ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಂತಃಸ್ಫುರಣೆ - ಬಹಿಗ್ರಹಣೆ

Last Updated 3 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಬಹಿರದ್ಭುತವ ಮನುಜನಂತರದ್ಭುತವರಿತು |
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ||
ಬಹುಪರಿಯುಪಾಯಗಳ ನಿರವಿಸಿಹರದಕೇಕೆ |
ಗಹಗಹಿಸುವೆಯೊ, ಮರುಳೆ? – ಮಂಕುತಿಮ್ಮ || 490 ||

ಪದ-ಅರ್ಥ: ಬಹಿರದ್ಭುತ-ಬಹಿರ್ (ಹೊರಗಿನ)+ ಅದ್ಭುತ, ಮನುಜನಂತರದ್ಭುತವರಿತು= ಮನುಜನ+ ಅಂತರ್ (ಒಳಗಿನ)+ ಅದ್ಭುತ+ ಅರಿತು, ಪೂರ್ವಾನುಭವಿಗಳ್= ಪೂರ್ವ (ಹಿಂದಿನ)+ ಅನುಭವಿಗಳ್, ಬಹುಪರಿಯುಪಾಯಗಳ= ಬಹುಪರಿಯ+ ಉಪಾಯಗಳ, ನಿರವಿಸಿಹರದಕೇಕೆ= ನಿರವಿಸಿಹರು (ನಿರ್ಮಾಣಮಾಡಿಹರು)+ ಅದಕೆ+ ಏಕೆ, ಗಹಗಹಿಸುವೆಯೊ= ಅಪಹಾಸ್ಯ ಮಾಡುವಿಯೋ.

ವಾಚ್ಯಾರ್ಥ: ನಮ್ಮ ಪೂರ್ವದ ಹಿರಿಯರು ಪ್ರಪಂಚದಲ್ಲಿರುವ, ಬೆರಗು ಹುಟ್ಟಿಸುವ ಅದ್ಭುತಗಳನ್ನು, ಅಂತರಂಗದಲ್ಲಿರುವ ಅದ್ಭುತ, ತಿಳಿದು ಅರ್ಥಮಾಡಿಕೊಳ್ಳಲಿ ಎಂದು ಅನೇಕ ಉಪಾಯಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅದನ್ನರಿಯದೆ ಏಕೆ ಅಪಹಾಸ್ಯ ಮಾಡುವೆ, ಮರುಳೆ?

ವಿವರಣೆ: ಹಿಮಾಲಯದ ತಪ್ಪಲು ಪ್ರದೇಶ. ಅದು ವೇದವ್ಯಾಸರು ತಮ್ಮ ಜೀವಿತದ ಬಹುಭಾಗವನ್ನು ಕಳೆದ ಸ್ಥಳ. ಎಂತಹ ಚಿಂತನಶೀಲವಾದ ಮನಸ್ಸನ್ನೂ ತಂಪಾಗಿ ಇಡುವ ಜಾಗ. ಅವರು ಆಳವಾದ ಚಿಂತನೆಯಲ್ಲಿದ್ದಾರೆ. ಅವರು ಮಹಾಭಾರತದ ಅತ್ಯದ್ಭುತ ಕಥೆಗೆ ಸಾಕ್ಷಿಯಾದವರು ಮಾತ್ರವಲ್ಲ, ಪ್ರಧಾನ ಪಾತ್ರಧಾರಿಗಳಾದವರು. ಈ ಕಲ್ಪನಾತೀತವಾದ ಅನಾಹುತಕ್ಕೆ ಯಾವುದು ಕಾರಣ? ಮನುಷ್ಯ ತೃಪ್ತಿ, ಶಾಂತಿಗಳನ್ನು ಪಡೆಯಲು ಏನು ಮಾಡಬೇಕು? ಮನುಷ್ಯ ಇಷ್ಟು ಸ್ವಾರ್ಥಿಯಾಗುವುದು, ಕ್ರೂರಿಯಾಗುವುದು ಯಾವ ಪುರುಷಾರ್ಥಕ್ಕೆ? ಇಂತಹ ನೂರಾರು ಪ್ರಶ್ನೆಗಳನ್ನು ಕುರಿತು ಆಲೋಚನೆ ಮಾಡುತ್ತಿದ್ದಾರೆ. ಅವರ ಚಿಂತನೆ ಸ್ವಂತದ ಲಾಭಕ್ಕಲ್ಲ, ಪ್ರಪಂಚಕ್ಕೆ ಮಾರ್ಗದರ್ಶಿಯಾಗಬಹುದಾದ ಪರಿಹಾರಕ್ಕೆ.

ತನ್ನತನದ ಎಲ್ಲ ನೆರಳುಗಳಿಂದ ದೂರವಾಗದೆ ಶಾಶ್ವತ ಶುದ್ಧ ಬೆಳಕನ್ನು ಕಂಡುಕೊಳ್ಳಬಲ್ಲ ನಿರ್ಮಲ ಚೇತನ ನಿರ್ಮಾಣವಾಗುವುದಿಲ್ಲ. ವೇದವ್ಯಾಸರ ಧ್ಯಾನಸ್ಥವಾದ ಮನಸ್ಸಿಗೆ ಅನಂತವಾದ ಜಗದ್ ವೃಕ್ಷದ ಬೀಜತತ್ವ ವಿಶ್ವದ ಕಣಕಣದಲ್ಲೂ ಅವ್ಯಾಹತವಾಗಿ ತುಂಬಿದ್ದನ್ನು ಕಂಡರಂತೆ. ವಿಶ್ವದಲ್ಲೆಲ್ಲ ಭೋರ್ಗರೆಯುವ ಬಾಳಿನ ನಿಯತಿಯ ಚಿತ್ರದ ಭವ್ಯತೆಯನ್ನು ಅಂತರಂಗದಲ್ಲಿ ಕಂಡು ಮಹಾಭಾರತದ ನಿರ್ಮಾಣದಲ್ಲಿ ತೊಡಗಿದರು. ಹೊರಗೆ ಪ್ರಪಂಚದಲ್ಲಿ ಕಂಡ ಅದ್ಭುತ, ವೇದವ್ಯಾಸರ ಅಂತರಂಗದಲ್ಲಿ ತರಂಗಗಳನ್ನೇಳಿಸಿತು. ಹಾಗೆ ಬಾಹ್ಯಪ್ರಪಂಚದ ವಿಶೇಷಗಳನ್ನು ಮನುಷ್ಯ ತನ್ನ ಅಂತರಂಗದಲ್ಲಿ ಗ್ರಹಿಸಲು ಅನುಕೂಲವಾಗುವಂತೆ ಪೂರ್ವದಲ್ಲಿ ಜ್ಞಾನಿಗಳು ಅನೇಕ ವಿಧಾನಗಳನ್ನು ಕಂಡುಕೊಂಡಿದ್ದರು.

ಮನಸ್ಸು ಚಂಚಲವಾಗಿ ಏನನ್ನೂ ಗ್ರಹಿಸದ ಸ್ಥಿತಿಯಿಂದ ಪಾರಾಗಲು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಎಂಬ ಎಂಟುಗಳನ್ನು, ಅಷ್ಟಾಂಗಯೋಗವೆಂದು ಮಹರ್ಷಿ ಪತಂಜಲಿಯವರು ನಮಗೆ ನೀಡಿದ್ದಾರೆ. ಈ ವಿಧಾನಗಳಿಂದ ಹಂತಹಂತವಾಗಿ ಅಂತರಂಗ ಹದವಾಗಿ, ಕೇಂದ್ರೀಕೃತವಾಗಿ ಪ್ರಪಂಚದ ವಿಸ್ಮಯಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥವಾಗುತ್ತದೆ. ಅಂಥ ಉಪಾಯಗಳನ್ನು ತಿಳಿಯದೆ, ಅವುಗಳ ಪ್ರಯೋಜನವನ್ನು ಪಡೆಯದೆ, ಹೀಗಳೆಯುವುದು ಮೂರ್ಖತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT