ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುತಿಮ್ಮನ ಕಗ್ಗ | ದೋಷ ಇರುವುದೆಲ್ಲಿ?

Last Updated 18 ಮೇ 2020, 7:19 IST
ಅಕ್ಷರ ಗಾತ್ರ

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ? |
ಕೈಸೋಕದಿರೆ ಕೈಯ ಸಪ್ಪುಳಾದೀತೆ ? ||
ವಾಸನೆಯ ಮಾತೆಯಾಶೆಗೆ ಪಿತನು ಸಂದರ್ಭ |
ದೋಷವೊಳಗೋ ಹೊರಗೊ ?- ಮಂಕುತಿಮ್ಮ || 291 ||

ಪದ-ಅರ್ಥ: ಕಿಡಿಯುರಿದೀತೆ=ಕಿಡಿ+ಉರಿದೀತೆ, ಕೈಸೋಕದಿರೆ=ಕೈ+ಸೋಕದಿರೆ(ಮುಟ್ಟದಿದ್ದರೆ), ಮಾತೆಯಾಶೆಗೆ=ಮಾತೆ+ಆಸೆಗೆ, ದೋಷವೊಳಗೋ=ದೋಷ+ಒಳಗೋ

ವಾಚ್ಯಾರ್ಥ: ಗಾಳಿ ಬೀಸದೆ ಬೂದಿಮುಚ್ಚಿದ ಕೆಂಡ ಉರಿದೀತೆ? ಎರಡೂ ಕೈಗಳು ಒಂದನ್ನೊಂದು ಮುಟ್ಟದಿದ್ದರೆ ಚಪ್ಪಾಳೆಯ ಸದ್ದು ಹೇಗಾದೀತು? ಮನಸ್ಸಿನಲ್ಲಿಯ ಆಸೆಯೆ ತಾಯಿ, ಸರಿಯಾದ ಸಂದರ್ಭವೆ ತಂದೆ. ಅದರಿಂದ ಕಾರ್ಯ. ಆದ್ದರಿಂದ ದೋಷ ಒಳಗಿನ ವಾಸನೆಯದೊ, ಹೊರಗಿನಿಂದ ದೊರೆತ ಸಂದರ್ಭದ್ದೋ?

ವಿವರಣೆ: ಲೆಫ್ಟಿನೆಂಟ್ ಕಮಾಂಡರ್ ಎಡ್ವರ್ಡ್‌ ಓಹಾರ ಅಮೆರಿಕದ ನೌಕಾಪಡೆಗೆ ಸೇರಿದ ಯುದ್ಧ ವಿಮಾನ ಚಾಲಕ. ಎರಡನೆ ಮಹಾಯುದ್ಧದ ಬೇಗೆ ಏರುತ್ತಿದೆ. ಅವನಿಗೆ ಯುದ್ಧೋತ್ಸಾಹ. ಅವನ ಧಮನಿಗಳಲ್ಲಿ ಸಾಹಸ ಉಕ್ಕುತ್ತಿದೆ. ನವೆಂಬರ್‌ 26, 1943 ರಂದು ಅವನು ತನ್ನ ದೊಡ್ಡ ವಿಮಾನಗಳನ್ನು ಹೊತ್ತೊಯ್ಯುವ ಹಡಗು ಲೆಕ್ಸಿಂಗ್‌ಟನ್‌ನಲ್ಲಿದ್ದಾನೆ. ಆಗ ಒಂದು ತಕ್ಷಣದ ಆಜ್ಞೆ ಬಂದಿತು. ಆರು ವಿಮಾನಗಳು 500 ಕಿಲೋಮೀಟರ್ ದೂರದ ಒಂದು ನೆಲೆಯ ಮೇಲೆ ದಾಳಿ ಮಾಡಬೇಕು. ತನ್ನ ಜೊತೆಗಾರರೊಂದಿಗೆ ಓಹಾರ ಹಾರಿದ. ಅರ್ಧ ದಾರಿಗೆ ಹೋದಾಗ ಅವನ ವಿಮಾನದಲ್ಲಿ ಸಾಕಷ್ಟು ಇಂಧನವಿಲ್ಲ ಎಂಬುದು ತಿಳಿದು, ಮತ್ತೆ ತುಂಬಿಸಿಕೊಳ್ಳಲು ಹಡಗಿನ ಕಡೆಗೆ ತಿರುಗಿದ. ಹಡಗಿಗೆ ಹತ್ತಿರ ಬರುತ್ತಿದ್ದಾಗ ಅವನ ಎದೆ ನಡುಗಿತು. ಒಂಭತ್ತು ಜಪಾನಿ ವಿಮಾನಗಳು ಈ ಹಡಗನ್ನು ನಾಶಮಾಡಲು ನುಗ್ಗಿ ಬರುತ್ತಿವೆ. ಇವನು ಮರಳಿ ಬರಬಹುದೆಂಬುದರ ಕಲ್ಪನೆ ಅವರಿಗಿಲ್ಲ. ಅವರಿಗೆ ಎದುರಾಗಿ ಈತನೊಬ್ಬನೆ. ಧೈರ್ಯದಿಂದ ಹೋರಾಡಿದ ಓಹಾರ, ಐದು ವಿಮಾನಗಳನ್ನು ಹೊಡೆದುರುಳಿಸಿದ. ಉಳಿದವರು ಓಡಿಹೋದರು. ಅದೊಂದು ಪವಾಡವೇ ಆದಂತಾಯಿತು. ಓಹಾರನ ಶೌರ್ಯಗಾಥೆ ಮನೆಮಾತಾಯಿತು. ಇಂದಿಗೂ ಚಿಕಾಗೊ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಓಹಾರ ವಿಮಾನ ನಿಲ್ದಾಣವೆಂದೇ ಕರೆಯುತ್ತಾರೆ. ಅವನ ಹೃದಯದಲ್ಲಿ ಇದ್ದದ್ದು ಸಾಧನೆಯ ಆಸೆ, ಅದಕ್ಕೆ ಪೂರಕವಾಗಿ ಬಂದದ್ದು ಸಂದರ್ಭ. ಎರಡೂ ಸೇರಿದಾಗ ಒಂದು ಕಾರ್ಯ.

ಮಹಾಪರಾಕ್ರಮಿ ರಾಜ ಕಾರ್ತಿವೀರ್ಯಾರ್ಜುನ ಜಮದಗ್ನಿಯ ಆಶ್ರಮಕ್ಕೆ ಹೋದಾಗ ಕಾಮಧೇನುವಿನ ಶಕ್ತಿಯಿಂದ ಋಷಿ ಎಲ್ಲರ ಸತ್ಕಾರ, ಭೋಜನ ಮಾಡಿಸಿದ. ರಾಜ ಕಾಮಧೇನುವನ್ನು ತನಗೆ ಕೊಡು ಎಂದಾಗ ಋಷಿ ಅದು ಆಶ್ರಮದ ಕಾರ್ಯಗಳಿಗೆ ಬೇಕು ಎಂದ. ಕೋಪಗೊಂಡ ರಾಜ ಜಮದಗ್ನಿಯ ತಲೆ ಕತ್ತರಿಸಿದ. ಅದು ಮುಂದೆ ಪರಶುರಾಮ ಕ್ಷತ್ರಿಯ ನಾಶಕ್ಕೆ ಹೊರಡುವಂತೆ ಮಾಡಿತು. ರಾಜನ ಹೃದಯದಲ್ಲಿದ್ದ ಅಧಿಕಾರದ ವಾಸನೆ, ಕಾಮಧೇನುವಿನ ಸಂದರ್ಭಕ್ಕೆ ಒದಗಿ ಬಂದು ಮಹಾಪಾತಕದ ಕೆಲಸವನ್ನು ಮಾಡಿಸಿತು.

ಗಾಳಿಯಾಡಿದಾಗಲೆ ಕೆಂಡದ ಮೇಲಿನ ಬೂದಿ ಹಾರಿ ಅದು ಉರಿಯುತ್ತದೆ. ಎರಡೂ ಕೈಗಳು ಸ್ಪರ್ಶಿಸಿದಾಗಲೇ ಚಪ್ಪಾಳೆಯಾಗುತ್ತದೆ. ಅಂತೆಯೇ ನಮ್ಮ ಹೃದಯದಾಳದಲ್ಲಿ ಅವಿತು ಕುಳಿತ ವಾಸನೆಗಳು ಸರಿಯಾದ ಹೊರಗಿನ ಸಂದರ್ಭ ಬಂದಾಗ ಒಂದನ್ನೊಂದು ಸೇರಿಕೊಂಡು ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳನ್ನು ಮಾಡಿಸುತ್ತವೆ. ಹಾಗಾದರೆ ದೋಷ ಎಲ್ಲಿದೆ? ಮನದಾಳದ ವಾಸನೆಯಲ್ಲೊ, ಒದಗಿಬಂದ ಹೊರಗಿನ ಸಂದರ್ಭದಲ್ಲೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT