ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಗ್ರಹಾರಾಧನೆ

Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಲಾವಣ್ಯವಾತ್ಮಗುಣವದರಿಂದೆ ಲೋಕಜನ |
ದೇವನನು ಕಮನೀಯ ವಿಗ್ರಹಂಗಳಲಿ ||
ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ |
ಸೇವೆಯಿಂ ನಲಿಯುವರು – ಮಂಕುತಿಮ್ಮ ||468||

ಪದ-ಅರ್ಥ: ಲಾವಣ್ಯವಾತ್ಮಗುಣವದರಿಂದೆ= ಲಾವಣ್ಯ+ ಆತ್ಮಗುಣ+ ಅದರಿಂದೆ, ಕಮನೀಯ= ಸುಂದರವಾದ, ತಮ್ಮಿಷ್ಟ ಭೋಗಗಳನರ್ಪಿಸುವ= ತಮ್ಮ+ ಇಷ್ಟ+ ಭೋಗಗಳನು+ ಅರ್ಪಿಸುವ

ವಾಚ್ಯಾರ್ಥ: ಲಾವಣ್ಯವೆಂಬುದು ಆತ್ಮಗುಣ. ಆದ್ದರಿಂದ ಲೋಕದ ಜನರು ದೇವರನ್ನು ಅತ್ಯಂತ ಸುಂದರವಾದ ವಿಗ್ರಹಗಳಲ್ಲಿ ಕಾಣುತ್ತ, ತಮಗೆ ಇಷ್ಟವಾದ ಭೋಗಭಾಗ್ಯಗಳನ್ನು ಅವನಿಗೆ ಅರ್ಪಿಸುತ್ತ, ಸೇವೆ ಮಾಡಿ, ಸಂತೋಷಪಡುತ್ತಾರೆ.

ವಿವರಣೆ: ಭಗವಂತನ ಆಕಾರ ಯಾವುದು? ಶೃತಿ, ಸ್ಮೃತಿ, ಪುರಾಣಗಳು, ಭಗವಂತ ನಿರಾಕಾರ ಎನ್ನುತ್ತವೆ. ಅವನನ್ನು ಯಾವ ರೂಪದದಲ್ಲಿಯೂ ಹಿಡಿದಿಡಲು ಸಾಧ್ಯವಿಲ್ಲ, ಆದರೆ ನಾವು ದೇವರನ್ನು ವಿಗ್ರಹಗಳಲ್ಲಿ ಮತ್ತು ಚಿತ್ರಗಳಲ್ಲೇ ಕಂಡು ಪೂಜಿಸುವುದು ಏಕೆ? ಅದಕ್ಕೊಂದು ಮನಃಶಾಸ್ತ್ರದ ಕಾರಣವಿದೆ. ನಾವು ಕಣ್ಣಿಂದ ಕಂಡದ್ದನ್ನು ಮನಸ್ಸು ಯೋಚಿಸುತ್ತದೆ. ನಾವು ಕಾಣದೇ ಇರುವ ವಸ್ತುವಿನ ಬಗ್ಗೆ ಚಿಂತನೆ ಮಾಡುವುದು ಅಸಾಧ್ಯ. ಯಾಕೆಂದರೆ ಅದು ನಮ್ಮ ಬುದ್ಧಿಗೆ ಸಿಕ್ಕಲಾರದು, ಬುದ್ಧಿಯನ್ನು ಪ್ರಚೋದಿಸಲಾರದು. ನೀವು ನಿಮ್ಮ ತಾತನನ್ನು ಕಂಡಿದ್ದರೆ, ತಾತ ಎಂದೊಡನೆ ಅವರ ಚಿತ್ರ ಕಣ್ಣ ಮುಂದೆ ಕಟ್ಟುತ್ತದೆ. ಆದರೆ ನಿಮ್ಮ ತಾತನ ತಾತನನ್ನು ತಾವು ಕಂಡಿಲ್ಲ, ಬಹುಶಃ ಅವರ ಚಿತ್ರವೂ ನಿಮ್ಮ ಬಳಿ ಇರಲಿಕ್ಕಿಲ್ಲ. ಆಗ ಅವರನ್ನು ಕಲ್ಪಿಸಿಕೊಳ್ಳಲು ಹೋದಾಗ ಅವರ ಚಿತ್ರ ಮನದಲ್ಲಿ ಮೂಡೀತೇ? ಹಾಗೆಯೇ ನಿರಾಕಾರವಾದ ಭಗವಂತನನ್ನು ಕಲ್ಪಿಸಿಕೊಂಡು, ಅದರಲ್ಲೇ ಮನಸ್ಸನ್ನು ತೊಡಗಿಸಿ ಧ್ಯಾನ ಮಾಡುವುದು ಸಾಮಾನ್ಯರಿಗೆ ಬಲು ಕಷ್ಟ. ಅದಕ್ಕೇ ಮನುಷ್ಯ ತನ್ನ ಹಾಗೆಯೇ ಇರುವ, ಆದರೆ ಅನೇಕ ವಿಶೇಷತೆಗಳನ್ನು ಹೊಂದಿದ, ದೇವರ ವಿಗ್ರಹಗಳನ್ನು, ಚಿತ್ರಗಳನ್ನು ಸೃಷ್ಟಿಸಿಕೊಂಡ. ವಿಷ್ಣು ಎಂದರೆ ಹೀಗೆ, ಶಿವ ಎಂದರೆ ಇದೇ ಆಕಾರ, ಅಂತೆಯೇ ಅವರ ಹೆಂಡಂದಿರನ್ನೂ ಸೃಷ್ಟಿಸಿ ಅವರಿಗೊಂದು ರೂಪ ಕೊಟ್ಟ. ಈ ಆಗ ರೂಪ ಸಂಕೇತವಾಯಿತು. ಆ ಸಂಕೇತವನ್ನು ಮನದಲ್ಲಿ ಸ್ಥಿರವಾಗಿ ಉಳಿಸಿಕೊಂಡು ಧ್ಯಾನಕ್ಕೆ ಅಣಿಯಾದ.

ಹೀಗಾಗಿ ವಿಗ್ರಹ, ಸಾಧಕನ ಊರ್ಧ್ವಮುಖ ಸಾಧನೆಗೆ ಒಂದು ಏಣಿ ಇದ್ದ ಹಾಗೆ, ಮಹಾನ್‌ ಸಾಧಕರು ಈ ಏಣಿಯನ್ನು ಮೇಲೇರಿ ದಾಟಿ ನಿರಾಕಾರ ಭಗವಂತನನ್ನು ಧ್ಯಾನಿಸಬಲ್ಲರು. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲದ್ದು. ನಮ್ಮಲ್ಲಿ ತುಂಬ ಆಕರ್ಷಕ ಮನುಷ್ಯರಿದ್ದಾರೆ. ಅಂದ ಮೇಲೆ ಭಗವಂತ ಇನ್ನು ಆಕರ್ಷಕವಾಗಿರಬೇಕಲ್ಲ? ನಮ್ಮ ನಡುವೆ ಎಷ್ಟೊಂದು ಚೆಂದದ ಹೆಣ್ಣುಮಕ್ಕಳಿಲ್ಲವೇ? ಆದ್ದರಿಂದ ಸ್ತ್ರೀ ದೇವಿಯರು ಅವರಿಗಿಂತ ಚೆಂದವಿರಬೇಕು ಎಂದೆಲ್ಲ ಯೋಚಿಸಿ ಅತ್ಯಂತ ಸುಂದರ, ಆಕರ್ಷಕವಾದ ವಿಗ್ರಹಗಳನ್ನು ಮಾಡಿ, ಅವರನ್ನೇ ಆರಾಧಿಸಿದ ಮನುಷ್ಯ. ಲಾವಣ್ಯವೆನ್ನುವುದು ಆತ್ಮದ ಗುಣ. ಅದು ಸುಂದರತೆಯನ್ನೇ ಬಯಸುತ್ತದೆ. ಅದಕ್ಕೇ ಮನುಷ್ಯರು ಅತ್ಯಂತ ಆಕರ್ಷಕವಾದ ದೇವ ದೇವಿಯರ ವಿಗ್ರಹಗಳನ್ನು ಮಾಡಿ, ತನ್ನಲ್ಲಿದ್ದ, ಸರ್ವ ಶ್ರೇಷ್ಠ ವಸ್ತುಗಳನ್ನು, ದೈವತ್ವವನ್ನು ಆವಾಹಿಸಿದ ಆ ವಿಗ್ರಹಗಳಿಗೆ ಅರ್ಪಿಸಿ, ಸೇವೆಯನ್ನು ಸಲ್ಲಿಸಿ, ಸಂತೋಷಪಡುತ್ತಾರೆ. ಅದು ಮೂಲತ: ಭಗವಂತ ಎಂಬ ತತ್ವದ ರೂಪವಾದ ಲಾವಣ್ಯದ ಪೂಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT