ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅನಾಹುತಕ್ಕೆ ಆಹ್ವಾನ

Last Updated 17 ಜೂನ್ 2020, 19:30 IST
ಅಕ್ಷರ ಗಾತ್ರ

ಕೋಸಲ ದೇಶದ ರಾಜನಿಗೆ ಬಂಧುಲನೆಂಬ ಸೇನಾಪತಿ ಇದ್ದ. ಆತ ತುಂಬ ಪರಾಕ್ರಮಶಾಲಿ, ಅವನನ್ನು ಗೆಲ್ಲುವುದು ಅಸಾಧ್ಯವೆಂದೇ ಮಾತು ಹರಡಿತ್ತು. ಅವನ ಹೆಂಡತಿ ಮಲ್ಲಿಕಾ. ಬಹಳ ವರ್ಷ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಬಂಧುಲನ ತಾಯಿ ದುಃಖದಿಂದ, ‘ನೀನು ಬಂಜೆಯಾದ್ದರಿಂದ ನಮ್ಮ ವಂಶ ವೃದ್ಧಿಯಾಗುವುದಿಲ್ಲ. ನೀನು ನಿನ್ನ ತವರು ಮನೆಗೆ ಹೋಗಿ ಬಿಡು’ ಎಂದು ಕಳುಹಿಸಿದಳು. ದಾರಿಯಲ್ಲಿ ಮಲ್ಲಿಕಾ ಬುದ್ಧನನ್ನು ಕಂಡು ನಮಸ್ಕರಿಸಿ ಹೋಗಲು ಚೇತವನಕ್ಕೆ ಬಂದಳು.

ಆಕೆಯಿಂದ ವಿಷಯ ತಿಳಿದ ಬುದ್ಧ, ‘ನೀನು ಈ ಕಾರಣಕ್ಕೆ ತವರುಮನೆಗೆ ಹೋಗಬೇಕಿಲ್ಲ. ಪರಿಸ್ಥಿತಿ ಬದಲಾಗುತ್ತದೆ’ ಎಂದು ಮರಳಿ ಗಂಡನ ಮನೆಗೆ ಕಳುಹಿಸಿದ. ಅದಾವ ಕೃಪೆಯಾಯಿತೊ, ಮಲ್ಲಿಕಾ ಗರ್ಭವತಿಯಾದಳು. ಆಕೆಗೆ ಬಯಕೆಗಳು ಮೂಡತೊಡಗಿದವು. ಒಂದು ದಿನ ಬಂಧುಲ ಆಕೆಯ ಬಯಕೆಯ ಬಗ್ಗೆ ಕೇಳಿದ. ಆಕೆ, ‘ನನಗೆ ವೈಶಾಲಿ ನಗರದಲ್ಲಿ ಅಭಿಷೇಕ ಮಂಗಳದ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ಅಲ್ಲಿಯ ನೀರು ಕುಡಿಯುವ ಆಸೆ’ ಎಂದಳು. ಆ ದಿನಗಳಲ್ಲಿ ಕೋಸಲ ದೇಶದವರಿಗೆ ಮತ್ತು ವೈಶಾಲಿಯ ಲಿಚ್ಛವಿಗಳಿಗೆ ಬಹಳ ದ್ವೇಷವಿತ್ತು. ಬಂಧುಲ ಲಿಚ್ಛವಿಯ ಸೇನಾಪತಿಗೆ ಮತ್ತು ರಾಜರಿಗೆ ಒಂದು ಮನವಿಯನ್ನು ಮಾಡಿ, ಬಸುರಿಯ ಬಯಕೆ ತೀರಿಸಲು ಸಹಾಯ ಮಾಡಿ ಎಂದು ಕೇಳಿದ.

ಅಹಂಕಾರಿಗಳಾದ ಲಿಚ್ಛವಿಗಳು, ಬಂಧುಲ ವೈಶಾಲಿಗೆ ಬಂದರೆ ಅವನನ್ನು ಕೊಂದು ಬಿಡುವುದಾಗಿ ತಿಳಿಸಿದರು. ಬಂಧುಲ ಕೇಳಿಯಾನೇ? ರಥದಲ್ಲಿ ಹೆಂಡತಿಯನ್ನು ಕೂಡ್ರಿಸಿಕೊಂಡು, ಸಕಲ ಅಸ್ತ್ರಗಳನ್ನು ತುಂಬಿಕೊಂಡು ವೈಶಾಲಿಗೆ ಹೊರಟ. ಬಂಧುಲನೊಂದಿಗೆ ಗುರುಕುಲದಲ್ಲಿ ಕಲಿತ ಮಹಾಲಿ ಎಂಬ ಮಹಾಜ್ಞಾನಿ, ನಗರದ್ವಾರದ ಪಕ್ಕದಲ್ಲೇ ವಾಸವಾಗಿದ್ದ. ಅವನು ಹುಟ್ಟು ಕುರುಡನಾದರೂ ಲಿಚ್ಛವಿಗಳಿಗೆ ಧರ್ಮ, ನ್ಯಾಯಗಳ ಸಲಹೆ ನೀಡುತ್ತಿದ್ದ. ರಭಸದಿಂದ ಬರುವ ರಥದ ಶಬ್ದವನ್ನು ಕೇಳಿ, ಇದು ಖಂಡಿತವಾಗಿಯೂ ಬಂಧುಲನ ರಥದ ಶಬ್ಧ. ಲಿಚ್ಛವಿಗಳಿಗೆ ಅನಾಹುತ ಕಾದಿದೆ ಎಂದುಕೊಂಡ. ಬಂಧುಲ ನೇರವಾಗಿ ಪುಷ್ಕರಿಣಿಗೆ ಹೋಗಿ ಅಲ್ಲಿಯ ಲೋಹದ ಬಲೆಗಳನ್ನು ಕತ್ತರಿಸಿ, ಕಾವಲಿದ್ದ ಸೈನಿಕರನ್ನು ಕೊಂದ. ಹೆಂಡತಿಯೊಂದಿಗೆ ತಾನೂ ಸ್ನಾನ ಮಾಡಿ ರಥದಲ್ಲಿ ಮರಳಿ ಹೊರಟ.

ವಿಷಯ ತಿಳಿದು ಲಿಚ್ಛವಿಯ ರಾಜರು, ಐದುನೂರು ಯೋಧರನ್ನು ರಥಗಳಲ್ಲಿ ಬಂಧುಲನನ್ನು ಕೊಲ್ಲಲು ಕಳುಹಿಸಿದರು. ದಾರಿಯಲ್ಲಿ ಮಹಾಲಿ ಅವರನ್ನು ನಿಲ್ಲಿಸಿ, ‘ಹೋಗಬೇಡಿ, ಬಂಧುಲ ಯುದ್ಧಕ್ಕಾಗಿ ಬಂದವನಲ್ಲ. ಅವನ ಹೆಂಡತಿಯ ಬಯಕೆ ತೀರಿಕೆಗೆ ಅಪ್ಪಣೆ ಕೊಡದೆ ನೀವು ತಪ್ಪು ಮಾಡಿದ್ದೀರಿ. ಅವನಿಗೆ ಅನುಮತಿ ಕೊಟ್ಟಿದ್ದರೆ ಎರಡು ದೇಶಗಳ ನಡುವಿನ ಸಂಬಂಧ ಸುಧಾರಿಸಬಹುದಿತ್ತು. ಈಗ ಅವನನ್ನು ಬಿಟ್ಟುಬಿಡಿ, ಇಲ್ಲದೇ ಹೋದರೆ ನಿಮಗೆ ಅಪಾಯವಿದೆ’ ಎಂದ. ಅವನ ಮಾತನ್ನು ಕೇಳದೆ ಸೈನಿಕರು ನುಗ್ಗಿದರು. ಆತ ಒಂದೇ ಬಾಣದಿಂದ ಎಲ್ಲ ರಥಗಳ ಚಕ್ರಗಳು ನೆಲದಲ್ಲಿ ಹೂತುಹೋಗುವಂತೆ ಮಾಡಿದ. ಅವರೆಲ್ಲ ಕೆಳಗಿಳಿದು ಬಂದಾಗ ಅವನ ಒಂದೇ ಬಾಣ ಐದುನೂರು ಜನರ ಸೊಂಟಪಟ್ಟಿಯ ಸ್ಥಳವನ್ನು ಕತ್ತರಿಸಿ ಹಾಕಿತು. ಅವರು ಹಾಗೆಯೇ ಮುಂದುವರೆಯುತ್ತಿದ್ದಾಗ ಬಂಧುಲ ಹೇಳಿದ, ‘ನೀವೆಲ್ಲ ಸತ್ತು ಹೋಗಿದ್ದೀರಿ. ಸೊಂಟ ಪಟ್ಟಿ ಬಿಚ್ಚಿದ ತಕ್ಷಣ ಎರಡು ತುಂಡಾಗುತ್ತೀರಿ. ಹಾಗೆಯೇ ಮನೆಗೆ ಹೋಗಿ, ಹೆಂಡತಿ ಮಕ್ಕಳನ್ನು ನೋಡಿ ಮಾತನಾಡಿ ನಂತರ ಸೊಂಟಪಟ್ಟಿಯನ್ನು ಬಿಚ್ಚಿ’. ಅವರೆಲ್ಲ ಹಾಗೆಯೇ ಮಾಡಿ ಎರಡು ತುಂಡಾಗಿ ಸತ್ತು ಹೋದರು.

ಎಂಥ ವಿಷಮಯ ಸನ್ನಿವೇಶದಲ್ಲೂ, ಹೃದಯಗಳನ್ನು ಬೆಸೆಯುವ ಸಂದರ್ಭಗಳು ಬರುತ್ತವೆ. ಅವುಗಳನ್ನು ತಿರಸ್ಕರಿಸುವುದು ಅನಾಹುತಕ್ಕೆ ಆಹ್ವಾನ ನೀಡಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT