ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಪರೀತ ಆಸೆಯ ಫಲ

Published 9 ಮೇ 2023, 19:34 IST
Last Updated 9 ಮೇ 2023, 19:34 IST
ಅಕ್ಷರ ಗಾತ್ರ

ತನ್ನಯ ಮನೋರಥಂಗಳ ಚಕ್ರವೇಗದಿನೆ |
ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ||
ತನ್ನ ಸಂಕಲ್ಪ ವಿಪರೀತದಿನೆ ಮಾನವನ |
ಬೆನ್ನು ಮುರಿದೀತೇನೋ – ಮಂಕುತಿಮ್ಮ || 880 ||


ಪದ-ಅರ್ಥ: ಮನೋರಥಗಂಗಳ=ಮನಸ್ಸೆಂಬ ರಥದ,ಚಕ್ರವೇಗದಿನೆ=ಚಕ್ರ+ವೇಗದಿನೆ(ವೇಗದಿಂದ),
ಬಿಗಿತದಿನೆ=ಬಿಗಿತದಿAದ, ವಿಪರೀತದಿನೆ=ವಿಪರೀತದಿಂದ.

ವಾಚ್ಯಾರ್ಥ: ತನ್ನದೇ ಮನಸ್ಸಿನ ರಥಗಳ ಗಾಲಿಗಳ ವೇಗದಿಂದಲೋ, ತಾನು ಧರಿಸಿರುವ ಮುತ್ತಿನಹಾರದ ಸಿಕ್ಕು,

ಬಿಗಿತಗಳಿಂದಲೋ, ತನ್ನ ವಿಪರೀತ ಸಂಕಲ್ಪಗಳಿಂದಲೋ ಮನುಷ್ಯನ ವ್ಯವಸ್ಥಿತ ಬದುಕು ಹಾಳಾದೀತೇನೋ?

ವಿವರಣೆ: ಮನುಷ್ಯರ ಆಸೆಗಳೆಂಬ ಕುದುರೆಗಳು ಓಡುವುದು ಮನೋವೇಗದಲ್ಲಿ. ಅವುಗಳಿಗೆ ಒಂದು ನಿಶ್ಚಿತವಾದ ಗುರಿಯಿಲ್ಲ, ನಿಲ್ದಾಣವೆಂಬುದೂ ಇಲ್ಲ. ಅವು ಅಪೇಕ್ಷೆಗಳ ರಥವನ್ನೆಳೆದು ಭರದಿಂದ ಓಡುವಾಗ ಅದರ ಚಕ್ರಗಳು ಈ ವೇಗವನ್ನು ತಾಳಿಕೊಂಡಾವೆಯೇ? ಮುರಿದುಹೋಗಲಿಕ್ಕಿಲ್ಲವೇ? ಹಾಗೆಂದರೆ, ಆಸೆಗಳನ್ನು ಪೂರೈಸಿಕೊಳ್ಳಲು ದಿಕ್ಕುದಿಕ್ಕಿಗೆ, ಹುಚ್ಚುಚ್ಚಾರ  ವೇಗದಿಂದ ಚಲಿಸುವ ಮನಸ್ಸು ಕ್ಷೇಮದಿಂದಿರಲು ಸಾಧ್ಯವೇ? ಅವನೊಬ್ಬ ಬದುಕಿನುದ್ದಕ್ಕೂ ತುಂಬ ದುಡಿದು ಅಪಾರ ಸಂಪತ್ತು ಗಳಿಸಿದ್ದ. ಯಾರಿಗೂ ತಿಳಿಯದಂತೆ ನೆಲಮಾಳಿಗೆಯನ್ನು ಮಾಡಿಸಿ ಅಲ್ಲಿ ಹಣ ತುಂಬಿಟ್ಟಿದ್ದ. ಅದು ಗಾಳಿ ಬೆಳಕು ಬರದ ಕೋಣೆ. ಅ ಮನುಷ್ಯನಿಗೆ ಈಗ ಎಂಭತ್ತು ವರ್ಷ. ಇದುವರೆಗೂ ಯಾವ ಸುಖವನ್ನೂ ಪಡದೇ ಹಣ
ಕೂಡಿಟ್ಟಿದ್ದಾನೆ. ಆಗಾಗ ಯಾರಿಗೂ ತಿಳಿಯದಂತೆ ರಾತ್ರಿ ಹೋಗಿ ಹಣ ರಾಶಿ ನೋಡಿ ಸಂತೋಷಪಟ್ಟು ಬರುತ್ತಾನೆ. ಒಂದು ರಾತ್ರಿ ಮನೆಯವರೆಲ್ಲ ಮಲಗಲು ಹೋದ ಮೇಲೆ, ರಹಸ್ಯದ

 
ಬಾಗಿಲನ್ನು ತೆರೆದು ನೆಲಮಾಳಿಗೆಗೆ ಹೋದ. ತನ್ನ ಜೊತೆಗೆ ಒಂದು ದೊಡ್ಡ ಮೇಣದ ಬತ್ತಿಯನ್ನು ಒಯ್ದ. ಹಿಂದೆ ಬಾಗಿಲನ್ನು ಎಳೆದು ಮುಚ್ಚಿಕೊಂಡ. ದೀಪ ಹಚ್ಚಿಕೊಂಡು ಹಣದ ರಾಶಿಯನ್ನು ಮುಟ್ಟಿನೋಡಿದ. ಮತ್ತೆ ಮತ್ತೆ ಎಣಿಸಿದ. ಅದೆಷ್ಟು ಸಮಯ ಮೈಮರೆತು ಕುಳಿತಿದ್ದನೋ? ಮೇಣಬತ್ತಿ ಉರಿದು ಮುಗಿಯಬಂದಿತ್ತು. ಮತ್ತೊಂದನ್ನು ತರಲು ಬಾಗಿಲು ತೆರೆಯನೋಡಿದ. ಅದು ಬರುತ್ತಿಲ್ಲ. ಅವನು ಪರೀಕ್ಷಿಸಿ ನೋಡಿ ಗಾಬರಿಯಾದ. ಕೀಲಿಕೈಯನ್ನು ಹೊರಗೇ ಮರೆತು ಬಾಗಿಲು ಎಳೆದಿದ್ದಾನೆ. ಅದನ್ನು ತೆರೆಯುವುದು ಸಾಧ್ಯವಿಲ್ಲ. ಬಾಗಿಲು ಬಡಿದ, ಕೂಗಿದ. ಅದು ತಾನೇ ಮಾಡಿಸಿದ, ಹೊರಗೆ ಶಬ್ದ ಕೇಳದ ವ್ಯವಸ್ಥೆ, ದೀಪ ಆರಿತು. ಒಂದು ದಿನ ಕತ್ತಲೆಯಲ್ಲಿ ಉಪವಾಸ ಕಳೆದು, ಎದೆಯೊಡೆದು ಸತ್ತು ಹೋದ. ಈ ಮಾತನ್ನು ಕಗ್ಗ ಹೇಳುತ್ತದೆ. ತನ್ನ ಮನದಾಸೆಗಳ ವೇಗದಿಂದ, ಮನುಷ್ಯ ನುಗ್ಗಾಗುತ್ತಾನೆ. ಅವನ ಆಸೆಗಳ ಫಲಿತಗಳು ಆಭರಣಗಳಿದ್ದಂತೆ. ಅವು ಬಂಗಾರ, ಮುತ್ತು, ರತ್ನಗಳಿಂದಾಗಿದ್ದರೂ, ಅವು ಬಿಗಿಯಾದಾಗ ಉಸಿರುಗಟ್ಟಿಸುವುದಿಲ್ಲವೇ? ಚಿನ್ನದ ಸೂಜಿ ಚುಚ್ಚದಿರುತ್ತದೆಯೆ? ಇದಲ್ಲದೆ, ಮನುಷ್ಯ ಕೆಲವೊಮ್ಮೆ ವಿಪರೀತದ ಸಂಕಲ್ಪಗಳನ್ನು ಮಾಡುತ್ತಾನೆ. ತನ್ನ ಶಕ್ತಿಯ, ತಿಳಿವಳಿಕೆಯ ಮಿತಿಗಳನ್ನು ಮೀರಿ ನಿಲುಕದ ನಕ್ಷತ್ರಗಳಿಗೆ ಕೈ ಚಾಚುತ್ತಾನೆ. ಅದನ್ನು ನಿಲುಕಲು ಹೋಗಿ ಬಿದ್ದು ಹುಡಿಯಾಗುತ್ತಾನೆ. ಇದು ಮಿತಿಯನ್ನು ಮರೆತು ಆಸೆಗಳಿಗೆ ಬಲಿಯಾಗುವ ಮನುಷ್ಯನ ಕಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT