ಶನಿವಾರ, ಆಗಸ್ಟ್ 13, 2022
24 °C

ಕರಗಿದ ಅಹಂಕಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನೇತ್ರಾವತಿ ನಗರದ ಬಳಿ ಇದ್ದ ನೇತ್ರಾವತಿ ನದಿಯ ದಂಡೆಯಲ್ಲಿ ಜಾತಿಮಂತ ಎಂಬ ಬ್ರಾಹ್ಮಣನಿದ್ದ. ಅವನು ಪ್ರವ್ರಜಿತನಾದ. ಆದರೆ ಅವನಿಗೆ ತಾನು ಬ್ರಾಹ್ಮಣನೆಂಬ ಜಾತಿಯ ಅಭಿಮಾನ ದೊಡ್ಡದಾಗಿತ್ತು. ಆಗ ಬೋಧಿಸತ್ವ ಅವನ ಅಭಿಮಾನವನ್ನು ಒಡೆದು ಹಾಕಲೆಂದು ಅವನಿಗೆ ಹತ್ತಿರದಲ್ಲೇ ನದಿಯ ಮೇಲ್ಭಾಗದಲ್ಲಿ ಬಂದು ನೆಲೆಸಿದ. ಒಂದು ದಿನ ಬೆಳಿಗ್ಗೆ ಹಲ್ಲುಜ್ಜುತ್ತಿದ್ದಾಗ, ನದಿಯ ಕೆಳಭಾಗದಲ್ಲಿ ಜಾತಿವಂತ ಸ್ನಾನಮಾಡಲು ಬಂದದ್ದನ್ನು ಕಂಡ. ತನ್ನ ಹಲ್ಲು ಉಜ್ಜುವ ಕಡ್ಡಿ ಜಾತಿವಂತನ ಜುಟ್ಟಿನಲ್ಲಿ ಸಿಕ್ಕಿಕೊಳ್ಳಲೆಂದೇ ಸಂಕಲ್ಪ ಮಾಡಿ ಕಡ್ಡಿಯನ್ನು ನೀರಿನಲ್ಲಿ ಎಸೆದ. ಅದು ತೇಲಿಬಂದು ಆಚಮನ ಮಾಡುತ್ತಿದ್ದ ಜಾತಿಮಂತನ ಜುಟ್ಟಿನಲ್ಲಿ ಸೇರಿಕೊಂಡಿತು. ಆತನಿಗೆ ಭಾರೀ ಕೋಪ ಬಂದಿತು. ಈ ಹಲ್ಲುಕಡ್ಡಿ ಎಲ್ಲಿಂದ ಬಂತು ಎಂದು ನೋಡಲು ಪ್ರವಾಹದ ಮೇಲಿನ ಭಾಗಕ್ಕೆ ಬಂದ. ಅಲ್ಲಿ ಬೋಧಿಸತ್ವನನ್ನು ಕಂಡು, “ಎಲೆ ಪಾಪಿ, ನೀನೇ ಈ ಹಲ್ಲುಕಡ್ಡಿಯನ್ನು ಬೀಳಿಸಿದೆಯಾ?” ಎಂದು ಕೇಳಿದ. “ಹೌದು, ನಾನೇ ಬೀಳಿಸಿದ್ದು” ಎಂದ ಬೋಧಿಸತ್ವ. “ನೀನೊಬ್ಬ ಅಮಂಗಳ, ನಿನಗೆ ಕೆಟ್ಟದ್ದಾಗುತ್ತದೆ. ನೀನು ಹೋಗಿ ಪ್ರವಾಹದ ಕೆಳಭಾಗದಲ್ಲಿ ಇರು. ಇಲ್ಲಿ ಮೇಲಿರುವುದು ಬೇಡ” ಎಂದು ಕೂಗಾಡಿದ. ಬೋಧಿಸತ್ವ ಮಾತನಾಡದೆ ಪ್ರವಾಹದ ಕೆಳಭಾಗಕ್ಕೆ ಹೋಗಿ ನೆಲೆಸಿದ.

ಮರುದಿನ ಮತ್ತೆ ಜಾತಿಮಂತ ಸ್ನಾನಕ್ಕೆ ಬಂದಾಗ ಬೋಧಿಸತ್ವ ಮತ್ತೆ ಹಲ್ಲು ಉಜ್ಜಿಕೊಳ್ಳುತ್ತಿದ್ದ ಕಡ್ಡಿಯನ್ನು ಪ್ರವಾಹದಲ್ಲಿ ಎಸೆದ. ವಿಚಿತ್ರ! ಕಡ್ಡಿ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಾಗಿ ಹೋಗಿ ಜಾತಿಮಂತನ ಜುಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿತು. ಈ ಸಲವಂತೂ ಜಾತಿಮಂತನಿಗೆ ವಿಪರೀತ ಸಿಟ್ಟು ಬಂದು ಬೋಧಿಸತ್ವನ ಬಳಿಗೆ ಬಂದು, “ನಿನಗೆ ಕೆಟ್ಟದ್ದಾಗುವ ಕಾಲ ಬಂದಿದೆ. ನೀನು ಇಲ್ಲಿಂದ ಹೋಗದೆ ಇದ್ದರೆ. ಏಳನೆಯ ದಿನ ನನ್ನ ತಲೆ ಒಡೆದು ಏಳು ಚೂರಾಗಿ ಬಿಡುತ್ತದೆ” ಎಂದ. ಸಿಟ್ಟಿನ ಭರದಲ್ಲಿ ‘ನಿನ್ನ ತಲೆ’ ಎನ್ನುವುದನ್ನು ಮರೆತು “ನನ್ನ ತಲೆ” ಎಂದು ತಾನಾಗೇ ಶಾಪ ಕೊಟ್ಟುಕೊಂಡುಬಿಟ್ಟಿದ್ದ. ಅದು ಅವನಿಗೆ ಹೊಳೆಯಲೂ ಇಲ್ಲ.

ತಾನು ಅವನ ವಿರುದ್ಧ ಕೋಪ ಮಾಡಿಕೊಂಡರೆ ತಾನು ಕಾಪಾಡಿಕೊಂಡು ಬಂದಿರುವ ಶೀಲ ಹಾಳಾಗುತ್ತದೆಂದು ಬೋಧಿಸತ್ವ ತೀರ್ಮಾನಿಸಿದ. ಆದರೂ ಜಾತಿಮಂತನ ಅಹಂಕಾರವನ್ನು ಹೇಗಾದರೂ ಉಪಾಯವಾಗಿ ಕಳೆಯಬೇಕು ಎಂದುಕೊಂಡ. ಆರು ದಿನಗಳು ಕಳೆದವು. ಏಳನೆಯ ದಿನ ಸೂರ್ಯೋದಯವಾಗುವುದನ್ನೇ ಬೋಧಿಸತ್ವ ತಡೆದುಬಿಟ್ಟ. ಗಾಬರಿ, ಕೋಪಗಳಿಂದ ಜನ ಜಾತಿಮಂತ ತಪಸ್ವಿ ಹತ್ತಿರ ಹೋಗಿ, “ನೀವೇ ಸೂರ್ಯೋದಯವನ್ನು ತಡೆದದ್ದೇ?” ಎಂದು ಕೇಳಿದರು. ಆತ, “ಇದು ನಾನು ಮಾಡಿದ್ದಲ್ಲ. ಈ ಪ್ರವಾಹದ ಕೆಳಭಾಗದಲ್ಲಿ ಒಬ್ಬ ಚಾಂಡಾಲನಿದ್ದಾನೆ. ಇದನ್ನು ಆತ ಮಾಡಿದ್ದು” ಎಂದ. ಜನರೆಲ್ಲ ಬೋಧಿಸತ್ವನ ಕಡೆಗೆ ಬಂದರು.

“ಸೂರ್ಯೋದಯವನ್ನು ತಡೆದದ್ದು ನೀನೇನಾ?” ಎಂದು ಕೇಳಿದರು. ಬೋಧಿಸತ್ವ, “ಹೌದು, ಆತ ನನಗೆ ಶಾಪ ಕೊಟ್ಟಿದ್ದಾನೆ. ಆತ ಕ್ಷಮೆ ಕೇಳಿದರೆ ಸೂರ್ಯನನ್ನು ಬಿಡುಗಡೆ ಮಾಡುತ್ತೇನೆ” ಎಂದ. ಜನರೆಲ್ಲ ಜಾತಿಮಂತನನ್ನು ಹಿಡಿದುಕೊಂಡು ಬಂದು ಕ್ಷಮೆ ಕೇಳಿಸಿದರು. ಈಗ ತಕ್ಷಣ ಸೂರ್ಯನನ್ನು ಬಿಡುಗಡೆ ಮಾಡಿದರೆ ತಪಸ್ವಿಯ ತಲೆ ಹೋಳಾಗುತ್ತದೆ, ಅದನ್ನು ತಪ್ಪಿಸಲು ಬೋಧಿಸತ್ವ ಮಣ್ಣಿನ ಒಂದು ಉಂಡೆ ಯನ್ನು ಮಾಡಿ, ತಪಸ್ವಿಯ ತಲೆಯ ಮೇಲಿಟ್ಟು, ಅವನನ್ನು ನೀರಿನಲ್ಲಿ ಮುಳುಗಿಸಿ, ಸೂರ್ಯನನ್ನು ಬಿಡುಗಡೆ ಮಾಡಿದ. ತಕ್ಷಣ ಮಣ್ಣಿನ ಉಂಡೆ ಹೋಳಾಗಿ ತಪಸ್ವಿ ಬದುಕಿದ. ಅಂದಿನಿಂದ ಅವನ ಜಾತಿಯ ಅಹಂಕಾರ ಪೂರ್ತಿ ಕರಗಿ ಹೋಯಿತು. ಸನ್ಯಾಸ ಧರ್ಮ ಸಾರ್ಥಕವಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು