ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಈಶ ಕೃಪೆ

Last Updated 23 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |

ಪ್ರಾಚೀನಕಂ ಪೌರುಷಕ್ಕಮಿರುವಂತೆ ||
ಆಶಾವಿನಾಶಮುಂ, ಧೀಶಕ್ತಿಯುದ್ಭವಮುಮ್ |
ಈಶಪ್ರಸಾದದಿಂದ – ಮಂಕುತಿಮ್ಮ || 700 ||

ಪದ-ಅರ್ಥ:ವಿವೇಚನೆಗಳೆರಡಕಂ=ವಿವೇಚನೆಗಳು+ಎರಡಕಂ(ಎರಡಕ್ಕೂ), ಸಂಘರ್ಷೆ=ತಿಕ್ಕಾಟ, ಘರ್ಷಣೆ, ಪ್ರಾಚೀನಕಂ=ಪ್ರಾಚೀನಕ್ಕೆ, ಹಳೆಯದಕ್ಕೆ, ಪೌರುಷಕ್ಕಮಿರುವಂತೆ= ಪೌರುಷಕ್ಕಂ(ಪೌರುಷಕ್ಕೆ)+ಇರುವಂತೆ, ಆಶಾವಿನಾಶಮುಂ=ಆಶಾ+ವಿನಾಶಮುಂ (ವಿನಾಶವು), ಧೀಶಕ್ತಿಯುದ್ಭವಮುಮ್=ಧೀಶಕ್ತಿ(ವಿವೇಕದ ಶಕ್ತಿ)+ಉದ್ಭವಂಮುಮ್(ಉದ್ಭವ).

ವಾಚ್ಯಾರ್ಥ: ವಾಸನೆಗಳಿಗೂ, ವಿವೇಚನೆಗೂ ಸಂಘರ್ಷ; ಹಳೆಯದಕ್ಕೂ, ಪೌರುಷಕ್ಕೂ ಸಂಘರ್ಷ ನಡೆದೇ ಇರುತ್ತದೆ. ಆಶೆಯ ನಾಶ ಮತ್ತು ವಿವೇಕಶಕ್ತಿಯ ಉದಯವಾಗುವುದು ಭಗವಂತನ ಕೃಪೆಯಿಂದ.

ವಿವರಣೆ: ಅಂಗುಲಿಮಾಲನಿಗೆ ಬುದ್ಧನ ದರ್ಶನ, ಆಶೀರ್ವಾದ ದೊರೆತ ಮೇಲೆ ಅವನ ಬದುಕಿನಲ್ಲೊಂದು ಬಹುದೊಡ್ಡ ಸಂಘರ್ಷ
ತಲೆಯೆತ್ತಿ ನಿಂತಿತು. ಹಿಂದಿನ ಅಪರಾಧಗಳ ಸರಮಾಲೆಯ ವಾಸನೆ, ಅಪರಾಧಿ ಭಾವ, ಅವನನ್ನು ಬಿಗಿದಿದೆ. ಬುದ್ಧನ ಅನಂತ ಪ್ರೇಮ ಅವನಲ್ಲಿ ಸರಿ, ತಪ್ಪುಗಳ ವಿವೇಚನೆಯನ್ನು ಮೂಡಿಸಿದೆ.
ಇದುವರೆಗೂ ನಡೆದ ಬಂದ ದಾರಿಯನ್ನು, ಜೀವನ ವಿಧಾನವನ್ನು ಬಿಟ್ಟುಬಿಡುವುದು ಸುಲಭವೆ? ಮಹಾಂತ ತೋರಿದ ಹೊಸ ಹಾದಿಯಲ್ಲಿ
ನಡೆಯಲು ಸಾಧ್ಯವಾದೀತೆ? ಇದು ವಾಸನೆ ಮತ್ತು
ವಿವೇಚನೆಗಳ ನಡುವಿನ ಸಂಘರ್ಷ. ಇದು ಅಂಗುಲಿಮಾಲನಿಗೆ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಬರುವಂಥದ್ದು. ಹಿಂದೆ ಬದುಕಿದ ರೀತಿ, ಮುಂದೆ ಮಾಡಬಹುದಾದ ಕಾರ್ಯಯೋಜನೆಗಳ
ನಡುವೆ ತಿಕ್ಕಾಟ ಅನಿವಾರ್ಯವಾದದ್ದು.

ನಮಗೆ ಹಿಂದಿನಿಂದ ಬಂದದ್ದು, ದೊರೆತದ್ದು, ಪ್ರಾಚೀನ. ಅದು ಸಂಪ್ರದಾಯವೂ ಆಗುತ್ತದೆ. ತಾನು ಪಡೆದದ್ದನ್ನು ಹಾಗೆಯೇ ರಕ್ಷಿಸಿಕೊಂಡು ಹೋಗುವ ಬುದ್ಧಿ, ಸಂಪ್ರದಾಯವನ್ನು ಚಿರಂಜೀವಿಯಾಗಿಸುತ್ತದೆ. ಸಂಪ್ರದಾಯ ಕೇವಲ ಅಂಧಭಾರವಾದಾಗ, ಅದು ನಮ್ಮನ್ನು ಅಳಿಸುತ್ತದೆ, ಹಾಗಿಲ್ಲದಾಗ ಅದು ನಮ್ಮನ್ನು ಉಳಿಸುತ್ತದೆ. ಹೀಗಿರುವಾಗ,
ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಸ್ವತಂತ್ರ ಪ್ರತಿಭೆ
ಸಂಪ್ರದಾಯಬದ್ಧವಾಗದೆ ಅದರಾಚೆ ಸಿಡಿದು ಬೆಳೆಯುತ್ತದೆ. ಪ್ರತಿಭಟನೆ ತೋರಿ ತನ್ನ ಅಸ್ತಿತ್ವವನ್ನು ಸಾಧಿಸುತ್ತದೆ. ಅದು ಪೌರುಷ. ಹೀಗೆ ವಾಸನೆ ಮತ್ತು ವಿವೇಚನೆ, ಸಂಪ್ರದಾಯ ಮತ್ತು ಪೌರುಷ, ಇವುಗಳ ಸಂಘರ್ಷದ ಫಲಿತಾಂಶವಾದ ಸಾಮರಸ್ಯವೆ ಪರಂಪರೆ.

ಪ್ರಾಚೀನವನ್ನು ಅರ್ವಾಚೀನದಲ್ಲಿ ಒಂದು
ಪ್ರತ್ಯೇಕ ಮುಟ್ಟಲಾಗದ ಮೂಲೆಯನ್ನಾಗಿಸದೆ, ಅದನ್ನು ಬಳಸುವ, ಬಳಸಿ ಅರಗಿಸಿಕೊಳ್ಳುವ ಪ್ರತಿಭೆಯ ಪ್ರಯತ್ನದ ಫಲವೆ ಪರಂಪರೆ.
ಹೀಗೆ ಪ್ರಾಚೀನವನ್ನು ಪಾಲಿಸುತ್ತಲೇ ಪೌರುಷವನ್ನು
ಮೆರೆಯಲು ಸಾಧ್ಯವಾಗುವುದು ಭಗವಂತನ ಕೃಪೆಯಿಂದ ಎನ್ನುತ್ತದೆ ಕಗ್ಗ. ಇದು ಬದುಕಿನ ಕರ್ಮದ ದಾರಿ. ಇನ್ನು ಮುಕ್ತಿಯ ದಾರಿಗೂ ಎರಡು ಊರುಗೋಲುಗಳು ಬೇಕು.

ಒಂದು ಆಶಾನಾಶ. ಎಲ್ಲಿಯವರೆಗೆ ನಮ್ಮಲ್ಲಿ ಆಸೆಯ ಮೊಳಕೆ ಇದೆಯೋ, ಅಲ್ಲಿಯವರೆಗೆ ಬಂಧನ ತಪ್ಪದು. ಅದರ ಬಿಡುಗಡೆಗೆ ವಿವೇಕ ಜಾಗ್ರತವಾಗಬೇಕು. ಆ ಧೀಶಕ್ತಿಯ ವೃದ್ಧಿಯಾದಂತೆ ನಮ್ಮ ಆಸೆಗಳ ಕುಡಿ ಮುರುಟಿಕೊಳ್ಳುತ್ತದೆ, ಬಿಡುಗಡೆ ಸಾಧ್ಯವಾಗುತ್ತದೆ. ಆದರೆ ಆಶಾನಾಶ ಮತ್ತು ಅದಕ್ಕೆ ಕಾರಣವಾದ ಧೀಶಕ್ತಿಯ ವೃದ್ಧಿ ಎರಡೂ ದೊರೆಯುವುದು ಈಶ ಕೃಪೆಯಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT