ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತಿ ನೀತಿಯ ನಡೆ ಕಷ್ಟ

Last Updated 21 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು |
ನಡೆಯ ಕಲಿತವನು? ಮತಿನೀತಿಗತಿಯಂತು ||
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ - |
ದಡವಿಕೊಳುವವರೆಲ್ಲ – ಮಂಕುತಿಮ್ಮ || 698 ||

ಪದ-ಅರ್ಥ: ಮೈಗಾಯವಡೆಯದೆಯೆ=ಮೈಗಾಯವ+ಅಡೆಯದೆಯೆ(ಪಡೆಯದೆಯೆ),
ಮಗುವಾರು=ಮಗುವು+ಆರು, ಮತಿನೀತಿಗತಿಯಂತು=ಮತಿನೀತಿಗತಿಯು+ಅಂತು, ಮೈದಡವಿಕೊಳು ವವರೆಲ್ಲ=ಮೈದಡವಿಕೊಳುವವರು+ಎಲ್ಲ.ವಾಚ್ಯಾರ್ಥ: ಎಡವಲಾರದೆ, ಬಿದ್ದು ಮೈಗಾಯಮಾಡಿಕೊಳ್ಳದೆ ಯಾವ ಮಗು ನಡೆಯನ್ನು ಕಲಿಯುತ್ತದೆ? ಅದರಂತೆಯೆ ಬುದ್ಧಿ, ಧರ್ಮಮಾರ್ಗದಲ್ಲಿ ನಡೆಯುವ ಗತಿ. ಎಲ್ಲರೂ ತಡವರಿಸಿ, ಮುಗ್ಗರಿಸಿ ಬಿದ್ದು, ಮತ್ತೆ ಮೇಲೆದ್ದು ಮೈಕೊಡವಿಕೊಂಡವರೆ.

ವಿವರಣೆ: ಹನ್ನೊಂದು ತಿಂಗಳು, ಒಂದು ವರ್ಷದ ಮಗು ಹೆಜ್ಜೆ ಇಡಲು ಪ್ರಾರಂಭಿಸುತ್ತದೆ. ಇಡೀ ದೇಹದ ಭಾರವನ್ನು ಎರಡೇ ಪುಟ್ಟ ಪಾದಗಳ ಮೇಲೆ ಹಾಕಿ ತೂಗಿಸುವುದು ಸುಲಭದ
ಕೆಲಸವಲ್ಲ. ನಮಗೆ ಈಗ ನಡೆದು, ನಡೆದು, ಆಗ ಪಟ್ಟ ಶ್ರಮ, ದಕ್ಕಿದಾಗ ಆದ ಸಂತೋಷ ಮರೆತು ಹೋಗಿದೆ. ಮಗುವಿಗೆ ಕುತೂಹಲ, ಆಶ್ಚರ್ಯ. ಪಾದಗಳ ಮೇಲೆ ತೂಗಿ ನಿಂತಾಗ
ಆದ ಸಂಭ್ರಮ, ಹೆಜ್ಜೆ ಮುಂದಿಟ್ಟಾಗ ಆಗಲಿಲ್ಲ, ಮಗು ಧೊಪ್ಪನೆ ಬೀಳುತ್ತದೆ. ಅಳುತ್ತದೆ. ಆದರೆ ಪ್ರಯತ್ನ ಬಿಡುವುದಿಲ್ಲ. ಹಗಲು-ರಾತ್ರಿ ಅದರದೇ ಧ್ಯಾನ, ಸಂಧಾನ. ಹೀಗೆ ಮಾಡುವಾಗ, ನಡಿಗೆಯನ್ನು ಕಲಿಯುವಾಗ ಅದೆಷ್ಟು ಬಾರಿ ಮಗು ಬಿತ್ತೋ, ಎಷ್ಟು ಪೆಟ್ಟುಮಾಡಿಕೊಂಡಿತೋ, ಲೆಕ್ಕವಿಟ್ಟವರಾರು?

ಇದೊಂದು ಬಹುಸುಂದರ ಸಾದೃಶ್ಯ. ಕಗ್ಗ ಹೇಳುತ್ತದೆ, ಶುದ್ಧಬುದ್ಧಿಯ, ನೀತಿಯ ಮಾರ್ಗದ ನಡೆಯೂ ಇಂಥದ್ದೇ. ಸುಲಭದ್ದಲ್ಲ. ಯಾರೂ ಈ ಮತಿ, ನೀತಿಯ ಎತ್ತರವನ್ನು ಯಾವ ಅಡೆತಡೆಯೂ ಇಲ್ಲದೆ ಮುಟ್ಟಿದ್ದೇನೆಂದು ಹೇಳುವುದು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಪರೀಕ್ಷೆಗಳು ಎದುರಾಗಿವೆ. ಕೆಲವೊಮ್ಮೆ ಅಸಫಲತೆ ಬಂದಿದೆ. ಕೆಲವೊಮ್ಮೆ ಮನಸ್ಸು ಕುಸಿದಿದೆ. ಒಮ್ಮೊಮ್ಮೆ ಶ್ರದ್ಧೆ ಕರಗಿದೆ. ಪೆಟ್ಟು ಬಿದ್ದಿದೆ. ಆದರೆ ಇವುಗಳನ್ನೆಲ್ಲ ಛಲದಿಂದ ಎದುರಿಸಿ ನಿಂತವರು ಲೋಕಕ್ಕೆ ಮಾದರಿಗಳಾಗಿದ್ದಾರೆ. ಮಹಾಭಾರತದ ಧರ್ಮರಾಜ, ಧರ್ಮದ ಪ್ರತಿಮೂರ್ತಿ. ಆಚಾರ್ಯ ದ್ರೋಣರಿಗೆ
ಅವನ ಧರ್ಮಪ್ರಜ್ಞೆಯ ಮೇಲೆ ಅಸಾಧ್ಯ
ಭರವಸೆ. ಆದರೆ ಯುದ್ಧಭೂಮಿಯಲ್ಲಿ ಪರೀಕ್ಷೆಯೊಂದು ಇದಿರಾಯಿತು. ಅದರಲ್ಲಿ ಧರ್ಮರಾಜ ಸೋತ. ತಾನು ಹೇಳುವುದು ಸುಳ್ಳು ಎಂದು ತಿಳಿದೂ ಅರ್ಧಸತ್ಯ ಹೇಳಿದಂತೆ ಮಾಡಿದ. ಭೀಮನ ಗದೆ, ಅರ್ಜುನನ ಬಿಲ್ಲು ಮಾಡದ್ದನ್ನು ಧರ್ಮರಾಜನ ಸುಳ್ಳು ಸಾಧಿಸಿತ್ತು, ತನ್ನನ್ನು ಅಪಾರವಾಗಿ ನಂಬಿದ್ದ ಗುರುವಿನ ಪ್ರಾಣ ತೆಗೆದಿತ್ತು. ಅದು ಧರ್ಮರಾಜನನ್ನು ಬಹುಕಾಲ ಕಾಡಿತ್ತು. ಜೂಜು ಕೆಟ್ಟದ್ದೆಂದು ಧರ್ಮರಾಜನಿಗೆ ತಿಳಿಯದೆ? ಆದರೂ ಅದು ಸೆಳೆಯಿತು. ಒಂದಲ್ಲ, ಎರಡು ಬಾರಿ. ಆ ಸೆಳೆತ ರಾಜ್ಯವನ್ನು ಕಿತ್ತೊಗೆಯಿತು, ಕಾಡಿಗೆ ತಳ್ಳಿತು.

ಇಂಥ ಪರೀಕ್ಷೆಗಳು ಮತ್ತು ಸೋಲುಗಳು ಕೇವಲ ಧರ್ಮರಾಜನಿಗೆ ಮಾತ್ರವಲ್ಲ, ಈ ದಾರಿಯಲ್ಲಿ ನಡೆದ ಅನೇಕರಿಗೆ ಬಂದಿದ್ದವು. ಹರಿಶ್ಚಂದ್ರನಿಗೆ, ವಿಶ್ರಾಮಿತ್ರನಿಗೆ, ವೇಮನನಿಗೆ, ಗಾಂಧೀಜಿಗೆ ಇಂತಹ ಆತಂಕಗಳು ಬಂದಿದ್ದರೂ, ಅವರಿಗೆ ತಾತ್ಕಾಲಿಕ ತಡೆಗಳನ್ನು ಮಾಡಿದ್ದರೂ, ಕೊನೆಗೆ ಅವರಿಗೆ ಅಮರತ್ವವನ್ನು ದಯಪಾಲಿಸಿದವು. ಮತ, ನೀತಿಗಳ ನಡೆ ಕೂಡ ಮಗುವಿನ ಮೊದಲ ನಡೆಯಷ್ಟು ಕಠಿಣವಾದದ್ದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT