ಮಂಗಳವಾರ, ಅಕ್ಟೋಬರ್ 26, 2021
26 °C

ಬೆರಗಿನ ಬೆಳಕು: ಸೌಂದರ್ಯಕಾರಕರು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ|
ಸಂಧಾನಿ ವಿಜ್ಞಾನಿಯುದ್ಯೋಗದಾನಿ||
ಮಂದಿಮುಂದಾಳು ಜನಬಾಂಧವ್ಯಪೋಷಕನು|
ಸೌಂದರ್ಯಕರರಿವರು – ಮಂಕುತಿಮ್ಮ ||471||

ಪದ-ಅರ್ಥ: ಯೋಜಕ= ಯೋಜಿಸುವವ, ವಿಜ್ಞಾನಿಯುದ್ಯೋಗದಾನಿ= ವಿಜ್ಞಾನಿ+ ಉದ್ಯೋಗದಾನಿ, ಮಂದಿಮುಂದಾಳು= ಜನನಾಯಕ, ಸೌಂದರ್ಯಕರರಿವರು= ಸೌಂದರ್ಯಕರು+ ಇವರು

ವಾಚ್ಯಾರ್ಥ: ಮಂದಿರದ ಶಿಲ್ಪಿ, ಯಂತ್ರಗಳ ಯೋಜಕ, ರಾಜಕಾರಣಿ, ವಿಜ್ಞಾನಿ, ಉದ್ಯೋಗಪತಿ, ಜನನಾಯಕ, ಸಮಾಜಸೇವಕರು, ಪೋಷಕರು ಇವರೆಲ್ಲರೂ ಪ್ರಪಂಚದ ಸೌಂದರ್ಯವನ್ನು ನಮ್ಮೆದುರಿಗೆ ತರುವವರು.

ವಿವರಣೆ: ಜಗತ್ತು ಸುಂದರವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಸುಂದರತೆ ಬಂದದ್ದು ಎಲ್ಲಿಂದ, ಯಾರಿಂದ? ಪ್ರಪಂಚದಲ್ಲಿ ವ್ಯಕ್ತಿ ಮುಖ್ಯವೆ ಅಥವಾ ಸಮಾಜ ಮುಖ್ಯವೆ? ಈ ಪ್ರಶ್ನೆ ಅವೆರಡೂ ಬೇರೆಯಾದವುಗಳು ಎಂಬಂತೆ ಬಿಂಬಿಸುತ್ತದೆ. ಲೋಕಾನುಭವವುಳ್ಳವರಿಗೆ ಆ ಭೇದಭಾವ ಆಧಾರವಿಲ್ಲದ್ದೆಂದು ತಿಳಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿವಾರದ, ಕುಲದ, ಉದ್ಯೋಗದ, ರಾಜ್ಯವ್ಯವಸ್ಥೆಯ ಪ್ರಭಾವ ಬಿದ್ದು ಅವನನ್ನು ಬದಲಿಸುತ್ತದೆ. ಅಂತೆಯೇ ವ್ಯಕ್ತಿಯೂ ತನಗಿರುವ ಅವಕಾಶಗಳಲ್ಲಿ, ತನ್ನ ಕರ್ತವ್ಯದ ಪರಿಧಿಯಲ್ಲಿ, ಅವುಗಳ ಮೇಲೆ ಪ್ರಭಾವವನ್ನು ಬೀರುತ್ತಲೇ ಬರುತ್ತಾನೆ. ಹೀಗೆ ವೃಷ್ಟಿ ಸಮಷ್ಟಿಗಳ ಅನ್ಯೋನ್ಯ ಪರಿಣಾಮವೇ ಪ್ರಪಂಚದ ಸುಂದರತೆ. ಮನುಷ್ಯ ಹರಿಯುವ ನದಿಯನ್ನು ನೋಡಿದ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿ ಬೇಸಿಗೆಯಲ್ಲಿ ಒಣಗಿ ಹೋಗಿತ್ತು, ತನಗೆ ಮತ್ತು ತನ್ನ ಮರಗಿಡಗಳಿಗೆ ಆಗ ಕೊರತೆಯಾಗಬಾರದೆಂದು ನೀರಿಗೆ ಅಡ್ಡಲಾಗಿ ಕಟ್ಟೆ ಕಟ್ಟಿದ. ಕಾಡನ್ನು ಕಡಿದು ವಸತಿಯನ್ನು ನಿರ್ಮಿಸಿಕೊಂಡ. ತನಗೆ ಬೇಕಾದ ಆಹಾರವನ್ನು ಬೆಳೆಯಲು ಕೃಷಿಯನ್ನು ಮಾಡಿದ. ಹೆಚ್ಚು ಉತ್ಪಾದಿಸಲು ಯಂತ್ರಗಳನ್ನು ಬಳಸಿದ. ವಿರಾಮವಾಗಿ ಬದುಕಲು ಆಕರ್ಷಕ ಕಟ್ಟಡಗಳನ್ನು ಕಟ್ಟಿದ. ಒಂಟಿಯಾಗಿರುವುದು ಸುಖವಲ್ಲವೆಂದು ಸಮಾಜವನ್ನು ಕಟ್ಟಿಕೊಂಡ. ಅದಕ್ಕೊಂದು ರಾಜಕೀಯ ವ್ಯವಸ್ಥೆ ಮಾಡಿದ. ತನ್ನ ಅವಶ್ಯಕತೆಗೆ ಬೇಕಾದಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಸಂಶೋಧನೆ ಮಾಡತೊಡಗಿದ. ಮತ್ತೊಬ್ಬ, ಜನರಿಗೆ ಬೇಕಾದ ವಸ್ತುಗಳನ್ನು ಪೂರೈಸಲು ಉದ್ಯೋಗ ತೆಗೆದ, ಜನರಿಗೆ ಕೆಲಸ ಕೊಟ್ಟ. ಬದುಕು ಶಾಶ್ವತವಲ್ಲವೆಂದು ತಿಳಿದು ತನ್ನನ್ನು ಮೀರಿದ, ಶಾಶ್ವತ ಸತ್ಯದ ಕಡೆಗೆ ಮುಖಮಾಡಿ ಧರ್ಮಪರನಾದ. ಅದಕ್ಕೊಂದು ಪರಿಸರ ನಿರ್ಮಿಸಲು ದೇವಸ್ಥಾನ ಕಟ್ಟಿದ.

ಹೀಗೆ ಒಂದರಿಂದ ಮತ್ತೊಂದು ಬೆಳೆಯುತ್ತ ಬಂದು ಪ್ರಪಂಚದ ಲಕ್ಷಣವೇ ಬೇರೆಯಾಯಿತು. ಈ ಎಲ್ಲ ತರಹದ ಜನರು ಜಗತ್ತಿನ ಸೌಂದರ್ಯವನ್ನು ಹೆಚ್ಚಿಸಲು ಕಾರಣರಾದರು. ಅವರನ್ನೆಲ್ಲ ನಾವು ನೆನೆಯುತ್ತೇವೆ. ನಾವು ಇಂದು ಸಂತೋಷವಾಗಿದ್ದರೆ ಇದು ಅವರೆಲ್ಲರ ಪರಿಶ್ರಮದ, ಬುದ್ಧಿಯ ಮತ್ತು ಪರೋಪಕಾರ ಮನೋಭಾವದ ಫಲ. ಹೀಗಾಗಿಯೇ ಸುಂದರ ದೇವಾಲಯ ಕಟ್ಟಿದ ಜಕ್ಕಣಾಚಾರ್ಯ, ಆಣೆಕಟ್ಟು ಕಟ್ಟಿದ ವಿಶ್ವೇಶ್ವರಯ್ಯ, ಟಾಟಾರಂಥ ಉದ್ಯೋಗಪತಿಗಳು, ಹೋಮಿ ಭಾಭಾ, ಸಾರಾಭಾಯಿಯಂಥ ವಿಜ್ಞಾನಿಗಳು, ಗಾಂಧೀಜಿಯಂಥ ನಾಯಕರು, ವಿವೇಕಾನಂದರಂಥ ದಾರ್ಶನಿಕರು, ಮದರ್ ತೆರೆಸಾರಂಥ ಸಮಾಜಸೇವಕರು, ಕಲಾವಿದರು, ಸಂಗೀತಗಾರರು, ಕ್ರೀಡಾಪಟುಗಳು, ಕೃಷಿಕರು, ಆಡಳಿತ ತಜ್ಞರು ನಮ್ಮ ಇಂದಿನ ಜಗತ್ತಿನ ಸುಂದರತೆಗೆ ಕಾರಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು