ಮಂಗಳವಾರ, ಮಾರ್ಚ್ 21, 2023
29 °C

ಬೆರಗಿನ ಬೆಳಕು: ವೆಸ್ಸಂತರನಿಗಾಗಿ ಹುಡುಕಾಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೆಂಡತಿಯ ಬಿರುಮಾತಿಗೆ ಮುದುಕ ಬ್ರಾಹ್ಮಣ ತತ್ತರಿಸಿ ಹೋದ. ತರುಣ ಹೆಂಡತಿಯಲ್ಲಿ ತಾನಿಟ್ಟಿದ್ದ ಕಾಮುಕತೆಗೆ ಪೀಡಿತನಾದ ಬ್ರಾಹ್ಮಣ ಹೇಳಿದ, ‘ಆಯ್ತು, ದೇವಿ. ದಯವಿಟ್ಟು ನನಗಾಗಿ ಪ್ರಯಾಣಕ್ಕಾಗಿ ಬೆಲ್ಲ ಹಾಕಿದ ಪೂರಿಗಳನ್ನು ಮಾಡು. ಒಂದಷ್ಟು ರೊಟ್ಟಿಗಳನ್ನು ಮಾಡು. ರುಚಿ ರುಚಿಯಾದ ಉಂಡೆಗಳನ್ನು ಮಾಡಿ ಕಟ್ಟು. ಅವನ್ನೆಲ್ಲ ತೆಗೆದುಕೊಂಡು ದೂರದ ಪ್ರವಾಸಕ್ಕೆ ಹೊರಡುತ್ತೇನೆ. ಹೇಗಾದರೂ ಮಾಡಿ ವೆಸ್ಸಂತರನನ್ನು ಬೆಟ್ಟಿಯಾಗಿ, ನಿನ್ನ ಸೇವೆಗೆ ದಾಸ, ದಾಸಿಯರನ್ನು ಕರೆದುಕೊಂಡೇ ಬರುತ್ತೇನೆ’. ಆಕೆ ಇಡೀ ದಿನ ಕಷ್ಟಪಟ್ಟು ಎಲ್ಲ ಅಡುಗೆಯನ್ನು ಮಾಡಿ ಚೆನ್ನಾಗಿ ಬುತ್ತಿ ಕಟ್ಟಿಕೊಟ್ಟಳು. ಆತ ಹೊರಡುವ ಮುನ್ನ ಮನೆಗೆ ಬೇಕಾದ ದುರಸ್ತಿಗಳನ್ನು ಮಾಡಿಸಿ, ಬಾಗಿಲನ್ನು ಭದ್ರಪಡಿಸಿದ. ಸಾಕಷ್ಟು ದಿನ ಆಗುವಂತೆ ಕಾಡಿನಿಂದ ಸೌದೆಯನ್ನು ತಂದು ತುಂಬಿದ. ಮನೆಯಲ್ಲಿ ಇದ್ದ ಎಲ್ಲ ಪಾತ್ರೆಗಳಲ್ಲಿ ನೀರು ತುಂಬಿದ. ನಂತರ ಮನೆಯಿಂದ ಹೊರಡುವಾಗ ಗೃಹಸ್ಥನ ಬಟ್ಟೆ ಕಳಚಿ, ಸನ್ಯಾಸಿಯ ವೇಷ ಧರಿಸಿದ. ಹೆಂಡತಿಗೆ ಎಚ್ಚರ ನೀಡಿದ, ‘ದೇವಿ, ಇಂದಿನಿಂದ ಅಸಮಯದಲ್ಲಿ ಮನೆಯಿಂದ ಹೊರಗೆ ಹೋಗಬೇಡ. ನಾನು ಬರುವವರೆಗೆ ಮನಸ್ಸನ್ನು ಚಂಚಲ ಮಾಡಿಕೊಳ್ಳದೆ ಅಪ್ರಮಾದಿಯಾಗಿರು’. ಆಮೇಲೆ ಹೆಗಲಿಗೆ ಬುತ್ತಿಯ ಚೀಲವನ್ನೂ, ಜೋಳಿಗೆಯನ್ನೂ ಏರಿಸಿದ. ಕಣ್ಣಲ್ಲಿ ನೀರು ತುಂಬಿಕೊಂಡು ಅಮಿತ್ರತಾಪನಳ ಸುತ್ತ ಪ್ರದಕ್ಷಿಣೆ ಹಾಕಿ ಮನೆಯಿಂದ ಹೊರಟ.

ಆತ ವೆಸ್ಸಂತರನನ್ನು ಹುಡುಕಿಕೊಂಡು ಮೊದಲು ಸಿವಿಗಳ ಸಮೃದ್ಧ ರಾಷ್ಟ್ರಕ್ಕೆ ಬಂದ. ನಗರದಲ್ಲಿ ಜನರಿಗೆ, ‘ವೆಸ್ಸಂತರ ಈಗ ಎಲ್ಲಿದ್ದಾನೆ?’ ಎಂದು ಕೇಳಿದ. ಅವರು ದುಃಖದಿಂದ, ‘ನಿಮ್ಮಂತಹ ಬೇಡುವವರಿಂದ ಪೀಡಿತನಾಗಿ, ಅತಿದಾನದಿಂದ ಈಗ ದೇಶಭ್ರಷ್ಟನಾಗಿದ್ದಾನೆ. ಹೆಂಡತಿ ಮಕ್ಕಳ ಸಹಿತವಾಗಿ ಸನ್ಯಾಸಿಯಂತೆ ವಂಕಪರ್ವತದಲ್ಲಿ ವಾಸವಾಗಿದ್ದಾನೆ’ ಎಂದರು. ಆತ ನಿರುಪಾಯನಾಗಿ ವಂಕಪರ್ವತದ ದಾರಿ ಹಿಡಿದ. ಅದು ಅವನಿಗೆ, ಅವನ ವಯಸ್ಸಿಗೆ, ತುಂಬ ಪರಿಶ್ರಮದ ದಾರಿ. ತರುಣಿ ಪತ್ನಿಯಿಂದ ಪೀಡಿತನಾದ ಕಾಮುಕ ಬ್ರಾಹ್ಮಣ ನಿಧಾನವಾಗಿ ಬಂದು ದಟ್ಟವಾದ ಕಾಡನ್ನು ಸೇರಿದ. ಅವನು ಕಾಡಿನಲ್ಲಿ ಬರುತ್ತಿದ್ದಂತೆ ಕಾಡಿನ ನಾಯಿಗಳು ಅವನನ್ನು ಮುತ್ತಿಕೊಂಡವು. ಆತ ದಿಕ್ಕುತಪ್ಪಿ ಓಡುತ್ತ ಮಾರ್ಗಭ್ರಷ್ಟನಾದ. ತಾನು ಯೋಜಿಸಿದ ಮಾರ್ಗವನ್ನು ಕಳೆದುಕೊಂಡು ಬೇರೊಂದು ದಿಕ್ಕಿಗೆ ಬಂದ. ದಿಕ್ಕು ತೋರದೆ ಒಂದು ಮರವನ್ನೇರಿ ಕುಳಿತು ಪ್ರಲಾಪ ಮಾಡತೊಡಗಿದ. ‘ಸದಾ ವಿಜಯಿಯಾಗಿದ್ದ, ಎಲ್ಲರಿಗೂ ಅಭಯವನ್ನು ನೀಡುವ, ದಾನಶೂರ ರಾಜಕುಮಾರ ವೆಸ್ಸಂತರನ ವಿಳಾಸವನ್ನು ನನಗೆ ತಿಳಿಸುವವರು ಯಾರಾದರೂ ಇದ್ದೀರಾ? ಭೂಮಿಯ ಸರ್ವಪ್ರಾಣಿಗಳಲ್ಲೂ ಕರುಣೆಯನ್ನು ತೋರಿಸುವ, ಯಾಚಕರಿಗೆ ಬೇಡಿದ್ದನ್ನು ಕೊಡುವ ಕಾಮಧೇನುವಿನಂತೆ ಇರುವ ವೆಸ್ಸಂತರನ ಸುಳಿವನ್ನು ಯಾರಾದರೂ ಕೊಡಬಹುದೇ? ಈ ಭಯಂಕರವಾದ
ಕಾಡಿನಲ್ಲಿ ಗಾಬರಿಯಿಂದ ರೋಧಿಸುತ್ತಿರುವ ನನಗೆ ಯಾರಾದರೂ ಆ ಮಹಾತ್ಮನ ಇರುವಿಕೆಯನ್ನು ತಿಳಿಸಿದರೆ ಅವರಿಗೆ ಸಕಲ ಪುಣ್ಯ ಲಭಿಸಲೆಂದು ಪ್ರಾರ್ಥಿಸುತ್ತೇನೆ’ ಇವನ ಪ್ರಲಾಪವನ್ನು ಕೇಳಿದ, ಕಾವಲುಗಾರನಾಗಿ ನೇಮಿಸಲ್ಪಟ್ಟ ಜೆತಿರಾಷ್ಟ್ರದ ಮನುಷ್ಯ, ಈತನ ಸನ್ಯಾಸಿವೇಷವನ್ನು ಕಂಡು ಬಳಿಗೆ ಬಂದು ಸಮಾಧಾನ ಮಾಡಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು