ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮಾತಿನ ಸರಿಯಾದ ಬಳಕೆ

Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಒಂದು ಬಾರಿ ಒಬ್ಬ ಬೇಟೆಗಾರ ಹಿಮಾಲಯದಿಂದ ಕಿನ್ನರ ದಂಪತಿಗಳನ್ನು ಉಪಾಯವಾಗಿ ಹಿಡಿದು ಪಂಜರದಲ್ಲಿ ಹಾಕಿ ತಂದು ರಾಜನಿಗೆ ಕೊಟ್ಟ. ಕೇವಲ ಎರಡಡಿ ಎತ್ತರದ ದಂಪತಿಗಳನ್ನು ಪಂಜರದಲ್ಲಿ ನೋಡಿ ರಾಜನಿಗೆ ಆಶ್ಚರ್ಯವಾಯಿತು. ‘ಇವರು ಯಾರು? ಎಲ್ಲಿಂದ ತಂದೆ? ಇವರು ಏನು ಮಾಡುತ್ತಾರೆ?’ ಎಂದು ರಾಜ ಕೇಳಿದ. ಬೇಟೆಗಾರ ಹೇಳಿದ, ‘ಮಹಾಸ್ವಾಮಿ, ಇವರು ಸಿಗುವುದು ತುಂಬ ಅಪರೂಪ. ಅವರನ್ನು ಕಿನ್ನರರು ಎಂದು ಕರೆಯುತ್ತಾರೆ. ಅವರು ಇರುವುದು ಹಿಮಾಲಯದಲ್ಲಿ. ಅವರಷ್ಟು ಚೆನ್ನಾಗಿ ಹಾಡುವವರು, ನೃತ್ಯ ಮಾಡುವವರು ಯಾರೂ ಇಲ್ಲ. ಮನುಷ್ಯರಲ್ಲಿ ಯಾರಿಗೂ ಅವರ ಸಂಗೀತ, ನರ್ತನ ತಿಳಿದಿಲ್ಲ’. ರಾಜ ಸಂತೋಷದಿಂದ ಬೇಟೆಗಾರನಿಗೆ ಬಹಳಷ್ಟು ಹಣ ಕೊಟ್ಟ.

ನಂತರ ರಾಜ ಪಂಜರದಲ್ಲಿದ್ದ ದಂಪತಿಗಳಿಗೆ ‘ಹಾಡಿ, ನರ್ತಿಸಿ’ ಎಂದು ಆಜ್ಞೆ ಮಾಡಿದ. ಅವರಿಬ್ಬರೂ ತಮ್ಮ ತಮ್ಮಲ್ಲೇ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಮಾತನಾಡಿಕೊಂಡರು. ಸಂಗೀತದ ಸಾಧನಗಳಿಲ್ಲದೆ ಹಾಡಿದರೆ, ನರ್ತಿಸಿದರೆ ಸೊಬಗು ಇರುವುದಿಲ್ಲ. ಆಗ ಈ ರಾಜ ನಮ್ಮನ್ನು ಕೊಲ್ಲಿಸಿಬಿಡಬಹುದು ಎಂಬ ಭಯದಿಂದ ಇಬ್ಬರೂ ಮಾತನಾಡಲೇ ಇಲ್ಲ. ರಾಜ ಪದೇ ಪದೇ ಹೇಳಿದರೂ ಮಾತೇ ಅರ್ಥವಾಗದವರಂತೆ ಸುಮ್ಮನೆ ಇದ್ದುಬಿಟ್ಟರು. ರಾಜನಿಗೆ ಭಯಂಕರ ಕೋಪ ಬಂದಿತು. ‘ಇವು ಮನುಷ್ಯಕಾರದ ಪ್ರಾಣಿಗಳು ಇವಕ್ಕೆ ಹಾಡು, ನೃತ್ಯ ಬರುವುದು ಸಾಧ್ಯವಿಲ್ಲ’. ಇವರನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಇವರಲ್ಲಿ ಒಬ್ಬರನ್ನು ಇಂದು ರಾತ್ರಿಯ ಊಟಕ್ಕೆ, ಮತ್ತೊಬ್ಬರನ್ನು ನಾಳೆ ಬೆಳಿಗ್ಗೆಯ ಊಟಕ್ಕೆಂದು ತೀರ್ಮಾನಿಸಿ ಕೊಂದುಬಿಡಿ’ ಎಂದು ಆಜ್ಞೆ ಮಾಡಿದ.

ಗುರುರಾಜ ಕರಜಗಿ

ಕಿನ್ನರ ದಂಪತಿಗಳಿಗೆ ಭಯವಾಯಿತು. ರಾಜ ನಮ್ಮನ್ನು ಕೊಲ್ಲಿಸಿಯೇ ಬಿಡುತ್ತಾನೆ. ಆದ್ದರಿಂದ ಮಾತನಾಡುವುದು ಕ್ಷೇಮವೆಂದು ಕಿನ್ನರಿ ಹೇಳಿದಳು, ‘ಮಹಾರಾಜಾ, ನಮಗೆ ರಾಜರೊಂದಿಗೆ ಮಾತನಾಡಿ ಗೊತ್ತಿಲ್ಲ. ಹಾಗೆ ತಿಳಿಯದೆ ತೂಕದ ಮಾತನ್ನಾಡದೇ ಹೋದರೆ ಎಲ್ಲಿ ತಪ್ಪಾಗುತ್ತದೋ ಎಂಬ ಭಯದಿಂದ ನಾನು ಮಾತನಾಡಲಿಲ್ಲ’. ಕಿನ್ನರಿಯ ಮಾತು ರಾಜನಿಗೆ ಸಂತೋಷ ನೀಡಿತು. ‘ಈ ಕಿನ್ನರಿಯನ್ನು ಬಿಡುಗಡೆ ಮಾಡಿ ಹಿಮಾಲಯಕ್ಕೆ ಕರೆದೊಯ್ಯಿರಿ. ಆದರೆ ಈ ಮಾತನಾಡದ ಕಿನ್ನರನನ್ನು ಮಾತ್ರ ನಾಳೆ ಬೆಳಿಗ್ಗೆಯ ಊಟಕ್ಕೆ ಬಳಸಿ ಬಿಡಿ’ ಎಂದು ಹೇಳಿದ. ಈಗ ತಾನು ಸುಮ್ಮನಿದ್ದರೆ ಪ್ರಾಣ ಹೋಗುತ್ತದೆಂದು ತಿಳಿದ ಕಿನ್ನರ ಹೇಳಿದ, ‘ಮಹಾರಾಜಾ, ದೇಶದ ಪಶುಗಳು ಮೋಡಗಳನ್ನು ಅವಲಂಬಿಸಿವೆ, ಜನರು ಪಶುಗಳನ್ನು ಅವಲಂಬಿಸಿದ್ದಾರೆ, ಇಡೀ ದೇಶ ತಮ್ಮನ್ನು ಅವಲಂಬಿಸಿದೆ, ಮತ್ತು ನಾವಿಬ್ಬರು ಕೂಡ ತಮ್ಮನ್ನೇ ಅವಲಂಬಿಸಿದ್ದೇವೆ. ನಮ್ಮಿಬ್ಬರನ್ನು ಯಾರಾದರೂ ಒಬ್ಬರು ಸತ್ತರೂ ಕೂಡ, ಇನ್ನೊಬ್ಬರು ಬದುಕುವುದಿಲ್ಲ. ನಾವು ಮಾತಿನಲ್ಲಿ ಎಲ್ಲಿ ತಪ್ಪುತ್ತೇವೋ, ಅದರಿಂದ ರಾಜರಿಗೆ ನೋವಾಗುತ್ತದೋ ಎಂಬ ಭಯದಿಂದ ಮಾತನಾಡಲಿಲ್ಲ. ತಮ್ಮ ಅಧಿಕಾರವನ್ನು ಧಿಕ್ಕರಿಸುವ ವಿಚಾರ ನಮಗಿಲ್ಲ’.

ರಾಜನಿಗೆ ಅತೀವ ಸಂತೋಷವಾಗಿ ಅವರಿಬ್ಬರನ್ನು ಹಿಮಾಲಯದಲ್ಲಿ, ಅವರು ಮೊದಲಿದ್ದ ಸ್ಥಾನಕ್ಕೇ ಬಿಟ್ಟ ಬರಲು ಆಜ್ಞೆ ಮಾಡಿದ.

ಮನುಷ್ಯರಿಗೆ ಮಾತೇ ಕಲ್ಯಾಣಕರವಾದದ್ದು. ಸರಿಯಾಗಿ ಬಳಸದಿದ್ದರೆ ಪ್ರಾಣಕ್ಕೆ ಕಂಟಕವಾಗುವಂಥದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT