ಬುಧವಾರ, ಜನವರಿ 19, 2022
28 °C

ಬೆರಗಿನ ಬೆಳಕು: ರಕ್ತಗತವಾದ ಭಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ|
ಶಕ್ತಿ ಚತುರತೆಯುಡುಗಿ ನೀನು ಸೋತಂದು||
ಉತ್ಕ್ರಮಣದರೆಮನದಿ ದೈವವನು ಪಿಡಿದೇನು?|
ಭಕ್ತಿ, ರಕ್ತದಿ ಪರಿಗೆ – ಮಂಕುತಿಮ್ಮ ||501||

ಪದ-ಅರ್ಥ: ಚತುರತೆಯುಡುಗಿ= ಚತುರತೆ+ ಉಡುಗಿ, ಉತ್ಕ್ರಮಣದರೆಮನದಿ= ಉತ್ಕ್ರಮಣದ (ಮರಣ ಕಾಲದಲ್ಲಿ)+ ಅರೆಮನದಿ (ಅರ್ಧ ಮನಸ್ಸಿನಿಂದ), ಪರಿಗೆ= ಹರಿದರೆ.

ವಾಚ್ಯಾರ್ಥ: ಯುಕ್ತಿಯನ್ನು ಬೆಳೆಸುವ ಪ್ರಪಂಚದಲ್ಲಿ ಭಕ್ತಿ ಬಡಪರದೇಶಿಯಾಗುತ್ತದೆ ಎಂದು ಶಕ್ತಿ, ಚತುರತೆಗಳು ಉಡುಗಿ ಹೋಗಿ ನೀನು ಸೋತಾಗ, ಪ್ರಾಣೋತ್ಕ್ರಮಣ ಸಮಯದಲ್ಲಿ ದೇವರನ್ನು ನೆನದರೆ ಫಲವೇನು? ಭಕ್ತಿ ರಕ್ತದಲ್ಲೇ ಹರಿಯುತ್ತಿರಬೇಕು.

ವಿವರಣೆ: ಭಕ್ತಿ ಎಂದರೆ ಸಮರ್ಪಣೆ. ಅದು ಸರ್ವಾರ್ಪಣಭಾವಕ್ಕೆ ಮತ್ತೊಂದು ಹೆಸರು. ವ್ಯಕ್ತಿ ಭಗವಂತನೊಡನೆ ಸಂಯೋಗವಾಗುವ, ಅದೈತವಾಗುವ ಸ್ಥಿತಿ. ಈ ಸ್ಥಿತಿ ನಾಟಕದಿಂದ, ಚಾತುರ್ಯದಿಂದ ಲಭಿಸುವುದಿಲ್ಲ. ಆದರೆ ಬಹಳ ಕಡೆಗೆ ಭಕ್ತಿ ಒಂದು ಪ್ರದರ್ಶನದ ಕಾರ್ಯಕ್ರಮವಾಗುತ್ತಿದೆ. ‘ಮೊನ್ನೆ ನಮ್ಮ ಮನೆಯಲ್ಲಿ ಭರ್ಜರಿ ಪೂಜೆ ಮಾಡಿಸಿದ್ದೆ. ಐದು ನೂರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೆ. ಗೃಹಮಂತ್ರಿಗಳು ಬಂದಿದ್ದರು. ಅವರೂ ತುಂಬ ಸಂತೋಷಪಟ್ಟರು’ ಎಂದು ಹೇಳುವಾಗ ಭಕ್ತಿ ಅಂಶ ಎಷ್ಟು ಎಂದು ಹುಡುಕಬೇಕು. ಉಳಿದದ್ದೆಲ್ಲ ತೋರಿಕೆ ಮತ್ತು ಬಂದ ಅತಿಥಿಗಳಿಂದ ಲಾಭ ಪಡೆಯುವ ಯುಕ್ತಿ. ಇಂಥ ಯುಕ್ತಿಗಳೇ ಮುಖ್ಯವಾದಾಗ ಭಕ್ತಿಗೆ ಎಲ್ಲಿ ಸ್ಥಾನ? ‘ಆರಿಕೆ ಬಿತ್ತಿದ ಗಿಡುಪನ ಹೂವ ಕೊಯಿದು, ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು, ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ, ಪೂಜಿಸಿದ ಪುಣ್ಯ, ಹೂವಿಗೋ? ನೀರಿಗೋ? ನಾಡೆಲ್ಲಕ್ಕೋ, ಪೂಜಿಸಿದಾತಗೋ? ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ’. ಹೀಗೆ ಊರಿನವರೆಲ್ಲ ನೋಡಲಿ ಎಂದು ಮಾಡಿದ ಪೂಜೆಯ ಪುಣ್ಯ ಯಾರಿಗೆ ಎಂದು ಕೇಳಿದ ಅಂಬಿಗರ ಚೌಡಯ್ಯನ ಮಾತು ಎದೆಗೆ ತಾಗಬೇಕು. ಪೂಜೆಯೊಂದು ಯುಕ್ತಿಯ ಕಾರ್ಯವೇ ಅಥವಾ ಭಕ್ತಿಯೇ?

‘ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ, ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ ಹೇಳಿ ಕೇಳಿ ಮಾಡುವುದು ಯುಕ್ತಿಭಕ್ತಿ, ಸಾಧಕಾಂಗದಿಂದ ಮಾಡುವುದು ಅಭ್ಯಾಸ ಭಕ್ತಿ, ಮನಕೂತು ಮಾಡುವುದು ಮುಕ್ತಿಭಕ್ತಿ, ಕೇಡಿಲ್ಲದೆ ಮಾಡುವುದು ನಿತ್ಯಭಕ್ತಿ, ಇದ್ದಂತಿದ್ದು ನಿಜವಪ್ಪುದು ನಿಜಭಕ್ತಿ, ಈ ನಿಜದಲ್ಲಿ ಭರಿತರು ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು’. ಆದಯ್ಯ ಹೇಳುತ್ತಾರೆ, ಶಿವಭಕ್ತಿಯೆಂಬುದು ಮೂಗ ಕಂಡ ಕನಸಿನಂತೆ. ಅದನ್ನು ವಿವರಿಸಲು, ವರ್ಣಿಸಲು ಆಗದು. ಅದು ಕೇವಲ ಅನುಭವಕ್ಕೆ ದಕ್ಕುವುದು. ಆದರೆ ಯುಕ್ತಿ, ಚತುರತೆಗಳು ಉಡುಗಿ ಹೋದಾಗ, ಮರಣಕಾಲ ಸನ್ನಿನಿತವಾದಾಗ, ದೇವರನ್ನು ನೆನದರೆ ಏನು ಫಲ? ಭಕ್ತಿಯೆಂಬುದು ರಕ್ತಗತವಾದಾಗ ಸಾರ್ಥಕತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು