ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ನಿರಹಂತೆ-ಮೋಕ್ಷ

Last Updated 17 ಆಗಸ್ಟ್ 2022, 21:45 IST
ಅಕ್ಷರ ಗಾತ್ರ

ಶರಧಿಯನೀಜುವನು, ಸಮರದಲಿ ಕಾದುವನು |
ಗುರಿಯೊಂದನುಳಿದು ಪೆರತೊಂದ ನೋಡುವನೆ ? ||
ಮರೆಯುವನು ತಾನೆಂಬುದನೆ ಮಹಾವೇಶದಲಿ |
ನಿರಹಂತೆಯದು ಮೋಕ್ಷ – ಮಂಕುತಿಮ್ಮ || 696 ||

ಪದ-ಅರ್ಥ: ಶರಧಿಯನೀಜುವನು=ಶರಧಿಯನು(ಸಮುದ್ರವನ್ನು)+ಈಜು ವನು, ಗುರಿಯೊಂದನುಳಿದು=ಗುರಿ+ಒಂದನು+ಉಳಿದು,ಪೆರತೊಂದ=ಬೇರೆಯದನ್ನು, ತಾನೆಂಬುದನೆ=ತಾನು+ಎಂಬುದನೆ,ಮಹಾವೇಶದಲಿ=ಮಹಾ+ಆವೇಶದಲ್ಲಿ, ನಿರಹಂತೆಯದು=ನಿರಹಂತೆ(ತಾನು ಎನ್ನುವ ಅಹಂಕಾರವಿಲ್ಲದ್ದು)+ಅದು.

ವಾಚ್ಯಾರ್ಥ: ಸಮುದ್ರವನ್ನು ಈಜುವವನು, ಯುದ್ಧದಲ್ಲಿ ಹೋರಾಡುವವನು ತನ್ನ ಮುಂದಿದ್ದ ಗುರಿಯೊಂದನ್ನು ಬಿಟ್ಟು ಬೇರೆ ಏನನ್ನಾದರೂ ಗಮನಿಸುವನೆ? ತಾನು ಎನ್ನುವುದನ್ನೇಆವೇಶದಲ್ಲಿ ಮರೆಯುತ್ತಾನೆ. ತಾನು ಎನ್ನುವ ಅಹಂಕಾರವನ್ನು ಕಳೆದದ್ದೇ ಮುಕ್ತಿ.

ವಿವರಣೆ: ಕಳೆದವಾರ ಅಂತತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಫೈನಲ್ ಆಟ ಆಡಲು ಬಂದಾಗ ಕಾಲಿಗೆ ಪಟ್ಟಿ ಕಟ್ಟಿಕೊಂಡಿದ್ದಳು. ಅದೊಂದು ತುರುಸಿನ ಆಟ. ಹೋರಾಟ ಬಂಗಾರದ ಪದಕಕ್ಕಲ್ಲವೆ? ಜಿದ್ದಾ ಜಿದ್ದಿ ಆಟ ನಡೆಯಿತು. ಮೊದಮೊದಲು ಸ್ವಲ್ಪ ನಿಧಾನವಾಗಿ, ಕಷ್ಟದಿಂದ ಆಡಿದಂತೆ ಕಂಡ ಆಟಗಾರ್ತಿ, ಆಟ ಮುಂದುವರೆದಂತೆ ತುಂಬ ಚುರುಕಾದಳು. ವೇಗದಿಂದ ದುಂಬಿಯಂತೆ, ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರಾಡುತ್ತ, ಎದುರಾಳಿಗೆ ಬೆವರಿಳಿಸಿದಳು. ಒಂದು ತಾಸಿನ ಮೇಲೆ ನಡೆದ ಹೋರಾಟದಲ್ಲಿ ಭಾರತದ ಹುಡುಗಿಗೆ ಬಂಗಾರದ ಪದಕ ಒಲಿಯಿತು. ಎಲ್ಲೆಲ್ಲೂ ನಗು, ಉತ್ಸಾಹ.

ಮುಂದೆ ಮೂರು ದಿನಗಳು ನಂತರ ವಾರ್ತೆ ಬಂದಿತು. ಈ ಹುಡುಗಿಗೆ ಪಾದದ ಒಂದು ಮೂಳೆ ಮುರಿದಿದೆ. ಆಕೆ ಮುಂದೆ ಎರಡು ತಿಂಗಳು ಯಾವ ಪಂದ್ಯಾವಳಿಯಲ್ಲೂ ಭಾಗವಹಿಸುವುದು ಸಾಧ್ಯವಿಲ್ಲ. ಆಕೆಯ ಕೋಚ್ ಹೇಳಿದರು, “ಆಕೆಗೆ ಪಂದ್ಯದ ಮೊದಲೇ ಈ ಪೆಟ್ಟಾಗಿತ್ತು. ಆಕೆ ಹೇಗೆಆಡುತ್ತಾಳೆ ಎಂಬುದು ನಮಗೂ ಚಿಂತೆಯಾಗಿತ್ತು”. ಪಾದದಲ್ಲಿ ಮೂಳೆ ಮುರಿದಿದ್ದರೆ ಆಕೆ ಹೇಗೆ ಅಷ್ಟು ಚುರುಕಾಗಿ ಓಡಾಡಿದಳು? ಆಟಗಾರ್ತಿಯನ್ನೇ ಆ ಪ್ರಶ್ನೆ ಕೇಳಿದಾಗ ಆಕೆ,

“ನನಗೆ ಗೊತ್ತಿತ್ತು, ಕಾಲಿನಲ್ಲಿ ತೊಂದರೆ ಇದೆ ಎಂದು. ಆದರೆ ಇದು ಫೈನಲ್ ಹಣಾಹಣಿ. ಮುಂದೆ ಏನಾದರೂ ಆಗಲಿ, ಇಂದು ನಾನು ರಾಷ್ಟ್ರಕ್ಕೆ ಬಂಗಾರದ ಪದಕವನ್ನು ಗೆಲ್ಲಲೇಬೇಕು. ಮೊದಮೊದಲು ಕಾಲಿನಲ್ಲಿ ನೋವು ತುಂಬ ಇತ್ತು. ಆದರೆ ಯಾವಾಗ ಕಣ್ಣಮುಂದೆ ಗೆಲ್ಲಲೇಬೇಕು ಎಂಬ ಹಟ ಬಂತೋ, ನೋವೇ ಮರೆತುಹೋಯಿತು. ಅದು ನನ್ನ ಕಾಲೇ ಎನ್ನುವುದೂ ತಿಳಿಯದಾಯಿತು”.ಇದನ್ನೇ ಕಗ್ಗ ಹೇಳುತ್ತದೆ.

ಬಹುದೊಡ್ಡ ಸಾಧನೆ ಮಾಡುವಾಗ, ಗುರಿ ಮುಂದೆ ಇದ್ದಾಗ, ವ್ಯಕ್ತಿ ಗುರಿಯೊಂದನ್ನು ಬಿಟ್ಟು ಬೇರೆ ಏನನ್ನೂ ಯೋಚಿಸಲಾರ. ಸಮುದ್ರ ಈಜುವವನಿಗೆ, ಯುದ್ಧದಲ್ಲಿ ಹೋರಾಡುವವನಿಗೆ ಬೇರೆ ವಿಚಾರಗಳು ಸುಳಿದರೆ ಉಳಿಯುವುದು ಸಾಧ್ಯವೇ? ಆಗ ತಾನು, ತನ್ನದು, ತನ್ನವರು ಎಂಬ ಯಾವ ಯೋಚನೆಯೂ ಉಳಿಯದೆ ಗುರಿ ಮಾತ್ರ ತೋರುತ್ತದೆ. ಹೀಗೆ ತಾನು, ತನ್ನದು ಎನ್ನುವುದನ್ನು ಮರೆಯುವ ಸ್ಥಿತಿಯೇ ಮೋಕ್ಷ ಎನ್ನುತ್ತದೆ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT