ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಋಣ-ಗುಪ್ತಗಾಮಿನಿ

Last Updated 12 ಮಾರ್ಚ್ 2023, 22:03 IST
ಅಕ್ಷರ ಗಾತ್ರ

ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ ! |
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ ! ||
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು ! |
ಗುಪ್ತಗಾಮಿನಿಯೊ ಋಣ-ಮಂಕುತಿಮ್ಮ || 840 ||

ಪದ-ಅರ್ಥ: ಭುಕ್ತ್ತಿ=ಊಟ, ತಾನೆಲ್ಲಿಯದೊ=ತಾನು+ಎಲ್ಲಿಯದೊ, ಭಾಕ್ತವಾರಾರ=ಭಾಕ್ತ್ತವು(ಅಡುಗೆ)+ಆರಾರ(ಯಾರ), ದುಡಿತದಿನೊ=ದುಡಿತದಿಂದಲೋ ಗುಪ್ತಗಾಮಿನಿ=ಕಣ್ಣಿಗೆ ಕಾಣದಂತೆ ಹೋಗುವುದು.

ವಾಚ್ಯಾರ್ಥ: ನಿನ್ನ ಆಹಾರ ಎಲ್ಲಿಯದು? ಅದಕ್ಕೆ ಬೇಕಾದ ಭತ್ತಎಲ್ಲಿಂದ ಬಂದದ್ದು? ಅದಕ್ಕೆ ಗೊಬ್ಬರ ಎಲ್ಲಿಯದೊ? ನೀರು ಎಲ್ಲಿಂದ ಬಂತೋ? ನೀನು ಉಣ್ಣುವ ಅನ್ನ ಯಾರು ಯಾರ ದುಡಿತದಿಂದ ನಿನಗೆ ದೊರೆತಿದೆಯೋ? ಋಣ ಎನ್ನುವುದು ಕಣ್ಣಿಗೆ ಕಾಣದಂತೆ ಹರಿಯುತ್ತದೆ.

ವಿವರಣೆ: ನಾನೊಮ್ಮೆ ದುಬೈದಲ್ಲಿ ಒಂದು ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ ಕುಳಿತಿದ್ದೆ. ಆಗ ಅಲ್ಲೊಬ್ಬರು ಪಾಲಕರು ತಮ್ಮ ಮಗನೊಂದಿಗೆ ಬಂದರು. ಮಾತನಾಡಿ ಹೊರಡುವಾಗ ಒಂದು ಪೆಟ್ಟಿಗೆಯನ್ನು ಪ್ರಿನ್ಸಿಪಾಲರಿಗೆ ಕೊಟ್ಟು, “ಸರ್, ಇದು ನನ್ನ ನಾಡು ಮೆಕ್ಸಿಕೋದಿಂದ ಬಂದದ್ದು. ಇದು ಅಲ್ಲಿಯ ಅತ್ಯುತ್ತಮ ತಳಿ” ಎಂದರು. ಅವರು ಹೋದ ಮೇಲೆ ಪೆಟ್ಟಿಗೆ ತೆಗೆದು ನೋಡಿದರೆ ಬಂಗಾರ ಬಣ್ಣದ, ಘಮ ಘಮ ವಾಸನೆ ಬೀರುತ್ತಿದ್ದ ಮಾವಿನ ಹಣ್ಣುಗಳು! ಪ್ರಿನ್ಸಿಪಾಲರು ತಮ್ಮ ಸೆಕ್ರೆಟರಿಗೆ ಹೇಳಿ ಎರಡು ಹಣ್ಣುಗಳನ್ನು ಹೋಳು ಮಾಡಿ ತರಿಸಿ ನನ್ನ ಮುಂದಿಟ್ಟರು. ತುಂಬ ರುಚಿಯಾದ ಹಣ್ಣುಗಳು ಅವು. ಆಗನಾನು ಹೇಳಿದೆ, “ಈ ಹಣ್ಣು ತಿನ್ನುವ ಋಣ ನನಗಿತ್ತು. ಇದು ಬೆಳೆದದ್ದು ಮೆಕ್ಸಿಕೋದ ಯಾವುದೋ ಪ್ರದೇಶದಲ್ಲಿ. ಅದನ್ನು ಹಾಕಿದವರು ಯಾರೋ? ಅದಕ್ಕೆ ಗೊಬ್ಬರ ಎಲ್ಲಿಂದ ಬಂದಿತ್ತೋ, ನೀರು ದೊರೆತದ್ದು ಎಲ್ಲಿಂದಲೋ, ಗಿಡದ ಆರೈಕೆ ಮಾಡಿದವರಾರೋ, ಆ ಹಣ್ಣುಗಳು ಯಾರಿಗಾಗಿ ದುಬೈಗೆ ಬಂದಿದ್ದವೋ, ಅವು ಇಲ್ಲಿಗೆ ಬಂದಾಗ ಭಾರತದವನಾದ ನಾನು ಇಲ್ಲಿರಬೇಕೇ? ನಾನು ತಿಂದ ಹಣ್ಣು ನನ್ನನ್ನು ಇವರೆಲ್ಲರಿಗೂಋಣಿಯನ್ನಾಗಿಸಿತು”.

ನನ್ನ ಮುಂದೆ ಹಣ್ಣು ಮಾತ್ರವಿತ್ತು. ಆದರೆ ಅದು ಇಲ್ಲಿ ಇರುವುದಕ್ಕೆ ಅನೇಕ ಮಂದಿಯ ಜಾಲವಿತ್ತು. ಅದು ನನಗೆ ಅಗೋಚರ. ಅವರೆಲ್ಲರ ದುಡಿತದ ಫಲ ಮಾತ್ರ ನನ್ನ ಬಾಯಿಗೆ. ಹೀಗೆಯೇ ಪ್ರಪಂಚದಲ್ಲಿ ಋಣದ ಜಾಲ ಹರಡುತ್ತದೆ. ನಮಗರಿವಿಲ್ಲದಂತೆ ನಮ್ಮನ್ನು ಈ ಋಣದ ಬಲೆಯಲ್ಲಿ ಸಿಕ್ಕಿಸುತ್ತದೆ. ಈ ಕಗ್ಗ ಅದನ್ನು ಹೇಳುತ್ತದೆ. ನಿನ್ನ ತಟ್ಟೆಯಲ್ಲಿಯ ಊಟ ಬಂದದ್ದು ಎಲ್ಲಿಂದ? ಭತ್ತ ಬೆಳೆದದ್ದು ಎಲ್ಲಿ, ಅದಕ್ಕೆ ಗೊಬ್ಬರ ಬಂದದ್ದು ಎಲ್ಲಿಂದ, ಅದಕ್ಕೆ ಹಾಕಿದ ನೀರು ಯಾವ ನದಿಯದೊ, ಹಳ್ಳದ್ದೋ, ಬಾವಿಯದೊ, ಬೋರ್‌ವೆಲ್ಲಿನದೊ ನಮಗೆ ತಿಳಿಯದು. ಭತ್ತವನ್ನು ನಾಟಿ, ನಾಲ್ಕಾರು ತಿಂಗಳು ಅದನ್ನು ಬೆಳೆಸಲು ಶ್ರಮಿಸಿದ ಕೈಗಳು ಯಾರವೋ? ಅವರ ದುಡಿತ ಫಲ ಈಗ ನಿನ್ನ ತಟ್ಟೆಯಲ್ಲಿ ಕೂತಿದೆ. ನಿನ್ನನ್ನು ಅವರೆಲ್ಲರಿಗೂ ಋಣಿಯಾಗಿಸಿದೆ. ಅವರಾರೂ ನಿನಗೆ ಕಾಣುವುದಿಲ್ಲ. ಆದರೆ ಅವರ ಶ್ರಮದ ಫಲ ನಿನ್ನ ಋಣ. ಆ ಋಣ ಗುಪ್ತಗಾಮಿನಿಯಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT