ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸೌಂದರ್ಯದಪೇಕ್ಷೆಗೆ ತಪಸ್ಸು

Last Updated 5 ಅಕ್ಟೋಬರ್ 2021, 15:36 IST
ಅಕ್ಷರ ಗಾತ್ರ

ವಿವಿಧ ರಸಗಳ ಭಟ್ಟಿ, ಸೌಂದರ್ಯಕಾಮೇಷ್ಟಿ|
ಕವಿಜಗತ್ಸಂಷ್ಟಿಯದು, ಕಲೆಗನಾಕೃಷ್ಟಿ||
ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು|
ತಪಸೊಂದೆ ಪಥವದಕೆ – ಮಂಕುತಿಮ್ಮ ||470||

ಪದ-ಅರ್ಥ: ಭಟ್ಟಿ=ತಿರುಳು, ಸಾರ, ಸೌಂದರ್ಯಕಾಮೇಷ್ಟಿ= ಸೌಂದರ್ಯ+ ಕಾಮೇಷ್ಟಿ (ಅಪೇಕ್ಷಿಸಿದನ್ನು ಪಡೆಯುವ ಯಜ್ಞ), ಕಲೆಗನಾಕೃಷ್ಟಿ= ಕಲೆಗನ (ಕಲಾವಿದನ)+ ಆಕೃಷ್ಟಿ= (ವಿಶೇಷ ಸೃಷ್ಟಿ), ಗವಿಯೊಳಗಣ= ಗವಿಯೊಳಗಿನ, ಪಥ= ದಾರಿ

ವಾಚ್ಯಾರ್ಥ: ಸೌಂದರ್ಯವನ್ನು ಬಯಸಿದ ಮನುಷ್ಯ ಪ್ರಯತ್ನವೇ ಒಂದು ಯಜ್ಞವಿದ್ದಂತೆ. ಅದರ ಫಲವೇ ರಸಗಳ ಸಾರ. ಈ ಯಜ್ಞಕ್ಕೆ ಸಾಧನಗಳೇ ಕವಿಗಳು ಸೃಷ್ಟಿಸಿದ, ಕಲೆಗಾರರು ವಿಶೇಷವಾಗಿ ನಿರ್ಮಿಸಿದ ಪ್ರಪಂಚ. ಅವು ಹೃದಯದ ಗವಿಯೊಳಗೆ ಹೋಗಿ ಮಾಡುವ ಕ್ರಿಯೆಯೇ ವಿಚಿತ್ರ. ಅದನ್ನು ಅರಿಯುವುದಕ್ಕೆ ತಪಸ್ಸೊಂದೇ ದಾರಿ.

ವಿವರಣೆ: ನಮಗೆ ಬೇಕೋ ಬೇಡವೋ, ಬಾಳುವುದು ನಮಗೆ ಅನಿವಾರ್ಯವಾದದ್ದು. ಹೀಗೆ ಬಾಳುವಾಗ ಸುಂದರವಾದದ್ದನ್ನು, ಸುಭಗವಾದದ್ದನ್ನು, ಸುಲಭವಾದದ್ದನ್ನು ಪಡೆಯಬೇಕೆಂದು ಜೀವ ಸದಾ ಶ್ರಮಿಸುತ್ತದೆ. ಅದನ್ನೇ ಕಗ್ಗ ‘ಸೌಂದರ್ಯಕಾಮೇಷ್ಟಿ’ ಎಂದು ಕರೆಯುತ್ತದೆ. ಅದು ಸೌಂದರ್ಯವನ್ನು ಅಪೇಕ್ಷಿಸಿ ಮಾಡುವ ಯಜ್ಞ, ಯಜ್ಞವೆಂದರೆ ಹೋಮ, ಯಾಗಗಳಲ್ಲ, ಅದು ನಾವು ದಿನನಿತ್ಯವೂ ಮಾಡುವ ಪ್ರಯತ್ನ, ತೈತ್ತರೀಯ ಮಹಾನಾರಾಯಣದ ಅನುವಾಕು ‘ಕಾಮೋಕಾರ್ಷೀತ್ | ಮನ್ಯುರಾಕಾರ್ಷೀತ್’ ಎನ್ನುತ್ತದೆ. ಹಾಗೆಂದರೆ ಕಾಮವೂ, ಮನ್ಯುವೂ ಪ್ರಕೃತಿಯ ಶಕ್ತಿಗಳು. ಕಾಮವೆಂದರೆ ಅಪೇಕ್ಷೆ. ಅದು ಪುರುಷಾರ್ಥಗಳಲ್ಲಿ ಒಂದು. ಮನ್ಯು ಎಂದರೆ ಕೋಪ. ಅದೇ ಕ್ರೋಧ. ನಮ್ಮ ಅಪೇಕ್ಷೆಯನ್ನು ನೆರವೇರಿಸಿಕೊಳ್ಳುವಾಗ ಯಾರಾದರೂ ಅಡ್ಡಿಯಾದರೆ ಕೋಪ ತಲೆ ಎತ್ತುತ್ತದೆ. ಅಪೇಕ್ಷೆ, ಕ್ರೋಧಗಳೆರಡೂ ನಮ್ಮೊಳಗೇ ಇವೆ, ಅವು ಜಗದ್‍ಯಂತ್ರದ ಮೂಲ ಚಾಲಕಗಳು. ಅವು ದೇವತಾ ಪ್ರಭಾವಗಳು ಎಂದು ವೇದ ಕರೆದಿದೆ. ಅವು ಇಷ್ಟು ಪ್ರಮುಖ ಶಕ್ತಿಗಳಾಗಿದ್ದರೂ ಅವುಗಳ ಸ್ಥಾನ ಜಗತ್ತಿನಲ್ಲಿ ಮಾತ್ರ, ಆತ್ಮದಲ್ಲಲ್ಲ. ಅವುಗಳನ್ನು ಸತತ ಪ್ರಯತ್ನದಿಂದ ನಿಗ್ರಹಿಸುವುದು ಯಜ್ಞ. ಹೀಗೆ ನಾವು ಮಾಡುವ ಪ್ರಯತ್ನಗಳೆಂಬ ಯಜ್ಞಕ್ಕೆ ಪರಿಕರಗಳು ಯಾವವು? ದಿನದಿನವೂ ಬಾಳಿಗೊಂದು ಹೊಸ ಚೆಂದ ಬರಬೇಕು, ಅದು ಸದಾ ಹೊಸದೆನ್ನಿಸಬೇಕು ಎನ್ನುವುದಕ್ಕೆ ಅನುವಾಗುವುದು ಕಲೆ.

ಜೀವನ ಹಳಸದಂತೆ ಅದನ್ನು ಕಾಪಾಡುತ್ತ ಅದಕ್ಕೊಂದು ಕಾಂತಿಯನ್ನು ಕೊಡುವುದು ಕಲೆ. ನಮ್ಮ ಸುತ್ತಮುತ್ತಲೂ ಇರುವ ಸೌಂದರ್ಯವನ್ನು ನಮ್ಮ ಅನುಭವಕ್ಕೆ ತಂದು ತೋರಿಸಿ, ಇನ್ನೂ ಇರಬಹುದಾದ ಸೌಂದರ್ಯದ ನೆಲೆಗಳಿಗೆ ನಮ್ಮನ್ನು ಉಜ್ಜುಗಗೊಳಿಸುವುದು ಕಲೆ. ಕಲೆಗೆ ಅನೇಕ ಶಿಖರಗಳು. ಚಿತ್ರ, ಶಿಲ್ಪ, ನಾಟಕ, ಚಲನಚಿತ್ರ, ಹಾಡು, ನೃತ್ಯ ಇವುಗಳೆಲ್ಲ ಅದರ ಅನೇಕ ಮುಖಗಳು. ಇವು ಕಲಾವಿದನೊಬ್ಬ ತನ್ನಲ್ಲಿ ವಿಶೇಷವಾಗಿರುವ ರಸಪ್ರಜ್ಞೆಯಿಂದ, ತಾನು ಪ್ರಪಂಚದಲ್ಲಿ ಕಂಡದ್ದಕ್ಕೆ ಮತ್ತಷ್ಟು ತನ್ನ ವಿಸ್ತಾರವಾದ ಕಲ್ಪನೆಯನ್ನು ಬೆರೆಸಿ ಎಳೆತಂದು ನಮ್ಮ ಮುಂದೆ ಇಡುತ್ತಾನೆ. ಇದು ಕಲೆಗನ ಆಕೃಷ್ಟಿ. ಈ ಕಲಾವಿದನ ಸೃಷ್ಟಿಯ ಹಿಂದೆ, ಅದಕ್ಕೆ ಪೋಷಕವಾಗಿ ಸಾಹಿತ್ಯವಿದೆ. ಜೀವನ ಸೌಂದರ್ಯ ಪರಿಪೋಷಣೆಗೆ ಒದಗುವ ವಾಗ್‍ಮೃತಧಾರೆ ಸಾಹಿತ್ಯ. ಹೀಗೆ ಸಾಹಿತ್ಯ, ಕಲೆಗಳು ರಸಗಳ ಭಟ್ಟಿಯನ್ನಿಳಿಸಿ, ನಮ್ಮ ಹೃದಯದ ಗುಹೆಯನ್ನು ಪ್ರವೇಶಿಸಿ, ಅದನ್ನು ಸಂಸ್ಕಾರಗೊಳಿಸುವ ಕ್ರಿಯೆ ವಿಚಿತ್ರವಾದದ್ದು, ಅಪೂರ್ವವಾದದ್ದು. ಅದು ನಮ್ಮ ನಮ್ಮ ಪರಿಸರಕ್ಕೆ, ಅನುಭವಗಳಿಗೆ, ಸಂಸ್ಕೃತಿಗೆ ತಕ್ಕಂತೆ ಪರಿಷ್ಕಾರವನ್ನು ಮಾಡೀತು. ಆಗ ಸೌಂದರ್ಯದ ಅರಿವು ಆದೀತು. ಹಾಗೆ ಅರಿವನ್ನು ಪಡೆಯುವುದಕ್ಕೆ ತಪಸ್ಸು, ಏಕಾಗ್ರದ ಚಿಂತನೆಯೇ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT