿಂದೆಯೂ ಒಳ್ಳೆಯ ಅಂಶ ಇದೆ. ನಾನದನ್ನು ಹೀಗೆ ಗುರುತಿಸಿಕೊಂಡಿದ್ದೇನೆ; ನಾವೆಲ್ಲ ಮನೆಯಲ್ಲಿ ಕುಳಿತುಕೊಂಡು ಕುಟುಂಬದವರ ಜತೆ ಬೆರೆಯುವಂತಾಗಿದೆ. ಮನೆ ಮಂದಿಯೆಲ್ಲ ಒಂದಾಗುವಂತಾಗಿದೆ’ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ನಿಂದಾಗಿ ನಗರಗಳಲ್ಲಿ ಹವೆ ಶುದ್ಧವಾಗಿದೆ ಎಂದು ವರದಿಯಾಗುತ್ತಿವೆ. ನದಿಗಳು, ನೀರು ಶುದ್ಧವಾಗಿವೆ ಎನ್ನುತ್ತಿದ್ದಾರೆ. ಇದು ಕೊರೊನಾದಿಂದಾದ ಒಳಿತಲ್ಲವೇ? ಮಾಲಿನ್ಯ ಕಡಿಮೆಯಾಗಿದೆ ಎಂಬುದು ಒಳ್ಳೆಯ ವಿಚಾರ. ನಿನ್ನೆಯಷ್ಟೇ ಒಬ್ಬ ಶಿಕ್ಷಕರು ದೂರವಾಣಿ ಕರೆ ಮಾಡಿ ಕೇಳಿದ್ದರು. ಪ್ರತಿ ವರ್ಷ ಪರೀಕ್ಷೆಗಳು ಮುಗಿದ ಬಳಿಕ ಎರಡು ತಿಂಗಳು ರಜೆ ಕೊಟ್ಟರೆ ಒಳ್ಳಯೆದಲ್ಲವೇ ಎಂದು. ಏನೇ ಇರಲಿ. ಕೊರೊನಾದಿಂದ ಸ್ವಲ್ಪ ಅನುಕೂಲವೂ ಆಗಿದೆ ಎಂಬುದನ್ನು ನಾವು ತಿಳಿಯಬೇಕು.

ಈ ಸಂದರ್ಭವನ್ನು ಮನೆಯ ಹಿರಿಯರ ಅನುಭವದ ಮಾತುಗಳನ್ನು. ಕಥೆಗಳನ್ನು ಕೇಳಲು ಬಳಸಿಕೊಳ್ಳಿ. ಸಂಬಂಧಗಳನ್ನು, ಆತ್ಮೀಯರ ಜತೆಗಿನ ಪ್ರೀತಿಯನ್ನು ಬೆಳೆಸಿಕೊಳ್ಳಿ. ಸುಮ್ಮನೇ ಜಗಳಾಡಬೇಡಿ. ಹಿರಿಯರೂ ಅಷ್ಟೆ, ಕಿರಿಯರ ಜತೆ ನಮ್ಮ ಸಂಸ್ಕಾರ, ಜೀವಾನಾನುಭವವನ್ನು ಹಂಚಿಕೊಳ್ಳಿ. ವಚನ, ಗೀತೆಗಳನ್ನು ಅವರಿಗೆ ತಿಳಿಹೇಳಿ. ಹೊಸ–ಹೊಸ ಆಟಗಳನ್ನು ಅವರಿಗೆ ಹೇಳಿಕೊಡಿ. ಹಾಗೆಂದು ಮನೆಯಲ್ಲೇ ಕುಳಿತು ಆಲಸ್ಯ ಮಾಡಿಕೊಳ್ಳದಿರಿ. ಮುಂದೆ ಕೆಲಸಕ್ಕೆ ಹೋಗುವಾಗ ಸಮಸ್ಯೆ ಮಾಡಿಕೊಳ್ಳದಿರಿ. ತುಂಬಾ ಆಲಸಿಯಾಗದೆ ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳೋಣ.

ಈಗಿನ ಪರಿಸ್ಥಿತಿಯಲ್ಲಿ ನಮಗೆ ನಮ್ಮ ಮನಸ್ಸನ್ನು ಅರಿಯಲು ಅವಕಾಶ ಸಿಕ್ಕಿದೆ. ಕುಳಿತುಕೊಂಡು ನಮ್ಮ ಮನಸ್ಸನ್ನು ಅರಿಯಲು ನಾವು ಪ್ರಯತ್ನಿಸಬೇಕು.

ಈ ವಿಚಾರವಾಗಿ ಡಿವಿಜಿಯವರು ಹೀಗೆ ಹೇಳುತ್ತಾರೆ:

‘ಕೋಣೆಗಳ ಮಾಡು ನೀ ಮನದಾಲಯದಿ
ಹೊರ ಕೋಣೆಯಲ್ಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ನೀನು ಒಳಮನೆಯ ಶಾಂತಿಯಲಿ’

ಎಷ್ಟೊಂದು ಒಳ್ಳೆಯ ಮಾತಲ್ಲವೇ? ಅಂದರೆ, ನಮಗಾಗಿ ನಾವು ಸಮಯವನ್ನು ಮೀಸಲಿಡಬೇಕು. ನಾವು ಯಾರ್‍ಯಾರದ್ದೋ ಅಪಾಯಿಂಟ್‌ಮೆಂಟ್ ತಗೊಳ್ಳುತ್ತೇವೆ. ಯಾರದ್ದೋ ಭೇಟಿಗಾಗಿ ಹಾತೊರೆಯುತ್ತೇವೆ. ಆದರೆ, ನಮಗಾಗಿ ನಾವು ಸಮಯ ಮೀಸಲಿಡುತ್ತೇವೆಯೇ? ಈಗ ಅದಕ್ಕೆ ಸಮುಯ ಸಿಕ್ಕಿದೆ. ಸದ್ವಿನಿಯೋಗಿಸಿಕೊಳ್ಳಿ.

ನಮ್ಮ ಕಷ್ಟ ಮಾತ್ರ ನೋಡಬೇಡಿ: ಇಂಥ ಕಷ್ಟದ ಸಂದರ್ಭದಲ್ಲಿ ನಮ್ಮ ಸಮಸ್ಯೆ ಬಗ್ಗೆ ಮಾತ್ರ ಯೋಚಿಸಬೇಡಿ. ಬೇರೆಯರವರ ಕಷ್ಟಗಳ ಬಗ್ಗೆಯೂ ಗಮನಿಸಿ. ಸಾಧ್ಯವಾದಷ್ಟೂ ಇತರರಿಗೆ ಸಹಾಯ ಮಾಡಲು ಯತ್ನಿಸಿ. ಇತರರಿಗೆ ನೆರವಾಗುತ್ತಿರುವಾಗ ನಮ್ಮ ಕಷ್ಟಗಳು ಮನಸಿನಿಂದ ಮರೆಯಾಗಿ ಹೋಗುತ್ತವೆ.

ಸದಾ ಸಕಾರಾತ್ಮಕ ಚಿಂತನೆ ಮಾಡೋಣ. ಒಳಿತನ್ನೇ ಯೋಚಿಸೋಣ. ಕೊರೊನಾ ಕರೆಯದೇ ಬಂದುದು. ಸದ್ಯದ ಪರಿಸ್ಥಿತಿಯಲ್ಲಿ ನಾವೇನೂ ಮಾಡಲಾಗದು. ಅದರ ಪಾಡಿಗೆ ಅದು ತೊಲಗಲಿ ಎಂದು ಆಶಿಸೋಣ. ಎಲ್ಲರಿಗೂ ಒಳಿತಾಗಲಿ. ಮತ್ತೆ ನಾಳೆ ಭೇಟಿಯಾಗೋಣ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT