ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಾನುಕರಣೆ

Last Updated 16 ಅಕ್ಟೋಬರ್ 2019, 19:58 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಸಿಂಹವಾಗಿ ಹುಟ್ಟಿದ್ದ. ಪಶ್ಚಿಮ ಸಮುದ್ರದ ಹತ್ತಿರವಿದ್ದ ಕಾಡಿನಲ್ಲಿ ರಾಜನಾಗಿ ಇದ್ದ, ಅದೇ ಸಮಯದಲ್ಲಿ ಸಮುದ್ರದ ಹತ್ತಿರವೇ ಇದ್ದ ಬೇಲದ ಹಾಗೂ ತಾಳೆಯ ವನದಲ್ಲಿ ಒಂದು ಮೊಲ ಬದುಕಿತ್ತು. ಅದು ಬೇಲದ ಮರದ ಕೆಳಗೆ ತನ್ನ ಮನೆಯನ್ನು ಮಾಡಿತ್ತು.

ಒಂದು ದಿನ ಮಧ್ಯಾಹ್ನತಿರುಗಾಡಿ ಮೃದುವಾದ ಚಿಗುರುಹುಲ್ಲನ್ನು ಹೊಟ್ಟೆತುಂಬ ತಿಂದು ಬಂದು ಬೇಲದ ಮರದ ಕೆಳಗೆ ತಾಳೆಗರಿಯನ್ನು ಹಾಸಿಕೊಂಡು ಮಲಗಿತು. ಅದಕ್ಕೆ ನಿಧಾನವಾಗಿ ನಿದ್ರೆ ಎಳೆಯುತ್ತಿತ್ತು. ಆಗ ಅದಕ್ಕೊಂದುಚಿಂತೆ ಬಂದಿತು. ಇಷ್ಟು ದೊಡ್ಡದಾದ ಭೂಮಿ ಗುಡಗುಡನೇ ಉರುಳ ತೊಡಗಿದರೆ ಏನು ಗತಿ? ತಾನು ಎಲ್ಲಿಗೆ ಓಡಿ ಹೋಗಬೇಕು? ಹೀಗೆ ಚಿಂತಿಸುತ್ತಿರುವಾಗಲೇ ಮೇಲಿನಿಂದ ಒಂದು ಪಕ್ವವಾದ ಬೇಲದ ಹಣ್ಣು ಠಪ್ಪನೆ ಬಿದ್ದು ಉರುಳತೊಡಗಿತು. ಆ ಬೇಲದ ಹಣ್ಣು ಉರುಳುವ ಸಪ್ಪಳವನ್ನು ಕೇಳಿ ಗಾಬರಿಯಾದ ಮೊಲ ‘ಅಯ್ಯೋ ಭೂಮಿ ಉರುಳುತ್ತಿದೆ’ ಎಂದು ಕೂಗಿಕೊಂಡು ಸಮುದ್ರದ ಕಡೆ ಓಡತೊಡಗಿತು. ದಾರಿಯಲ್ಲಿ ಎದುರುಬಂದ ಮತ್ತೊಂದು ಮೊಲ, ‘ಏನಾಯಿತು? ಯಾಕೆ ಹೀಗೆ ಓಡುತ್ತಿದ್ದೀ?’ ಎಂದು ಕೇಳಿದಾಗ ‘ಮಾತಾಡಬೇಡ, ಭೂಮಿ ಉರುಳುತ್ತಿದೆ, ಓಡಿಜೀವ ಉಳಿಸಿಕೋ’ ಎಂದು ಓಡಿತು. ಇನ್ನೊಂದು ಮೊಲಕ್ಕೂ ಗಾಬರಿಯಾಗಿ ಅದೂ ಇದನ್ನು ಹಿಂಬಾಲಿಸಿ ಓಡತೊಡಗಿತು. ಇದೇ ರೀತಿ ಮೂರನೆಯ, ನಾಲ್ಕನೆಯ ಮೊಲಗಳು ಓಡಿದವು. ಅವುಗಳ ಹಿಂದೆ ಸಾವಿರಾರು ಮೊಲಗಳು ಕಂಗಾಲಾಗಿ ಓಡುತ್ತಿದ್ದವು. ಇವುಗಳ ಆತುರ ಭಯಗಳನ್ನು ಕಂಡು ಜಿಂಕೆಗಳು, ಹಂದಿಗಳು, ಎಮ್ಮೆಗಳು, ಹಸುಗಳು, ಕರಡಿಗಳು, ಹುಲಿಗಳು, ಆನೆಗಳು ಕೂಡ ಸಮುದ್ರದೆಡೆಗೆ ಓಡುವುದರಲ್ಲಿ ತೊಡಗಿದವು.

ಇದನ್ನು ಕಂಡ ಬೋಧಿಸತ್ವ ಸಿಂಹ ಎದ್ದು ನಿಂತಿತು. ಯಾವುದೋ ಭಯದಿಂದ ಪ್ರಾಣಿಗಳು ಓಡುತ್ತಿವೆ. ತಡೆಯದಿದ್ದರೆ ಸಮುದ್ರದಲ್ಲಿ ಬಿದ್ದು ಸತ್ತು ಹೋಗುತ್ತವೆ ಎಂದುಕೊಂಡು ದಾರಿ ಮಧ್ಯದಲ್ಲಿ ನಿಂತು ಮೂರು ಬಾರಿ ಭಯಂಕರವಾಗಿ ಘರ್ಜಿಸಿತು. ಪ್ರಾಣಿಗಳು ನಿಂತವು. ಸಿಂಹ ಗಂಭೀರವಾಗಿ ಕೇಳಿತು, ‘ಯಾಕೆ ನೀವೆಲ್ಲ ಓಡುತ್ತಿದ್ದೀರಿ?’ ಆನೆ ಹೇಳಿತು, ‘ಭೂಮಿ ಉರುಳುತ್ತಿದೆ, ನೀನೂ ಓಡು’ ‘ಭೂಮಿ ಉರುಳುತ್ತಿರುವುದನ್ನು ಕಂಡವರಾರು?’ ಸಿಂಹ ಕೇಳಿತು.

‘ನನಗೆ ಹುಲಿ ಹೇಳಿತು’ ಎಂದಿತು ಆನೆ.
‘ನನಗೆ ಕರಡಿ ಹೇಳಿತು’ ಎಂದಿತು ಹುಲಿ.
ಹೀಗೆ ಒಂದರಿಂದ ಮತ್ತೊಂದರ ಹೆಸರು ಹೇಳುತ್ತ ಕೊನೆಗೆ ಮೊಲ ಹೇಳಿದ್ದು ಎಂದು ತಿಳಿಯಿತು. ಸಿಂಹ ಮೊಲಕ್ಕೆ ಕೇಳಿತು, ‘ಭೂಮಿ ಉರುಳುವುದನ್ನು ನೀನು ಕಂಡೆಯಾ?’ ಮೊಲ ‘ಹೌದು, ನಾನು ಮರದ ಕೆಳಗೆ ಮಲಗಿರುವಾಗ ಕಂಡೆ’ ಎಂದಿತು. ಆಗ ಸಿಂಹ ಎಲ್ಲ ಪ್ರಾಣಿಗಳಿಗೂ ಅಲ್ಲಿಯೇ ಇರುವಂತೆ ಹೇಳಿ ಮೊಲವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಮೊಲ ವಾಸಿಸುತ್ತಿದ್ದ ಬೇಲದ ಮರದ ಬಳಿ ಬಂದಿತು. ಬೇಲದ ಹಣ್ಣು ಉರುಳುವುದನ್ನು ನಿದ್ದೆಗಣ್ಣಿನಲ್ಲಿ ಭೂಮಿ ಉರುಳುತ್ತಿದೆ ಎಂದು ಭಾವಿಸಿದ ಮೊಲವನ್ನು ಛೇಡಿಸಿ ನಂತರ ಅದನ್ನು ಕರೆದುಕೊಂಡು ಉಳಿದ ಪ್ರಾಣಿಗಳ ಬಳಿಗೆ ಬಂದು ಅವುಗಳ ಭಯವನ್ನು ನಿವಾರಿಸಿತು.

ಬೇರೆಯವರ ಮಾತುಗಳನ್ನು ಪರಿಶೀಲಿಸದೆ ನಂಬುವರು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಪ್ರಜ್ಞಾವಂತರು, ಧೀರರು ಬೇರೆಯವರ ಮಾತುಗಳನ್ನು ಕಣ್ಣು ಮುಚ್ಚಿ ಅನುಕರಣೆ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT